ಏಕಲವ್ಯ ಪ್ರಶಸ್ತಿ ಪುರಸ್ಕೃತ ಮುನಿರ್ ಬಾಷಾ
* ಅನಂತಕುಮಾರ್
ಭದ್ರಾವತಿ, ಏ. ೪: ನಗರದ ಅಂತರಾಷ್ಟ್ರೀಯ ಖೋ ಖೋ ಕ್ರೀಡಾಪಟು ಎ. ಮುನಿರ್ ಬಾಷ ಅವರ ಕ್ರೀಡಾ ಸಾಧನೆಗೆ ಈ ಬಾರಿ ಏಕಲವ್ಯ ಪ್ರಶಸ್ತಿ ಲಭಿಸಿದೆ.
ಕಳೆದ ವರ್ಷ ಖೋ ಖೋ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ದೆಹಲಿಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಖೋ ಖೋ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದರು.
ಮುನಿರ್ ಬಾಷಾರವರು ಈ ಹಿಂದೆ ೨೦೧೬ರಲ್ಲಿ ನಡೆದ ೧೨ನೇ ಸೌತ್ ಇಂಡಿಯನ್ ಗೇಮ್ಸ್ ಖೋ ಖೋ ಪಂದ್ಯಾವಳಿಯಲ್ಲಿ ಭಾರತ ತಂಡದ ಉಪನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ ೨೦೧೯ರಲ್ಲಿ ನಡೆದ ೧೩ನೇ ಸೌತ್ ಇಂಡಿಯನ್ ಗೇಮ್ಸ್ ಖೋ ಖೋ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಶ್ರೀಲಂಕ ವಿರುದ್ಧ ಭಾರತ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು.
ಮುನಿರ್ ಬಾಷಾ ಕ್ರೀಡಾ ಬದುಕು :
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಮಾಲಿ ಕೆಲಸ ಮಾಡುವ ಅಹ್ಮದ್ ಜಾನ್‌ರವರ ಪುತ್ರ ಮುನಿರ್ ಬಾಷಾ ಓದುವಿನ ಜೊತೆಯಲ್ಲಿ ಖೋ ಖೋ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಆ ಕ್ರೀಡೆಯಲ್ಲಿಯೇ ಉನ್ನತ ಸ್ಥಾನಕ್ಕೇರಿರುವ ಅಪರೂಪದ ಆಟಗಾರ. ಇವರ ಸಾಧನೆ ಹಿಂದೆ ತಾಯಿ ಆರಿಫಾ ಬೇಗಂ ಶ್ರಮ ಕೂಡ ಹೆಚ್ಚಿನದ್ದಾಗಿದೆ. ಕಡು ಬಡತನದ ನಡುವೆಯೂ ತಂದೆ-ತಾಯಿ ಇಬ್ಬರು ಮಗನ ಕ್ರೀಡಾಸಕ್ತಿಯನ್ನು ನೀರೆರೆದು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
ಪ್ರಾಥಮಿಕ ಶಾಲಾ ಹಂತದಲ್ಲಿಯೇ ದೈಹಿಕ ಶಿಕ್ಷಕ ಎಚ್.ಟಿ ತಿಮ್ಮಪ್ಪ ಮಾರ್ಗದರ್ಶನದಲ್ಲಿ ಖೋ ಖೋ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಬಾಷಾರವರು, ಎಸ್‌ಸಿಎಫ್‌ಐಯಿಂದ ಕರ್ನಾಟಕವನ್ನು ಪ್ರತಿನಿಧಿಸಿ ವಿಜೇತರಾಗಿದ್ದರು. ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯಿಂದ ೧೪ನೇ ವರ್ಷದ ಸಬ್ ಜೂನಿಯರ್ ಮಟ್ಟದ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದು, ಈ ಪಂದ್ಯಾವಳಿಯಲ್ಲಿ ಉತ್ತಮ ಪದರ್ಶನ ನೀಡುವ ಮೂಲಕ ಅತ್ಯುತ್ತಮ ಆಟಗಾರರಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ಖೋ ಖೋ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ನೀಡುವ ಭಾರತ್ ಅವಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದರು.
ಹೈಸ್ಕೂಲ್ ವಿಭಾಗ ಮತ್ತು ಕಾಲೇಜು ಮಟ್ಟದಲ್ಲಿಯೂ ಎರಡು ಬಾರಿ ರಾಜ್ಯವನ್ನು ಪ್ರತಿನಿಧಿಸಿ ವಿಜೇತರಾಗಿದ್ದು, ಅಲ್ಲದೆ ಪದವಿ ಹಂತದಲ್ಲಿ ಕುವೆಂಪು ವಿವಿಯನ್ನು ಮೂರು ಬಾರಿ ಪ್ರತಿನಿಧಿಸಿ ಗೆಲುವಿನ ಹಂತ ತಲುಪಿಸಿದ್ದರು. ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ವತಿಯಿಂದ ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಖೋ ಖೋ ಫೆಡರೇಷನ್ ಕಪ್‌ನಲ್ಲಿ ರಾಜ್ಯ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು. ಕೇರಳದಲ್ಲಿ ಜರುಗಿದ ನ್ಯಾಷನಲ್ಸ್ ಗೇಮ್ಸ್‌ನಲ್ಲಿ ರಾಜ್ಯ ತಂಡ ಮೂರನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಹಾಗೂ ಸೀನಿಯರ್ ನ್ಯಾಷನಲ್ ವಿಭಾಗಗಳಲ್ಲಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಳ್ಳುವಲ್ಲೂ ಸಹ ಪ್ರಮುಖ ಪಾತ್ರ ವಹಿಸಿದ್ದರು.
ಬಡತನದಿಂದ ಮೊಟಕುಗೊಂಡಿದ್ದ ಶಿಕ್ಷಣ ಪುನಃ ಆರಂಭ:
ಬಡತನದಿಂದ ದ್ವಿತೀಯ ಪಿಯುಸಿ ಶಿಕ್ಷಣದ ನಂತರ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ಜೀವನ ನಿರ್ವಹಣೆಗಾಗಿ ಸಾಮಾನ್ಯ ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿದ್ದ ಬಾಷಾರವರು ನಗರದ ಸರ್.ಎಂ ವಿಶ್ವೇಶ್ವರಯ್ಯ ಸ್ಪೋರ್ಟ್ಸ್ ಕ್ಲಬ್ ಸಹಕಾರದಿಂದಾಗಿ ಪುನಃ ಶಿಕ್ಷಣ ಆರಂಭಿಸಿದರು. ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಆರಂಭಿಸಿದರು. ಈ ಹಂತದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಕಾಲೇಜಿನ ಕೀರ್ತಿ ಪತಾಕೆಯನ್ನು ಹೆಚ್ಚಿಸಿದರು.
ಸರ್.ಎಂ ವಿಶ್ವೇಶ್ವರಯ್ಯ ಸ್ಪೋರ್ಟ್ಸ್ ಕ್ಲಬ್‌ಗೆ ಬಲ:
ಕಲಿತ ಕ್ರೀಡೆಯನ್ನು ಬಚ್ಚಿಟ್ಟುಕೊಳ್ಳದೆ ಸರ್.ಎಂ ವಿಶ್ವೇಶ್ವರಯ್ಯ ಸ್ಪೋರ್ಟ್ಸ್ ಕ್ಲಬ್ ಮೂಲಕ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಅವರು ಗುರುತಿಸಿಕೊಳ್ಳಲು ಬಾಷಾ ಕಾರಣಕರ್ತರಾಗಿದ್ದಾರೆ. ಅಲ್ಲದೆ ಸ್ಪೋರ್ಟ್ಸ್ ಕ್ಲಬ್ ರಾಜ್ಯ ಮಟ್ಟದ ಕ್ರೀಡಾ ಕೂಟಗಳಲ್ಲಿ ಉತ್ತಮ ಸಾಧನೆ ಕಂಡುಕೊಳ್ಳಲು ಹೆಚ್ಚಿನ ಶ್ರಮ ವಹಿಸಿದ್ದಾರೆ.
ಪ್ರಶಸ್ತಿ-ಸನ್ಮಾನ :
ಬಾಷಾರವರ ಕ್ರೀಡಾ ಸಾಧನೆಯನ್ನು ಗುರುತಿಸಿ ಜಿಲ್ಲಾಡಳಿತ, ತಾಲೂಕು ಆಡಳಿತ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಸನ್ಮಾನಿಸಿ ಅಭಿನಂದಿಸಿವೆ. ಈ ನಡುವೆ ರಾಜ್ಯ ಸರ್ಕಾರ 'ಕರ್ನಾಟಕ ಕ್ರೀಡಾ ರತ್ನ' ಪ್ರಶಸ್ತಿಯನ್ನು ೨೦೧೭ರಲ್ಲಿ ನೀಡಿ ಗೌರವಿಸಿದೆ.
ಏಕಲವ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಬಾಷಾ ಅವರನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಡಳಿತ ಮಂಡಳಿ, ದೈಹಿಕ ಶಿಕ್ಷಣ ನಿರ್ದೇಶಕ ವಿಶ್ವನಾಥ್, ಸರ್.ಎಂ ವಿಶ್ವೇಶ್ವರಯ್ಯ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಕ್ರೀಡಾಪಟುಗಳು, ಅಭಿಮಾನಿಗಳು ಅಭಿನಂದಿಸಿದ್ದಾರೆ.