Saturday, February 5, 2022

ತಹಸೀಲ್ದಾರ್ ಪ್ರದೀಪ್‌ರನ್ನು ಕನಿಷ್ಠ ೩ ವರ್ಷಗಳವರೆಗೆ ಮುಂದುವರೆಸಿ : ಮನವಿ

ದಕ್ಷ ಹಾಗು ನಿರ್ಭೀತ ಅಧಿಕಾರಿ ತಹಸೀಲ್ದಾರ್ ಪ್ರದೀಪ್ ಆರ್. ನಿಕ್ಕಮ್ ಅವರನ್ನು ಕನಿಷ್ಠ ೩ ವರ್ಷಗಳ ವರೆಗೆ ಭದ್ರಾವತಿ ತಾಲೂಕು ದಂಡಾಧಿಕಾರಿ ಹಾಗು ತಹಸೀಲ್ದಾರ್ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿ ಶನಿವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಫೆ. ೫: ದಕ್ಷ ಹಾಗು ನಿರ್ಭೀತ ಅಧಿಕಾರಿ ತಹಸೀಲ್ದಾರ್ ಪ್ರದೀಪ್ ಆರ್. ನಿಕ್ಕಮ್ ಅವರನ್ನು ಕನಿಷ್ಠ ೩ ವರ್ಷಗಳ ವರೆಗೆ ತಾಲೂಕು ದಂಡಾಧಿಕಾರಿ ಹಾಗು ತಹಸೀಲ್ದಾರ್ ಹುದ್ದೆಯಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿ ಶನಿವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
    ಸುಮಾರು ೬ ತಿಂಗಳಿನಿಂದ ತಾಲೂಕು ದಂಡಾಧಿಕಾರಿ ಹಾಗು ತಹಸೀಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರದೀಪ್‌ರವರು ಆಡಳಿತ ವ್ಯವಸ್ಥೆಯಲ್ಲಿ ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಸುಧಾರಣೆಗಳನ್ನು ಕೈಗೊಳ್ಳುವ ಮೂಲಕ ಜನರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಲಾಯಿತು.
    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹಾತ್ವಕಾಂಕ್ಷೆ ಯೋಜನೆಯಾದ ಕ್ಯಾಚ್ ದ ರೈನ್(ಮಳೆ ನೀರು ಹಿಡಿಯಿರಿ) ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದರು. ತಾಲೂಕಿನ ಸುಮಾರು ೪೨೦ ಕೆರೆಗಳ ಬೌಂಡರಿ ನಿಗದಿಪಡಿಸುವ ಸಂಬಂಧ ಹಾಗು ಯಾವುದೇ ರಾಜಕೀಯ ಮತ್ತು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿಯದೇ ಕೆರೆಗಳ ಒತ್ತುವರಿ ತೆರವುಗೊಳಿಸುವ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮಾರ್ಚ್ ೨೦೨೩ರಲ್ಲಿ ಸ್ಥಳೀಯ ರೈತರು ಕೆರೆ ಕಟ್ಟೆಗಳ ಉತ್ಸವ ಹಮ್ಮಿಕೊಂಡಿರುವುದರಿಂದ ಹಾಗು ತಾಲೂಕಿನಲ್ಲಿ ಇನ್ನೂ ಹಲವಾರು ಜನಪರ ಕಾರ್ಯಕ್ರಮಗಳು ನಡೆಯಬೇಕಾಗಿರುವುದರಿಂದ ಪ್ರದೀಪ್‌ರವರ ಸೇವೆ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಇವರ ವರ್ಗಾವಣೆಯನ್ನು ರದ್ದುಪಡಿಸಿ ಕನಿಷ್ಠ ೩ ವರ್ಷಗಳ ವರೆಗೆ ಮುಂದುವರೆಸಬೇಕೆಂದು ಮುಖ್ಯಮಂತ್ರಿಗಳಿಗೆ, ಕಂದಾಯ ಹಾಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಸಂಸದರಿಗೆ ಆಗ್ರಹಿಸಲಾಯಿತು.
    ಟ್ರಸ್ಟ್ ಛೇರ್‍ಮನ್ ಆರ್. ವೇಣುಗೋಪಾಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ರಮಾ ವೆಂಕಟೇಶ್, ಶೈಲಜಾ ರಾಮಕೃಷ್ಣ, ದೇವಿಕಾನಾಗರಾಜ್, ಆರ್. ಮುರುಗೇಶ್, ಇಂದ್ರಾಣಿ, ಕೆ.ವಿ ಧನಂಜಯ, ಕೆ.ಜಿ ಸುರೇಂದ್ರಪ್ಪ, ಮಹಮ್ಮದ್ ಹನೀಫ್, ಖಾಜಾ, ಜಾನ್ಸನ್, ಮಂಜು, ಶ್ಯಾಮ್‌ಬಾಬು, ಮಹಾದೇವ್, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment