Saturday, January 15, 2022

ತಾಲೂಕು ಕುರುಬರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ

ಭದ್ರಾವತಿ ತಾಲೂಕು ಕುರುಬರ ಸಂಘ.
    ಭದ್ರಾವತಿ, ಜ. ೧೫: ತಾಲೂಕು ಕುರುಬರ ಸಂಘಕ್ಕೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಯದ ಹಿನ್ನಲೆಯಲ್ಲಿ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.
    ಈ ಹಿಂದೆ ತಾಲೂಕು ಕುರುಬರ ಸಂಘಕ್ಕೆ ೨೦೧೭ರಲ್ಲಿ ಅಂದಿನ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ನಡೆದು ಹೊಸದಾಗಿ ಪದಾಧಿಕಾರಿಗಳು ಚುನಾಯಿತರಾಗಿದ್ದರು. ಬೈಲಾ ಪ್ರಕಾರ ಇವರ ಅಧಿಕಾರ ಅವಧಿ ೩ ವರ್ಷಗಳಿಗೆ ಸೀಮಿತವಾಗಿದ್ದು, ನವೆಂಬರ್ ೨೦೨೦ರಲ್ಲಿ ಮುಕ್ತಾಯಗೊಂಡಿದೆ. ಆದರೂ ಸಹ ಇದುವರೆಗೂ ಚುನಾವಣೆ ನಡೆಸಿಲ್ಲ. ಕೋವಿಡ್-೧೯ರ ಹಿನ್ನಲೆಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ ಎಂದು ಸಂಘದ ಪದಾಧಿಕಾರಿಗಳು ಸಹಕಾರ ಸಂಘಗಳ ನಿಬಂಧಕರು ಮತ್ತು ಉಪ ನಿಬಂಧಕರಿಗೆ ಸಲ್ಲಿಸಿರುವ ಸಮಜಾಯಿಷಿಯಲ್ಲಿ ಒಪ್ಪಿಕೊಂಡಿದ್ದು, ಈ ಹಿನ್ನಲೆಯಲ್ಲಿ ಸಂಘದ ಕಾರ್ಯ ಚಟುವಟಿಕೆಗಳು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಜ.೬ರಂದು ಸರ್ಕಾರ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಕಗೊಳಿಸಿದೆ.
    ಆಡಳಿತಾಧಿಕಾರಿಗಳು ಸಂಘದ ಬೈಲಾ ಪ್ರಕಾರ ಚುನಾವಣೆ ನಡೆಸಿ ನೂತನ ಪದಾಧಿಕಾರಿಗಳು ಆಯ್ಕೆಯಾಗುವವರೆಗೂ ಮುಂದುವರೆಯಲಿದ್ದು, ಮುಂದಿನ ೬ ತಿಂಗಳ ಒಳಗೆ ಸಂಘಕ್ಕೆ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಈ ಕುರಿತು ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಸಿ ರಾಧ ರಾಜ್ಯಪಾಲರ ಆದೇಶಾನುಸಾರ ಸುತ್ತೋಲೆ ಹೊರಡಿಸಿದ್ದಾರೆ.

ವಾರಾಂತ್ಯ ಕರ್ಪ್ಯೂ ನಡುವೆ ಶ್ರೀ ಗುರುಸಿದ್ದರಾಮೇಶ್ವರ ಜಯಂತಿ

ವಾರಾಂತ್ಯ ಕರ್ಪ್ಯೂ ನಡುವೆ ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಭೋವಿ ಅಭಿವೃದ್ಧಿ ಸಂಘದ ವತಿಯಿಂದ ಶನಿವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಶಿವಯೋಗಿ ಶ್ರೀ ಗುರುಸಿದ್ದರಾಮೇಶ್ವರರ ೮೪೯ನೇ ಜಯಂತಿ ಸರಳವಾಗಿ ನಡೆಯಿತು
    ಭದ್ರಾವತಿ, ಜ. ೧೫: ವಾರಾಂತ್ಯ ಕರ್ಪ್ಯೂ ನಡುವೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಭೋವಿ ಅಭಿವೃದ್ಧಿ ಸಂಘದ ವತಿಯಿಂದ ಶನಿವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಶಿವಯೋಗಿ ಶ್ರೀ ಗುರುಸಿದ್ದರಾಮೇಶ್ವರರ ೮೪೯ನೇ ಜಯಂತಿ ಸರಳವಾಗಿ ನಡೆಯಿತು.
    ಶ್ರೀ ಗುರುಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸುಧಾರಣೆಯಲ್ಲಿ ಶ್ರೀ ಗುರುಸಿದ್ದರಾಮೇಶ್ವರರ ಪಾತ್ರ ಕುರಿತು ಸ್ಮರಿಸಲಾಯಿತು.
    ಭೋವಿ ಅಭಿವೃದ್ಧಿ ಸಂಘದ ಅಧ್ಯಕ್ಷ, ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್, ಗೌರವಾಧ್ಯಕ್ಷ ಎಂ. ರಾಮು, ಪ್ರಮುಖರಾದ ಚೌಡಪ್ಪ, ಅಣ್ಣಮಲೈ, ಉಪಾಧ್ಯಕ್ಷರಾದ ಆನಂದ್, ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ, ನಿರ್ದೇಶಕ ತಮ್ಮಯ್ಯ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಭೋವಿ ಸಮಾಜದ ಪ್ರಮುಖರು, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Friday, January 14, 2022

ಶಾಲಾಮಟ್ಟದ ಪ್ರತಿಭಾ ಕಾರಂಜಿ : ಬಹುಮಾನ ವಿತರಣೆ


ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಶುಕ್ರವಾರ ಬಹುಮಾನಗಳನ್ನು ವಿತರಿಸಲಾಯಿತು.
    ಭದ್ರಾವತಿ, ಜ. ೧೪: ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಶುಕ್ರವಾರ ಬಹುಮಾನಗಳನ್ನು ವಿತರಿಸಲಾಯಿತು.
    ಶಿವಸಾಯಿಕೃಪ ಧಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ೧ ರಿಂದ ೫ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಅಭಿನಂದಿಸಲಾಯಿತು. ಶಾಲೆಯ ಪ್ರಾಂಶುಪಾಲ ಶ್ಯಾಮರಾಯ ಆಚಾರ್ ಹಾಗು ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಕೋವಿಡ್ ೩ನೇ ಅಲೆ ಭೀತಿ ನಡೆವೆಯೂ ಮಕಾರ ಸಂಕ್ರಾಂತಿ ಹಬ್ಬಕ್ಕೆ ಭರದ ಸಿದ್ದತೆ

 ವಾರಾಂತ್ಯ ಕರ್ಪ್ಯೂ ನಡುವೆಯೂ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಭರದ ಸಿದ್ದತೆಗಳು ಕಂಡು ಬರುತ್ತಿದ್ದು, ಶುಕ್ರವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
ಭದ್ರಾವತಿ, ಜ. ೧೪: ವಾರಾಂತ್ಯ ಕರ್ಪ್ಯೂ ನಡುವೆಯೂ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಭರದ ಸಿದ್ದತೆಗಳು ಕಂಡು ಬರುತ್ತಿದ್ದು, ಶುಕ್ರವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
    ಕೋವಿಡ್ ೩ನೇ ಅಲೆ ಭೀತಿ ನಡುವೆಯೂ ನಗರದೆಲ್ಲೆಡೆ ಮಕಾರ ಸಂಕ್ರಾಂತಿ ವಿಜೃಂಭಣೆಯಿಂದ ಆಚರಿಸಲು ಮುಂದಾಗಿರುವುದು  ಕಂಡು ಬರುತ್ತಿದ್ದು, ಹೂ, ಹಣ್ಣು, ಕಬ್ಬಿನ ಜೊಲ್ಲೆ ಸೇರಿದಂತೆ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳನ್ನು ಜನರು ಶುಕ್ರವಾರವೇ ಖರೀದಿಸಿಟ್ಟುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ರಾತ್ರಿವರೆಗೂ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬಂದಿತು.
     ಸರ್ಕಾರ ಕೋವಿಡ್ ಭೀತಿ ಹಿನ್ನಲೆಯಲ್ಲಿ ವಾರಾಂತ್ಯದ ಕರ್ಪ್ಯೂ ಘೋಷಿಸಿದೆ. ಅಲ್ಲದೆ ಮಕರ ಸಂಕ್ರಾಂತಿ ಸಂಭ್ರಮದ ಆಚರಣೆಗೆ ಕಡಿವಾಣ ಸಹ ಹಾಕಿದೆ. ಆದರೂ ಸಹ ಜನರು ಸಂಕ್ರಾಂತಿ ಸಂಭ್ರಮದ ಆಚರಣೆಗೆ ಮುಂದಾಗಿರುವುದು ತಲೆ ನೋವಾಗಿ ಪರಿಣಮಿಸಿದೆ.
    ೫ ದಿನಗಳಲ್ಲಿ ೨೦೦ರ ಗಡಿ ದಾಟಿದ ಸೋಂಕು:
ನಗರದಲ್ಲಿ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಶುಕ್ರವಾರ ಒಂದೇ ದಿನ ೬೪ ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕಳೆದ ೫ ದಿನಗಳಲ್ಲಿ ಒಟ್ಟಾರೆ ೨೦೦ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜುಗಳಲ್ಲೂ ವ್ಯಾಪಕವಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದು,  ಇದರಿಂದಾಗಿ ಆತಂಕ ಎದುರಾಗಿದೆ.  
    ಮಾಂಸ ಮಾರಾಟ ನಿಷೇಧ:
    ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಜ.೧೫ರ ಶನಿವಾರ ಮತ್ತು ಸರ್ವೋದಯ ದಿನದ ಅಂಗವಾಗಿ ಜ.೩೦ರಂದು ನಗರಸಭೆ ವ್ಯಾಪ್ತಿಯಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ಮಾಡುವುದನ್ನು ಹಾಗು ಬಾರ್ & ರೆಸ್ಟೋರೆಂಟ್, ಮಾಂಸಹಾರಿ ಹೋಟೆಲ್‌ಗಳಲ್ಲಿ ಮಾಂಸಾಹಾರ ತಯಾರಿಸುವುದನ್ನು ಸಹ ನಿಷೇಧಿಸಲಾಗಿದೆ.
    ಒಂದು ವೇಳೆ ಆದೇಶ ಉಲ್ಲಂಘಿಸಿದಲ್ಲಿ ಅಂತಹವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ನಗರಸಭೆ ಪೌರಾಯುಕ್ತರು ಕೆ. ಪರಮೇಶ್ ಎಚ್ಚರಿಸಿದ್ದಾರೆ.

ಸೇಫಕ್ ಟಕ್ರಾ ಸ್ಪರ್ಧೆ : ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದ್ವಿತೀಯ ಬಹುಮಾನ

ಕುವೆಂಪು ವಿಶ್ವ ವಿದ್ಯಾನಿಲಯ ಅಂತರ್ ಕಾಲೇಜು ಪುರುಷ ಹಾಗು ಮಹಿಳೆಯರ ಸೇಫಕ್ ಟಕ್ರಾ ಸ್ಪರ್ಧೆಯಲ್ಲಿ ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥರ್ಮ ದರ್ಜೆ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಜ. ೧೪: ಕುವೆಂಪು ವಿಶ್ವ ವಿದ್ಯಾನಿಲಯ ಅಂತರ್ ಕಾಲೇಜು ಪುರುಷ ಹಾಗು ಮಹಿಳೆಯರ ಸೇಫಕ್ ಟಕ್ರಾ ಸ್ಪರ್ಧೆಯಲ್ಲಿ ನಗರದ ಹೊಸಮನೆ ಸರ್ಕಾರಿ ಪ್ರಥರ್ಮ ದರ್ಜೆ ಕಾಲೇಜು ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗು ಕುವೆಂಪು ವಿಶ್ವವಿದ್ಯಾನಿಲಯ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ಪಿ. ಸುಂದರೇಶ್, ಪಿ. ಕೌಶಿಕ್, ಪಿ. ಕುಂಬರೇಶ್, ಆರ್. ಹಿತೇಶ್ ಮತ್ತು ಆರ್. ವಿಕಾಶ್ ವರ್ಣೇಕರ್ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ಎಂ.ಡಿ ವಿಶ್ವನಾಥ್ ತರಬೇತಿದಾರರಾಗಿ ತಂಡದ ನೇತೃತ್ವ ವಹಿಸಿದ್ದರು.
    ಕಾಲೇಜಿಗೆ ಬಹುಮಾನ ತಂದುಕೊಟ್ಟ ವಿಜೇತ ತಂಡವನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಸದಸ್ಯರು, ಪಾಂಶುಪಾಲರು, ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Thursday, January 13, 2022

ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳರ ಹಾವಳಿ : ದೂರು ದಾಖಲು


    ಭದ್ರಾವತಿ, ಜ. ೧೩: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದೀಗ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.
    ಪ್ರತಿದಿನ ಸಾವಿರಾರು ಮಂದಿ ಆಸ್ಪತ್ರೆಗೆ ಬಂದು ಹೋಗುತ್ತಾರೆ. ಈ ನಡುವೆ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮೊಬೈಲ್ ಕಳೆದುಕೊಂಡಿರುವ ಬಹುತೇಕ ಮಂದಿ ಪೊಲೀಸರಿಗೆ ದೂರು ನೀಡದೆ ಮೌನವಾಗಿರುವುದು ಮೊಬೈಲ್ ಕಳ್ಳರಿಗೆ ಒಂದೆಡೆ ಅಸ್ತ್ರವಾಗಿದೆ. ಆಸ್ಪತ್ರೆಯ ಬಹುತೇಕ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಆದರೂ ಸಹ ಮೊಬೈಲ್ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ.
    ತಾಲೂಕಿನ ಬೊಮ್ಮೆನಹಳ್ಳಿ ನಿವಾಸಿ ಬಿ.ವಿ ನವೀನ್‌ಕುಮಾರ್ ಎಂಬುವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವಾಗ ಕಾಲಿಗೆ ಗಾಯವಾದ ಹಿನ್ನಲೆಯಲ್ಲಿ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆ ಪಡೆದುಕೊಂಡು ಹೊರಗಡೆ ಬಂದು ಮೊಬೈಲ್ ನೋಡಿಕೊಂಡಾಗ ಮೊಬೈಲ್ ಕಳುವಾಗಿರುವುದು ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ನವೀನ್‌ಕುಮಾರ್, ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳರಿರುವುದು ಖಚಿತವಾಗಿದೆ. ನಾನು ಮಾತ್ರವಲ್ಲ ಇದೆ ರೀತಿ ಹಲವಾರು ಜನ ಮೊಬೈಲ್ ಕಳೆದುಕೊಂಡಿರುವುದು ವಿಚರಣೆಯಿಂದ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಮೊಬೈಲ್ ಕಳವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮೊಬೈಲ್ ಕಳ್ಳರನ್ನು ಬಂಧಿಸಬೇಕೆಂದು ಮನವಿ ಮಾಡಿದ್ದಾರೆ.

ಕೊರೋನಾ ೩ನೇ ಅಲೆ ನಡುವೆಯೂ ನಗರದ ವಿವಿಧ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿದ ವೈಕುಂಠ ಏಕಾದಶಿ

ಭದ್ರಾವತಿ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿತ್ತು.  ಆಕರ್ಷಕವಾದ ವೈಕುಂಠನಾಥನ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.
    ಭದ್ರಾವತಿ, ಜ. ೧೩: ಕೊರೋನಾ ೩ನೇ ಅಲೆ ನಡುವೆಯೂ ನಗರದ ವಿವಿಧ ದೇವಾಲಯಗಳಲ್ಲಿ ಗುರುವಾರ ಸಂಪ್ರದಾಯದಂತೆ ಕೋವಿಡ್ ಮಾರ್ಗಸೂಚಿಗಳನ್ವಯ ವೈಕುಂಠ ಏಕಾದಶಿ ವಿಜೃಂಭಣೆಯಿಂದ ಜರುಗಿತು.
    ಮಿಲ್ಟ್ರಿಕ್ಯಾಂಪ್‌ನಲ್ಲಿ ವೈಕುಂಠ ಏಕಾದಶಿ:
    ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ೫ ಗಂಟೆಯಿಂದ ಧಾರ್ಮಿಕ ಆಚರಣೆಗಳು ಜರುಗಿದವು. ಸ್ವಾಮಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ನೆರವೇರಿಸಲಾಯಿತು. ಅಲ್ಲದೆ ಈ ಬಾರಿ ವಿಶೇಷವಾಗಿ ವೈಕುಂಠನಾಥನ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು.
    ಆಕರ್ಷಕವಾದ ವೈಕುಂಠನಾಥನ ದರ್ಶನ ಭಕ್ತರ ಮನಸೂರೆಗೊಂಡಿತು. ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಬೆಳಿಗ್ಗೆಯೇ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಪಡೆದುಕೊಂಡರು.

ಭದ್ರಾವತಿ ಕಾಗದನಗರ ವಾರ್ಡ್ ನಂ.೭ರ ಮುಖ್ಯರಸ್ತೆಯಲ್ಲಿರುವ ಶ್ರೀಕ್ಷೇತ್ರ ನಾಗರಕಟ್ಟೆಯಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿತ್ತು.

    ಶ್ರೀಕ್ಷೇತ್ರ ನಾಗರಕಟ್ಟೆಯಲ್ಲಿ ವೈಕುಂಠ ಏಕಾದಶಿ:
ಕಾಗದನಗರ ವಾರ್ಡ್ ನಂ.೭ರ ಮುಖ್ಯರಸ್ತೆಯಲ್ಲಿರುವ ಶ್ರೀಕ್ಷೇತ್ರ ನಾಗರಕಟ್ಟೆಯಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಹಾಗು ಸಹಸ್ರ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು.
    ಬೆಳಿಗ್ಗೆ ೫.೩೦ರಿಂದ ಧಾರ್ಮಿಕ ಆಚರಣೆಗಳು ಜರುಗಿದವು. ಇಲ್ಲೂ ಸಹ ವೈಕುಂಠನಾಥನ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನಾಗರಕಟ್ಟೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ದೇವಾನುದೇವತೆಗಳಿಗೆ ವಿಶೇಷತೆ ಅಲಂಕಾರ ಕೈಗೊಳ್ಳಲಾಗಿತ್ತು. ದೇವಸ್ಥಾನದ ಪ್ರಧಾನ ಅರ್ಚಕ ರಮೇಶ್ ಭಟ್ಟರು ಧಾರ್ಮಿಕ ಆಚರಣೆಗಳ ನೇತೃತ್ವವಹಿಸಿದ್ದರು.


ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿತ್ತು. ಕೋವಿಡ್ ೩ನೇ ಅಲೆ ಹಿನ್ನಲೆಯಲ್ಲಿ ಸರಳವಾಗಿ ಧಾರ್ಮಿಕ ಆಚರಣೆಗಳು ಜರುಗಿದವು.
    ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ದೇವಸ್ಥಾನದಲ್ಲಿ :
    ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಜರುಗಿತು.
    ವೈಭವದ ವೈಕುಂಠ ಏಕಾದರ್ಶಿ ವೀಕ್ಷಣೆಗೆ ಪ್ರತಿ ವರ್ಷ ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುಲಿದ್ದು, ಕೋವಿಡ್-೧೯ರ ಹಿನ್ನಲೆಯಲ್ಲಿ ಕಳೆದ ೩ ವರ್ಷಗಳಿಂದ ವೈಕುಂಠ ಏಕಾದಶಿಯನ್ನು ಸಂಪ್ರದಾಯದಂತೆ ಸರಳವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸರಳವಾಗಿ ಧಾರ್ಮಿಕ ಆಚರಣೆಗಳು ಜರುಗಿದವು. ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಕೈಗೊಂಡು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
    ದೇವಸ್ಥಾನ ಪ್ರಧಾನ ಅರ್ಚಕ ವೇದಬ್ರಹ್ಮ ರಂಗನಾಥ ಶರ್ಮ ಹಾಗು ಸಹಾಯಕ ಅರ್ಚಕ ಶ್ರೀನಿವಾಸ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.

ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿತ್ತು. ಕೋವಿಡ್ ೩ನೇ ಅಲೆ ಹಿನ್ನಲೆಯಲ್ಲಿ ಸರಳವಾಗಿ ಧಾರ್ಮಿಕ ಆಚರಣೆಗಳು ಜರುಗಿದವು.
    ಬಾರಂದೂರು ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಾಲಯದಲ್ಲಿ:
    ಬಾರಂದೂರು ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ವಂದೇಮಾತಂ ಟ್ರಸ್ಟ್ ವತಿಯಿಂ ವೈಕುಂಠ ಏಕಾದಶಿ ಜರುಗಿತು.
    ಧಾರ್ಮಿಕ ಆಚರಣೆಗಳೊಂದಿಗೆ ದೇವಸ್ಥಾನದ ಮೂಲ ವಿಗ್ರಹಗಳಿಗೆ ಹಾಗು ಉತ್ಸವ ಮೂರ್ತಿಗಳಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿ ಸ್ವಾಮಿಯ ದರ್ಶನ ಪಡೆದರು. ವಂದೇಮಾತರಂ ಟ್ರಸ್ಟ್‌ನ ಪ್ರಮುಖರು, ಆಯ್ಯಪ್ಪ ಸ್ವಾಮಿ ಭಕ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಏಕಾದಶಿ ಪ್ರಯುಕ್ತ ದಿನದರ್ಶಿಕೆ ಬಿಡುಗಡೆಗೊಳಿಸಲಾಯಿತು.