Wednesday, March 30, 2022

ಜನ್ನಾಪುರ-ಸಿದ್ದಾಪುರ ಕೆರೆ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಏ.೪ರಂದು ಧರಣಿ ಸತ್ಯಾಗ್ರಹ

ಮೊದಲು ಕೆರೆ ಸರ್ವೇ ನಡೆಸಿ ಒತ್ತುವರಿ ತೆರವುಗೊಳಿಸಿ, ಮಲ-ಮೂತ್ರಗಳಿಂದ ತುಂಬಿರುವ ಹೂಳು ತೆಗೆಯಿರಿ

ಭದ್ರಾವತಿ ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಅಭಿವೃದ್ಧಿಗೊಳಿಸಿವ ನಿಟ್ಟಿನಲ್ಲಿ ಅವೈಜ್ಞಾನಿಕ ಕಾಮಗಾರಿ ಕೈಗೊಳ್ಳಲು ಮುಂದಾಗುತ್ತಿರುವುದನ್ನು ವಿರೋಧಿಸಿ ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ವತಿಯಿಂದ ಬುಧವಾರ ಸಭೆ ನಡೆಸಲಾಯಿತು.
    ಭದ್ರಾವತಿ, ಮಾ. ೩೦: ನಗರಸಭೆಗೆ ಒಳಪಡುವ ಜನ್ನಾಪುರ-ಸಿದ್ದಾಪುರ ವ್ಯಾಪ್ತಿಯಲ್ಲಿರುವ ಸರ್ವೆ ನಂ.೭೦ರ ಕೆರೆಯನ್ನು ಅಭಿವೃದ್ಧಿಪಡಿಸುವ ಮೊದಲು ಒತ್ತುವರಿ ತೆರವು ಮಾಡಿ, ನೂರಾರು ವರ್ಷಗಳಿಂದ ಮಲ-ಮೂತ್ರಗಳಿಂದ ತುಂಬಿಕೊಂಡಿರುವ ಹೂಳನ್ನು ತೆಗೆದು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಏ.೪ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಜನ್ನಾಪುರ-ಸಿದ್ದಾಪುರ ಕೆರೆ ಸಂರಕ್ಷಣಾ ಸಮಿತಿ ಪ್ರಧಾನ ಸಂಚಾಲಕ ಬಾಲಕೃಷ್ಣ ತಿಳಿಸಿದರು.
    ನಮ್ಮ ಪೂರ್ವಿಕರು ಜನಸಾಮಾನ್ಯರಿಗೆ, ಜಾನುವಾರುಗಳಿಗೆ ಮತ್ತು ರೈತರು ಬೆಳೆ ಬೆಳೆಯಲು ಅನುಕೂಲವಾಗುವಂತೆ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿದ್ದು, ಜನ್ನಾಪುರ-ಸಿದ್ದಾಪುರ ಕೆರೆ ಒಟ್ಟು ೫೨ ಎಕರೆ ವಿಸ್ತೀರ್ಣ ಹೊಂದಿದೆ. ಆದರೆ ತಾಲೂಕು ಆಡಳಿತ ಸರ್ವೆ ಕಾರ್ಯ ನಡೆಸಿ ಕೆರೆ ಜಾಗವನ್ನು ೪೫ ಎಕರೆ ೨೦ ಗುಂಟೆ ಎಂದು ಗುರುತಿಸಿದೆ. ಉಳಿದ ಜಾಗ ಒತ್ತುವರಿಯಾಗಿದ್ದು, ಭೂ ಕಬಳಿಕೆದಾರರನ್ನು ರಕ್ಷಿಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
    ಪ್ರಸ್ತುತ ಸರ್ವೆ ಕಾರ್ಯ ನಡೆಸಿ ಗುರುತಿಸಲಾಗಿರುವ ೪೫ ಎಕರೆ ೨೦ ಗುಂಟೆ ಜಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಬದಲು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕೇವಲ ೩೦ ಎಕರೆ ಜಾಗವನ್ನು ಮಾತ್ರ ಸೀಮಿತಗೊಳಿಸಿದೆ. ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲು ಮೊದಲನೇ ಕಂತಿನ ಹಣ ಅಂದಾಜು ೪,೪೮,೦೦,೦೦೦ ರು.  ಬಿಡುಗಡೆಗೊಳಿಸಿದೆ. ಇದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಮೊದಲು ೫೨ ಎಕರೆ ಜಾಗವನ್ನು ಗುರುತಿಸಿ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸಬೇಕೆಂದು ಆಗ್ರಹಿಸಿದರು.
    ನೂರಾರು ವರ್ಷಗಳಿಂದ ಈ ಕೆರೆ ಮಲ-ಮೂತ್ರಗಳಿಂದ ತುಂಬಿಕೊಂಡಿದ್ದು, ಕಲುಷಿತಗೊಂಡಿರುವ ಕೆರೆಯಲ್ಲಿ ಹೂಳು ತೆಗೆದು ಸ್ವಚ್ಛಗೊಳಿಸುವ ಕಾರ್ಯ ಮೊದಲು ಕೈಗೊಳ್ಳಬೇಕಾಗಿದೆ. ಆ ನಂತರ ಕಾಮಗಾರಿ ಆರಂಭಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
    ಕೆರೆ ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲು ಮುಂದಾಗಿರುವ ತಾಲೂಕು ಆಡಳಿತ ಹಾಗು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನಡೆಯನ್ನು ಖಂಡಿಸಿ ಹೋರಾಟ ನಡೆಸಲಾಗುತ್ತಿದ್ದು, ಕೆರೆಯನ್ನು ಪೂರ್ಣಪ್ರಮಾಣದಲ್ಲಿ ಸಂರಕ್ಷಿಸುವುದು ಮೊದಲ ಆದ್ಯತೆಯಾಗಿದೆ. ಈ ಹಿನ್ನಲೆಯಲ್ಲಿ  ಏ.೪ರಂದು ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗರಹ ನಡೆಸಲಾಗುತ್ತಿದೆ ಎಂದರು.
    ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ರಿಯಾಜ್ ಅಹಮದ್, ಪ್ರಮುಖರಾದ ಚನ್ನಪ್ಪ, ಕೃಷ್ಣೇಗೌಡ, ವಿಶ್ವೇಶ್ವರ ಗಾಯಕ್ವಾಡ್, ಎನ್. ರಾಮಕೃಷ್ಣ, ಕೆ. ಮಂಜುನಾಥ್, ರಾಮಚಂದ್ರ, ಶ್ರೀನಿವಾಸ್, ಜಿ. ರಾಜು, ಗಿರಿನಾಯ್ಡು, ವಿಲ್ಸನ್ ಬಾಬು, ವಿನೋದ್, ವೆಂಕಟರಮಣಶೆಟ್ಟಿ, ಹನುಮಂತಪ್ಪ, ಮುದ್ದಪ್ಪ, ರಾಜೇಂದ್ರ, ಹಾವು ಮಂಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, March 29, 2022

ಅನಧಿಕೃತವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಮೀನು ತೆರವು ಕಾರ್ಯಾಚರಣೆ : ೨.೩೬ ಎಕರೆ ಜಮೀನು ವಶಕ್ಕೆ

ಭದ್ರಾವತಿ ತಾಲೂಕಿನ ತಾರೀಕಟ್ಟೆ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಜಮೀನು ತೆರವು ಕಾರ್ಯಾಚರಣೆ ನಡೆಸುವಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಯಶಸ್ವಿಯಾಯಿತು.
    ಭದ್ರಾವತಿ, ಮಾ. ೨೯: ತಾಲೂಕಿನ ತಾರೀಕಟ್ಟೆ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಜಮೀನು ತೆರವು ಕಾರ್ಯಾಚರಣೆ ನಡೆಸುವಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಯಶಸ್ವಿಯಾಗಿದೆ.
    ಗ್ರಾಮದ ಸರ್ವೆ ನಂ.೩೩ರಲ್ಲಿ ೨.೩೬ ಎಕರೆ ಸರ್ಕಾರಿ ಜಮೀನು ಅನಧಿಕೃತವಾಗಿ ಒತ್ತುವರಿಯಾಗಿದ್ದು, ಅಗತ್ಯ ದಾಖಲೆಗಳೊಂದಿಗೆ ಸರ್ವೆ ಕಾರ್ಯ ನಡೆಸಿ ಒತ್ತುವರಿ ತೆರವುಗೊಳಿಸುವ ಮೂಲಕ ಸರ್ಕಾರದ ವಶಕ್ಕೆ ಪಡೆದು ಸರ್ಕಾರದ ಸ್ವತ್ತು ಎಂಬ ನಾಮಫಲಕ ಅಳವಡಿಸಲಾಯಿತು.
    ಕಾರ್ಯಾಚರಣೆಯಲ್ಲಿ ಉಪತಹಸೀಲ್ದಾರ್ ಮಂಜಾನಾಯ್ಕ, ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಚೈತನ್ಯ, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರು, ಅರಳಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮ ಲೆಕ್ಕಿಗರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಡವರ್ಗದವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ

ಶಶಿಕುಮಾರ್ ಎಸ್. ಗೌಡ ಏಕಾಂಗಿ ಹೋರಾಟ ನಡೆಸಿ ಪ್ರಧಾನಿಗೆ ಮನವಿ

ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಬಡ ವರ್ಗದ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಮಂಗಳವಾರ ಭದ್ರಾವತಿ ತಾಲೂಕು ಕಛೇರಿ ಮಿನಿ ವಿಧಾನಸೌಧ ಮುಂಭಾಗ ಏಕಾಂಗಿ ಹೋರಾಟ ನಡೆಸಿದರು.
    ಭದ್ರಾವತಿ, ಮಾ. ೨೯: ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಬಡ ವರ್ಗದ ಜನರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿ ಜನತಾದಳ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಮಂಗಳವಾರ ತಾಲೂಕು ಕಛೇರಿ ಮಿನಿ ವಿಧಾನಸೌಧ ಮುಂಭಾಗ ಏಕಾಂಗಿ ಹೋರಾಟ ನಡೆಸಿದರು.
ಅಡುಗೆ ಅನಿಲ, ಅಡುಗೆ ಎಣ್ಣೆ, ವಿದ್ಯುತ್ ದರ, ಮೊಬೈಲ್ ಕರೆನ್ಸಿ ಮತ್ತು ಪೆಟ್ರೋಲ್ ದರ ದಿನದಿಂದ ದಿನಕ್ಕೆ ಮಿತಿಮೀರಿ ಏರಿಕೆಯಾಗುತ್ತಿದ್ದು, ಇದರಿಂದಾಗಿ ದೇಶದಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ೩೩ ಕೋಟಿ ಕುಟುಂಬದ ೮೦ ಕೋಟಿ ಜನರು ಜೀವನ ನಡೆಸುವುದು ಕಷ್ಟಕರವಾಗಿದೆ. ಬಡವರ್ಗದವರು ದುಡಿಯುತ್ತಿರುವ ಹಣ ಅಗತ್ಯ ವಸ್ತುಗಳ ಖರೀದಿಗೆ ವ್ಯಯವಾಗುತ್ತಿದ್ದು, ಇದರಿಂದಾಗಿ ಭವಿಷ್ಯದ ಬಗ್ಗೆ ಯೋಚನೆ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದಲ್ಲಿ ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಕಳೆದ ಸುಮಾರು ೨ ವರ್ಷಗಳಿಂದ ಮಹಾಮಾರಿ ಕೊರೋನಾ ಪರಿಣಾಮ ದೇಶದಲ್ಲಿ ಬಡವರ್ಗದವರು ಆರ್ಥಿಕವಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಡವರ್ಗದವರಿಗೆ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡುವ ಮೂಲಕ ಅವರ ಹಿತ ಕಾಪಾಡಬೇಕೆಂದು ಮನವಿ ಮಾಡಿದರು.
    ಹೋರಾಟದ ನಂತರ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಪ್ರಧಾನ ಮಂತ್ರಿಗಳಿಗೆ ಶಶಿಕುಮಾರ್ ಎಸ್. ಗೌಡ ಮನವಿ ಸಲ್ಲಿಸಿದರು.

ಕನ್ನಡ ಸರ್ಕಾರಿ ಶಾಲೆ ಉಳಿವಿಗೆ ಹೋರಾಟ ಅನಿವಾರ್ಯ : ಡಿ. ಮಂಜುನಾಥ್

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮಾ. ೨೯: ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಇಂದು ಹೋರಾಟ ನಡೆಸುವ ಅನಿವಾರ್ಯತೆ ಉಂಟಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
    ಅವರು ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆದರೂ ಸಹ ನೆಲ-ಜಲ-ಭಾಷೆಗೆ ಸಂಬಂಧಿಸಿದಂತೆ ಬಹುತೇಕ ಸಮಸ್ಯೆಗಳು ಇಂದಿಗೂ ಜೀವಂತವಾಗಿ ಉಳಿದುಕೊಂಡಿವೆ. ಕನ್ನಡ ನಾಡಿನಲ್ಲಿ ಕನ್ನಡಿಗರು ಪ್ರತಿಯೊಂದಕ್ಕೂ ಹೋರಾಟ ನಡೆಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಮಲೆನಾಡಿನ ಭಾಗದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ಸರ್ಕಾರಿ ಶಾಲೆಗಳು ಮುಚ್ಚಿರುವುದು ನೋವಿನ ಸಂಗತಿಯಾಗಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಹೋರಾಟ ನಡೆಸುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕಾಗಿದೆ ಎಂದರು.
    ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತ ಮಾತನಾಡಿ, ಪ್ರಸ್ತುತ ಮಹಿಳೆಯರು ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಶೋಷಣೆಗೆ ಒಳಗಾದ ಮಹಿಳೆಯರು ತಮಗೆ ಆದ ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕು. ಇದಕ್ಕೆ ಪೂರಕವಾದ ರಕ್ಷಣೆ, ಕಾನೂನು ಭದ್ರತೆ ಸೇರಿದಂತೆ ಎಲ್ಲಾ ರೀತಿಯ ನೆರವು ಇಂದು ಲಭ್ಯವಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪೋಷಕರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಬಾರದು. ಪ್ರತಿಯೊಬ್ಬರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಬಳಸುವ ಮೂಲಕ ಅಪಘಾತಗಳ ನಿಯಂತ್ರಣಕ್ಕೆ ಸಹಕರಿಸಬೇಕೆಂದರು.
    ಶಿವಮೊಗ್ಗ ಕಸ್ತೂರ್ಬಾ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಬಿ.ಎನ್ ತಂಬೂಳಿ ಉಪನ್ಯಾಸ ನಡೆಸಿಕೊಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಉದ್ಯಮಿ ಬಿ.ಕೆ ಜಗನ್ನಾಥ್, ಸಿದ್ದೋಜಿರಾವ್, ಮಂಜಪ್ಪ, ಸುಮತಿ ಕಾರಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾ.೩೦ರಂದು ಎಂ.ಎಸ್ ಈಶ್ವರಯ್ಯನವರ ಸ್ಮರಣೆ, ದತ್ತಿ ಕಾರ್ಯಕ್ರಮ


ಎಂ.ಎಸ್ ಈಶ್ವರಯ್ಯ
    ಭದ್ರಾವತಿ, ಮಾ. ೨೯: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗು ತಾಲೂಕು ಶರಣ ಸಾಹಿತ್ಯ  ಪರಿಷತ್ ವತಿಯಿಂದ ಎಂ.ಎಸ್ ಈಶ್ವರಯ್ಯನವರ ಸ್ಮರಣೆ, ೬೨೬ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮ ಮಾ.೩೦ರಂದು ನ್ಯೂಟೌನ್ ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.
    ಶರಣ ಸಾಹಿತ್ಯಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ, ಅಧ್ಯಕ್ಷತೆ ವಹಿಸಲಿದ್ದು, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್, ತಾಲೂಕು ಗೌರವಾಧ್ಯಕ್ಷ ಬಸವನಗೌಡ ಮಾಳಗಿ, ಕದಳಿ ಮಹಿಳಾ ವೇದಿಕೆ ಸಂಚಾಲಕಿ ಹೇಮಾವತಿ ಚಿಗಟೇರಪ್ಪ ಮತ್ತು ತರೀಕೆರೆ ರಸ್ತೆಯ ಬಸವಕೇಂದ್ರದ ಅಧ್ಯಕ್ಷ ಜಗದೀಶ್ ಕವಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಮಾ.೩೦ರಂದು ಉಚಿತ ನೇತ್ರ ಪರೀಕ್ಷೆ, ನೇತ್ರದಾನ ನೋಂದಣಿ ಶಿಬಿರ

    ಭದ್ರಾವತಿ, ಮಾ. ೨೯: ಬಾರಂದೂರು ವಂದೇ ಮಾತರಂ ಟ್ರಸ್ಟ್ ವತಿಯಿಂದ ತಾಲೂಕಿನ ಅಂತರಗಂಗೆ-ಕೆ.ಎಚ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ತಾಲೂಕು ವೈದ್ಯಾಧಿಕಾರಿಗಳ ಕಛೇರಿ ಸಹಯೋಗದೊಂದಿಗೆ ಮಾ.೩೦ರಂದು ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಅಂತರಗಂಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರ ಚಿಕಿತ್ಸಾ ಹಾಗು ಸ್ವಯಂ ಪ್ರೇರಿತ ನೇತ್ರದಾನ ನೋಂದಣಿ ಶಿಬಿರ ಆಯೋಜಿಸಲಾಗಿದೆ.
    ಅಂತರಗಂಗೆ, ಕೆ.ಎಚ್ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ವಂದೇ ಮಾತರಂ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಬಿ.ಎ ಪ್ರಸನ್ನಕುಮಾರ್, ಮೊ: ೮೮೬೧೬೪೭೦೪೬ ಅಥವಾ ಟ್ರಸ್ಟ್ ಉಪಾಧ್ಯಕ್ಷ ಬಿ. ರೇಣೋಜಿರಾವ್, ಮೊ: ೯೬೨೦೪೦೩೨೯೯ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಮಂಜುಷಾ ವಸ್ತು ಸಂಗ್ರಹಾಲಯ ಅಲಂಕರಿಸಿದ ಸಚಿನ್ ಎಂ. ವರ್ಣೇಕರ್ ಕಲಾಕೃತಿಗಳು

ಕಾರ್ಗಿಲ್ ಯೋಧರ ಸ್ಮರಣಿಕೆ, ವರ್ಡ್ ಕಪ್ ಕಲಾಕೃತಿ ಡಾ. ವಿರೇಂದ್ರ ಹೆಗ್ಡೆಯವರಿಗೆ ಹಸ್ತಾಂತರ

ಭದ್ರಾವತಿ ಹಳೇನಗರದ ನಿವಾಸಿ, ಸೂಕ್ಷ್ಮ ಕೆತ್ತನೆಗಳ ಕಲಾವಿದ ಸಚಿನ್ ಎಂ. ವರ್ಣೇಕರ್‌ರವರ ಎರಡು ಕಲಾಕೃತಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿರುವ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕಲಾಕೃತಿಗಳನ್ನು ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಡೆಯವರಿಗೆ ಹಸ್ತಾಂತರಿಸಲಾಯಿತು.   
 ಭದ್ರಾವತಿ, ಮಾ. ೨೯: ಹಳೇನಗರದ ನಿವಾಸಿ, ಸೂಕ್ಷ್ಮ ಕೆತ್ತನೆಗಳ ಕಲಾವಿದ ಸಚಿನ್ ಎಂ. ವರ್ಣೇಕರ್‌ರವರ ಎರಡು ಕಲಾಕೃತಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿರುವ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಸ್ಥಾನ ಪಡೆದುಕೊಂಡಿವೆ.
    ವರ್ಣೇಕರ್‌ರವರು ಈ ಹಿಂದೆ ಕಾರ್ಗಿಲ್ ಯೋಧರ ಸ್ಮರಣೆಗಾಗಿ ಅತಿ ಚಿಕ್ಕದಾದ ೦.೮ ಇಂಚು ಎತ್ತರ ಮತ್ತು ೦.೨೪೦ ಗ್ರಾಂ. ತೂಕದ ಬಂಗಾರದಿಂದ ಕಲಾಕೃತಿ ರಚಿಸಿದ್ದರು. ಇದೆ ರೀತಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಾಗಿ ೫.೨೦ ಎಂ.ಎಂ ಎತ್ತರ ಮತ್ತು ೦.೦೩೮ ಗ್ರಾಂ ತೂಕದ ಬಂಗಾರದ ವರ್ಡ್ ಕಪ್ ಕಲಾಕೃತಿ ರಚಿಸಿದ್ದರು. ಈ ಎರಡು ಕಲಾಕೃತಿಗಳು ಇದೀಗ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿರುವ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಅಲಂಕರಿಸಿವೆ.
    ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಡೆಯವರಿಗೆ ಈ ಎರಡು ಕಲಾಕೃತಿಗಳನ್ನು ವರ್ಣೇಕರ್ ಹಸ್ತಾಂತರಿಸುವ ಮೂಲಕ ಪ್ರಶಂಸನಾ ಪತ್ರ ಪಡೆದುಕೊಂಡರು.
    ವರ್ಣೇಕರ್‌ರವರು ಅತಿ ಚಿಕ್ಕದಾದ ಶಿವಲಿಂಗ, ಅಯೋಧ್ಯೆ ರಾಮಮಂದಿರ, ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ಕಲಾಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.