Monday, February 28, 2022

ಒತ್ತಡಗಳ ನಡುವೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುವುದು ಸವಾಲಿನ ಕೆಲಸ : ಸಿ.ಎಸ್ ಷಡಾಕ್ಷರಿ


ಭದ್ರಾವತಿ ಸಿದ್ದರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯನವರ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಲಾಯಿತು.
    ಭದ್ರಾವತಿ, ಫೆ. ೨೮: ಹಲವಾರು ಒತ್ತಡಗಳ ನಡುವೆಯೂ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯನವರು ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಹೇಳಿದರು.
    ಅವರು ಸೋಮವಾರ ಸಿದ್ದರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಗ್ರಂಥ ಬಿಡುಗಡೆಯೊಂದಿಗೆ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ ಸೂಕ್ಷ್ಮ ಸ್ಥಳವಾಗಿದ್ದು, ಇಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡು ಕರ್ತವ್ಯ ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಅದರಲ್ಲೂ ಪ್ರತಿ ದಿನ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸಬೇಕಾದ ಇಂದಿನ ದಿನಗಳಲ್ಲಿ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ಯಶಸ್ವಿಯಾಗಿ ಮುನ್ನಡೆಯುವುದು ಬಹಳ ಕಷ್ಟದ ಕೆಲಸವಾಗಿದೆ. ಸೋಮಶೇಖರಯ್ಯನವರು ತಮದೇ ಆದ ವ್ಯಕ್ತಿತ್ವ ಮತ್ತು ವೃತ್ತಿ ಅನುಭವದೊಂದಿಗೆ ಎಲ್ಲವನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಗಳಿಸಿಕೊಂಡಿದ್ದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಕ್ಷತೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯನವರನ್ನು ಅಭಿನಂದನಾ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಕ್ಷೇತ್ರದಲ್ಲಿ ೩ ಬಾರಿ ಒಟ್ಟು ೬ ವರ್ಷ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವುದು ತೃಪ್ತಿ ತಂದುಕೊಟ್ಟಿದೆ. ವೃತ್ತಿ ಬದುಕಿನಲ್ಲಿ ಸಲಹೆ, ಸಹಕಾರ ನೀಡಿದ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೂ, ತಾಲೂಕಿನ ಶಿಕ್ಷಕ ವೃಂದದವರು, ಸಂಘ-ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.  
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ವಿಭಾಗದ ಜಿಲ್ಲಾ ಉಪನಿರ್ದೇಶಕ ಎನ್.ಎಂ ರಮೇಶ್, ಅಭಿವೃದ್ಧಿ ವಿಭಾಗದ ಜಿಲ್ಲಾ ಉಪನಿರ್ದೇಶಕ ಬಿ.ಆರ್ ಬಸವರಾಜಪ್ಪ, ಚಿಕ್ಕಮಗಳೂರು ಜಿಲ್ಲಾ ಉಪನಿರ್ದೇಶಕ ಮಲ್ಲೇಶಪ್ಪ, ಚಿತ್ರದುರ್ಗ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎಚ್. ಮಂಜುನಾಥ್, ಶಂಕರಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಬಸಪ್ಪ, ಅಭಿನಂದನಾ ಸಮಿತಿ ಗೌರವಾಧ್ಯಕ್ಷ ಡಿ. ಪ್ರಭಾಕರ ಬೀರಯ್ಯ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  
    ಅಭಿನಂದನಾ ಗ್ರಂಥದ ಸಂಪಾದಕ, ಸಾಹಿತಿ ಅರಳೇಹಳ್ಳಿ ಅಣ್ಣಪ್ಪ ಪುಸ್ತಕ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕ ವೃಂದದವರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.


ಬಿಇಓ ಟಿ.ಎನ್ ಸೋಮಶೇಖರಯ್ಯ ವೃತ್ತಿ ಬದುಕು ವಿಶಿಷ್ಟ : ಸಿದ್ದಬಸಪ್ಪ


ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಸಾರ್ಥಕ ಸಂಭ್ರಮ' ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯನವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಫೆ. ೨೮: ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇರಯ್ಯನವರ ವೃತ್ತಿ ಬದುಕು ವಿಶಿಷ್ಟವಾಗಿದ್ದು, ಶಿಕ್ಷಣ ಇಲಾಖೆಗೆ ಇವರ ವೃತ್ತಿ ಬದುಕಿನ ಅನುಭವಗಳು ಪ್ರಸ್ತುತ ಅಗತ್ಯವಾಗಿವೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಬಸಪ್ಪ ಹೇಳಿದರು.
    ಅವರು ತಾಲೂಕಿನ ಹೊಳೆಹೊನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಸಾರ್ಥಕ ಸಂಭ್ರಮ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಶಿಕ್ಷಣ ಕ್ಷೇತ್ರದ ಮಹತ್ವ ಎತ್ತಿ ಹಿಡಿಯುವ ಜೊತೆಗೆ ಶಿಕ್ಷಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ಜೊತೆಗೆ ಆಡಳಿತದಲ್ಲಿ ಪ್ರಾಮಾಣಿಕತೆ, ದಕ್ಷತೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಕ್ಷೇತ್ರದಲ್ಲಿ ೩ ಬಾರಿ ಒಟ್ಟು ೬ ವರ್ಷ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವುದು ತೃಪ್ತಿ ತಂದುಕೊಟ್ಟಿದೆ. ವೃತ್ತಿ ಬದುಕಿನಲ್ಲಿ ಸಲಹೆ, ಸಹಕಾರ ನೀಡಿದ ಇಲಾಖೆಯ ಎಲ್ಲಾ ಸಿಬ್ಬಂದಿಗಳಿಗೂ, ತಾಲೂಕಿನ ಶಿಕ್ಷಕ ವೃಂದದವರು, ಸಂಘ-ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.  
    ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಯೂ. ಮಹದೇವಪ್ಪ, ಸಂಘದ ಅಧ್ಯಕ್ಷ ಪೃಥ್ವಿ, ಮಾಜಿ ಅಧ್ಯಕ್ಷ ಎಂ.ಎಸ್ ಬಸವರಾಜ್ ,ಸರ್ಕಾರಿ ನೌಕಾರರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಶಿಕ್ಷಕ ಸಂಘದ ನಿರ್ದೇಶಕರಾದ ಡಿ.ಎಸ್ ಬಸವಂತರಾವ್ ದಾಳೆ, ಮುಖ್ಯ ಶಿಕ್ಷಕರ ಸಂಘದ ಖಜಾಂಚಿ ಮೋಹಿದ್ದೀನ್, ಎಮ್ಮೆಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿ. ರಾಮಕೃಷ್ಣ, ಎಸ್.ಪಿ ರಾಜು, ಮಾಯಮ್ಮ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ವಿವಿಧ ಶಾಲೆಗಳ ಮುಖ್ಯ ಶಿಕ್ಷಕರುಗಳಾದ ಬಸವರಾಜಪ್ಪ, ಅನ್ನಪೂರ್ಣಮ್ಮ ಬಸವರಾಜ, ಚಂದ್ರಪ್ಪ, ಪಾರ್ವತಮ್ಮ, ಉಪೇಂದ್ರ, ರಾಧಮ್ಮ, ಮಂಗಳ, ಜಯಪ್ಪ, ದಯಾನಂದ, ಸಂತೋಷ್ ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾ ಡಂಬಾಲ್ಕರ್ ಪ್ರಾರ್ಥಿಸಿದರು. ಮಾಲತೇಶ್ ನಿರೂಪಿಸಿದರು.

ವಿಜಯ್‌ಕುಮಾರ್ ವಸಂತ್ ದಂಡಿನರವರಿಗೆ ಕೆಎನ್‌ಡಿ ರತ್ನ ಬಿರುದು


ಕರ್ನಾಟಕ ಉತ್ತರ ಸಭಾ ಪ್ರಾಂತ್ಯದ ಕಾರ್ಯದರ್ಶಿ  ವಿಜಯ್‌ಕುಮಾರ್ ವಸಂತ್ ದಂಡಿನರವರಿಗೆ ಭದ್ರಾವತಿ ಸಿಎಸ್‌ಐ ಜೂಬ್ಲಿ ದೇವಾಲಯದಲ್ಲಿ ನಡೆದ ದೃಢೀಕರಣ ಆರಾಧನೆಯಲ್ಲಿ ಕೆಎನ್‌ಡಿ ರತ್ನ ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಫೆ. ೨೮:  ಕರ್ನಾಟಕ ಉತ್ತರ ಸಭಾ ಪ್ರಾಂತ್ಯದ ಕಾರ್ಯದರ್ಶಿ ವಿಜಯ್‌ಕುಮಾರ್ ವಸಂತ್ ದಂಡಿನರವರಿಗೆ ನಗರದ ಸಿಎಸ್‌ಐ ಜೂಬ್ಲಿ ದೇವಾಲಯದಲ್ಲಿ ನಡೆದ ದೃಢೀಕರಣ ಆರಾಧನೆಯಲ್ಲಿ ಕೆಎನ್‌ಡಿ ರತ್ನ ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
    ಕರ್ನಾಟಕ ಉತ್ತರ ಸಭಾ ಪ್ರಾಂತ್ಯದಲ್ಲಿ ವಿಜಯ್‌ಕುಮಾರ್ ವಸಂತ್ ದಂಡಿನರವರು ಸಲ್ಲಿಸಿರುವ ಸೇವೆ ಹಾಗು ಅವರ ಸಾಧನೆಯನ್ನು ಗುರುತಿಸಿ ಬಿರುದನ್ನು ನೀಡಿ ಸನ್ಮಾನಿಸಲಾಗಿದೆ.
    ಪ್ರಾಂತ್ಯದ ಬಿಷಪ್ ರೈಟ್ ರೇವರೆಂಡ್ ಮಾರ್ಟೀನಿ ಸಿ ಬೋರಗೈ, ವಿಜಯ್ ಕನಕರಾಜನ್, ರೇವರೆಂಡ್‌ಗಳಾದ ಸತ್ಯಬಾಬು ಸ್ಯಾಮುಯಲ್, ಅನಿಲ್ ನಿಲುಗಲ್, ಬಾಬು, ಸ್ಟ್ಯಾಂಲಿ, ಅಬ್ರಹಾಂ ಸಂಕೇಶ್ವರ್, ಗಿಡಿಯೋನ್, ಬೋಬಿರಾಜ್ ಸೇರಿದಂತೆ ಇನ್ನಿತರರು ಸಮ್ಮುಖದಲ್ಲಿ ಸಿಎಸ್‌ಐ ತೆಲುಗು ಜೂಬ್ಲಿ ದೇವಾಲಯದ ಸಭಾ ಪಾಲಕರದ ರೇವರೆಂಡ್ ಎಸ್ತೆರ್ ಅಬ್ರಹಾಂ, ಸಭಾ ಪಾಲನ ಸಮಿತಿಯವರಾದ ಅಂಬದಪುಡಿ ಸುವರ್ಣಮ್ಮ, ಇಟ್ಟೆ ಸಂತೋಷ್ ಕುಮಾರ್, ಪಿಲ್ಲಿ ಇಸ್ರಾಲ್, ಚಾಲ್ತಿರಿ ಡ್ಯಾನಿಯಲ್ ಸೇರಿದಂತೆ ಇನ್ನಿತರರು ವಿಜಯ್‌ಕುಮಾರ್ ವಸಂತ್ ದಂಡಿನರವರಿಗೆ ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಿದರು. ತೆಲುಗು ಕ್ರಿಶ್ಚಿಯನ್ ಸಮುದಾಯದವರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸಾವಯುವ ಸಿರಿ ಯೋಜನೆ ಅನುಷ್ಠಾನಕ್ಕೆ ಅರ್ಜಿ ಆಹ್ವಾನ

ಭದ್ರಾವತಿ, ಫೆ. ೨೮: ರಾಜ್ಯದಲ್ಲಿ ಹೊಸ ಸಾವಯುವ ಕೃಷಿ ಉತ್ತೇಜನಗೊಳಿಸಲು, ಜನರಿಗೆ ಆರೋಗ್ಯಕರ ಹಾಗು ರಾಸಾಯನಿಕ ಮುಕ್ತ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನು ಒದಗಿಸಲು ಸರ್ಕಾರ ಇದೀಗ ಸಾವಯುವ ಸಿರಿ ಯೋಜನೆಯನ್ನು ಘೋಷಿಸಿದ್ದು, ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕೃಷಿ ಇಲಾಖೆ ರೈತರ ಗುಂಪು ಅಥವಾ ಸಂಘ ಅಥವಾ ಒಕ್ಕೂಟಗಳಿಂದ ಅರ್ಜಿ ಆಹ್ವಾನಿಸಿದೆ.
    ಸಾರ್ವಯುವ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಾಗು ೧೦ ವರ್ಷಗಳ ಅನುಭವವುಳ್ಳ ಜವಾಬ್ದಾರಿಯುತ ಸ್ಥಳೀಯ ನೋಂದಾಯಿತ ಸಾವಯುವ ರೈತರ ಗುಂಪು ಅಥವಾ ಸಂಘ ಅಥವಾ ಒಕ್ಕೂಟ ಮಾ.೫ರ ಸಂಜೆ ೪ ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ನಿರ್ದೇಶಕ ಬಿ.ಸಿ ಶಶಿಧರ ಕೋರಿದ್ದಾರೆ.

Sunday, February 27, 2022

ಬಿಎಸ್‌ವೈ ಹುಟ್ಟುಹಬ್ಬ : ಒಳರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ

ಭದ್ರಾವತಿಯಲ್ಲಿ ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹುಟ್ಟುಹಬ್ಬದ ಅಂಗವಾಗಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಒಳರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ನಡೆಯಿತು.
    ಭದ್ರಾವತಿ, ಫೆ. ೨೭: ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹುಟ್ಟುಹಬ್ಬದ ಅಂಗವಾಗಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಒಳರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ನಡೆಯಿತು.
    ಪ್ರತಿ ವರ್ಷ ತಾಲೂಕು ಮಂಡಲ ವತಿಯಿಂದ ಯಡಿಯೂರಪ್ಪನವರ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಬೆಳಿಗ್ಗೆ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
    ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ನಡೆದ  ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಎಸ್. ಕುಮಾರ್, ಎನ್. ವಿಶ್ವನಾಥರಾವ್, ಸಂಪತ್‌ರಾಜ್ ಬಾಂಟಿಯಾ, ಕರಿಗೌಡ, ಕೆ. ಮಂಜಪ್ಪ, ರಾಮ್‌ನಾಥ ಬರ್ಗೆ, ಬಿ.ಎಸ್ ಶ್ರೀನಾಥ್, ಶೋಭಾಪಾಟೀಲ್, ಹೇಮಾವತಿ, ಆರ್.ಎಸ್ ಶೋಭಾ, ಮಂಜುಳಾ, ಕವಿತಾ, ರವಿಕುಮಾರ್, ಮಂಜುನಾಥ್, ಚಂದ್ರು, ಸುಬ್ರಮಣ್ಯ, ಪಿ. ಗಣೇಶ್‌ರಾವ್, ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕು ಮಟ್ಟದ ಷಟಲ್ ಪಂದ್ಯಾವಳಿಗೆ ಚಾಲನೆ

ಭದ್ರಾವತಿ ನಗರಸಭೆ ವ್ಯಾಪ್ತಿ ಜಟ್‌ಪಟ್ ನಗರದಲ್ಲಿರುವ ಷಟಲ್ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿರುವ ತಾಲೂಕು ಮಟ್ಟದ ಷಟಲ್ ಪಂದ್ಯಾವಳಿಗೆ ಭಾನುವಾರ ಚಿಕ್ಕಮಗಳೂರು ಯೋಜನಾ ನಿರ್ದೇಶಕ ಮನೋಹರ್ ಷಟಲ್ ಬ್ಯಾಡ್ಮಿಂಟನ್ ಆಟವಾಡುವ ಮೂಲಕ ಚಾಲನೆ ನೀಡಿದರು.
    ಭದ್ರಾವತಿ, ಫೆ. ೨೭: ನಗರಸಭೆ ವ್ಯಾಪ್ತಿ ಜಟ್‌ಪಟ್ ನಗರದಲ್ಲಿರುವ ಷಟಲ್ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿರುವ ತಾಲೂಕು ಮಟ್ಟದ ಷಟಲ್ ಪಂದ್ಯಾವಳಿಗೆ ಭಾನುವಾರ ಚಿಕ್ಕಮಗಳೂರು ಯೋಜನಾ ನಿರ್ದೇಶಕ ಮನೋಹರ್ ಚಾಲನೆ ನೀಡಿದರು.
    ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಮತ್ತು ನಗರಸಭಾ ಸದಸ್ಯರು ಹಾಗು ಕ್ರೀಡಾಂಗಣ ಉಸ್ತುವಾರಿ ಸಮಿತಿಯ ಪ್ರಮುಖರು ಈ ಹಿಂದೆ ನಗರಸಭೆ ಪೌರಾಯುಕ್ತರಾಗಿ ಮನೋಹರ್‌ರವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕ್ರೀಡಾಂಗಣದ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯವನ್ನು ಶ್ಲಾಘಿಸಿ ಅವರನ್ನು ಗೌರವಿಸುವ ಮೂಲಕ ಸನ್ಮಾನಿಸಲಾಯಿತು.
    ವಾರ್ಡ್ ವ್ಯಾಪ್ತಿಯ ನಗರಸಭಾ ಸದಸ್ಯರಾದ ಆರ್. ಶ್ರೇಯಸ್(ಚಿಟ್ಟೆ) ಮತ್ತು ಬಿ.ಎಂ ಮಂಜುನಾಥ್(ಟೀಕು) ಮುಂದಿನ ದಿನಗಳಲ್ಲಿ ಕ್ರೀಡಾಂಗಣದ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ಮೀರಿ ಶ್ರಮಿಸುವುದಾಗಿ ಭರವಸೆ ನೀಡಿದರು.
    ಇದೆ ಸಂದರ್ಭದಲ್ಲಿ ಒಳಾಂಗಣ ಕ್ರೀಡಾಂಗಣದಲ್ಲಿ  ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು. ನಗರಸಭಾ ಸದಸ್ಯೆ ಅನುಪಮ ಚನ್ನೇಶ್, ಸಿದ್ದಲಿಂಗಯ್ಯ, ದೈಹಿಕ ಶಿಕ್ಷಕ ಶಿವಲಿಂಗೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಈ ಹಿಂದೆ ಭದ್ರಾವತಿ ನಗರಸಭೆ ಪೌರಾಯುಕ್ತರಾಗಿ ಮನೋಹರ್‌ರವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದಲ್ಲಿರುವ ಷಟಲ್ ಒಳಾಂಗಣ ಕ್ರೀಡಾಂಗಣದ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯವನ್ನು ಶ್ಲಾಘಿಸಿ ಅವರನ್ನು ಗೌರವಿಸುವ ಮೂಲಕ ಸನ್ಮಾನಿಸಲಾಯಿತು.

ಭದ್ರಾವತಿಯಲ್ಲಿ ಪಕ್ಷದ ಶಾಸಕರಿಲ್ಲ ಎಂಬ ಕೊರಗು ನೀಗಿಸಿದ ರಾಜಕೀಯ ಮುತ್ಸದ್ದಿ ಬಿ.ಎಸ್.ವೈ

ಬಿ.ಎಸ್.ವೈ ಹುಟ್ಟುಹಬ್ಬ : ವಿಶೇಷ ಪೂಜೆ, ಬಡವರಿಗೆ ಹೊದಿಕೆ ವಿತರಣೆ


ಬಿ.ಎಸ್ ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ ಭದ್ರಾವತಿಯಲ್ಲಿ ಬಿ.ವೈ ರಾಘವೇಂದ್ರ ಅಭಿಮಾನಿಗಳ ಬಳಗದ ವತಿಯಿಂದ ಹೊಸಮನೆ ಹಿಂದೂ ಮಹಾಸಭಾ ಗಣಪತಿ ದೇವಸ್ಥಾನದಲ್ಲಿ  ವಿಶೇಷ ಪೂಜೆ ಹಾಗು ಬಡ ವರ್ಗದ ಅಸಹಾಯಕರಿಗೆ ಮಲಗುವ ಹೊದಿಕೆ(ಬ್ಲಾಂಕೆಟ್) ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಫೆ. ೨೭: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕ್ಷೇತ್ರದಲ್ಲಿ ಪಕ್ಷದ ಶಾಸಕರಿಲ್ಲ ಎಂಬ ಕೊರಗನ್ನು ನೀಗಿಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಟ್ಟಿದ್ದು, ಕ್ಷೇತ್ರದ ಜನರು ಇವರಿಗೆ ಚಿರಋಣಿಗಳಾಗಬೇಕಾಗಿದೆ ಎಂದು ಸ್ಥಳಿಯ ಬಿಜೆಪಿ ಮುಖಂಡರು ಪ್ರಶಂಸೆ ವ್ಯಕ್ತಪಡಿಸಿದರು.
    ಬಿ.ಎಸ್ ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಭಾನುವಾರ  ಬಿ.ವೈ ರಾಘವೇಂದ್ರ ಅಭಿಮಾನಿಗಳ ಬಳಗದ ವತಿಯಿಂದ ಹೊಸಮನೆ ಹಿಂದೂ ಮಹಾಸಭಾ ಗಣಪತಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪೂಜೆ ಹಾಗು ಬಡ ವರ್ಗದ ಅಸಹಾಯಕರಿಗೆ ಮಲಗುವ ಹೊದಿಕೆ(ಬ್ಲಾಂಕೆಟ್) ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪಕ್ಷದ ಪ್ರಮುಖರಾದ ವಿ. ಕದಿರೇಶ್, ಜಿ. ಧರ್ಮ ಪ್ರಸಾದ್, ಜಿ. ಆನಂದಕುಮಾರ್, ಎಚ್.ಸಿ ರಮೇಶ್, ಎಸ್. ಕುಮಾರ್ ಮತ್ತು ಎಂ. ಮಂಜುನಾಥ್ ಹಾಗು ಮಹಿಳಾ ಮುಖಂಡರಾದ ಸುಲೋಚನಾ ಪ್ರಕಾಶ್ ಸೇರಿದಂತೆ ಇನ್ನಿತರರು, ಕ್ಷೇತ್ರದಲ್ಲಿ ಪಕ್ಷದ ಶಾಸಕರಿಲ್ಲದಿದ್ದರೂ ಸಹ ಇಲ್ಲಿನ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸದಾಕಾಲ ಹುಮ್ಮಸ್ಸು ತುಂಬುವ ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಬಿ.ಎಸ್ ಯಡಿಯೂರಪ್ಪ ಹಾಗು ಸಂಸದ ಬಿ.ವೈ ರಾಘವೆಂದ್ರರವರು ಕೈಗೊಂಡಿದ್ದಾರೆ.
    ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳ ಜೊತೆಗೆ ಮಠ ಮಂದಿರಗಳ ಅಭಿವೃದ್ಧಿ, ಕಾರ್ಮಿಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಸೇವೆ ಒದಗಿಸಲು ಇಎಸ್‌ಐ ಆಸ್ಪತ್ರೆ, ಕೋವಿಡ್ ಸಂಕಷ್ಟದ ಸಮಯದಲ್ಲಿ ನೆರವಿನ ವ್ಯವಸ್ಥೆ, ಬಡ ಹಾಗು ಮಧ್ಯಮ ವರ್ಗದ ಜನರ ಪ್ರಯಾಣಕ್ಕೆ ಅನುಕೂಲವಾಗುವಂತೆ ರೈಲುಗಳ ವ್ಯವಸ್ಥೆ, ರೈಲ್ವೆ ಸೇತುವೆ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿಗಳನ್ನು ಯಾವುದೇ ಫಲಾಫೇಕ್ಷೆ ಇಲ್ಲದೆ ಕೈಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಇಂತಹ ಧೀಮಂತ ನಾಯಕರ ಹುಟ್ಟುಹಬ್ಬವನ್ನು ಎಲ್ಲರೂ ಒಗ್ಗಟ್ಟಾಗಿ ಸಂಭ್ರಮದಿಂದ ಆಚರಿಸುವಂತಾಗಿದೆ ಎಂದರು.
    ಬಿ.ವೈ ರಾಘವೇಂದ್ರ ಅಭಿಮಾನಿಗಳ ಬಳಗದ ಯುವ ಮುಖಂಡ ಕೆ. ಮಂಜುನಾಥ್ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಪ್ರಮುಖರಾದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ದುಗ್ಗೇಶ್ ತೇಲ್ಕರ್, ತಮಿಳು ಸಮಾಜದ ನಾರಾಯಣ, ರವಿಚಂದ್ರ, ಮಣಿ ಎಎನ್‌ಎಸ್, ಎನ್. ರಾಮಕೃಷ್ಣ, ರಾಮನಾಥ ಬರ್ಗೆ, ಬಿ.ಎಸ್ ಶ್ರೀನಾಥ್, ಸುಬ್ರಮಣ್ಯ, ಎಂ.ಎಸ್ ಸುರೇಶಪ್ಪ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ನಗರಸಭಾ ಸದಸ್ಯೆ ಶಶಿಕಲಾ ನಾರಾಯಣಪ್ಪ, ಅನ್ನಪೂರ್ಣ ಸಾವಂತ್, ಮಂಜುಳ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.