ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಭೂಮಿಕಾ ವೇದಿಕೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ 'ದ.ರಾ.ಬೇಂದ್ರೆ ಸವಿ ನೆನಪು' ಅಂಗವಾಗಿ ಅಂಬಿಕಾತನಯತ್ತ ಗೀತಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸಕ, ಸಾಹಿತಿ ಡಾ. ಸರ್ಫ್ರಾಜ್ ಚಂದ್ರಗುತ್ತಿ ಪಾಲ್ಗೊಂಡು ಮಾತನಾಡಿದರು.
ಭದ್ರಾವತಿ, ಫೆ. ೨೬: ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡ ನಾಡಿನ ಅಪರೂಪದ ಕವಿ ಎಂದರೆ ತಪ್ಪಾಗಲಾರದು. ಇಂತಹ ಕವಿ ಶತಮಾನ ಕಳೆದರೂ ಸಿಗಲಾರರು ಎಂದು ಉಪನ್ಯಾಸಕ, ಸಾಹಿತಿ ಡಾ. ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.
ಅವರು ಶನಿವಾರ ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಭೂಮಿಕಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ದ.ರಾ.ಬೇಂದ್ರೆ ಸವಿ ನೆನಪು' ಅಂಗವಾಗಿ ಅಂಬಿಕಾತನಯತ್ತ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದ.ರಾ. ಬೇಂದ್ರೆಯವರು ತಮ್ಮ ಬದುಕನ್ನು ಪ್ರತಿಕ್ಷಣ, ಪ್ರತಿದಿನ ಉತ್ಸಾಹದೊಂದಿಗೆ ಕವಿತೆಗಳ ರಚನೆಯಲ್ಲಿ ಕಳೆದವರು. ಎಂದಿಗೂ ಉತ್ಸಾಹದಿಂದ ವಿಮುಖರಾದವರಲ್ಲ. ಅವರ ಪ್ರತಿಯೊಂದು ಕವಿತೆ ಅಪರೂಪದ ವಿಶೇಷತೆಗಳನ್ನು ಒಳಗೊಂಡಿವೆ. ಕವಿತೆ ಎಂದರೆ ಬೇಂದ್ರೆ, ಬೇಂದ್ರೆ ಎಂದರೆ ಕವಿತೆ ಎಂಬ ಅಭಿಪ್ರಾಯವನ್ನು ಬಹಳಷ್ಟು ವಿಮರ್ಶಕರು ವ್ಯಕ್ತಪಡಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಬೇಂದ್ರೆಯವರ ಸಾಧನೆ ಅಸಾಧಾರಣ ಎಂದು ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆ ಅಧ್ಯಕ್ಷ, ವೈದ್ಯ ಸಾಹಿತಿ ಡಾ. ಕೃಷ್ಣ ಎಸ್. ಭಟ್, ವೇದಿಕೆ ವತಿಯಿಂದ ಪ್ರತಿ ವರ್ಷ ವರಕವಿ ದ.ರಾ. ಬೇಂದ್ರೆಯವರನ್ನು ನೆನಪು ಮಾಡಿಕೊಳ್ಳುವ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ಅವರ ಜನ್ಮದಿನದಂದು ನಡೆಯಬೇಕಾದ ಕಾರ್ಯಕ್ರಮವನ್ನು ಇದೀಗ ಆಚರಿಸಲಾಗುತ್ತಿದೆ ಎಂದರು. ವೇದಿಕೆ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿರುವ ಹೊಸಬರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನವಾದ ಸಾಹಿತ್ಯಪರ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ವೇದಿಕೆಯ ಕಾರ್ಯಚಟುವಟಿಕೆಗಳಿಗೆ ಎಲ್ಲರೂ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಆಕಾಶವಾಣಿ ಕಲಾವಿದ ಗುರುಮೂರ್ತಿ ಅಂಬಿಕಾತನಯದತ್ತ ಗೀತಗಾಯನ ನಡೆಸಿಕೊಟ್ಟರು. ವೇದಿಕೆ ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ವೀಣಾಭಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ನಾಗರಾಜ್, ಎಂ. ಪ್ರಕಾಶ್, ಎಚ್. ಮಲ್ಲಿಕಾರ್ಜುನ, ಟಿ.ಎ ರಮೇಶ್, ಶಾರದ ಶ್ರೀನಿವಾಸ್, ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪ, ವಿಐಎಸ್‌ಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಪುಷ್ಪ ಸುಬ್ರಹ್ಮಣ್ಯ ಮತ್ತು ರಾಧಾ ಕೃಷ್ಣಭಟ್ ಪ್ರಾರ್ಥಿಸಿದರು. ಅನ್ನಪೂರ್ಣ ಇತ್ತೀಚೆಗೆ ನಿಧನ ಭಾರತರತ್ನ, ಗಾನ ಕೋಗಿಲೆ ಲತಾಮಂಗೇಶ್ಕರ್‌ರವರ ಕನ್ನಡ ಚಲನಚಿತ್ರ ಗೀತೆ ಸುಶ್ರಾವ್ಯವಾಗಿ ಹಾಡಿದರು.
ಕಾರ್ಯಕ್ರಮ ಆರಂಭದಲ್ಲಿ ಲತಾಮಂಗೇಶ್ಕರ್‌ರವರ ನಿಧನ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು.