ತಾಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಅಭಿನಂದನೆ
![](https://blogger.googleusercontent.com/img/a/AVvXsEih-siRxhMxeeWqhk5U8j7B-4YLI3obsqA4K40GfBktUt048BVdoqLRDXWpPUPavNAyXOAiS2soKX0SIshKiP1frwzUZDHDxG_WLS4OmaizXDE9kkS5Lw586DplNFKdX9F72PRORZOK0ILFwPXC0rHHDxardTle5s3mKTaFOvHRV-71gqpVxfHQ-D4Lsg=w400-h304-rw)
ಭದ್ರಾವತಿ, ಏ. ೨೫: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ಹಾಗು ಉದರ ದರ್ಶಕ ಹಿರಿಯ ತಜ್ಞ ವೈದ್ಯರಾಗಿರುವ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಡಾ. ಡಿ.ಎಸ್ ಶಿವಪ್ರಕಾಶ್‌ರವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.
ಭದ್ರಾವತಿ, ಏ. ೨೫: ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ಹಾಗು ಉದರ ದರ್ಶಕ ಹಿರಿಯ ತಜ್ಞ ವೈದ್ಯರಾಗಿರುವ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಡಾ. ಡಿ.ಎಸ್ ಶಿವಪ್ರಕಾಶ್‌ರವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.
ಮೂಲತಃ ಸೊರಬ ತಾಲೂಕಿನವರಾದ ಶಿವಪ್ರಕಾಶ್‌ರವರು ೧೯೯೭ರಲ್ಲಿ ವೈದ್ಯ ವೃತ್ತಿ ಆರಂಭಿಸಿದ್ದು, ಶಿಕಾರಿಪುರದ ಕಪ್ಪನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು ೮ ವರ್ಷ, ತೀರ್ಥಹಳ್ಳಿ ಜೆ.ಸಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಸುಮಾರು ೧೦ ವರ್ಷ ಹಾಗು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಸುಮಾರು ೨ ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಅಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದುವರೆಗೂ ಸುಮಾರು ೧೦ ಸಾವಿರಕ್ಕೂ ಅಧಿಕ ಶಸ್ತ್ರ ಚಿಕಿತ್ಸೆ, ೫೦೦೦ಕ್ಕೂ ಹೆಚ್ಚು ಉದರ ದರ್ಶಕ ಶಸ್ತ್ರ ಚಿಕಿತ್ಸೆ ಹಾಗು ೨೦೦ಕ್ಕೂ ಹೆಚ್ಚು ಎನ್‌ವಿಎಸ್ ಶಸ್ತ್ರ ಚಿಕಿತ್ಸೆ ನೆರವೇರಿಸಿರುವುದು ಇವರ ವೈದ್ಯ ವೃತ್ತಿಯ ಸಾಧನೆಯಾಗಿದ್ದು, ವೈದ್ಯ ವೃತ್ತಿಯ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ. ಇವರಿಗೆ ೨೦೧೭-೧೮ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಸಹ ಲಭಿಸಿದೆ. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ತಾಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಶಿವಪ್ರಕಾಶ್‌ರವರ ವೃತ್ತಿ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್, ತಹಸೀಲ್ದಾರ್ ಆರ್. ಪ್ರದೀಪ್, ತಾ.ಪಂ. ಇ.ಓ ರಮೇಶ್, ನಗರಸಭೆ ಹಾಗು ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಹಿರಿಯ ವೈದ್ಯರಾದ ಡಾ. ಗುಡದಪ್ಪ ಕಸಬಿ, ಡಾ. ಶಂಕರಪ್ಪ, ಡಾ. ಓ. ಮಲ್ಲಪ್ಪ ಹಾಗು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.