ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಸಮಿತಿ ವತಿಯಿಂದ ಭದ್ರಾವತಿ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಹಾನ್ ಚೇತನ ಡಾ.ಬಿ.ಆರ್ ಅಂಬೇಡ್ಕರ್‌ರವರ ೧೩೧ನೇ ಜನ್ಮದಿನ 'ಸಾಮಾಜಿಕ ನ್ಯಾಯದ ದಿನ' ಕಾರ್ಯಕ್ರಮದಲ್ಲಿ ಉದ್ಯಮಿ ಬಿ.ಕೆ ಜಗನ್ನಾಥ ಹಾಗು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಮೇ. ೧೦: ಮಹಾಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್‌ರವರು ರಚಿಸಿರುವ ಸಂವಿಧಾನವನ್ನು ಎಲ್ಲರೂ ಅರ್ಥ ಮಾಡಿಕೊಳ್ಳುವ ಜೊತೆಗೆ ಅದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಉದ್ಯಮಿ ಬಿ.ಕೆ ಜಗನ್ನಾಥ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಸಮಿತಿ ವತಿಯಿಂದ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಹಾನ್ ಚೇತನ ಡಾ.ಬಿ.ಆರ್ ಅಂಬೇಡ್ಕರ್‌ರವರ ೧೩೧ನೇ ಜನ್ಮದಿನ 'ಸಾಮಾಜಿಕ ನ್ಯಾಯದ ದಿನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾಮಾನವತಾವಾದಿಗಳಾದ ಗೌತಮ ಬುದ್ಧ, ಬಸವಣ್ಣ ಹಾಗು ಅಂಬೇಡ್ಕರ್‌ರವರು ಎಲ್ಲರೂ ಸಮಾನವಾಗಿ ಬದುಕುವಂತಹ ಚಿಂತನೆಗಳೊಂದಿಗೆ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಅವರ ಆದರ್ಶಗಳು, ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ. ಸಂವಿಧಾನದ ಆಶಯಗಳನ್ನು ಅರಿತು ಅದರ ಸದ್ಬಳಕೆ ಮಾಡಿಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕಗೊಳ್ಳುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಗೌತಮ ಬುದ್ಧ, ಬಸವಣ್ಣ ಹಾಗು ಅಂಬೇಡ್ಕರ್‌ರವರು ಸಮಾನತೆ ಪ್ರತಿಪಾದಿಸಿದ ಮಹಾನ್ ಆದರ್ಶ ವ್ಯಕ್ತಿಗಳಾಗಿದ್ದಾರೆ. ಅದರಲ್ಲೂ ಅಂಬೇಡ್ಕರ್‌ರವರು ಶ್ರೇಷ್ಠವಾದ ಸಂವಿಧಾನ ರಚಿಸುವ ಮೂಲಕ ಪರಸ್ಪರ ನಡುವೆ ಸಮಾನತೆ, ಸೌಹಾರ್ದತೆ ವಾತಾವರಣದೊಂದಿಗೆ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದಾರೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಇವರ ಆದರ್ಶ ಚಿಂತನೆಗಳನ್ನು ಮೈಗೊಡಿಸಿಕೊಂಡು ಮುನ್ನಡೆಯಬೇಕೆಂದರು.
ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ಅಧ್ಯಕ್ಷ ಎಚ್. ರಾಚಪ್ಪ ಉಪನ್ಯಾಸ ನಡೆಸಿಕೊಟ್ಟರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ತಾಲೂಕು ಬಂಜಾರ ಯುವ ವೇದಿಕೆ ಅಧ್ಯಕ್ಷ ಕೃಷ್ಣನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಪ್ರಧಾನ ಸಂಚಾಲಕ ಎಂ. ಕುಬೇಂದ್ರಪ್ಪ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಡಿಎಸ್‌ಎಸ್ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಮಕ್ಕಳಿಂದ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದಕ್ಕೂ ಮೊದಲು ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಸಮಿತಿ ವತಿಯಿಂದ ಭದ್ರಾವತಿ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಹಾನ್ ಚೇತನ ಡಾ.ಬಿ.ಆರ್ ಅಂಬೇಡ್ಕರ್‌ರವರ ೧೩೧ನೇ ಜನ್ಮದಿನ 'ಸಾಮಾಜಿಕ ನ್ಯಾಯದ ದಿನ' ಕಾರ್ಯಕ್ರಮ ಉದ್ಯಮಿ ಬಿ.ಕೆ ಜಗನ್ನಾಥ ಉದ್ಘಾಟಿಸಿದರು.