![](https://blogger.googleusercontent.com/img/a/AVvXsEhgfUNCiahhXkrB0eXdLKLJ7kZnnAnhtIvPaAihhRNzUSXwEoOleS1p7E_iRSNGUDvXktdNDJIiMg5hcbR0Gk3D1CINzcdcKg9fpwidQG1Kwq0kuMPDESkQURc-Aq6MdPpkbBXI2JK7wCQinUoQpNOS3H_7phzsNdbztw1SBlvHgpu6s-DRZm9jgLk39A=w400-h223-rw)
ಶಿವಮೊಗ್ಗ ನಡೆದಿರುವ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಫೆ. ೨೧: ಶಿವಮೊಗ್ಗದಲ್ಲಿ ನಡೆದಿರುವ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರ ನಗರದಲ್ಲಿ ಹಿಂದೂಪರ ಸಂಘಟನೆಗಳು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.
ಹರ್ಷ ಹತ್ಯೆ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ನಗರದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಸೋಮವಾರ ನಿಷೇದಾಜ್ಞೆ ಜಾರಿಗೊಳಿಸಿದ್ದ ಹಿನ್ನಲೆಯಲ್ಲಿ ಯಾವುದೇ ರೀತಿ ಪ್ರತಿಭಟನೆ, ಮೆರವಣಿಗೆಗಳಿಗೆ ಅವಕಾಶ ನೀಡಲಿಲ್ಲ. ಈ ಹಿನ್ನಲೆಯಲ್ಲಿ ಕೆಲವು ಖಂಡನೆಗಳು ತಾಲೂಕು ಕಛೇರಿಗೆ ತೆರಳಿ ಮನವಿ ಸಲ್ಲಿಸಿದವು.
ವಿಎಚ್‌ಪಿ ಮನವಿ :
ವಿಶ್ವ ಹಿಂದೂ ಪರಿಷದ್ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಹೆಚ್ಚಾಗುತ್ತಿದ್ದು, ಹಿಂದೂಪರ ಕಾರ್ಯಕರ್ತರಿಗೆ ಸೂಕ್ತ ಭದ್ರತೆ ನೀಡುವ ಜೊತೆಗೆ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ದಕ್ಷಣ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪ, ಪ್ರಮುಖರಾದ ಸತ್ಯಣ್ಣ, ಡಿ.ಆರ್ ಶಿವಕುಮಾರ್, ರಾಮೂರ್ತಿ, ಮಂಜುನಾಥರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶಿವಮೊಗ್ಗ ನಡೆದಿರುವ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಹಿಂದೂ ಪಡೆ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹಿಂದೂ ಪಡೆಯಿಂದ ಮನವಿ :
ಹೊಸಮನೆ ಹಿಂದೂಪಡೆ ವತಿಯಿಂದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹಿಂದೂ ಸಮುದಾಯದವರನ್ನು ಮಾತ್ರ ಗುರಿಯಾಗಿಸಿಕೊಂಡು ಇತ್ತೀಚಿನ ದಿನಗಳಲ್ಲಿ ಹತ್ಯೆ ನಡೆಸಲಾಗುತ್ತಿದೆ. ವಿನಾಕಾರಣ ನಡೆಸಲಾಗುತ್ತಿರುವ ಹತ್ಯೆಗೆ ಕಾರಣರಾಗಿರುವವರನ್ನು ತಕ್ಷಣ ಬಂಧಿಸಬೇಕು. ಹಿಂದೂಪರ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು. ಹತ್ಯೆಯಾದ ಹಿಂದೂ ಕಾರ್ಯಕರ್ತರ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಹಿಂದೂ ಸಮುದಾಯದವರ ಭಾವನೆಗಳಿಗೆ ಬೆಲೆ ನೀಡುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಕೋರಲಾಗಿದೆ.
ಹಿಂದೂಪಡೆ ಅಧ್ಯಕ್ಷ ಹರೀಶ್ ನೇತೃತ್ವದಲ್ಲಿ ತಹಸೀಲ್ದಾರ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು. ಉಪಾಧ್ಯಕ್ಷ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಅಭಿಜಿತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಶಾಲೆಗಳಿಗೆ ಫೆ.೨೨ರಂದು ರಜೆ ಇಲ್ಲ :
ಹರ್ಷ ಹತ್ಯೆ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಸೋಮವಾರ ತಾಲೂಕಿನಾದ್ಯಂತ ೧ ರಿಂದ ೧೦ ತರಗತಿವರೆಗಿನ ಸರ್ಕಾರಿ, ಅನುದಾನ ಮತ್ತು ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಮಂಗಳವಾರ ಎಂದಿನಂತೆ ಶಾಲೆಗಳು ಆರಂಭಗೊಳ್ಳಲಿವೆ. ಶಾಲೆಗಳ ಸುತ್ತಮುತ್ತ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಹೆಚ್ಚಿನ ಗಮನ ಹರಿಸುವಂತೆ ಸಂಬಂಧಪಟ್ಟ ಶಾಲೆಗಳ ಮುಖ್ಯಸ್ಥರಿಗೆ, ಇಲಾಖೆಯ ಸಂಪನ್ಮೂಲ ವ್ಯಕ್ತಿಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.