ಭದ್ರಾವತಿ ನ್ಯೂಟೌನ್ ಸೆಂಟ್‌ಚಾರ್ಲ್ಸ್ ಶಾಲೆಯ ಸಭಾಂಗಣದಲ್ಲಿ ಆಂಗ್ಲ ಭಾಷಾ ಶಿಕ್ಷಕರ ವೇದಿಕೆ (ಸ್ಟೀಲ್ ಟೌನ್ ಇಂಗ್ಲೀಷ್ ಟೀಚರ್‍ಸ್ ಫೋರಮ್) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ವಿಭಾಗದ ಉಪನಿರ್ದೇಶಕ ಎನ್.ಎಂ ರಮೇಶ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಭದ್ರಾವತಿ, ಫೆ. ೧೪: ನಮ್ಮ ವೃತ್ತಿ ಜೀವನ ನಮ್ಮಿಂದ ವಿದ್ಯೆ ಕಲಿತುಕೊಂಡವರು ನೆನಪಿಸಿಕೊಳ್ಳುವಂತಿರಬೇಕು. ಆಗ ಮಾತ್ರ ಅದು ಸಾರ್ಥಕವಾಗುತ್ತದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ವಿಭಾಗದ ಉಪನಿರ್ದೇಶಕ ಎನ್.ಎಂ ರಮೇಶ್ ಹೇಳಿದರು.
ಅವರು ಸೋಮವಾರ ನಗರದ ನ್ಯೂಟೌನ್ ಸೆಂಟ್‌ಚಾರ್ಲ್ಸ್ ಶಾಲೆಯ ಸಭಾಂಗಣದಲ್ಲಿ ಆಂಗ್ಲ ಭಾಷಾ ಶಿಕ್ಷಕರ ವೇದಿಕೆ (ಸ್ಟೀಲ್ ಟೌನ್ ಇಂಗ್ಲೀಷ್ ಟೀಚರ್‍ಸ್ ಫೋರಮ್) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿರುವವರು ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ನಾವು ನಿರ್ವಹಿಸುವ ಕರ್ತವ್ಯ ಸಾರ್ಥಕಗೊಳ್ಳಬೇಕು. ಶಿಕ್ಷಕರು ಮಕ್ಕಳಿಗೆ ಹೇಳಿಕೊಡುವ ಪಾಠ ಭವಿಷ್ಯದಲ್ಲಿ ಅವರು ನೆನಪಿಸಿಕೊಳ್ಳುವಂತಿರಬೇಕು. ಅದರಲ್ಲೂ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ನಮ್ಮ ಶಿಕ್ಷಕ ವೃತ್ತಿ ಸಾರ್ಥಕಪಡಿಸಿಕೊಳ್ಳಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಮಾತನಾಡಿ, ಮಕ್ಕಳಿಗೆ ಆಂಗ್ಲ ಭಾಷಾ ವಿಷಯ ಕಲಿಕೆ ತುಂಬಾ ಕಷ್ಟಕರವಾಗಿದೆ. ಆಂಗ್ಲ ಭಾಷೆ ಸರಳವಾಗಿ ಕಲಿಯುವಂತೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರ ಶ್ರಮ ಹೆಚ್ಚಿನದ್ದಾಗಿದೆ. ಪ್ರಸ್ತುತ ಬದಲಾದ ಕಾಲಘಟ್ಟದಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರು ಸಹ ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಹೆಚ್ಚು ಸಹಕಾರಿಯಾಗಲಿವೆ ಎಂದರು.
ಕಾರ್ಯಾಗಾರದಲ್ಲಿ ವೇದಿಕೆ ಅಧ್ಯಕ್ಷ ಎಂ. ದಿವಾಕರ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಆಂಗ್ಲ ಭಾಷೆಯನ್ನು ಸರಳವಾಗಿ ಅರ್ಥ ಮಾಡಿಸುವ ವಿಧಾನಗಳು, ಅನುತ್ತೀರ್ಣಗೊಂಡ ಮಕ್ಕಳ ಆಂಗ್ಲ ಭಾಷಾ ಕಲಿಕೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ನಿವೃತ್ತಿ ಹೊಂದುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ಪಾಲ್ಗೊಂಡಿದ್ದರು. ವೇದಿಕೆ ಕಾರ್ಯದರ್ಶಿ ವೈ. ಗಣೇಶ್, ಸೈಂಟ್‌ಚಾರ್ಲ್ಸ್ ಶಾಲೆಯ ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಂಯೋಜಕ ರವಿಕುಮಾರ್, ಪ್ರಭು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭಾರತಿ ಕೇಶವಭಟ್ ಪ್ರಾರ್ಥಿಸಿದರು. ಜಯಕುಮಾರ್ ಸ್ವಾಗತಿಸಿದರು. ವಿವಿಧ ಶಾಲೆಗಳ ಆಂಗ್ಲ ಭಾಷಾ ಶಿಕ್ಷಕರು ಪಾಲ್ಗೊಂಡಿದ್ದರು.