ನ್ಯಾಯಾಧೀಶ ಹುದ್ದೆಯಿಂದ ವಜಾಗೊಳಿಸಿ, ಬಂಧಿಸಿ : ಎವೈವಿ ಆಗ್ರಹ
ಭದ್ರಾವತಿ, ಜ. ೩೦: ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಅವಮಾನಗೊಳಿಸಿರುವ ರಾಯಚೂರು ಜಿಲ್ಲಾ ನ್ಯಾಯಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್‌ರವರನ್ನು ಹುದ್ದೆಯಿಂದ ತಕ್ಷಣ ವಜಾಗೊಳಿಸಿ ಬಂಧಿಸುವಂತೆ ಡಾ. ಬಿ.ಆರ್ ಅಂಬೇಡ್ಕರ್ ಯುವಜನ ವೇದಿಕೆ(ಎವೈವಿ) ಆಗ್ರಹಿಸಿದೆ.
ಅಂಬೇಡ್ಕರ್‌ರವರ ಭಾವಚಿತ್ರ ತೆಗೆಸಿ ಗಣರಾಜ್ಯೋತ್ಸವ ಆಚರಿಸುವ ಮೂಲಕ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಾಟೀಲ್ ದರ್ಪ ಮೆರೆದಿರುವುದು ಖಂಡನೀಯ. ಮಲ್ಲಿಕಾರ್ಜುನ ಗೌಡ ಪಾಟೀಲ್, ಪ್ರಸ್ತುತ ಜಾರಿಯಲ್ಲಿರುವ ಸರ್ಕಾರಿ ನಿಯಮಗಳಿಗೆ, ಆದೇಶಗಳಿಗೆ ಮತ್ತು ರಾಷ್ಟ್ರ ಲಾಂಛನಗಳಿಗೆ ಗೌರವ ತೋರಬೇಕೆಂಬ ನಿಯಮಗಳನ್ನು ಗಾಳಿಗೆ ತೂರಿ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ. ಸಂವಿಧಾನ ಶಿಲ್ಪಿ, ಶೋಷಿತರ ಚೇತನ, ಮಹಾನ್ ಜ್ಞಾನಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ ವ್ಯಕ್ತಿ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಕಾನೂನಿಗಿಂತ ತನ್ನ ವೈಯಕ್ತಿಕ ಪೂರ್ವಗ್ರಹಗಳಾದ ಮನುವಾದವನ್ನು ಆಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು.
ಬೆಂಗಳೂರು ಸಮೀಪದ ಶಾಲೆಯೊಂದರಲ್ಲಿ ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್‌ರವರ ಭಾವಚಿತ್ರ ಇಡದೆ ಆರ್‌ಎಸ್‌ಎಸ್ ರಚಿತ ಹಿಂದೂತ್ವ ಮಾತೆಯ ಭಾವಚಿತ್ರವನ್ನಿಟ್ಟು ಕಾರ್ಯಕ್ರಮ ಆಚರಿಸಲಾಗಿದೆ. ದೆಹಲಿ ಗಣರಾಜ್ಯೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರಬೋಸ್ ಹಾಗು ಎಲ್ಲರೂ ಒಂದೇ ಎಂದು ಮನುಕುಲಕ್ಕೆ ಸಂದೇಶ ಸಾರಿದ ಬ್ರಹ್ಮರ್ಷಿ ನಾರಾಯಣ ಗುರುರವರ ಸ್ತಬ್ದ ಚಿತ್ರಗಳಿಗೆ ಅವಕಾಶ ನೀಡದೆ ಸಾವರ್ಕರ್ ಸ್ತಬ್ದ ಚಿತ್ರಕ್ಕೆ ಅವಕಾಶ ಮಾಡಿಕೊಟ್ಟಿರುವುದು. ಈ ರೀತಿಯ ಸಂವಿಧಾನ ವಿರೋಧಿ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇವುಗಳ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವೇದಿಕೆ ಪ್ರಮುಖರಾದ ಗೌರವಾಧ್ಯಕ್ಷ ಶಿವರಾಜ್, ಅಧ್ಯಕ್ಷ ಶಿವಮಲ್ಲು, ಉಪಾಧ್ಯಕ್ಷ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಶಂಕರಪ್ಪ, ಕಾರ್ಯದರ್ಶಿ ಹರೀಶ್, ಸಹ ಕಾರ್ಯದರ್ಶಿಗಳಾದ ಸುನೀಲ್ ಮತ್ತು ಜಯರಾಮ ಮತ್ತು ಖಜಾಂಚಿ ಮಂಜುನಾಥ್ ಎಚ್ಚರಿಸಿದ್ದಾರೆ.