ಬುಲೆರೋ ವಾಹನ, ೩೦ ಚೀಲ ಅಕ್ಕಿ ವಶ : ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಭದ್ರಾವತಿ ಸಿದ್ದಾಪುರ ತಾಂಡದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ತಹಸೀಲ್ದಾರ್ ಪ್ರದೀಪ್ ಆರ್. ನಿಕ್ಕಮ್ ಮತ್ತು ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ ನೇತೃತ್ವದ ತಂಡ ದಾಳಿ ನಡೆಸಿರುವುದು.
ಭದ್ರಾವತಿ, ಜ. ೩೧: ನಗರಸಭೆ ವ್ಯಾಪ್ತಿಯ ಸಿದ್ದಾಪುರ ತಾಂಡದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತುನು ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಗ್ರಾಮಸ್ಥರು ತಡೆದು ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.
ನ್ಯಾಯಬೆಲೆ ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ನಂತರ ಬೇರೆ ಚೀಲಗಳಿಗೆ ತುಂಬಿ ಮಾರಾಟ ಮಾಡಲು ಯತ್ನಿಸುತ್ತಿದ್ದಾನೆಂಬ ದೂರು ಗ್ರಾಮಸ್ಥರಿಂದ ಬಂದ ಹಿನ್ನಲೆಯಲ್ಲಿ ಸ್ಥಳಕ್ಕೆ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಮತ್ತು ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ ನೇತೃತ್ವದ ತಂಡ ದಾಳಿ ನಡೆಸಿದೆ.
ದಾಳಿ ನಡೆಸಿದ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಒಟ್ಟು ೨೪೮ ಚೀಲ ಅಕ್ಕಿ ಹಾಗು ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಮನೆಯಲ್ಲಿ ದಾಸ್ತಾನು ಮಾಡಲಾಗಿದ್ದ ೧೩೬ ಚೀಲ ಅಕ್ಕಿ ಮತ್ತು ಅಕ್ರಮವಾಗಿ ಮಾರಾಟ ಮಾಡಲು ಬುಲೆರೋ ವಾಹನದಲ್ಲಿ ತುಂಬಲಾಗಿದ್ದ ಸುಮಾರು ೩೦ ಚೀಲ ಅಕ್ಕಿ ಪತ್ತೆಯಾಗಿದೆ. ಈ ತಿಂಗಳು ನ್ಯಾಯಬೆಲೆ ಅಂಗಡಿಗೆ ಪಡಿತರ ಚೀಟಿದಾರರಿಗೆ ವಿತರಣೆ ಮಾಡಲು ೧೫೮ ಕ್ವಿಂಟಲ್ ೮೭ ಕೆ.ಜಿ ಅಕ್ಕಿ ( ೫೦ ಕೆ.ಜಿ ತೂಕದ ಒಟ್ಟು ೩೧೮ ಚೀಲ) ಕೆಎಫ್‌ಸಿಎಸ್‌ಸಿ ಗೋದಾಮಿನಿಂದ ಸರಬರಾಜು ಮಾಡಲಾಗಿದೆ. ಜನವರಿ ತಿಂಗಳಿನಲ್ಲಿ ವಿತರಣೆಯಾಗಿ ಉಳಿದಿರುವ ಅಕ್ಕಿ ಮತ್ತು ಸರಬರಾಜು ಮಾಡಲಾಗಿರುವ ಅಕ್ಕಿ ಎರಡನ್ನು ಒಟ್ಟು ಗೂಡಿಸಿ ಲೆಕ್ಕ ಹಾಕಿದಾಗ ವ್ಯತ್ಯಸ ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ನಗರ ಆಹಾರ ನಿರೀಕ್ಷಕ ಎ.ಟಿ ಬಸವರಾಜ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇರೆಗೆ ಪೊಲೀಸರು ಅಕ್ಕಿ ಸಾಗಾಣಿಕೆಗೆ ಬಳಸಿದ್ದ ಬುಲೇರೋ ವಾಹನ ಮತ್ತು ವಾಹನದಲ್ಲಿ ಅಕ್ರಮ ತುಂಬಲಾಗಿದ್ದ ೩೦ ಚೀಲ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಮತ್ತು ಬುಲೇರೋ ವಾಹನ ಚಾಲಕ ತಲೆ ಮರೆಸಿಕೊಂಡಿದ್ದು, ಅಂಗಡಿ ಮಾಲೀಕ ಯೋಗೇಶ್‌ನಾಯ್ಕ ಸಹೋದರನನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
No comments:
Post a Comment