Friday, March 11, 2022

ಅರಳಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಲತಾ ಗಣೇಶ್ ಅವಿರೋಧ ಆಯ್ಕೆ


ಭದ್ರಾವತಿ ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿ ಲತಾ ಗಣೇಶ್ ಅವಿರೋಧವಾಗಿ ಆಯ್ಕೆಯಾದರು. ಬಿಜೆಪಿ ಪಕ್ಷದ ಪ್ರಮುಖರು, ಕಾರ್ಯಕರ್ತರು ನೂತನ ಉಪಾಧ್ಯಕ್ಷೆಯನ್ನು ಅಭಿನಂಸಿದರು.
    ಭದ್ರಾವತಿ, ಮಾ. ೧೧: ತಾಲೂಕಿನ ಅರಳಿಕೊಪ್ಪ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿ ಲತಾ ಗಣೇಶ್ ಅವಿರೋಧವಾಗಿ ಆಯ್ಕೆಯಾದರು.
    ಸಾಮಾನ್ಯ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನ ಅನಿವಾರ್ಯ ಕಾರಣಗಳಿಂದ ತೆರವಾಗಿದ್ದು, ಈ ಹಿನ್ನಲೆಯಲ್ಲಿ ನಡೆದ ಚುನಾವಣೆಯಲ್ಲಿ ಲತಾ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಬಿಜೆಪಿ ಪಕ್ಷದ ಮುಖಂಡರಾದ ಎಸ್. ಕುಮಾರ್, ಮಂಗೋಟೆ ರುದ್ರೇಶ್, ಗಣೇಶ್‌ರಾವ್, ನಕುಲ್ ಜೆ. ರೇವಣಕರ್, ಗೋಕುಲ್ ಕೃಷ್ಣ, ಚಿಕ್ಕಗೊಪ್ಪೇನಹಳ್ಳಿ ಪ್ರದೀಪ್, ಮಹಾಶಕ್ತಿ ಕೇಂದ್ರದ ಪ್ರಮುಖರು ಹಾಗು ಕಾರ್ಯಕರ್ತರು ನೂತನ ಉಪಾಧ್ಯಕ್ಷೆಯನ್ನು ಅಭಿನಂದಿಸಿದ್ದಾರೆ
    ೨೦೨೦ ಡಿಸೆಂಬರ್ ತಿಂಗಳಿನಲ್ಲಿ ತಾಲೂಕಿನ ಒಟ್ಟು ೩೫ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗಿತ್ತು. ೨೦೨೧ ಜನವರಿ ತಿಂಗಳಿನಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಹೊರಡಿಸಿ ಆದೇಶ ಹೊರಡಿಸಿದ್ದರು. ಈ ಹಿನ್ನಲೆಯಲ್ಲಿ ಫೆಬ್ರವತಿ ತಿಂಗಳಿನಲ್ಲಿ ಬಹುತೇಕ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲಾಗಿತ್ತು. ಪ್ರಮುಖ ರಾಜಕೀಯ ಪಕ್ಷಗಳು ತೆರೆಮರೆಯಲ್ಲಿ ಒಪ್ಪಂದದಂತೆ ಅಧಿಕಾರ ಹಂಚಿಕೆ ಮಾಡಿಕೊಂಡಿವೆ.

೨೨ ಗ್ರಾಮಗಳ ಅದಿದೇವತೆ ಶ್ರೀ ಹಳದಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಅನುದಾನ ನೀಡಿ

ಬಜೆಟ್ ಮಂಡನೆ ಸಭೆಯಲ್ಲಿ ಸದಸ್ಯ ಆರ್. ಶ್ರೇಯಸ್ ಆಗ್ರಹ


ಆರ್. ಶ್ರೇಯಸ್
    ಭದ್ರಾವತಿ, ಮಾ. ೧೧: ಹಳೇನಗರದ ಪುರಾಣ ಪ್ರಸಿದ್ದ ೨೨ ಗ್ರಾಮಗಳ ಅದಿದೇವತೆ ಶ್ರೀ ಹಳದಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ನಗರಸಭೆ ವತಿಯಿಂದ ಅನುದಾನ ಬಿಡುಗಡೆಗೊಳಿಸುವಂತೆ ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ) ಶುಕ್ರವಾರ ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಒತ್ತಾಯಿಸಿದರು.
    ಶಿವಮೊಗ್ಗ ನಗರದಲ್ಲಿ ಪ್ರತಿ ೨ ವರ್ಷಗಳಿಗೆ ಒಮ್ಮೆ ನಡೆಯುವ ಶ್ರೀ ಮಾರಿಕಾಂಬ ಜಾತ್ರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಇದೆ ರೀತಿ ಶ್ರೀ ಹಳದಮ್ಮ ದೇವಿ ಜಾತ್ರ ಮಹೋತ್ಸವಕ್ಕೂ ಅನುದಾನ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರ ಸದಸ್ಯರು ಸಹ ಧ್ವನಿಗೂಡಿಸಿ ಅನುದಾನ ಬಿಡುಗಡೆಗೊಳಿಸಬೇಕೆಂದರು.
    ಇದಕ್ಕೆ ಪೂರಕ ಸ್ಪಂದಿಸಿದ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಮತ್ತು ಪೌರಾಯುಕ್ತ ಕೆ. ಪರಮೇಶ್ ಈ ಸಂಬಂಧ ಶೀಘ್ರದಲ್ಲಿಯೇ ಸಭೆ ನಡೆಸಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಭದ್ರಾವತಿ ನಗರಸಭೆ ರು.೧.೦೩ ಕೋ. ಉಳಿತಾಯ ಬಜೆಟ್

ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಶುಕ್ರವಾರ ಮೊದಲ ಬಾರಿಗೆ ಸುಮಾರು ೧.೦೩ ಕೋ. ಉಳಿತಾಯ ಬಜೆಟ್ ಮಂಡಿಸುವಲ್ಲಿ ಯಶಸ್ವಿಯಾದರು.
    ಭದ್ರಾವತಿ, ಮಾ. ೧೧: ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮೊದಲ ಬಾರಿಗೆ ಸುಮಾರು ೧.೦೩ ಕೋ. ಉಳಿತಾಯ ಬಜೆಟ್ ಮಂಡಿಸುವಲ್ಲಿ ಯಶಸ್ವಿಯಾದರು.
    ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆದ ಆಯ-ವ್ಯಯ ಮಂಡನೆ ಸಭೆಯಲ್ಲಿ ರು. ೨೨.೨೫ ಕೋ. ಆರಂಭಿಕ ಮೊತ್ತದೊಂದಿಗೆ ಈ ಬಾರಿ ರು. ೬೭.೪೩ ಕೋ. ಆದಾಯ ನಿರೀಕ್ಷಿಸಲಾಗಿದ್ದು,  ರು. ೮೯.೬೯ ಕೋ. ಒಟ್ಟು ಆದಾಯವಾಗಿದೆ. ಈ ಪೈಕಿ ರು. ೮೮.೬೬ ಕೋ. ವೆಚ್ಚವಾಗಿದ್ದು, ರು. ೧.೦೩ ಕೋ. ಉಳಿತಾಯವಾಗಿದೆ ಎಂದರು.
    ಈ ಬಾರಿ ಪ್ರಗತಿಯಲ್ಲಿರುವ ಯೋಜನೆಗಳೊಂದಿಗೆ ಹೊಸ ಯೋಜನೆಗಳನ್ನು ಸಹ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ನಗರಸಭೆ ಕನಕಮಂಟಪ ಮೈದಾನ ಸಮೀಪ ನಗರಸಭೆ ನಿವೇಶನದಲ್ಲಿ ಬಿ ಮತ್ತು ಸಿ ಗ್ರೂಪ್ ಅಧಿಕಾರಿ ನೌಕರರಿಗೆ ಸುಮಾರು ರು.೧.೮೦ ಕೋ. ವೆಚ್ಚದಲ್ಲಿ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ನಗರದ ಪ್ರಮುಖ ವೃತ್ತಗಳನ್ನು ರು. ೦.೯೨ ಕೋ. ವೆಚ್ಚದಲ್ಲಿ ನವೀನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ಅನುಮೋದನೆ ಪಡೆಯಲಾಗಿದ್ದು, ಮುಂದಿನ ದಿನಗಳ ಅನುಷ್ಠಾನಗೊಳಿಸಲಾಗುವುದು. ನಗರ ವ್ಯಾಪ್ತಿಯ ಸಂಪೂರ್ಣ ಸ್ವತ್ತುಗಳ ಸಮೀಕ್ಷೆ ನಡೆಸಿ ಸಮಗ್ರವಾಗಿ ಇ-ಆಸ್ತಿ ತಂತ್ರಾಂಶಕ್ಕೆ ಒಳಪಡಿಸಿ ವಾರ್ಡ್‌ವಾರು, ಆಸ್ತಿವಾರು ಪ್ರತ್ಯೇಕ ಕಡತ ನಿರ್ವಹಣೆ ಮಾಡಲಾಗುವುದು. ಮುಂದಿನ ವರ್ಷದೊಳಗೆ ನಗರಸಭೆ ವ್ಯಾಪ್ತಿಯಲ್ಲಿನ ಸಮಗ್ರ ಆಸ್ತಿಯನ್ನು ಡಿಜಿಟಲೀಕರಣಗೊಳಿಸಿ ಇ-ಆಸ್ತಿ ತಂತ್ರಾಂಶದಡಿಯಲ್ಲಿ ನಮೂನೆ-೩ ವಿತರಿಸಲಾಗುವುದು. ಪ್ರಸ್ತುತ ಸಾಲಿನಲ್ಲಿ ಪರಿಷ್ಕೃತ ಆಸ್ತಿ ತೆರಿಗೆಯನ್ನು ನಿಗದಿಪಡಿಸಿ ಆನ್‌ಲೈನ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ನಗರಸಭೆ ವ್ಯಾಪ್ತಿಯಲ್ಲಿ ನಿವಾಸಿಗಳಿಗೆ ದಿನದ ೨೪ ಗಂಟೆ ನೀರು ಪೂರೈಸಲು ಅನುವಾಗುವಂತೆ ಎಲ್ಲಾ ವಾರ್ಡ್‌ಗಳಲ್ಲೂ ಮೀಟರ್ ಅಳವಡಿಸಲಾಗುತ್ತಿದ್ದು, ಕೆಪಿಟಿಸಿಎಲ್ ಮಾದರಿಯಲ್ಲಿ ನೀರು ಶುಲ್ಕ ಸಂಗ್ರಹಿಸಲು ತಾಂತ್ರಿಕ ವ್ಯವಸ್ಥೆ ಉನ್ನತೀಕರಿಸಲಾಗುವುದು. ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಡಲು ಸಮೀಕ್ಷಾ ಕಾರ್ಯವನ್ನು ತಾಲೂಕು ಆಡಳಿತದ ಸಹಕಾರದೊಂದಿಗೆ ಕೈಗೊಳ್ಳಲಾಗುವುದು. ಹಸಿ ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸಿ ತನ್ನದೇ ಬ್ರ್ಯಾಂಡ್ ಮೂಲಕ ರೈತರಿಗೆ ಸಬ್ಸಿಡಿ ದರದಲ್ಲಿ ಗೊಬ್ಬರ ಪೂರೈಕೆ ಮಾಡಲು ನಿರ್ಧರಿಸಲಾಗಿದ್ದು, ಗೊಬ್ಬರ ತಯಾರಿಸಲು ೮ ಘಟಕಗಳನ್ನು ನಿರ್ಮಿಸಲಾಗುವುದು ಎಂದರು.
    ಹಳೇನಗರ ಭಾಗದಲ್ಲಿ ಬಾಕಿ ಉಳಿದಿರುವ ಒಳಚರಂಡಿ ಕಾಮಗಾರಿ ಯೋಜನೆಯನ್ನು ರು.೨೧ ಕೋ. ಅನುದಾನದಲ್ಲಿ ಪೂರ್ಣಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರದಲ್ಲಿ ಉತ್ಪತ್ತಿಯಾಗುವ ಒಣಕಸ ಮರುಬಳಕೆಗೆ ಅನುವಾಗುವಂತೆ ಸಂಸ್ಕರಣ ಘಟಕ ನಿರ್ಮಿಸಲಾಗುವುದು. ಭದ್ರಾ ನದಿಗೆ ಕಲುಷಿತ ನೀರು ಸೇರ್ಪಡೆಯಾಗುವುದನ್ನು ತಡೆಯಲು ರು.೧೨ ಕೋ. ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಕರ್ನಾಟಕ ನೀರು ಸರಬರಾಜು ಮತ್ತು ಒಳಮಂಡಳಿ ವತಿಯಿಂದ ನಿರ್ಮಿಸಲಾಗುವುದು. ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು ಹಾಗು ಎಲ್ಲಾ ವಾರ್ಡ್‌ಗಳ ಪ್ರಮುಖ ರಸ್ತೆ, ಅಡ್ಡರಸ್ತೆಗಳಿಗೆ ನಾಮಫಲಕ ಅಳವಡಿಸಲಾಗುವುದು ಎಂದರು.
    ಸಭೆಯಲ್ಲಿ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಂಗರಾಜಪುರೆ, ಲೆಕ್ಕ ಅಧೀಕ್ಷಕ ಗೋವಿಂದರಾಜು ಮತ್ತು ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Thursday, March 10, 2022

೪ ರಾಜ್ಯಗಳಲ್ಲಿ ಬಿಜೆಪಿ ಗೆಲುವು : ವಿಜಯೋತ್ಸವ

ಉತ್ತರ ಪ್ರದೇಶ ಸೇರಿದಂತೆ ೫ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ೪ ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಗುರುವಾರ ಭದ್ರಾವತಿ ರಂಗಪ್ಪ ವೃತ್ತದಲ್ಲಿ ಬಿಜೆಪಿ ಮಂಡಲ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
    ಭದ್ರಾವತಿ, ಮಾ. ೧೦: ಉತ್ತರ ಪ್ರದೇಶ ಸೇರಿದಂತೆ ೫ ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ೪ ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಗುರುವಾರ ನಗರದ ರಂಗಪ್ಪ ವೃತ್ತದಲ್ಲಿ ಬಿಜೆಪಿ ಮಂಡಲ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
    ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷದ ಘೋಷಣೆಗಳನ್ನು ಹಾಕಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರದ ಜನಪರ ಕಾರ್ಯಗಳನ್ನು ದೇಶದ ಜನರು ಬೆಂಬಲಿಸಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಇನ್ನೂ ಹೆಚ್ಚಿನ ಬೆಂಬಲ ಲಭಿಸಲಿದೆ ಎಂದರು.
    ಪ್ರಮುಖರಾದ ಎನ್. ವಿಶ್ವನಾಥರಾವ್, ಮಹಿಳಾ ಘಟಕದ ಅಧ್ಯಕ್ಷ ಶೋಭಾ ಪಾಟೀಲ್, ಮಂಡಲ ನಗರ ಕಾರ್ಯದರ್ಶಿ ಚನ್ನೇಶ್, ಬಿಜೆಪಿ ಯುವ ಘಟಕದ ಅಧ್ಯಕ್ಷ ವಿಜಯ್, ಆರ್. ಶೋಭಾ, ಶಶಿಕಲಾ, ರಾಮನಾಥ್ ಬರ್ಗೆ, ಸುಲೋಚನಾ ಪ್ರಕಾಶ್, ಬಿ.ಎಸ್ ನಾರಾಯಣಪ್ಪ, ಧನುಷ್ ಬೋಸ್ಲೆ, ಸತೀಶ್‌ಕುಮಾರ್, ಜೆ. ಮೂರ್ತಿ, ಕವಿತಾ ಸುರೇಶ್, ನಕುಲ್, ನಾಗಮಣಿ, ಗೋಕುಲ್ ಕೃಷ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಮನೆಗಳ್ಳತನ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೇಪರ್ ಟೌನ್ ಪೊಲೀಸರು

ಓರ್ವನ ಸೆರೆ : ೫.೬೦ ಲಕ್ಷ ರು. ನಗದು, ೬.೪೩ ಲಕ್ಷ ರು. ಮೌಲ್ಯದ ಚಿನ್ನಾಭರಣ ವಶ

ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿ ನಗದು, ಚಿನ್ನಾಭರವಣ ವಶಪಡಿಸಿಕೊಳ್ಳುವಲ್ಲಿ ಭದ್ರಾವತಿ ಪೇಪರ್‌ಟೌನ್ ಪೊಲೀಸರು ಯಶಸ್ವಿಯಾಗಿರುವುದು.
    ಭದ್ರಾವತಿ, ಮಾ. ೧೦: ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಿ ನಗದು, ಚಿನ್ನಾಭರವಣ ವಶಪಡಿಸಿಕೊಳ್ಳುವಲ್ಲಿ ಪೇಪರ್‌ಟೌನ್ ಪೊಲೀಸರು ಯಶಸ್ವಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.
    ರಬ್ಬರ್‌ಕಾಡು ನಿವಾಸಿ ಎಸ್. ಚೇತನ್(೨೭) ಎಂಬ ಯುವಕನನ್ನು ಬಂಧಿಸಲಾಗಿದ್ದು, ಈತನಿಂದ ೫.೬೦ ಲಕ್ಷ ರು. ನಗದು, ೬.೪೩ ಲಕ್ಷ ರು. ಮೌಲ್ಯದ ಒಟ್ಟು ೧೩೪.೪೪ ಗ್ರಾಂ. ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
    ಜ.೧೩ರಂದು ಬೆಳಗ್ಗೆ ರಬ್ಬರ್‌ಕಾಡು ಗ್ರಾಮದ ನಿವಾಸಿ ಪದ್ಮಾ ಎಂಬುವರ ಮನೆಯ ಬೀಗ ಮುರಿದು ಅಲ್ಮೆರಾ ಬೀರುವಿನಲ್ಲಿ ಮನೆ ಕಟ್ಟುವ ಉದ್ದೇಶದಿಂದ ತಂದಿಡಲಾಗಿದ್ದ ೬ ಲಕ್ಷ ರು. ನಗದು ಹಾಗು ಒಟ್ಟು ೫.೬೬ ಲಕ್ಷ ರು. ಮೌಲ್ಯದ ಬಂಗಾರದ ಆಭರಣಗಳನ್ನು ಕಳವು ಮಾಡಲಾಗಿತ್ತು. ಈ ಸಂಬಂಧ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
    ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್ ನೇತೃತ್ವದ ತಂಡ ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಶಿಲ್ಪಾ ನಾಯನೇಗಲಿ,  ಸಿಬ್ಬಂದಿಗಳಾದ ಆರ್. ರತ್ನಾಕರ, ಕಾಳಾನಾಯ್ಕ, ಹನುಮಂತ ಆವಟಿ, ಚಿನ್ನನಾಯ್ಕ, ನಾಗರಾಜ, ಮೋಹನ್, ವಿಕ್ರಮ್ ಮತ್ತು ರಾಜಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಪಂಜಾಬ್‌ನಲ್ಲಿ ಎಎಪಿ ಗೆಲುವು : ವಿಜಯೋತ್ಸವ

ದೇಶದ ಎಲ್ಲಾ ರಾಜ್ಯಗಳಲ್ಲೂ ಪಕ್ಷ ಮುಂಚೂಣಿಗೆ ಬರುವ ವಿಶ್ವಾಸ

ಪಂಚ ರಾಜ್ಯಗಳ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಪಂಜಾಬ್‌ನಲ್ಲಿ ಹೆಚ್ಚಿನ ಸ್ಥಾನಗಳೊಂದಿಗೆ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಗುರುವಾರ ಪಕ್ಷದ ಮುಖಂಡರು ಭದ್ರಾವತಿ ರಂಗಪ್ಪ ವೃತ್ತದಲ್ಲಿ ಮಾಸ್ಕ್ ಜೊತೆಗೆ ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಲಾಯಿತು.
    ಭದ್ರಾವತಿ, ಮಾ. ೧೦: ಕೇಂದ್ರಾಡಳಿ ಪ್ರದೇಶವಾಗಿರುವ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ಮಾಡಿರುವ ಸಾಧನೆಯ ಹಿನ್ನಲೆಯಲ್ಲಿ ಪಂಜಾಬ್ ಮತದಾರರು ಪಕ್ಷವನ್ನು ಬೆಂಬಲಿಸಿದ್ದು, ಪಂಜಾಬ್‌ನಲ್ಲೂ ಉತ್ತಮ ಆಡಳಿತ ನೀಡಲಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ಪಕ್ಷ ಮುಂಚೂಣಿಗೆ ಬರುವ ವಿಶ್ವಾಸವಿದೆ ಎಂದು ಆಮ್ ಆದ್ಮಿ ಪಾರ್ಟಿ ಮುಖಂಡರು ಹೇಳಿದರು.
    ಪಂಚ ರಾಜ್ಯಗಳ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಪಂಜಾಬ್‌ನಲ್ಲಿ ಹೆಚ್ಚಿನ ಸ್ಥಾನಗಳೊಂದಿಗೆ ಗೆಲುವು ಸಾಧಿಸಿರುವ ಹಿನ್ನಲೆಯಲ್ಲಿ ಗುರುವಾರ ಪಕ್ಷದ ಮುಖಂಡರು ನಗರದ ರಂಗಪ್ಪ ವೃತ್ತದಲ್ಲಿ ಮಾಸ್ಕ್ ಜೊತೆಗೆ ಸಿಹಿ ಹಂಚಿಕೆ ಮಾಡಿ ಸಂಭ್ರಮಿಸಿ ಮಾತನಾಡಿದರು.
    ದೆಹಲಿ ಸರ್ಕಾರ ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಗಣನೀಯವಾದ ಸಾಧನೆ ಮಾಡಿದೆ. ಹಲವಾರು ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿ ಕೇಜ್ರಿವಾಲ್‌ರವರ ದೂರದೃಷ್ಟಿ ಆಡಳಿತ ದೇಶಕ್ಕೆ ಅಗತ್ಯವಿದ್ದು, ಪ್ರಾಮಾಣಿಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಗುರಿಯೊಂದಿಗೆ ಮುಂದಿನ ದಿನಗಳಲ್ಲಿ ದೇಶಾದ್ಯಂತ ಪ್ರಬಲವಾಗಿ ವ್ಯಾಪಿಸುವ ವಿಶ್ವಾಸವಿದೆ ಎಂದರು.
    ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ನೇತೃತ್ವದಲ್ಲಿ ನಡೆದ ವಿಯೋತ್ಸವದಲ್ಲಿ ಪ್ರಮುಖರಾದ  ಡಿ.ಎಂ ಚಂದ್ರಪ್ಪ, ಪರಮೇಶ್ವರಚಾರ್, ರಮೇಶ್, ಅಬ್ದುಲ್ ಖದೀರ್, ಇಬ್ರಾಹಿಂ ಖಾನ್, ಎ. ಮಸ್ತಾನ್, ರೇಷ್ಮಾಬಾನು, ಜಾವಿದ್, ಪರಮೇಶ್ವರನಾಯ್ಕ್, ಬಸವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  


ಸಹ್ಯಾದ್ರಿ, ವಿನಾಯಕ ಪ್ರದೇಶ ಮಟ್ಟದ ಮಹಿಳಾ ಒಕ್ಕೂಟಗಳ ಸಾಧನೆ : ಅಭಿನಂದನೆ


ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಭದ್ರಾವತಿ ನಗರಸಭೆ ವತಿಯಿಂದ ರಚಿಸಲ್ಪಟ್ಟ  ಸಹ್ಯಾದ್ರಿ ಪ್ರದೇಶ ಮಟ್ಟದ ಮಹಿಳಾ ಒಕ್ಕೂಟ ಮತ್ತು ವಿನಾಯಕ ಪ್ರದೇಶ ಮಟ್ಟದ ಮಹಿಳಾ ಒಕ್ಕೂಟಗಳ ಸಾಧನೆಯನ್ನು ಗುರುತಿಸಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗು ಜೀವನೋಪಾಯ ಇಲಾಖೆವತಿಯಿಂದ ಅಭಿನಂದಿಸಲಾಯಿತು.
    ಭದ್ರಾವತಿ, ಮಾ. ೧೦: ದೀನದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ನಗರಸಭೆ ವತಿಯಿಂದ ರಚಿಸಲ್ಪಟ್ಟ  ಸಹ್ಯಾದ್ರಿ ಪ್ರದೇಶ ಮಟ್ಟದ ಮಹಿಳಾ ಒಕ್ಕೂಟ ಮತ್ತು ವಿನಾಯಕ ಪ್ರದೇಶ ಮಟ್ಟದ ಮಹಿಳಾ ಒಕ್ಕೂಟಗಳ ಸಾಧನೆಯನ್ನು ಗುರುತಿಸಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗು ಜೀವನೋಪಾಯ ಇಲಾಖೆವತಿಯಿಂದ ಅಭಿನಂದಿಸಲಾಯಿತು.
    ಈ ಎರಡು ಒಕ್ಕೂಟಗಳು ೨೦೧೭-೧೮ನೇ ಸಾಲಿನ ರಾಷ್ಟ್ರಮಟ್ಟದ ಸ್ವಚ್ಛತಾ ಎಕ್ಸಲೆನ್ಸ್ ಪ್ರಶಸ್ತಿ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಪ್ರಶಸ್ತಿ ಪಡೆದುಕೊಂಡಿದ್ದವು. ಈ ಹಿನ್ನಲೆಯಲ್ಲಿ  ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಮ್ಮುಖದಲ್ಲಿ ಒಕ್ಕೂಟದ ಅಧ್ಯಕ್ಷರಾದ ರೂಪ ನಾಗರಾಜ್ ಮತ್ತು ಲಕ್ಷ್ಮಿಯವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಒಕ್ಕೂಟ ಕಾರ್ಯದರ್ಶಿ ಧನಲಕ್ಷ್ಮೀ, ಗೀತಾ, ಶಕುಂತಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.