ಭದ್ರಾವತಿ ಆನೇಕೊಪ್ಪ ಎಂಪಿಎಂ ಬಡಾವಣೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.
ಭದ್ರಾವತಿ, ಜ. ೩೧: ನಗರದ ಆನೇಕೊಪ್ಪ ಎಂಪಿಎಂ ಬಡಾವಣೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಹಿಳೆಯೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ.
ಎಂಪಿಎಂ ಬಡಾವಣೆಯಲ್ಲಿ ಕೆಲಸ ಮಾಡಲು ಬಂದಿದ್ದ ಮಹಿಳೆಯ ಮೇಲೆ ಏಕಾಏಕಿ ದಾಳಿ ನಡೆಸಿರುವ ನಾಯಿಗಳು ಮಹಿಳೆಯ ಮುಖ ವಿರೂಪಗೊಳಿಸಿವೆ. ಈ ಭಾಗದಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ಜನರು ಒಬ್ಬಂಟಿಯಾಗಿ ತಿರುಗಾಡದಂತಹ ವಾತಾವರಣ ನಿರ್ಮಾಣವಾಗಿದೆ.
ಎಂಪಿಎಂ ಕಾರ್ಖಾನೆ ಸ್ಥಗಿತಗೊಂಡು ಕಾರ್ಮಿಕರ ಸಾವಿರಾರು ವಸತಿ ಗೃಹಗಳು ಪಾಳುಬಿದ್ದಿದ್ದು, ಇದರ ಜೊತೆಗೆ ಈ ಭಾಗದಲ್ಲಿ ಹೊರಭಾಗದಿಂದ ಕೋಳಿ, ಕುರಿ ಮಾಂಸದಂಗಡಿಗಳ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದ್ದು, ಇದರಿಂದಾಗಿ ನಾಯಿಗಳು ಈ ಭಾಗದಲ್ಲಿಯೇ ವಾಸದ ನೆಲೆಗಳನ್ನು ರೂಪಿಸಿಕೊಂಡಿವೆ. ನಾಯಿಗಳ ಸಂತತಿ ಏರಿಕೆಯಾಗುತ್ತಿದ್ದು, ಈ ಬಗ್ಗೆ ಯಾರು ಸಹ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಗರಸಭೆ ಆಡಳಿತ ತಕ್ಷಣ ಕಾರ್ಯಾಚರಣೆ ನಡೆಸಿ ನಾಯಿಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.