Wednesday, April 20, 2022

ಏ.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ

    ಭದ್ರಾವತಿ, ಮಾ. ೨೦ : ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ವತಿಯಿಂದ ತಮಿಳುನಾಡು ದಿಂಡಿಕಲ್‌ನ ವಂಶಪಾರಂಪರೆ ಸಿದ್ದ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ಏ.೨೧ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕಾರ್ಯಕ್ರಮ ಬೆಳಿಗ್ಗೆ ೯.೩೦ ರಿಂದ ಮಧ್ಯಾಹ್ನ ೧.೩೦ ಗಂಟೆ ವರೆಗೆ ನಡೆಯಲಿದ್ದು, ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹಾಗು ಸೂಕ್ಷ್ಮ ಕೆಲಸಗಾರರು, ಚಿನ್ನಬೆಳ್ಳಿ, ಕಂಪ್ಯೂಟರ್, ಟೈಲರಿಂಗ್ ಕೆಲಸಗಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಅಥವಾ ೯೪೪೮೨೫೫೫೪೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ವಿಕಲಚೇತನರಿಗೂ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಕೊಡಿ : ಗೀತಾ ರಾಜ್‌ಕುಮಾರ್

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಖಾನೆಗಳಲ್ಲಿ ಉತ್ಪಾದನೆಗೊಂಡ ಅಡಕೆ ತಟ್ಟೆಗಳನ್ನು ಮಾರಾಟಕ್ಕೆ ಸಿದ್ದಗೊಳಿಸುವ ತರಬೇತಿಗೆ ಬುಧವಾರ ಚಾಲನೆ ನೀಡಲಾಯಿತು.
    ಭದ್ರಾವತಿ, ಏ. ೨೦: ವಿಕಲಚೇತನರು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಹಾಗು ಆರ್ಥಿಕವಾಗಿ ಬಲಗೊಳ್ಳಲು ಸ್ವಯಂ ಉದ್ಯೋಗಗಳು ಅವಶ್ಯಕವಾಗಿವೆ ಎಂದು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಹೇಳಿದರು.
    ಅವರು ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಖಾನೆಗಳಲ್ಲಿ ಉತ್ಪಾದನೆಗೊಂಡ ಅಡಕೆ ತಟ್ಟೆಗಳನ್ನು ಮಾರಾಟಕ್ಕೆ ಸಿದ್ದಗೊಳಿಸುವ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
    ವಿಕಲಚೇತನರು ಸಹ ಪ್ರತಿಭಾವಂತರಿದ್ದು, ಇವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಗಮನ ಹರಿಸಬೇಕೆಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಪೌರಾಯುಕ್ತ ಕೆ. ಪರಮೇಶ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ಅಂಧ ವಿಕಲಚೇತನರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡುವ ಮೂಲಕ ನೆರವಿಗೆ ಮುಂದಾಗಬೇಕೆಂದರು.  
    ತಮಿಳುನಾಡಿನ ವಿ.ಎಲ್ ವೆಂಚರ್‍ಸ್ ತಿರುಪ್ಪೂರು ಕಂಪನಿ ವ್ಯವಸ್ಥಾಪಕ ಸತ್ಯ ಪ್ರಭು, ಶಿಕ್ಷಣ ಇಲಾಖೆಯ ಸಿಆರ್‌ಪಿ ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಅಧ್ಯಕ್ಷತೆ ವಹಿಸಿದ್ದರು.
    ತರಬೇತಿ ಹೇಗೆ?
    ಕಾರ್ಖಾನೆಯಲ್ಲಿ ಉತ್ಪಾದನೆಗೊಂಡು ಬರುವ ತಟ್ಟೆಗಳಲ್ಲಿ ಬಳಕೆಗೆ ಯೋಗ್ಯವಾದ ತಟ್ಟೆಗಳನ್ನು ಆಯ್ಕೆಮಾಡಿ, ಅವುಗಳನ್ನು ಸ್ವಚ್ಛಗೊಳಿಸಿ ನಂತರ ಎಣಿಕೆ ಮಾಡಿ ಅವುಗಳನ್ನು ಮಾರಾಟಕ್ಕೆ ಸಿದ್ದಗೊಳಿಸುವುದಾಗಿದೆ. ಈ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಇದರ ಆಧಾರದ ಮೇಲೆ ಸ್ವಯಂ ಉದ್ಯೋಗ ಕೈಗೊಳ್ಳಲು ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯ ಸಹ ಲಭ್ಯವಾಗಲಿದೆ.
    ನೆರವಿಗೆ ಮುಂದಾದ ವಿ.ಎಲ್ ವೆಂಚರ್‍ಸ್ ತಿರುಪ್ಪೂರು ಕಂಪನಿ :
    ಅಂಧ ವಿಕಲಚೇತನರ ನೆರವಿಗೆ ಮುಂದಾಗಬೇಕೆಂಬ ಉದ್ದೇಶದೊಂದಿಗೆ ತಮಿಳುನಾಡಿನ ವಿ.ಎಲ್ ವೆಂಚರ್‍ಸ್ ತಿರುಪ್ಪೂರು ಕಂಪನಿ ವ್ಯವಸ್ಥಾಪಕ ಸತ್ಯ ಪ್ರಭು ಜಿಲ್ಲೆಯ ಸುತ್ತಮುತ್ತಲಿನ ಭಾಗಗಳಲ್ಲಿ ಅಡಕೆ ತಟ್ಟೆ ಉತ್ಪಾದನಾ ಕಂಪನಿಗಳಿಂದ ತಟ್ಟೆಗಳನ್ನು ಖರೀದಿಸಿ ಅವುಗಳನ್ನು ಮಾರಾಟಕ್ಕೆ ಸಿದ್ದಪಡಿಸಲು ಅಂಧ ವಿಕಲಚೇನರಿಗೆ ನೀಡುತ್ತಿದ್ದಾರೆ. ಕಳೆದ ಸುಮಾರು ೩ ದಿನಗಳಿಂದ ಸುಮಾರು ೧ ಲಕ್ಷ ತಟ್ಟೆಗಳನ್ನು ಮಾರಾಟಕ್ಕೆ  ಸಿದ್ದಗೊಳಿಸುವಲ್ಲಿ ೧೨ ಅಂಧ ವಿಕಲಚೇತನರು ಯಶಸ್ವಿಯಾಗಿದ್ದಾರೆ. ತರಬೇತಿ ಸುಮಾರು ೩ ತಿಂಗಳವರೆಗೆ ನಡೆಯಲಿದೆ.

ಏ.೨೩ರಂದು ಛಲವಾದಿ ಭವನದ ಶಂಕುಸ್ಥಾಪನೆ, ವಾರ್ಷಿಕೋತ್ಸವ


    ಭದ್ರಾವತಿ, ಏ. ೨೦: ನಗರದ ಛಲವಾದಿಗಳ(ಪ.ಜಾ) ಸಮಾಜದ ವತಿಯಿಂದ ಏ.೨೩ರಂದು ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್‌ರವರ ೧೩೧ನೇ ಜನ್ಮದಿನೋತ್ಸವ ಅಂಗವಾಗಿ ಸಮಾಜದ ವಾರ್ಷಿಕೋತ್ಸವ ಹಾಗು ಛಲವಾದಿ ಭವನದ ಶಂಕುಸ್ಥಾಪನೆ ಏ.೨೩ರಂದು ಸಂಜೆ ೫ ಗಂಟೆಗೆ ಉಂಬ್ಳೆಬೈಲ್ ರಸ್ತೆ, ನ್ಯೂಟೌನ್, ಜಯಶ್ರೀ ವೃತ್ತದ ಸಮೀಪದಲ್ಲಿರುವ ಸಮಾಜದ ಆವರಣದಲ್ಲಿ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಶಂಕುಸ್ಥಾಪನೆ ನೆರವೇರಿಸಲಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಧ್ರುವ ನಾರಾಯಣ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಲಿದ್ದಾರೆ. ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಮಂಜುನಾಥ್ ಅಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ.
ಶಿವಮೊಗ್ಗ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ಹ.ಮ ನಾಗಾರ್ಜುನ ಉಪನ್ಯಾಸ ನೀಡಲಿದ್ದು, ನಗರಸಭೆ ಉಪಾಧ್ಯಕ್ಷ, sಸಮಾಜದ ಅಧ್ಯಕ್ಷ ಚನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರತಿಭಾ ಪುರಸ್ಕಾರ ನಡೆಸಿಕೊಡಲಿದ್ದಾರೆ. ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಸದಸ್ಯರಾದ ಸರ್ವಮಂಗಳ ಭೈರಪ್ಪ, ಪ್ರೇಮ ಬದರಿ ನಾರಾಯಣ, ಉದಯಕುಮಾರ್, ಅನ್ನಪೂರ್ಣ, ಕಾರೇಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಮತ, ದೊಡ್ಡೇರಿ ಗ್ರಾ.ಪಂ. ಉಪಾಧ್ಯಕ್ಷೆ ಹೇಮಾವತಿ, ಸಿಂಗನಮನೆ ಗ್ರಾ.ಪಂ. ಸದಸ್ಯೆ ಚಂದನಮಧು, ಹಿರಿಯೂರು ಗ್ರಾ.ಪಂ. ಸದಸ್ಯ ಕಿರಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಕ್ರೀಡಾ ಸ್ಪರ್ಧೆ:
    ಸಮಾಜದ ವಾರ್ಷಿಕೋತ್ಸವದ ಅಂಗವಾಗಿ ಏ.೨೨ರಂದು ಬೆಳಿಗ್ಗೆ ೯ ಗಂಟೆಗೆ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
    ಪ್ರತಿಭಾ ಪುರಸ್ಕಾರ:
    ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗು ಪದವಿ ಪರೀಕ್ಷೆಗಳಲ್ಲಿ ಶೇ.೮೫ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಸಮಾಜದ ವಿದ್ಯಾರ್ಥಿಗಳು ಅಂಬೇಡ್ಕರ್ ಗ್ರಂಥಾಲಯ, ಜಯಶ್ರೀ ವೃತ್ತ, ನ್ಯೂಟೌನ್, ಭದ್ರಾವತಿ ಈ ವಿಳಾಸದಲ್ಲಿ ಅಂಕಪಟ್ಟಿ ಮಾಹಿತಿಯೊಂದಿಗೆ ಮೊಬೈಲ್ ಸಂಖ್ಯೆ ನೀಡುವುದು. ಹೆಚ್ಚಿನ ಮಾಹಿತಿಗೆ ಮೊ: ೯೪೪೯೭೮೦೨೧೬ ಅಥವಾ ೭೯೭೫೦೫೨೮೧೦ ಸಂಖ್ಯೆಗೆ ಸಂಪರ್ಕಿಸುವಂತೆ ಸಮಾಜದ ಪ್ರಮುಖರಾದ  ಡಿ. ನರಸಿಂಹಮೂರ್ತಿ ಮತ್ತು ಎಂ. ತಿಪ್ಪೇಸ್ವಾಮಿ ಕೋರಿದ್ದಾರೆ.

‘ಜನತಾ ಜಲಧಾರೆ ಯಾತ್ರೆ’ ಏ.೨೩ರಂದು ಬಿಆರ್‌ಪಿಯಲ್ಲಿ ಬಹಿರಂಗ ಸಭೆ : ಮಾಜಿ ಪ್ರಧಾನಿ ದೇವೇಗೌಡರ ಆಗಮನ

ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಸೇರಿದಂತೆ ಪ್ರಮುಖರು ಮಾತನಾಡಿದರು.
    ಭದ್ರಾವತಿ, ಏ. ೨೦: ರಾಜ್ಯದ ಸಮಗ್ರ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯಾರ್ಪಣೆಗಾಗಿ ಜಾತ್ಯಾತೀತ ಜನತಾದಳ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ‘ಜನತಾ ಜಲಧಾರೆ ಯಾತ್ರೆ’ ಏ.೨೩ರಂದು ಕ್ಷೇತ್ರಕ್ಕೆ ಆಗಮಿಸಲಿದ್ದು, ಅಂದು ಭದ್ರಾ ಜಲಾಶಯದ ಸಮೀಪದ ಬಿ.ಆರ್ ಪ್ರಾಜೆಕ್ಟ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆಗಮಿಸಲಿದ್ದಾರೆಂದು ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ತಿಳಿಸಿದರು. 
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏ.೨೨ರಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತುಂಗಾಭದ್ರಾ ಸಂಗಮ ಸ್ಥಳದ ಸಮೀಪದ ಚಿಕ್ಕಕೂಡ್ಲಿಯಿಂದ ಯಾತ್ರೆ ಹೊಳೆಹೊನ್ನೂರು, ಕೈಮರ, ಅರಹತೊಳಲು, ಕಲ್ಲಿಹಾಳ್, ಅರಬಿಳಿಚಿ, ಕೂಡ್ಲಿಗೆರೆ ಮಾರ್ಗವಾಗಿ ಸಂಜೆ ೬ ಗಂಟೆಗೆ ಶ್ರೀರಾಮನಗರ ಪ್ರವೇಶಿಸಲಿದ್ದು, ಇಲ್ಲಿಯೇ ತಂಗಲಿದೆ ಎಂದರು. 
ಏ.೨೩ರಂದು ಬೆಳಿಗ್ಗೆ ೯.೩೦ಕ್ಕೆ ಶ್ರೀರಾಮನಗರದ ಶ್ರೀರಾಮೇಶ್ವರ ದೇವಸ್ಥಾನದಿಂದ ಯಾತ್ರೆ ಆರಂಭಗೊಳ್ಳಲಿದ್ದು, ಭದ್ರಾ ಕಾಲೋನಿ, ಸೀಗೇಬಾಗಿ, ರಂಗಪ್ಪವೃತ್ತ, ಅಂಡರ್ ಬ್ರಿಡ್ಜ್, ಜಯಶ್ರೀ ವೃತ್ತ ಮೂಲಕ ಉಂಬ್ಳೆಬೈಲು ರಸ್ತೆ ಮಾರ್ಗವಾಗಿ ಬಿ.ಆರ್ ಪ್ರಾಜೆಕ್ಟ್‌ಗೆ ತೆರಳಲಿದೆ. ಮಧ್ಯಾಹ್ನ ೧೨ ಗಂಟೆಗೆ ಬಹಿರಂಗ ಸಭೆ ನಡೆಯಲಿದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಸಭೆ ಉದ್ಘಾಟಿಸಲಿದ್ದು, ಮಾಜಿ ಶಾಸಕಿ ಶಾರದಪೂರ್‍ಯನಾಯ್ಕ, ಪಕ್ಷದ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಶಿಮೂಲ್ ಮಾಜಿ ಅಧ್ಯಕ್ಷ ಡಿ.ಆನಂದ್, ಮುಖಂಡರಾದ ಕೆ. ಕರಿಯಪ್ಪ, ಸ್ಥಳೀಯ ಸಂಸ್ಥೆಗಳ ಹಾಲಿ ಹಾಗು ಮಾಜಿ ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಸದಸ್ಯರುಗಳು ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ರೈತರು, ಕಾರ್ಮಿಕರು, ಮಹಿಳೆಯರು, ವ್ಯಾಪರಸ್ಥರು ಸೇರಿದಂತೆ ಸಮಸ್ತ ನಾಗರೀಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು. 
ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರವರು ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿ ಕುರಿತು, ಗುತ್ತಿಗೆ ಹಾಗು ಕಾಯಂ ಮತ್ತು ನಿವೃತ್ತ ಕಾರ್ಮಿಕರ ಹಲವು ಬೇಡಿಕೆಗಳ ಕುರಿತು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿ ಚರ್ಚಿಸಿದ್ದಾರೆ. ಕ್ಷೇತ್ರದ ಅಭಿವೃದ್ದಿ ಕುರಿತು ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಅವರ ಆಗಮನ ಕ್ಷೇತ್ರದಲ್ಲಿನ ರೈತರು, ಕಾರ್ಮಿಕರು ಸೇರಿದಂತೆ ಶ್ರೀಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಇನ್ನೂ ಹೆಚ್ಚಿನ ಅನುಕೂಲವಾಗಲಿದೆ ಎಂದರು. 
ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಜೆಡಿಎಸ್ ಪಕ್ಷ ಶ್ರೀಸಾಮಾನ್ಯರ ಸಂಕಷ್ಟಗಳಿಗೆ ಪೂರಕವಾಗಿ ಸ್ಪಂದಿಸಲಿದೆ. ಈ ಹಿನ್ನಲೆಯಲ್ಲಿ ನೀರಿಗಾಗಿ ಹೋರಾಟವನ್ನು ರಾಜ್ಯಾದ್ಯಂತ ಕೈಗೊಂಡಿದೆ. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗೆ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. 
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭೆ ವಿರೋಧ ಪಕ್ಷದ ನಾಯಕ ಬಸವರಾಜ ಬಿ. ಆನೇಕೊಪ್ಪ, ಸದಸ್ಯರಾದ ಉದಯಕುಮಾರ್, ವಿಜಯ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಎಚ್.ಬಿ ರವಿಕುಮಾರ್, ಎಂ. ರಾಜು, ಮುರ್ತುಜಾಖಾನ್, ನಂಜುಂಡೇಗೌಡ, ಲೋಕೇಶ್ವರರಾವ್, ಮೈಲಾರಪ್ಪ, ಮಧುಕುಮಾರ್, ಉಮೇಶ್, ಗೊಂದಿ ಜಯರಾಂ, ದಿಲೀಪ್, ಗಿರಿನಾಯ್ಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Tuesday, April 19, 2022

ಉದ್ಯೋಗ ಖಾತ್ರಿ ಕೂಲಿ ದರ ಹೆಚ್ಚಳ : ಸದ್ಬಳಕೆಗೆ ಮನವಿ

ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವತಿಯಿಂದ  ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ದುಡಿಯೋಣ ಬಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಏ. ೧೯: ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೂಲಿ ದರ ಹೆಚ್ಚು ಮಾಡಿದ್ದು, ಗ್ರಾಮೀಣ ಭಾಗದ ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಯೋಜನೆಯ ಸಹಾಯಕ ನಿರ್ದೇಶಕ ಚೇತನ್ ಮನವಿ ಮಾಡಿದರು.
    ಅವರು ತಾಲೂಕಿನ ಅರಕೆರೆ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಉದ್ಯೋಗ ಖಾತ್ರಿ ಯೋಜನೆಯಡಿ ಗಂಡು ಮತ್ತು ಹೆಣ್ಣು ಇಬ್ಬರಿಗೂ ಸಮಾನ ವೇತನ ನೀಡಲಾಗುತ್ತಿದೆ. ಸರ್ಕಾರ ಕೂಲಿ ದರ ಹೆಚ್ಚಳ ಮಾಡಿದ್ದು, ರು.೩೦೯ ನಿಗದಿಪಡಿಸಿದೆ. ಕೂಲಿ ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ. ಬೇಸಿಗೆ ಸಮಯದಲ್ಲಿ ಹೆಚ್ಚಿನ ಉದ್ಯೋಗ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
    ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುರೇಶ್ ಹಾಗು ಸಿಬ್ಬಂದಿಗಳು, ಗ್ರಾಮದ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಏ.೨೨ರಂದು ‘ಬೃಹತ್ ಆರೋಗ್ಯ ಮೇಳ’ ಯಶಸ್ವಿಗೆ ಸಹಕರಿಸಿ

ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ಮನವಿ

ಭದ್ರಾವತಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಏ.೨೨ರಂದು ತಾಲೂಕು ಮಟ್ಟದ  'ಬೃಹತ್ ಆರೋಗ್ಯ ಮೇಳ' ಏರ್ಪಡಿಸಲಾಗಿದ್ದು, ಮೇಳ ಯಶಸ್ವಿಗೊಳಿಸುವ ಸಂಬಂಧ ತಾಲೂಕು ಕಛೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
    ಭದ್ರಾವತಿ, ಏ. ೧೯: ಆರೋಗ್ಯ ಇಲಾಖೆ ವತಿಯಿಂದ ಏ.೨೨ರಂದು ತಾಲೂಕು ಮಟ್ಟದ  'ಬೃಹತ್ ಆರೋಗ್ಯ ಮೇಳ' ಏರ್ಪಡಿಸಲಾಗಿದ್ದು, ಮೇಳ ಯಶಸ್ವಿಗೊಳಿಸುವ ಸಂಬಂಧ ತಾಲೂಕು ಕಛೇರಿ ಸಭಾಂಗಣದಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
    ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್ ಆರ್. ಪ್ರದೀಪ್, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ, ಎಬಿಎಆರ್‌ಕೆ (ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ) ಯೋಜನೆ ಮತ್ತು ಕ್ಷೇಮ ಕೇಂದ್ರಗಳಲ್ಲಿ ದೊರೆಯುವ ಇತರೆ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಆರೋಗ್ಯ ಮೇಳದಲ್ಲಿ ಅರಿವು ಮೂಡಿಸುವ ಅಗತ್ಯವಿದ್ದು, ಈ ಸಂಬಂಧ ಆರೋಗ್ಯ ಇಲಾಖೆ ಗಮನ ಹರಿಸಬೇಕೆಂದರು.
    ಮೇಳದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು, ಆಸನಗಳ ವ್ಯವಸ್ಥೆ ಕಲ್ಪಿಸಿಕೊಡುವ ಜೊತೆಗೆ ಯಾವುದೇ ರೀತಿ ತೊಂದರೆಯಾಗದಂತೆ ಎಚ್ಚರವಹಿಸಬೇಕು. ರೆಡ್‌ಕ್ರಾಸ್, ರೋಟರಿ, ಲಯನ್ಸ್ ಕ್ಲಬ್ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳು ಹಾಗು ಸ್ವಯಂ ಸೇವಕರ ಸಹಕಾರ ಪಡೆದುಕೊಳ್ಳುವಂತೆ ಹಾಗು ತಾಲೂಕಿನಲ್ಲಿ ಕೇಂದ್ರ ಮತ್ತು ರಾಜ್ಯ ಆರೋಗ್ಯ ಯೋಜನೆಗಳ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳ ವಿವರ ಪ್ರದರ್ಶಿಸುವಂತೆ ಸಲಹೆ ನೀಡಿದರು.
    ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಮಾತನಾಡಿ, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಮೇಳ ನಡೆಯಲಿದೆ. ತಪಾಸಣೆಗೆ ಬರುವವರನ್ನು ನೋಂದಣಿ ಮಾಡಿಸಿಕೊಂಡು ಎಬಿಎಆರ್‌ಕೆ ಕಾರ್ಡ್ ಹಾಗೂ ಡಿಜಿಟಲ್ ಹೆಲ್ತ್ ಐಡಿ ಕಾರ್ಡ್ ಗ್ಗೆ ಮಾಹಿತಿಯನ್ನು ನೀಡಲಾಗುವುದು. ಕಾರ್ಡ್ ಇಲ್ಲದವರಿಗೆ ಸ್ಥಳದಲ್ಲಿಯೇ ಕಾರ್ಡ್ ವಿತರಣೆ ಮಾಡಲಾಗುವುದು. ತಜ್ಞವೈದ್ಯರಿಂದ ತಪಾಸಣೆ ನಡೆಸಿ ಲಭ್ಯವಿರುವ ಚಿಕಿತ್ಸೆ ನೀಡಲಾಗುವುದು. ಅಲ್ಲದೆ ಆಪ್ತಸಮಾಲೋಚನೆಗೂ ಅವಕಾಶ ಕಲ್ಪಿಸಲಾಗಿದ್ದು, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಅವಶ್ಯಕವಿರುವ ಎಲ್ಲಾ ಔಷಧಗಳು ಹಾಗೂ ಫಾರ್ಮಸಿಸ್ಟ್, ಪ್ರಯೋಗಶಾಲಾ ತಂತ್ರಜ್ಞರ ಸೇವೆ ಲಭ್ಯವಿದೆ. ಯಾವುದೇ ರೀತಿ ತೊಂದರೆಯಾಗದಂತೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
    ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಮಾತನಾಡಿ, ಮೇಳದಲ್ಲಿ ವೈದ್ಯಕೀಯ ಶಸ್ತ್ರ ಚಿಕಿತ್ಸಕರು, ಪ್ರಸೂತಿ ಮತ್ತು ಸ್ತ್ರೀರೋಗ, ಕೀಲು, ಮೂಳೆ, ಚರ್ಮ ಮತ್ತು ಲೈಂಗಿಕ ರೋಗ, ಇಎನ್‌ಟಿ(ಕಿವಿ, ಮೂಗು ಮತ್ತು ಗಂಟಲು), ನೇತ್ರ, ದಂತ, ಮಾನಸಿಕ ರೋಗ ಮತ್ತು ಆಯುರ್ವೇದ ತಜ್ಞರು ಲಭ್ಯವಿರಲಿದ್ದಾರೆ.  ಹೆಚ್‌ಐವಿ ಆಪ್ತಸಮಾಲೋಚನೆ ಮತ್ತು ಪರೀಕ್ಷೆ, ಹದಿಹರೆಯದವರಿಗೆ ಆಪ್ತಸಮಾಲೋಚನೆ, ಪೌಷ್ಠಿಕ ಆಹಾರ ತಯಾರಿ ಪ್ರಾತ್ಯಕ್ಷತೆ, ಕ್ಷಯ ರೋಗ, ಮಲೇರಿಯಾ, ಹಿಮೋಗ್ಲೋಬಿನ್ ಪರೀಕ್ಷೆಗಳು ಮತ್ತು ಆರೋಗ್ಯ ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.  
        ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಿಶು ಅಭಿವೃದ್ದಿ ಯೋಜನೆ ಅಧಿಕಾರಿ ರಾಘವೇಂದ್ರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಿನಾಥ್, ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಾಜೇಶ್ವರಿ, ವೈದ್ಯರಾದ ಡಾ. ಹೇಮಲತಾ, ಡಾ. ರವಿಶಂಕರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಆನಂದ ಮೂರ್ತಿ, ಸುಂದರ್ ಬಾಬು ಸೇರಿದಂತೆ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.  

ಜಿಲ್ಲಾ ಯುವ ಜನತಾದಳ ಅಧ್ಯಕ್ಷರಾಗಿ ಮಧುಕುಮಾರ್ ನೇಮಕ

ಮಧುಕುಮಾರ್
    ಭದ್ರಾವತಿ, ಏ. ೧೯: ಶಿವಮೊಗ್ಗ ಜಿಲ್ಲಾ ಯುವ ಜನತಾದಳ(ಜಾತ್ಯಾತೀತ) ಅಧ್ಯಕ್ಷರಾಗಿ ಕಾಗದನಗರದ ನಿವಾಸಿ, ಯುವ ಮುಖಂಡ ಮಧುಕುಮಾರ್ ನೇಮಕಗೊಂಡಿದ್ದಾರೆ. 
ಸುಮಾರು ೨೨ ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಧುಕುಮಾರ್‌ರವರು ಪ್ರಸ್ತುತ ಯುವ ಜನತಾದಳ(ಜಾತ್ಯಾತೀತ) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಜಿಲ್ಲೆಯಲ್ಲಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸಲು ಯುವ ಸಮುದಾಯದ ಅಗತ್ಯತೆ ಮನಗಂಡು ಇವರನ್ನು ಜಿಲ್ಲಾಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ. 
ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷದ ಯುವ ಮುಖಂಡರು ಹಾಗು ಕಾರ್ಯಕರ್ತರು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿ ಬಲವರ್ಧನೆಗೊಳಿಸುವಂತೆ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆದೇಶ ಪತ್ರದಲ್ಲಿ ಸೂಚಿಸಿದ್ದಾರೆ.  
ಮಧುಕುಮಾರ್ ನಗರಸಭೆ ಹಿರಿಯ ಸದಸ್ಯೆ ವಿಜಯರವರ ಪುತ್ರರಾಗಿದ್ದಾರೆ. ಶಿವಮೊಗ್ಗ ಜಿಲ್ಲಾ ಯುವ ಜನತಾದಳ(ಜಾತ್ಯಾತೀತ) ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಧುಕುಮಾರ್‌ರವರಿಗೆ ಸಹೋದರ ಅಶೋಕ್‌ಕುಮಾರ್, ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ಮಾಜಿ ಶಾಸಕಿ ಶಾರದ ಪೂರ್‍ಯಾನಾಯ್ಕ, ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಯುವ ಘಟಕದ ತಾಲೂಕು ಅಧ್ಯಕ್ಷ ಎಂ.ಎ ಅಜಿತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್,  ಸೇರಿದಂತೆ ಇನ್ನಿತರರು ಅಭಿನಂದನೆ ಸಲ್ಲಿಸಿದ್ದಾರೆ. 
ಜಿಲ್ಲಾಧ್ಯಕ್ಷರಾಗಿ ನೇಮಕಗೊಳ್ಳಲು ಕಾರಣಕರ್ತರಾದ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರಿಗೆ ಮಧುಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.