ನಗರಸಭೆ ಸಭಾಂಗಣದಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ಸಭೆ
ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ಸರ್ಕಾರಿ ಕೆರೆ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ಹಾಗು ಹೂಳು ತೆಗೆದು ಸ್ವಚ್ಛಗೊಳಿಸುವ ಸಂಬಂಧ ಸೋಮವಾರ ತಹಸಿಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಯಿತು.
ಭದ್ರಾವತಿ : ನಗರಸಭೆ ವ್ಯಾಪ್ತಿಯ ಜನ್ನಾಪುರ ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ಸರ್ಕಾರಿ ಕೆರೆ ಅನಧಿಕೃತ ಒತ್ತುವರಿ ತೆರವು ಕಾರ್ಯಾಚರಣೆ ಹಾಗು ಹೂಳು ತೆಗೆದು ಸ್ವಚ್ಛಗೊಳಿಸುವ ಸಂಬಂಧ ಸೋಮವಾರ ತಹಸಿಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ನಗರಸಭೆ ಸಭಾಂಗಣದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಸಿದ್ದಾಪುರ-ಜನ್ನಾಪುರ ಕೆರೆ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಮಾತನಾಡಿ, ಕೆರೆ ಒತ್ತುವರಿ ತೆರವು ಹಾಗು ಅಭಿವೃದ್ಧಿಗೊಳಿಸುವ ಸಂಬಂಧ ಈಗಾಗಲೇ ಹೋರಾಟ ನಡೆಸಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ತಾಲೂಕು ಆಡಳಿತ ಕೈಗೊಂಡಿರುವ ಕ್ರಮದ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಆರ್. ಪ್ರದೀಪ್, ಕೆರೆಯ ಒಟ್ಟು ವಿಸ್ತೀರ್ಣದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ವಿಶೇಷ ಅಧಿಕಾರ ಬಳಸಿಕೊಂಡು ಕಾನೂನಿನ ಪ್ರಕಾರ ೪ ಎಕರೆ ೩೬ ಗುಂಟೆ ಜಮೀನು ಹಾಗು ೦೪ ಗುಂಟೆ ಖರಾಬು ಸೇರಿ ಒಟ್ಟು ೫ ಎಕರೆ ಕೆರೆಯಿಂದ ಬೇರ್ಪಡಿಸಿದ್ದಾರೆ. ಗ್ರಾಮ ನಕಾಶೆ ಪ್ರಕಾರ ಪ್ರಸ್ತುತ ಕೆರೆಯ ವಿಸ್ತ್ರೀರ್ಣ ೪೫ ಎಕರೆ ೨೦ ಗುಂಟೆಯಾಗಿದೆ. ಈ ಹಿನ್ನಲೆಯಲ್ಲಿ ನಿಗದಿಯಾಗಿರುವ ವಿಸ್ತೀರ್ಣದಂತೆ ಸರ್ವೆ ನಡೆಸಿ ಬೌಂಡರಿ ಗುರುತಿಸಿ ಅಭಿವೃದ್ಧಿಗೊಳಿಸಲು ಶಿವಮೊಗ್ಗ-ಭದ್ರಾವತಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದರು.
ಕೆರೆ ಸಮೀಪದ ರೈತರು ಹಾಗು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಮಾತನಾಡಿ, ಮಲಮೂತ್ರ, ಕೊಳಚೆ ನೀರು ಹಾಗು ಇನ್ನಿತರ ತ್ಯಾಜ್ಯಗಳಿಂದ ಕೆರೆ ಸಂಪೂರ್ಣವಾಗಿ ಕಲ್ಮಶಗೊಂಡಿದೆ. ದುರ್ವಾಸನೆ ಬೀರುತ್ತಿದ್ದು, ರೋಗರುಜಿನಗಳು ಹರಡುತ್ತಿವೆ. ಅಲ್ಲದೆ ಸಮೀಪದ ರೈತರಲ್ಲಿ ನೀರಿನಿಂದ ದುಷ್ಪರಿಣಾ ಉಂಟಾಗುತ್ತಿದೆ. ಈ ಹಿನ್ನಲೆಯಲ್ಲಿ ಹೂಳು ತೆಗೆದು ನೀರು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮೊದಲು ಕೆರೆಯ ಸಮೀಪದಲ್ಲಿನ ನಿವಾಸಿಗಳು, ರೈತರ ವಾಸ್ತವ ಸ್ಥಿತಿಗಳನ್ನು ಅರಿತುಕೊಳ್ಳಿ. ಕೆರೆಯ ಸಂಪೂರ್ಣ ಸರ್ವೆ ನಡೆಸಿ ನೂರಾರು ವರ್ಷಗಳಿಂದ ಮಲಮೂತ್ರಗಳಿಂದ ತುಂಬಿಕೊಂಡಿರುವ ಹೂಳು ತೆಗೆಯಲು ಹಾಗು ಒತ್ತುವರಿ ಕಾರ್ಯಾಚರಣೆ ನಡೆಸಲು ಕ್ರಮ ಕೈಗೊಳ್ಳಿ. ಕೆರೆಯ ನೀರು ಶುದ್ಧೀಕರಣಗೊಳಿಸಿ, ದುವಾರ್ಸನೆ, ರೋಗರುಜಿನಗಳಿಂದ ಮುಕ್ತಿಗೊಳಿಸಿ ಆ ನಂತರ ದೋಣಿ ವಿಹಾರ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಿ.
- ಬಾಲಕೃಷ್ಣ, ಅಧ್ಯಕ್ಷ, ಸಾರ್ವಜನಿಕ ಕುರಿತುಕೊರತೆ ಹೋರಾಟ ಸಮಿತಿ.
ಇದಕ್ಕೆ ಪ್ರತಿಕ್ರಿಯಿಸಿದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಕೆರೆ ಅಭಿವೃದ್ಧಿಗೊಳಿಸುವ ಸಂಬಂಧ ೨೦೧೬ರಲ್ಲಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಇಲಾಖೆಗೆ ನಿರಾಪೇಕ್ಷಣಾ ಪತ್ರ ಬರೆದು ಕೈಗೊಳ್ಳಬೇಕಾಗಿರುವ ಕಾರ್ಯಸೂಚಿಗಳ ಬಗ್ಗೆ ತಿಳಿಸಿದ್ದರು. ಇದರಿಂದಾಗಿ ಕಾಮಗಾರಿ ಡಿಪಿಆರ್ ಸಿದ್ದಪಡಿಸುವಾಗ ಹೂಳು ತೆಗೆಯುವ ಪ್ರಸ್ತಾಪ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿ ಆದರೂ ಬೇಡಿಕೆಯಂತೆ ಲಭ್ಯವಾಗುವ ಅನುದಾನ ಬಳಸಿಕೊಂಡು ಸಾಧ್ಯವಾದಷ್ಟು ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕೆರೆ ಸಂಪೂರ್ಣವಾಗಿ ಕಲ್ಮಶಗೊಂಡಿದ್ದರೂ ಮೀನು ಸಾಕಾಣಿಕೆಗೆ ಅವಕಾಶ ನೀಡಲಾಗಿದ್ದು, ಕೆರೆಯ ಮೀನುಗಳನ್ನು ತಿಂದವರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಮೀನು ಸಾಕಾಣಿಕೆಗೆ ತಡೆ ನೀಡಬೇಕು. ಜೊತೆಗೆ ಕೆರೆಯಲ್ಲಿರುವ ಹೂಳು ತೆಗೆಯಲು ನಗರಸಭೆ ಹಿರಿಯ ಮಾಜಿ ಸದಸ್ಯ ಬಾಲಕೃಷ್ಣ ನೇತೃತ್ವದಲ್ಲಿ ಕೆರೆ ಸಮೀಪದಲ್ಲಿರುವ ರೈತರ ಸಮಿತಿ ರಚನೆ ಮಾಡಬೇಕು.
- ಆರ್. ವೇಣುಗೋಪಾಲ್, ಮಾಜಿ ಅಧ್ಯಕ್ಷ, ಸ್ಥಾಯಿ ಸಮಿತಿ, ನಗರಸಭೆ.
ಸಭೆಯಲ್ಲಿ ಪುನಃ ಕೆರೆ ಒಟ್ಟು ವಿಸ್ತೀರ್ಣದ ಸರ್ವೆ ನಡೆಸುವಂತೆ ಆಗ್ರಹ ಕೇಳಿ ಬಂದ ಹಿನ್ನಲೆಯಲ್ಲಿ ತಾಲೂಕು ಆಡಳಿತ, ನೀರಾವರಿ ಇಲಾಖೆ ಹಾಗು ನಗರಸಭೆ ವತಿಯಿಂದ ಜಂಟಿಯಾಗಿ ಪ್ರಸ್ತುತ ನಿಗದಿಯಾಗಿರುವ ೪೫ ಎಕರೆ, ೨೦ ಗುಂಟೆ ಕೆರೆ ಸರ್ವೆ ಕಾರ್ಯ ನಡೆಸಲು ತೀರ್ಮಾನಿಸಲಾಯಿತು. ಉಳಿದಂತೆ ನಗರಸಭೆ ವತಿಯಿಂದ ಕೆರೆ ಸಮೀಪ ರಾಜಕಾಲುವೆ ನಿರ್ಮಿಸಿ ಕೆರೆಗೆ ಮಲಮೂತ್ರ, ಕೊಳಚೆ ನೀರು ಹಾಗು ಇನ್ನಿತರ ತ್ಯಾಜ್ಯ ಸೇರ್ಪಡೆಗೊಳ್ಳದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು.
ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಕೆ. ಪರಮೇಶ್, ಇಂಜಿನಿಯರ್ ರಂಗಾರಾಜಪುರೆ, ಕಂದಾಯಾಧಿಕಾರಿ ರಾಜ್‌ಕುಮಾರ್, ನೀರಾ ಇಲಾಖೆ ಬಿಆರ್‌ಎಲ್‌ಬಿಸಿ ಹಾಗು ಸೂಡಾ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿದ್ದಾಪುರ-ಜನ್ನಾಪುರ ಕೆರೆ ಸಂರಕ್ಷಣಾ ಸಮಿತಿ ಪ್ರಮುಖರಾದ ಬಾಲಕೃಷ್ಣ, ಸುರೇಶ್, ಜಿ. ರಾಜು, ಎನ್. ರಾಮಕೃಷ್ಣ, ಕೆ. ಮಂಜುನಾಥ್, ಚನ್ನಪ್ಪ, ಎಸ್. ಮಂಜುನಾಥ್, ನಗರಸಭಾ ಸದಸ್ಯರಾದ ಆರ್. ಮೋಹನ್‌ಕುಮಾರ್, ಕಾಂತರಾಜ್, ಜಾರ್ಜ್, ರಿಯಾಜ್ ಅಹಮದ್, ಬಿ.ಟಿ ನಾಗರಾಜ್, ಲತಾ ಚಂದ್ರಶೇಖರ್ ಹಾಗು ವಿರೋಧ ಪಕ್ಷದ ನಾಯಕ ಬಸವರಾಜ ಬಿ. ಆನೇಕೊಪ್ಪ ಸೂಡಾ ಸದಸ್ಯೆ ಹೇಮಾವತಿ ವಿಶ್ವನಾಥ್ ಹಾಗು ನಗರಸಭೆ, ತಾಲೂಕು ಕಛೇರಿ, ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಇನ್ನಿತರ ಸಂಘಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.