Friday, March 25, 2022

ಭದ್ರಾವತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ೪೪೬೯ ವಿದ್ಯಾರ್ಥಿಗಳು

೧೬ ಕೇಂದ್ರಗಳು, ಜಾಗೃತದಳ, ಮೊಬೈಲ್ ಸ್ವಾಧೀನಾಧಿಕಾರಿ, ಮಾರ್ಗಾಧಿಕಾರಿ ನೇಮಕ


ಎ.ಕೆ ನಾಗೇಂದ್ರಪ್ಪ
    ಭದ್ರಾವತಿ, ಮಾ. ೨೫: ತಾಲೂಕಿನಲ್ಲಿ ಈ ಬಾರಿ ಒಟ್ಟು ೪೪೬೯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲಿದ್ದು, ಒಟ್ಟು ೧೬ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ತಿಳಿಸಿದರು.
    ಅವರು ಈ ಕುರಿತು ಮಾಹಿತಿ ನೀಡಿ, ಒಟ್ಟು ೧೬ ಪರೀಕ್ಷಾ ಕೇಂದ್ರಗಳ ಪೈಕಿ ೧ ಪರೀಕ್ಷಾ ಕೇಂದ್ರ ಖಾಸಗಿ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ೨,೨೨೨ ಬಾಲಕರು ಹಾಗು ೨,೨೪೭ ಬಾಲಕಿಯರು ಪರೀಕ್ಷೆ ಬರೆಯಲಿದ್ದು, ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ತಲಾ ಓರ್ವ ಸ್ಥಾನಿಕ ಜಾಗೃತ ದಳ ಅಧಿಕಾರಿ ಹಾಗು ಮೊಬೈಲ್ ಸ್ವಾಧೀನಾಧಿಕಾರಿ ನೇಮಕಗೊಳಿಸಲಾಗಿದೆ. ಈ ಬಾರಿ ವಿದ್ಯಾರ್ಥಿಗಳು ಸೂಚಿಸಲಾಗಿರುವ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಬೇಕು. ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದರು.
    ಕೋವಿಡ್-೧೯ ಮುನ್ನಚ್ಚರಿಕೆ ಹಿನ್ನಲೆಯಲ್ಲಿ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಆರೋಗ್ಯ ಸಿಬ್ಬಂದಿಗಳನ್ನು ನೇಮಕಗೊಳಿಸಲಾಗಿದ್ದು, ಸೋಂಕು ನಿವಾರಕ ಹಾಗು ಮಾಸ್ಕ್ ಬಳಕೆ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಜೊತೆಗೆ ಆರೋಗ್ಯ ತಪಾಸಣೆ ನಡೆಸಲಿದ್ದು, ಒಂದು ವೇಳೆ ಸೋಂಕು ತಗುಲಿರುವ ವಿದ್ಯಾರ್ಥಿಗಳು ಕಂಡು ಬಂದಲ್ಲಿ ಅವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
    ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು ೫ ಮಾರ್ಗಾಧಿಕಾರಿಗಳನ್ನು ನೇಮಕಗೊಳಿಸಲಾಗಿದ್ದು, ಉಳಿದಂತೆ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರನ್ನೊಳಗೊಂಡ ಜಾಗೃತದಳ ಸಮಿತಿ ರಚಿಸಲಾಗಿದೆ. ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ನೇಮಕಗೊಳಿಸಲಾಗಿರುವ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಗಿದೆ. ಎಲ್ಲರನ್ನು ಒಂದೆಡೆ ಸೇರಿಸಿ ಶನಿವಾರ ಪುನಃ ಮಾಹಿತಿ ನೀಡಲಾಗುವುದು. ಒಟ್ಟಾರೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದರು.

No comments:

Post a Comment