Monday, February 7, 2022

ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ನವೀಕರಣಗೊಂಡ ಪಾಕಶಾಲೆ ಕೊಠಡಿ ಉದ್ಘಾಟನೆ

ಭದ್ರಾವತಿ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಪಾಕಶಾಲೆಯ ನಿವೀಕರಣಗೊಂಡ ಕೊಠಡಿಯನ್ನು ಸೋಮವಾರ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಉದ್ಘಾಟಿಸಿದರು.
    ಭದ್ರಾವತಿ, ಫೆ. ೭: ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಪಾಕಶಾಲೆಯ ನಿವೀಕರಣಗೊಂಡ ಕೊಠಡಿಯನ್ನು ಸೋಮವಾರ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರಾ ಉದ್ಘಾಟಿಸಿದರು.
    ತುಂಬಾ ಹಳೇಯದಾದ ಅತಿಥಿ ಗೃಹದಲ್ಲಿ ಶಿಥಿಲಗೊಂಡ ಕೊಠಡಿಯನ್ನು ಆಧುನಿಕ ರೀತಿಯಲ್ಲಿ ನವೀಕರಣಗೊಳಿಸಲಾಗಿದೆ. ಧಾರ್ಮಿಕ ಆಚರಣೆಯೊಂದಿಗೆ ಕೊಠಡಿಯನ್ನು ಉದ್ಘಾಟಿಸಲಾಯಿತು.
    ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಪ್ರಭಾರ ಮಹಾಪ್ರಬಂಧಕ ಪಿ.ಪಿ ಚಕ್ರವರ್ತಿ, ಅಪರೇಷನ್ ವಿಭಾಗದ ಮುಖ್ಯ ವ್ಯವಸ್ಥಾಪಕ ಕೆ.ಎಸ್ ಸುರೇಶ್, ಅತಿಥಿ ಗೃಹದ ಅಧಿಕಾರಿಗಳಾದ ಎ.ಆರ್ ವೀರಣ್ಣ, ಚಂದ್ರಕಾಂತ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಹಾಗು ಪದಾಧಿಕಾರಿಗಳು, ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಅತಿಥಿ ಗೃಹದ ಸಿಬ್ಬಂದಿಗಳಾದ ಮೋಹನ್, ಪ್ರತಾಪ್, ಪ್ರಭಾಕರ್, ವಿಲ್ಸನ್, ಆದಿನಾರಾಯಣ, ಆಸ್ಲಾಂ, ಸುರೇಶ್, ಸುಜಾತ, ಸಾವಿತ್ರಮ್ಮ, ತುಳಸಿ, ಲಕ್ಷ್ಮೀಬಾಯಿ, ರೂಪ, ಪದ್ಮಮ್ಮ ಮತ್ತು ಪಾರ್ವತಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ಕಾರದ ಆದೇಶದ ವಿರುದ್ಧ ಮುಸ್ಲಿಂ ವಿದ್ಯಾರ್ಥಿಗಳ ಪ್ರತಿಭಟನೆ

ಹಿಜಾಬ್ ಧರಿಸಿಕೊಂಡು ತರಗತಿಗೆ ಹೋಗಲು ಅವಕಾಶ ನೀಡುವಂತೆ ಮನವಿ

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಮುಂಭಾಗ ಮುಸ್ಲಿಂ ವಿದ್ಯಾರ್ಥಿಗಳು ಸರ್ಕಾರದ ಆದೇಶದ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.
    ಭದ್ರಾವತಿ, ಫೆ. ೭: ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಇನ್ನೂ ಬಗೆ ಹರಿದಿಲ್ಲ. ವಿದ್ಯಾರ್ಥಿಗಳಿಗೆ ಆಯಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ನಿಗದಿಪಡಿಸಿರುವ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದ್ದರೂ ಸಹ ಮುಸ್ಲಿಂ ವಿದ್ಯಾರ್ಥಿಗಳು ಸೋಮವಾರ ಆದೇಶದ ವಿರುದ್ಧ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು.
    ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿಗಳನ್ನು ಕಾಲೇಜಿನ ಒಳಗೆ ಬಿಡದಂತೆ ಕಾಲೇಜಿನ ಮುಂಭಾಗ ಪ್ರಾಂಶುಪಾಲರು ಸರ್ಕಾರದ ಆದೇಶವನ್ನು ಓದಿ ತಿಳಿಸಿದರು. ಆದರೂ ಸಹ ವಿದ್ಯಾರ್ಥಿಗಳು ತರಗತಿಗಳಿಗೆ ಹಿಜಾಬ್ ಧರಿಸಿಕೊಂಡು ಹೋಗುವುದಾಗಿ ಹಠಕ್ಕೆ ಬಿದ್ದು, ಪ್ರತಿಭಟನೆ ಕೈಗೊಂಡಿದ್ದಾರೆ. ಅಲ್ಲದೆ ಹಿಜಾಬ್ ಧರಿಸಿಕೊಂಡು ತರಗತಿಗಳಿಗೆ ಹೋಗಲು ಅವಕಾಶ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ್ದಾರೆ.
    ಕೇಸರಿ ವಸ್ತ್ರದೊಂದಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಸರ್ಕಾರದ ಆದೇಶ ಪಾಲನೆ ಮಾಡುವ ಮೂಲಕ ತರಗತಿಗಳಿಗೆ ಹಾಜರಾದರು. ಈ ನಡುವೆ ಪೊಲೀಸರು ಕಾಲೇಜು ಆವರಣದ ಸುತ್ತಮುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

Sunday, February 6, 2022

ವಿಧಾನ ಪರಿಷತ್ ಸದಸ್ಯ, ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂಗೆ ರಾಜಕೀಯ ಅಸ್ಥಿರತೆ

ಕ್ಷೇತ್ರದ ಜನರಲ್ಲಿ ನಂಬಿಕೆ ಕಳೆದು ಕೊಂಡ ನಾಯಕ..!


ಸಿ.ಎಂ ಇಬ್ರಾಹಿಂ

    * ಅನಂತಕುಮಾರ್
    ಭದ್ರಾವತಿ, ಫೆ. ೬: ವಿಧಾನ ಪರಿಷತ್ ಸದಸ್ಯ, ಕೇಂದ್ರದ ಮಾಜಿ ಸಚಿವ ಸಿ.ಎಂ ಇಬ್ರಾಹಿಂರವರಿಗೆ ಇತ್ತೀಚೆಗೆ ರಾಜಕೀಯ ಅಸ್ಥಿರತೆ ಕಂಡು ಬರುತ್ತಿದ್ದು, ಸೂಕ್ತ ನೆಲೆಗಾಗಿ ಹುಡುಕಾಟ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕಳೆದ ಸುಮಾರು ೧ ವರ್ಷದಿಂದ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಇಬ್ರಾಹಿಂ, ಇದೀಗ ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಆದರೆ ಕ್ಷೇತ್ರದಲ್ಲಿ ಇವರ ಸ್ಪಷ್ಟನೆ ಮೇಲೆ ಬಹುತೇಕ ಮಂದಿಗೆ ನಂಬಿಕೆ ಬರುತ್ತಿಲ್ಲ.
    ಇಬ್ರಾಹಿಂರವರು ಕ್ಷೇತ್ರದ ಜನತೆಗೆ ಹೊಸಬರಲ್ಲ. ಹಾಗಂತ ಇಲ್ಲಿಯೇ ಹುಟ್ಟಿ ಬೆಳೆದವರಲ್ಲ. ಆದರೆ ಇಲ್ಲಿಯೇ ರಾಜಕೀಯವಾಗಿ ನೆಲೆ ಕಂಡುಕೊಳ್ಳಬೇಕೆಂದು ಕೇರಳದಿಂದ ಬಂದು ನೆಲೆ ನಿಂತವರು. ಮೂಲತಃ ಜನತಾ ಪರಿವಾರದಿಂದ ರಾಜಕೀಯಕ್ಕೆ ಬಂದ ಇಬ್ರಾಹಿಂ ಎಂದಿಗೂ ಚುನಾವಣೆ ಎದುರಿಸಿ ಗೆದ್ದವರಲ್ಲ. ಹಿಂಬದಿಯಿಂದ ಅಧಿಕಾರಕ್ಕೆ ಏರಿದವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ನೇಹಿತರಾಗಿರುವ ಹಿನ್ನಲೆಯಲ್ಲಿ ಇಂದಿಗೂ ರಾಜಕೀಯದಲ್ಲಿ ಇಬ್ರಾಹಿಂ ಉಳಿದುಕೊಳ್ಳಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು.
       ಕ್ಷೇತ್ರದ ಆರಂಭದ ರಾಜಕಾರಣದಲ್ಲಿ ಮುಸ್ಲಿಂ ಸಮುದಾಯದವರ ಪಾತ್ರ ಹೆಚ್ಚಿನದ್ದಾಗಿದೆ. ಈ ಹಿನ್ನಲೆಯಲ್ಲಿ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕರಾಗಿದ್ದ ಅಬ್ದುಲ್ ಖುದ್ದೂಸ್ ಅನ್ವರ್‌ರವರು ೧೯೬೭ ರಿಂದ ೧೯೭೨ರವರೆಗೆ ೨ ಬಾರಿ ಶಾಸಕರಾಗಿದ್ದರು. ಆ ನಂತರ ೧೯೮೯ರಲ್ಲಿ ಇಸಾಮಿಯಾ ಅವರು ಒಂದು ಬಾರಿ ಶಾಸಕರಾಗಿದ್ದರು. ಈ ಇಬ್ಬರ ನಂತರ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಪ್ರಬಲ ನಾಯಕರಾಗಿ ಇದುವರೆಗೂ ಯಾರು ಗುರುತಿಸಿಕೊಂಡಿಲ್ಲ. ಈ ನಡುವೆ ಇಬ್ರಾಹಿಂ ನಾಯಕರಾಗಿ ಬೆಳೆಯಲು ಪ್ರಯತ್ನಿಸಿದರಾದರೂ ಸಹ ಇವರ ಮೇಲೆ ಮುಸ್ಲಿಂ ಸಮುದಾಯದ ಬಹುತೇಕ ಮಂದಿ ಒಲವು ತೋರಿಸಲಿಲ್ಲ.
    ಸಿದ್ದರಾಮಯ್ಯಯವರು ಜಾತ್ಯಾತೀತ ಜನತಾದಳ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಾಗ ಇಬ್ರಾಹಿಂ ಸಹ ಕಾಂಗ್ರೆಸ್ ಸೇರಲು ಪ್ರಯತ್ನಿಸಿದರಾದರೂ ಸಹ ಕಾಂಗ್ರೆಸ್‌ನಲ್ಲಿ ಇವರ ಸೇರ್ಪಡೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಭದ್ರ ಬುನಾದಿ ಕಂಡುಕೊಂಡ ನಂತರ ಅವರ ಒತ್ತಡಕ್ಕೆ ಮಣಿದು ಇಬ್ರಾಹಿಂ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಇಬ್ರಾಹಿಂ ಈ ನಡುವೆ ಕ್ಷೇತ್ರದಲ್ಲಿ ಆಗಲೇ ಪ್ರಬಲವಾಗಿ ರಾಜಕೀಯ ಅಸ್ತಿತ್ವ ಕಂಡುಕೊಂಡಿದ್ದ ಬಿ.ಕೆ ಸಂಗಮೇಶ್ವರ್‌ರನ್ನು ಮೂಲೆ ಗುಂಪು ಮಾಡಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಗಿಟ್ಟಿಸಿಕೊಂಡು ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿ ಕೊನೆಗೆ ೩ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಆದರೂ ಸಹ ಸಿದ್ದರಾಮಯ್ಯ ಇಬ್ರಾಹಿಂರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಿ ರಾಜಕೀಯದಲ್ಲಿ ಮುಂದುವರೆಯುವಂತೆ ನೋಡಿಕೊಂಡರು. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಇಬ್ರಾಹಿಂ ಇದೀಗ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಲು ಮುಂದಾಗಿರುವುದು ಅವರ ರಾಜಕೀಯ ಅಸ್ಥಿರತೆಯನ್ನು ಎದ್ದು ತೋರಿಸುತ್ತಿದೆ.
    ಕಳೆದ ಸೆಪ್ಟಂಬರ್‌ನಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಮೊದಲ ವರ್ಷದ ಪುಣ್ಯಸ್ಮರಣೆ ಸಮಾರಂಭದಲ್ಲಿ ಇಬ್ರಾಹಿಂ ಜೆಡಿಎಸ್ ಸೇರುವ ಮುನ್ಸೂಚನೆ ಸಹ ನೀಡಿದ್ದರು. ಆದರೆ ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡಿರಲಿಲ್ಲ. ಈ ನಡುವೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇಬ್ರಾಹಿಂ ಸೇರ್ಪಡೆಗೊಳ್ಳುವ ಬಗ್ಗೆ ಸಹ ಸಹಮತ ವ್ಯಕ್ತಪಡಿಸಿದ್ದರು. ಆದರೆ ಕ್ಷೇತ್ರದಲ್ಲಿ ಇಬ್ರಾಹಿಂ ನೆಲೆ ನಿಲ್ಲುವ ಅವಕಾಶ ಈಗಾಗಲೇ ಕಳೆದುಕೊಂಡಿದ್ದು, ಮುಂದಿನ ವಿಧಾನಸಭಾ ಚುನಾವಣೆಗೆ ಶಾರದ ಅಪ್ಪಾಜಿಯೇ ಅಭ್ಯರ್ಥಿ ಎಂದು ಕುಮಾರಸ್ವಾಮಿಯವರು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೂ ಸಹ ಇಬ್ರಾಹಿಂ ಜೆಡಿಎಸ್ ಸೇರುವುದಾಗಿ ಘೋಷಿಸಿಕೊಂಡಿರುವುದು ಪುನಃ ಹಿಂಬದಿ ರಾಜಕಾರಣದ ಮೂಲಕ ಅಧಿಕಾರ ಹಿಡಿಯಬೇಕೆಂಬ ಉದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷಗಳಿಲ್ಲ. ಈ ಹಿನ್ನಲೆಯಲ್ಲಿ ರಾಜಕೀಯ ಸ್ಥಿರತೆ ಕಾಯ್ದುಕೊಳ್ಳಲು ಜೆಡಿಎಸ್ ಸೇರುವುದು ಅನಿವಾರ್ಯವಾಗಿದೆ. ಆದರೆ ಇಬ್ರಾಹಿಂ ಜೆಡಿಎಸ್ ಸೇರುವ ಸ್ಪಷ್ಟನೆ ಬಗ್ಗೆ ಕ್ಷೇತ್ರದಲ್ಲಿ ಬಹುತೇಕ ಮಂದಿಗೆ ನಂಬಿಕೆ ಬರುತ್ತಿಲ್ಲ.  

ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ


ಭದ್ರಾವತಿ ಜನ್ನಾಪುರದ ಹಿರಿಯ ಹವ್ಯಾಸಿ ಅಂಚೆ ಚೀಟಿ, ನೋಟು, ನಾಣ್ಯ ಸಂಗ್ರಹಗಾರ ಗಣೇಶ್‌ರವರು ನೋಟಿನ ಮೂಲಕ ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
    ಭದ್ರಾವತಿ, ಫೆ. ೬: ಭಾರತ ರತ್ನ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್‌ರವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ.
    ಲತಾ ಮಂಗೇಶ್ಕರ್‌ರವರ ನಿಧನ ಮನಸ್ಸಿಗೆ ತುಂಬಾ ನೋವುಂಟು ಮಾಡಿದ್ದು, ಇವರ ನಿಧನ ಸಂಗೀತ ಮತ್ತು ಗಾಯನ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಸುಮಾರು ೩೬ ಭಾಷೆಗಳಲ್ಲಿ ಗಾಯನ ಮಾಡಿರುವ ಇವರು ತಮ್ಮ ಸುಮಧುರ ಕಂಠದಿಂದ ಎಲ್ಲಾ ಭಾಷಿಗರ ಮನಸ್ಸನ್ನು ಸೂರೆಗೊಂಡಿದ್ದಾರೆ. ಅಪಾರ ಅಭಿಮಾನಿ ಬಳಗ ಹೊಂದುವ ಮೂಲಕ ರಾಷ್ಟ್ರ ಹಾಗು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದು ಗೌರವಕ್ಕೆ ಪಾತ್ರರಾಗಿದ್ದರು. ಇವರಿಗೆ ಅಂತಿಮ ಗೌರವ ಪೂರ್ವಕ ನಮನ ಸಲ್ಲಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.
    ನೋಟಿನ ಮೂಲಕ ಸಂತಾಪ :
    ನಗರದ ಜನ್ನಾಪುರದ ಹಿರಿಯ ಹವ್ಯಾಸಿ ಅಂಚೆ ಚೀಟಿ, ನೋಟು, ನಾಣ್ಯ ಸಂಗ್ರಹಗಾರ ಗಣೇಶ್‌ರವರು ನೋಟಿನ ಮೂಲಕ ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
    ೧೦ ರು. ಮುಖಬೆಲೆ ಹೊಂದಿರುವ ಲತಾ ಮಂಗೇಶ್ಕರ್‌ರವರ ಜನ್ಮ ದಿನಾಂಕ ಮತ್ತು ಮರಣ ದಿನಾಂಕ ಒಳಗೊಂಡಿರುವ ನೋಟನ್ನು ಸಮರ್ಪಿಸಿದ್ದಾರೆ. ಗಣೇಶ್‌ರವರು ಪ್ರತಿ ಬಾರಿ ಗಣ್ಯ ವ್ಯಕ್ತಿಗಳು ನಿಧನ ಹೊಂದಿದಾಗ ನೋಟಿನ ಮೂಲಕ ಸಂತಾಪ ಸೂಚಿಸಿ ಗಮನ ಸೆಳೆಯುತ್ತಿದ್ದಾರೆ.

Saturday, February 5, 2022

ಕನ್ನಡದ ಕಬೀರ ಇಬ್ರಾಹಿಂ ಸುತಾರ ನಿಧನಕ್ಕೆ ಶಾಸಕರ ಸಂತಾಪ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ
    ಭದ್ರಾವತಿ, ಫೆ. ೫ : ಕನ್ನಡದ ಕಬೀರ ಎಂದೇ ಖ್ಯಾತರಾದ ಹಾಗು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ.
    ಇವರ ನಿಧನದಿಂದ ಭಾವೈಕ್ಯತಾ ತತ್ವಜ್ಞಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಭಾವೈಕ್ಯತೆಯನ್ನು ಜನರ ಮನದಲ್ಲಿ ಬಿತ್ತುವಲ್ಲಿ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿರುತ್ತಾರೆ. ಇವರ ವಿಚಾರಧಾರೆಗಳು, ಸರಳ ಸಜ್ಜನ ನಡವಳಿಕೆಗಳು, ಬಸವಣ್ಣನವರ ಬಗ್ಗೆ ಹೊಂದಿದ್ದ ಅಪಾರ ಗೌರವಗಳು ಇವರನ್ನು ಜನಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡಿವೆ. ಇಂತಹ ಮಹಾನ್ ಆದರ್ಶ ವ್ಯಕ್ತಿಗೆ ಅಂತಿಮ ಗೌರವ ಪೂರ್ವಕ ನಮನ ಸಲ್ಲಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

ಸುಮಾರು ೧ ವರ್ಷದ ನಂತರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಒಪ್ಪಿಗೆ ನೀಡದ ಸರ್ಕಾರ

ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಇಲಾಖೆ ವಿಚಾರಣೆ


ಭದ್ರಾವತಿ ಅರಣ್ಯ ವಿಭಾಗದಲ್ಲಿ ನಡೆದಿರುವ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸರ್ಕಾರ ನಿರಾಕರಿಸಿ ಹಿಂಬರಹ ನೀಡಿರುವುದು.
    ಭದ್ರಾವತಿ, ಫೆ. ೫: ಇಲ್ಲಿನ ಅರಣ್ಯ ವಿಭಾಗದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸರ್ಕಾರ ನಿರಾಕರಿಸಿದೆ.
    ಅರಣ್ಯ ವಿಭಾಗದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಅಗತ್ಯ ದಾಖಲೆಗಳೊಂದಿಗೆ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ಡಿ.೪, ೨೦೧೯ ಮತ್ತು ಮಾ.೧೯, ೨೦೨೦ರಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈ ಹಿನ್ನಲೆಯಲ್ಲಿ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವಿವರವಾದ ವರದಿ ಸಲ್ಲಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಪಡೆ ಮುಖ್ಯಸ್ಥರು)ಗಳಿಗೆ ಕೋರಿತ್ತು.
    ನ.೨೩, ೨೦೨೦ರಂದು  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಪಡೆ ಮುಖ್ಯಸ್ಥರು)ಗಳಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು,  ಈ ವರದಿ ಆಧಾರ ಮೇಲೆ ಇಲಾಖಾ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ನಿರಾಕರಿಸಿದೆ ಎಂದು ಇದೀಗ ಸುಮಾರು ೧ ವರ್ಷದ ನಂತರ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ವಿ ಶ್ರೀನಿವಾಸನ್ ಹಿಂಬರಹ ನೀಡಿದ್ದಾರೆ.

ತಹಸೀಲ್ದಾರ್ ಪ್ರದೀಪ್‌ರನ್ನು ಕನಿಷ್ಠ ೩ ವರ್ಷಗಳವರೆಗೆ ಮುಂದುವರೆಸಿ : ಮನವಿ

ದಕ್ಷ ಹಾಗು ನಿರ್ಭೀತ ಅಧಿಕಾರಿ ತಹಸೀಲ್ದಾರ್ ಪ್ರದೀಪ್ ಆರ್. ನಿಕ್ಕಮ್ ಅವರನ್ನು ಕನಿಷ್ಠ ೩ ವರ್ಷಗಳ ವರೆಗೆ ಭದ್ರಾವತಿ ತಾಲೂಕು ದಂಡಾಧಿಕಾರಿ ಹಾಗು ತಹಸೀಲ್ದಾರ್ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿ ಶನಿವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೫: ದಕ್ಷ ಹಾಗು ನಿರ್ಭೀತ ಅಧಿಕಾರಿ ತಹಸೀಲ್ದಾರ್ ಪ್ರದೀಪ್ ಆರ್. ನಿಕ್ಕಮ್ ಅವರನ್ನು ಕನಿಷ್ಠ ೩ ವರ್ಷಗಳ ವರೆಗೆ ತಾಲೂಕು ದಂಡಾಧಿಕಾರಿ ಹಾಗು ತಹಸೀಲ್ದಾರ್ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿ ಶನಿವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಸುಮಾರು ೬ ತಿಂಗಳಿನಿಂದ ತಾಲೂಕು ದಂಡಾಧಿಕಾರಿ ಹಾಗು ತಹಸೀಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರದೀಪ್‌ರವರು ಆಡಳಿತ ವ್ಯವಸ್ಥೆಯಲ್ಲಿ ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಸುಧಾರಣೆಗಳನ್ನು ಕೈಗೊಳ್ಳುವ ಮೂಲಕ ಜನರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಲಾಯಿತು.
    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹಾತ್ವಕಾಂಕ್ಷೆ ಯೋಜನೆಯಾದ ಕ್ಯಾಚ್ ದ ರೈನ್(ಮಳೆ ನೀರು ಹಿಡಿಯಿರಿ) ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದರು. ತಾಲೂಕಿನ ಸುಮಾರು ೪೨೦ ಕೆರೆಗಳ ಬೌಂಡರಿ ನಿಗದಿಪಡಿಸುವ ಸಂಬಂಧ ಹಾಗು ಯಾವುದೇ ರಾಜಕೀಯ ಮತ್ತು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿಯದೇ ಕೆರೆಗಳ ಒತ್ತುವರಿ ತೆರವುಗೊಳಿಸುವ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾರ್ಚ್ ೨೦೨೩ರಲ್ಲಿ ಸ್ಥಳೀಯ ರೈತರು ಕೆರೆ ಕಟ್ಟೆಗಳ ಉತ್ಸವ ಹಮ್ಮಿಕೊಂಡಿರುವುದರಿಂದ ಹಾಗು ತಾಲೂಕಿನಲ್ಲಿ ಇನ್ನೂ ಹಲವಾರು ಜನಪರ ಕಾರ್ಯಕ್ರಮಗಳು ನಡೆಯಬೇಕಾಗಿರುವುದರಿಂದ ಪ್ರದೀಪ್‌ರವರ ಸೇವೆ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಇವರ ವರ್ಗಾವಣೆಯನ್ನು ರದ್ದುಪಡಿಸಿ ಕನಿಷ್ಠ ೩ ವರ್ಷಗಳ ವರೆಗೆ ಮುಂದುವರೆಸಬೇಕೆಂದು ಮುಖ್ಯಮಂತ್ರಿಗಳಿಗೆ, ಕಂದಾಯ ಹಾಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಸಂಸದರಿಗೆ ಆಗ್ರಹಿಸಲಾಯಿತು.
    ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ರಮಾ ವೆಂಕಟೇಶ್, ಶೈಲಜಾ ರಾಮಕೃಷ್ಣ, ದೇವಿಕಾನಾಗರಾಜ್, ಆರ್. ಮುರುಗೇಶ್, ಇಂದ್ರಾಣಿ, ಕೆ.ವಿ ಧನಂಜಯ, ಕೆ.ಜಿ ಸುರೇಂದ್ರಪ್ಪ, ಮಹಮ್ಮದ್ ಹನೀಫ್, ಖಾಜಾ, ಜಾನ್ಸನ್, ಮಂಜು, ಶ್ಯಾಮ್‌ಬಾಬು, ಮಹಾದೇವ್, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.