ಭದ್ರಾವತಿ, ಜ. ೩೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗ ಸೃಷ್ಟಿಸಿ ಕೊಡುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇದೀಗ ಗ್ರಾಹಕ ಸೇವಾ ಕೇಂದ್ರ ಸಹ ಆರಂಭಗೊಂಡಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಹೇಳಿದರು.
ಅವರು ಸೋಮವಾರ ಹಳೇನಗರದ ಭೂತನಗುಡಿ ಶ್ರೀ ಕೃಷ್ಣರುಕ್ಮಿಣಿ ದೇವಸ್ಥಾನದ ಸಮೀಪ ಯೋಜನೆ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ಗ್ರಾಹಕ ಸೇವಾ ಕೇಂದ್ರ ಉದ್ಘಾಟನಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಸರ್ಕಾರ ಕೈಗೊಳ್ಳಬೇಕಾಗಿರುವ ಯೋಜನೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೈಗೊಳ್ಳಲಾಗುತ್ತಿದೆ. ಆ ಮೂಲಕ ಪ್ರತಿಯೊಬ್ಬರು ಸ್ವಾವಲಂಬಿಗಳಾಗಿ ಬದುಕುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಯೋಜನೆ ವತಿಯಿಂದ ಉದ್ಯೋಗ ಸೃಷ್ಟಿಸಿಕೊಡಲಾಗುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆಯವರ ಭವಿಷ್ಯದ ಅಲೋಚನೆಗಳು ಅದ್ಭುತವಾಗಿವೆ. ಯಾವುದೇ ಧರ್ಮ, ಜಾತಿಗೆ ಮೀಸಲಾಗಿರದೆ ಎಲ್ಲರ ಅಭಿವೃದ್ಧಿಗೆ ಯೋಜನೆ ಮೂಲಕ ಒತ್ತು ನೀಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಈ ಗ್ರಾಹಕ ಸೇವಾ ಕೇಂದ್ರದ ಸದುಪಯೋಗಪಡೆದುಕೊಳ್ಳಬೇಕೆಂದರು.
ಸೇವಾ ಕೇಂದ್ರವನ್ನು ಈ ಭಾಗದ ನಗರಸಭಾ ಸದಸ್ಯೆ ಅನುಸುಧಾ ಮೋಹನ್ ಉದ್ಘಾಟಿಸಿ, ಶುಭ ಹಾರೈಸಿದರು. ಯೋಜನೆಯ ಪ್ರಮುಖರಾದ ವಿ.ಎನ್ ಪ್ರಶಾಂತ್ ಹಾಗು ಸೇವಾ ಪ್ರತಿನಿಧಿಗಳು, ಒಕ್ಕೂಟದ ಮಹಿಳಾ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ಹಳೇನಗರದ ಭೂತನಗುಡಿ ಶ್ರೀ ಕೃಷ್ಣರುಕ್ಮಿಣಿ ದೇವಸ್ಥಾನದ ಸಮೀಪ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ ಗ್ರಾಹಕ ಸೇವಾ ಕೇಂದ್ರ ಸೋಮವಾರ ನಗರಸಭಾ ಸದಸ್ಯೆ ಅನುಸುಧಾ ಮೋಹನ್ ಉದ್ಘಾಟಿಸಿದರು.
No comments:
Post a Comment