Friday, March 25, 2022

ಮಾ.೨೬ರಂದು ವಿಶ್ವ ಮಹಿಳಾ ದಿನಾಚರಣೆ

    ಭದ್ರಾವತಿ, ಮಾ. ೨೫: ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮಾ.೨೬ರಂದು ಸಂಜೆ ೫ ಗಂಟೆಗೆ ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
    ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ಕಸಾಪ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಶಿವಮೊಗ್ಗ ಕಸ್ತೂರ್ಬಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಬಿ.ಎನ್ ತಂಬೂಳಿ ಉಪನ್ಯಾಸ ನೀಡಲಿದ್ದಾರೆ.

ಭದ್ರಾವತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ೪೪೬೯ ವಿದ್ಯಾರ್ಥಿಗಳು

೧೬ ಕೇಂದ್ರಗಳು, ಜಾಗೃತದಳ, ಮೊಬೈಲ್ ಸ್ವಾಧೀನಾಧಿಕಾರಿ, ಮಾರ್ಗಾಧಿಕಾರಿ ನೇಮಕ


ಎ.ಕೆ ನಾಗೇಂದ್ರಪ್ಪ
    ಭದ್ರಾವತಿ, ಮಾ. ೨೫: ತಾಲೂಕಿನಲ್ಲಿ ಈ ಬಾರಿ ಒಟ್ಟು ೪೪೬೯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲಿದ್ದು, ಒಟ್ಟು ೧೬ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದರು.
    ಅವರು ಈ ಕುರಿತು ಮಾಹಿತಿ ನೀಡಿ, ಒಟ್ಟು ೧೬ ಪರೀಕ್ಷಾ ಕೇಂದ್ರಗಳ ಪೈಕಿ ೧ ಪರೀಕ್ಷಾ ಕೇಂದ್ರ ಖಾಸಗಿ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ೨,೨೨೨ ಬಾಲಕರು ಹಾಗು ೨,೨೪೭ ಬಾಲಕಿಯರು ಪರೀಕ್ಷೆ ಬರೆಯಲಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ತಲಾ ಓರ್ವ ಸ್ಥಾನಿಕ ಜಾಗೃತ ದಳ ಅಧಿಕಾರಿ ಹಾಗು ಮೊಬೈಲ್ ಸ್ವಾಧೀನಾಧಿಕಾರಿ ನೇಮಕಗೊಳಿಸಲಾಗಿದೆ. ಈ ಬಾರಿ ವಿದ್ಯಾರ್ಥಿಗಳು ಸೂಚಿಸಲಾಗಿರುವ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಬೇಕು. ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದರು.
    ಕೋವಿಡ್-೧೯ ಮುನ್ನಚ್ಚರಿಕೆ ಹಿನ್ನಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಆರೋಗ್ಯ ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದ್ದು, ಸೋಂಕು ನಿವಾರಕ ಹಾಗು ಮಾಸ್ಕ್ ಬಳಕೆ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಜೊತೆಗೆ ಆರೋಗ್ಯ ತಪಾಸಣೆ ನಡೆಸಲಿದ್ದು, ಒಂದು ವೇಳೆ ಸೋಂಕು ತಗುಲಿರುವ ವಿದ್ಯಾರ್ಥಿಗಳು ಕಂಡು ಬಂದಲ್ಲಿ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
    ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು ೫ ಮಾರ್ಗಾಧಿಕಾರಿಗಳನ್ನು ನೇಮಕಗೊಳಿಸಲಾಗಿದ್ದು, ಉಳಿದಂತೆ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರನ್ನೊಳಗೊಂಡ ಜಾಗೃತದಳ ಸಮಿತಿ ರಚಿಸಲಾಗಿದೆ. ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ನೇಮಕಗೊಳಿಸಲಾಗಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ. ಎಲ್ಲರನ್ನು ಒಂದೆಡೆ ಸೇರಿಸಿ ಶನಿವಾರ ಪುನಃ ಮಾಹಿತಿ ನೀಡಲಾಗುವುದು. ಒಟ್ಟಾರೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಕನ್ನಡ ಸಾಹಿತ್ಯ, ಭಾಷೆ ಬೆಳವಣಿಗೆಗೆ ಪ್ರೋತ್ಸಾಹ ನಿರಂತರವಾಗಿರಲಿ : ಎ.ಕೆ ನಾಗೇಂದ್ರಪ್ಪ

ಭದ್ರಾವತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕವಿಗೋಷ್ಠಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿದರು.
    ಭದ್ರಾವತಿ, ಮಾ. ೨೫: ಕನ್ನಡ ಸಾಹಿತ್ಯ, ಭಾಷೆ ಬೆಳೆವಣಿಗೆಗೆ ಪ್ರೋತ್ಸಾಹ ನೀಡುವ ಕಾರ್ಯ ನಿರಂತರವಾಗಿ ನಡೆಯಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶುಕ್ರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
    ಕನ್ನಡ ಭಾಷೆ ತನ್ನದೇ ಆದ ಪರಂಪರೆಯನ್ನು ಹೊಂದಿದ್ದು, ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಸಾಹಿತ್ಯ, ಭಾಷೆ ಮತ್ತಷ್ಟು ಬೆಳವಣಿಗೆ ಹೊಂದುವ ನಿಟ್ಟಿನಲ್ಲಿ ಮುನ್ನಡೆಯಬೇಕಾಗಿದೆ ಎಂದರು.
    ಪ್ರಸ್ತುತ ನಾವು ಮಕ್ಕಳನ್ನು ಕೇವಲ ಪರೀಕ್ಷಾ ಸಿದ್ದತೆಗಾಗಿ ತಯಾರಿ ಮಾಡುತ್ತಿದ್ದೇವೆಯೇ ಹೊರತು ಅವರಲ್ಲಿನ ಜ್ಞಾನಾರ್ಜಾನೆ ವೃದ್ಧಿಸುವ ಕೆಲಸ ಮಾಡುತ್ತಿಲ್ಲ. ಶಾಲಾ ಹಂತದಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಕೆಲಸ ಶಿಕ್ಷಕರು ಮಾಡಬೇಕಾಗಿದೆ. ಇದಕ್ಕೆ ಪೂರಕವಾಗಿ ಮನೆಗಳಲ್ಲಿ ಪೋಷಕರು ಸಹ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ. ಅಲ್ಲದೆ ಸಾಹಿತ್ಯ ಪರಿಷತ್ ಸಹ ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಸಾಹಿತ್ಯಪರ ಕಾರ್ಯಕ್ರಮಗಳನ್ನು ಹೆಚ್ಚಾಗಿ ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ  ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಂ. ಜಗದೀಶ್, ಹಿರಿಯ ಸಾಹಿತಿಗಳಾದ ಜೆ.ಎನ್ ಬಸವರಾಜಪ್ಪ, ಬಿ. ಕಾಂತಪ್ಪ, ನರೇಂದ್ರ ಘೋರ್ಪಡೆ, ಭದ್ರಾ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಬಿ.ಎಚ್ ವಿರುಪಾಕ್ಷಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕಾರ್ಯದರ್ಶಿ ಎಚ್. ತಿಮ್ಮಪ್ಪ ಸ್ವಾಗತಿಸಿದರು. ಸುಮಾರು ೨೨ ಕವಿಗಳು ಸ್ವರಚಿತ ಕವನ ವಾಚಿಸಿದರು.


Thursday, March 24, 2022

ಶ್ರೀ ರಾಮರಾಜ್ಯ ಸಂಘದಿಂದ ‘ಅಪ್ಪು ನಮನ’

ಚಲನಚಿತ್ರ ನಟ, ಸಮಾಜ ಸೇವಕ ದಿವಂಗತ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬ 'ಅಪ್ಪು ನಮನ' ಕಾರ್ಯಕ್ರಮ ಭದ್ರಾವತಿ ನಗರದ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಜನ್ನಾಪುರ ಶ್ರೀ ರಾಮರಾಜ್ಯ ಸಂಘದ ವತಿಯಿಂದ ಆಚರಿಸಲಾಯಿತು.
    ಭದ್ರಾವತಿ, ಮಾ. ೨೪: ಚಲನಚಿತ್ರ ನಟ, ಸಮಾಜ ಸೇವಕ ದಿವಂಗತ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ರವರ ಹುಟ್ಟುಹಬ್ಬ 'ಅಪ್ಪು ನಮನ' ಕಾರ್ಯಕ್ರಮ ನಗರದ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಜನ್ನಾಪುರ ಶ್ರೀ ರಾಮರಾಜ್ಯ ಸಂಘದ ವತಿಯಿಂದ ಆಚರಿಸಲಾಯಿತು.
    ಕಾರ್ಯಕ್ರಮವನ್ನು ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಉದ್ಘಾಟಿಸಿದರು. ಪುನೀತ್‌ರಾಜ್‌ಕುಮಾರ್‌ರವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಹಾಗು ಅವರು ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಸ್ಮರಿಸಲಾಯಿತು.
    ನಗರಸಭಾ ಸದಸ್ಯರಾದ ಸವಿತಾ, ನಾಗರತ್ನ, ನಗರಸಭೆ ಮಾಜಿ ಸದಸ್ಯ ಎಂ. ರಾಜು, ಮುಖಂಡರಾದ ಉಮೇಶ್ ಸೇರಿದಂತೆ ಸ್ಥಳೀಯ ಮುಖಂಡರು ಮುಖಂಡರು. ಜನ್ನಾಪುರ, ಗಣೇಶ್ ಕಾಲೋನಿ, ಹುತ್ತಾಕಾಲೋನಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು, ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.

ನಾ ಕಂಡ ಪೌರಾಯುಕ್ತರು ಅಭಿನಂದನ ಕೃತಿ ಬಿಡುಗಡೆ


    ಭದ್ರಾವತಿ, ಮಾ. ೨೪: ರಂಗಕರ್ಮಿ-ಕಿರುತೆರೆ ಕಲಾವಿದ ಅಪರಂಜಿ ಶಿವರಾಜ್‌ರವರ ನಾ ಕಂಡ ಪೌರಾಯುಕ್ತರು ಅಭಿನಂದನ ಕೃತಿ ಬಿಡುಗಡೆ ಸಮಾರಂಭ ಮಾ.೨೭ರಂದು ಬೆಳಿಗ್ಗೆ ೧೧ ಗಂಟೆಗೆ ಸಿದ್ದರೂಢ ನಗರದ ಶಂಕರಮಠದಲ್ಲಿ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಪುಸ್ತಕ ಬಿಡುಗಡೆಗೊಳಿಸಲಿದ್ದು, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಕೃತಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ.
    ಮಿಸ್ ಸುಪ್ರ ನ್ಯಾಷನಲ್ ೨೦೧೪ ವಿಜೇತೆ, ಚಲನಚಿತ್ರ ನಟಿ ಆಶಾಭಟ್, ನಟ, ನಿರ್ದೇಶಕ ಎಂ.ಡಿ ಕೌಶಿಕ್, ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಡಾ. ವಿ. ಸುದೇಶ್, ಚಿಕ್ಕಮಗಳೂರು ಯೋಜನಾ ನಿರ್ದೇಶಕ ಮನೋಹರ್, ಶೃಂಗೇರಿ ಶಂಕರಮಠ ಧರ್ಮದರ್ಶಿ ಕೆ.ಆರ್ ಸುಬ್ಬರಾವ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮತ್ತು ಅಪರಂಜಿ ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಮಾ.೨೫ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ


    ಭದ್ರಾವತಿ, ಮಾ. ೨೪: ಹಳೇನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಮಾ.೨೫ರಂದು ಸಂಜೆ ೪ ಗಂಟೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್ ಉದ್ಘಾಟಿಸಲಿದ್ದು, ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಶೋಭ ಗಂಗರಾಜ್ ಮತ್ತು ಖಜಾಂಚಿ ಜಯಂತಿ ನಾಗರಾಜ್‌ಶೇಟ್, ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಮಾಜದ ಹಿರಿಯ ಸದಸ್ಯರಾದ ಭಾಗ್ಯವತಿ ನಿಜಗುಣ, ರೇಣುಕ ಚಂದ್ರಶೇಖರಯ್ಯ ಮತ್ತು ಪುಷ್ಪ ಸುಬ್ರಮಣ್ಯರವರಿಗೆ ಗೌರವ ಸಮರ್ಪಣೆ ನಡೆಯಲಿದೆ.

Wednesday, March 23, 2022

ರೆಸ್ಟೋರೆಂಟ್, ಮದ್ಯದಂಗಡಿ ಬೇರೆಡೆಗೆ ಸ್ಥಳಾಂತರಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ವಾಣಿಜ್ಯ ರಸ್ತೆಯಲ್ಲಿ ರೆಸ್ಟೋರೆಂಟ್ ಮತ್ತು ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇವುಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಬುಧವಾರ ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪದಲ್ಲಿರುವ ಆಟೋ ನಿಲ್ದಾಣ ಬಳಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಜನ್ನಾಪುರ ವಾಣಿಜ್ಯ ರಸ್ತೆಯಲ್ಲಿ ರೆಸ್ಟೋರೆಂಟ್ ಮತ್ತು ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇವುಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಬುಧವಾರ ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪದಲ್ಲಿರುವ ಆಟೋ ನಿಲ್ದಾಣ ಬಳಿ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಸ್ಥಳೀಯ ಮುಖಂಡ ಶಶಿಕುಮಾರ್ ಎಸ್. ಗೌಡ ಮಾತನಾಡಿ, ಜನ್ನಾಪುರ ವಾಣಿಜ್ಯ ರಸ್ತೆ ನಗರಸಭೆ ಶಾಖಾ ಕಛೇರಿ, ನಗರ ಆರೋಗ್ಯ ಕೇಂದ್ರ, ಕ್ಲಿನಿಕ್‌ಗಳು, ಶಾಲೆಗಳು, ದೇವಸ್ಥಾನ, ನ್ಯಾಯಬೆಲೆ ಅಂಗಡಿ, ಬ್ಯಾಂಕ್‌ಗಳು, ಔಷಧಿ ಹಾಗು ದಿನಸಿ ಅಂಗಡಿಗಳು ಸೇರಿದಂತೆ ಇನ್ನಿತರ ಅಂಗಡಿ ಮುಂಗಟ್ಟುಗಳಿಂದ ಕೂಡಿದೆ. ಇದರಿಂದಾಗಿ ಫಿಲ್ಟರ್‌ಶೆಡ್, ವೇಲೂರ್‌ಶೆಡ್, ಕೂಲಿಬ್ಲಾಕ್, ಆಂಜನೇಯ ಆಗ್ರಹಾರ, ನ್ಯೂಕಾಲೋನಿ, ವಿದ್ಯಾಮಂದಿರ, ಹಾಲಪ್ಪಶೆಡ್, ಹಾಜಪ್ಪ ಲೇಔಟ್, ಕೆ.ಸಿ ಬ್ಲಾಕ್, ಗಣೇಶ್‌ಕಾಲೋನಿ, ಜಿಂಕ್‌ಲೈನ್, ಭಂಡಾರಹಳ್ಳಿ ಸೇರಿದಂತೆ ಸುತ್ತಮುತ್ತನ ನಿವಾಸಿಗಳು ಪ್ರತಿ ದಿನ ಸುಮಾರು ೧೦ ಸಾವಿರಕ್ಕೂ ಹೆಚ್ಚು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಾರೆ ಎಂದರು.
    ಈ ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಸುಮಾರು ೫ ರೆಸ್ಟೋರೆಂಟ್‌ಗಳು ಮತ್ತು ಅಬಕಾರಿ ನಿಯಮಗಳನ್ನು ಪಾಲನೆ ಮಾಡದ ಸಿಎಲ್೨ ಎರಡು ಹಾಗು ಎಂಎಸ್‌ಐಎಲ್ ಒಂದು ಮದ್ಯದಂಗಡಿ ಇದ್ದು, ಈ ಭಾಗದಲ್ಲಿ ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದ್ದು,  ಮಹಿಳೆಯರು, ವಯೋವೃದ್ಧರು, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ಅಹಿತಕರ ಘಟನೆಯೊಂದು ನಡೆದಿದ್ದು, ಆದರೂ ಸಹ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
    ರೆಸ್ಟೋರೆಂಟ್ ಮತ್ತು ಮದ್ಯದಂಗಡಿಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣ ಬೇರೆಡೆಗೆ ಸ್ಥಳಾಂತರಿಸಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಇಲ್ಲವಾದಲ್ಲಿ ಶಿವಮೊಗ್ಗ ಜಿಲ್ಲೆಗೆ ಏ.೨೪ರಂದು ಆಗಮಿಸಲಿರುವ  ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಪಾದಯಾತ್ರೆ ಮೂಲಕ ಭೇಟಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದೂರು ನೀಡುವುದಾಗಿ ಎಚ್ಚರಿಸಿದರು.
    ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.