Friday, March 11, 2022

ಭದ್ರಾವತಿ ನಗರಸಭೆ ರು.೧.೦೩ ಕೋ. ಉಳಿತಾಯ ಬಜೆಟ್

ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಶುಕ್ರವಾರ ಮೊದಲ ಬಾರಿಗೆ ಸುಮಾರು ೧.೦೩ ಕೋ. ಉಳಿತಾಯ ಬಜೆಟ್ ಮಂಡಿಸುವಲ್ಲಿ ಯಶಸ್ವಿಯಾದರು.
    ಭದ್ರಾವತಿ, ಮಾ. ೧೧: ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮೊದಲ ಬಾರಿಗೆ ಸುಮಾರು ೧.೦೩ ಕೋ. ಉಳಿತಾಯ ಬಜೆಟ್ ಮಂಡಿಸುವಲ್ಲಿ ಯಶಸ್ವಿಯಾದರು.
    ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ನಡೆದ ಆಯ-ವ್ಯಯ ಮಂಡನೆ ಸಭೆಯಲ್ಲಿ ರು. ೨೨.೨೫ ಕೋ. ಆರಂಭಿಕ ಮೊತ್ತದೊಂದಿಗೆ ಈ ಬಾರಿ ರು. ೬೭.೪೩ ಕೋ. ಆದಾಯ ನಿರೀಕ್ಷಿಸಲಾಗಿದ್ದು,  ರು. ೮೯.೬೯ ಕೋ. ಒಟ್ಟು ಆದಾಯವಾಗಿದೆ. ಈ ಪೈಕಿ ರು. ೮೮.೬೬ ಕೋ. ವೆಚ್ಚವಾಗಿದ್ದು, ರು. ೧.೦೩ ಕೋ. ಉಳಿತಾಯವಾಗಿದೆ ಎಂದರು.
    ಈ ಬಾರಿ ಪ್ರಗತಿಯಲ್ಲಿರುವ ಯೋಜನೆಗಳೊಂದಿಗೆ ಹೊಸ ಯೋಜನೆಗಳನ್ನು ಸಹ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ನಗರಸಭೆ ಕನಕಮಂಟಪ ಮೈದಾನ ಸಮೀಪ ನಗರಸಭೆ ನಿವೇಶನದಲ್ಲಿ ಬಿ ಮತ್ತು ಸಿ ಗ್ರೂಪ್ ಅಧಿಕಾರಿ ನೌಕರರಿಗೆ ಸುಮಾರು ರು.೧.೮೦ ಕೋ. ವೆಚ್ಚದಲ್ಲಿ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ನಗರದ ಪ್ರಮುಖ ವೃತ್ತಗಳನ್ನು ರು. ೦.೯೨ ಕೋ. ವೆಚ್ಚದಲ್ಲಿ ನವೀನ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಸಂಬಂಧ ಅನುಮೋದನೆ ಪಡೆಯಲಾಗಿದ್ದು, ಮುಂದಿನ ದಿನಗಳ ಅನುಷ್ಠಾನಗೊಳಿಸಲಾಗುವುದು. ನಗರ ವ್ಯಾಪ್ತಿಯ ಸಂಪೂರ್ಣ ಸ್ವತ್ತುಗಳ ಸಮೀಕ್ಷೆ ನಡೆಸಿ ಸಮಗ್ರವಾಗಿ ಇ-ಆಸ್ತಿ ತಂತ್ರಾಂಶಕ್ಕೆ ಒಳಪಡಿಸಿ ವಾರ್ಡ್‌ವಾರು, ಆಸ್ತಿವಾರು ಪ್ರತ್ಯೇಕ ಕಡತ ನಿರ್ವಹಣೆ ಮಾಡಲಾಗುವುದು. ಮುಂದಿನ ವರ್ಷದೊಳಗೆ ನಗರಸಭೆ ವ್ಯಾಪ್ತಿಯಲ್ಲಿನ ಸಮಗ್ರ ಆಸ್ತಿಯನ್ನು ಡಿಜಿಟಲೀಕರಣಗೊಳಿಸಿ ಇ-ಆಸ್ತಿ ತಂತ್ರಾಂಶದಡಿಯಲ್ಲಿ ನಮೂನೆ-೩ ವಿತರಿಸಲಾಗುವುದು. ಪ್ರಸ್ತುತ ಸಾಲಿನಲ್ಲಿ ಪರಿಷ್ಕೃತ ಆಸ್ತಿ ತೆರಿಗೆಯನ್ನು ನಿಗದಿಪಡಿಸಿ ಆನ್‌ಲೈನ್ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ನಗರಸಭೆ ವ್ಯಾಪ್ತಿಯಲ್ಲಿ ನಿವಾಸಿಗಳಿಗೆ ದಿನದ ೨೪ ಗಂಟೆ ನೀರು ಪೂರೈಸಲು ಅನುವಾಗುವಂತೆ ಎಲ್ಲಾ ವಾರ್ಡ್‌ಗಳಲ್ಲೂ ಮೀಟರ್ ಅಳವಡಿಸಲಾಗುತ್ತಿದ್ದು, ಕೆಪಿಟಿಸಿಎಲ್ ಮಾದರಿಯಲ್ಲಿ ನೀರು ಶುಲ್ಕ ಸಂಗ್ರಹಿಸಲು ತಾಂತ್ರಿಕ ವ್ಯವಸ್ಥೆ ಉನ್ನತೀಕರಿಸಲಾಗುವುದು. ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಡಲು ಸಮೀಕ್ಷಾ ಕಾರ್ಯವನ್ನು ತಾಲೂಕು ಆಡಳಿತದ ಸಹಕಾರದೊಂದಿಗೆ ಕೈಗೊಳ್ಳಲಾಗುವುದು. ಹಸಿ ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸಿ ತನ್ನದೇ ಬ್ರ್ಯಾಂಡ್ ಮೂಲಕ ರೈತರಿಗೆ ಸಬ್ಸಿಡಿ ದರದಲ್ಲಿ ಗೊಬ್ಬರ ಪೂರೈಕೆ ಮಾಡಲು ನಿರ್ಧರಿಸಲಾಗಿದ್ದು, ಗೊಬ್ಬರ ತಯಾರಿಸಲು ೮ ಘಟಕಗಳನ್ನು ನಿರ್ಮಿಸಲಾಗುವುದು ಎಂದರು.
    ಹಳೇನಗರ ಭಾಗದಲ್ಲಿ ಬಾಕಿ ಉಳಿದಿರುವ ಒಳಚರಂಡಿ ಕಾಮಗಾರಿ ಯೋಜನೆಯನ್ನು ರು.೨೧ ಕೋ. ಅನುದಾನದಲ್ಲಿ ಪೂರ್ಣಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ನಗರದಲ್ಲಿ ಉತ್ಪತ್ತಿಯಾಗುವ ಒಣಕಸ ಮರುಬಳಕೆಗೆ ಅನುವಾಗುವಂತೆ ಸಂಸ್ಕರಣ ಘಟಕ ನಿರ್ಮಿಸಲಾಗುವುದು. ಭದ್ರಾ ನದಿಗೆ ಕಲುಷಿತ ನೀರು ಸೇರ್ಪಡೆಯಾಗುವುದನ್ನು ತಡೆಯಲು ರು.೧೨ ಕೋ. ವೆಚ್ಚದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಕರ್ನಾಟಕ ನೀರು ಸರಬರಾಜು ಮತ್ತು ಒಳಮಂಡಳಿ ವತಿಯಿಂದ ನಿರ್ಮಿಸಲಾಗುವುದು. ನಗರದ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲಾಗುವುದು ಹಾಗು ಎಲ್ಲಾ ವಾರ್ಡ್‌ಗಳ ಪ್ರಮುಖ ರಸ್ತೆ, ಅಡ್ಡರಸ್ತೆಗಳಿಗೆ ನಾಮಫಲಕ ಅಳವಡಿಸಲಾಗುವುದು ಎಂದರು.
    ಸಭೆಯಲ್ಲಿ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಕೆ. ಪರಮೇಶ್, ಕಂದಾಯಾಧಿಕಾರಿ ರಾಜ್‌ಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಂಗರಾಜಪುರೆ, ಲೆಕ್ಕ ಅಧೀಕ್ಷಕ ಗೋವಿಂದರಾಜು ಮತ್ತು ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment