ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿ.ಪಂ. ಮಾಜಿ ಸದಸ್ಯ ಎಸ್. ಮಣಿಶೇಖರ್ ನೇತೃತ್ವದಲ್ಲಿ ಪ್ರತಿಭಟನೆ
ಭದ್ರಾವತಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆಸಿದ್ದಾರೆಂದು ಆರೋಪಿಸಿ ಸೋಮವಾರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್ ನೇತೃತ್ವದಲ್ಲಿ ತರೀಕೆರೆ ರಸ್ತೆಯ ಧರ್ಮಶಾಸ್ತ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪದಲ್ಲಿರುವ ಯೋಜನಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಜ. ೧೦: ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆಸಿದ್ದಾರೆಂದು ಆರೋಪಿಸಿ ಸೋಮವಾರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್ ನೇತೃತ್ವದಲ್ಲಿ ತರೀಕೆರೆ ರಸ್ತೆಯ ಧರ್ಮಶಾಸ್ತ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪದಲ್ಲಿರುವ ಯೋಜನಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿ ಸಿ. ಸುರೇಶ್‌ರವರು ಸುಮಾರು ೩ ವರ್ಷಗಳವರೆಗೆ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಈ ಸಂದರ್ಭದಲ್ಲಿ ಹಲವಾರು ಅಕ್ರಮಗಳನ್ನು ನಡೆಸಿದ್ದಾರೆ. ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ತಮಗೆ ಇಷ್ಟ ಬಂದವರನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ದ್ರೋಹ ಬಗೆದಿದ್ದಾರೆ. ಪ್ರಸ್ತುತ ನಮಗೆ ತಿಳಿದು ಬಂದಿರುವ ಮಾಹಿತಿಯಂತೆ ತಾಲೂಕಿನ ಕುರುಬರವಿಠಲಾಪುರ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಹಾಗು ಸಿದ್ಲಿಪುರ(ಎರಡು), ಬೋವಿಕಾಲೋನಿ(ನಾಲ್ಕು), ಕೊಮಾರನಹಳ್ಳಿ ಮತ್ತು ಕಬಳಿಕಟ್ಟೆ ಅಂಗನವಾಡಿ ಸಹಾಯಕಿ ಹುದ್ದೆಗಳಲ್ಲಿ ಅಕ್ರಮವೆಸಗಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಈ ಅಕ್ರಮ ಕುರಿತು ಪ್ರಶ್ನಿಸಲು ಮುಂದಾದ್ದಲ್ಲಿ ಉಡಾಫೆ ಉತ್ತರ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಈ ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಡಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಆರ್. ಹನುಮಮ್ಮ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಆರ್. ನಾಗೇಶ್, ಮುಕುಂದ, ಶೋಭ ರವಿಕುಮಾರ್, ಅನಿಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.