Tuesday, May 10, 2022

ರಾಜ್ಯದ ಭವಿಷ್ಯದ ರಾಜಕಾರಣದಲ್ಲಿ ಉತ್ತರ ಪ್ರದೇಶದಂತಹ ಮುಖ್ಯಮಂತ್ರಿ ನೋಡುವ ಬಯಕೆ : ಪವಿತ್ರ ರಾಮಯ್ಯ

ಭದ್ರಾವತಿಯಲ್ಲಿ ಮಂಗಳವಾರ ಬಿಜೆಪಿ ಮಂಡಲ ರೈತ ಮೋರ್ಚಾ ವತಿಯಿಂದ ಕಾರ್ಯಕಾರಿಣಿ ಹಾಗು ರೈತ ಪ್ರಭಾರಿಗಳ ಮೊದಲ ಸಭೆ ನಡೆಯಿತು.  
    ಭದ್ರಾವತಿ, ಮೇ. ೧೦:  ಪ್ರಸ್ತುತ ಉತ್ತರ ಪ್ರದೇಶದ ಮುಖ್ಯಮಂತ್ರಿ ದೇಶಕ್ಕೆ ಮಾದರಿಯಾಗಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ರಾಜ್ಯದ ಭವಿಷ್ಯದ ರಾಜಕಾರಣದಲ್ಲಿ ಕಾಣುವ ಅಗತ್ಯತೆ ಇದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಕಾಡಾ) ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.
    ಅವರು ಮಂಗಳವಾರ ನಗರದಲ್ಲಿ ಬಿಜೆಪಿ ಮಂಡಲ ರೈತ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕಾರಿಣಿ ಹಾಗು ರೈತ ಪ್ರಭಾರಿಗಳ ಮೊದಲ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ನಾನು ಸಾಯುವ ಮೊದಲು ಉತ್ತರ ಪ್ರದೇಶ ಮಾದರಿಯ ಮುಖ್ಯಮಂತ್ರಿಯನ್ನು ರಾಜ್ಯದಲ್ಲಿ ನೋಡಬೇಕೆಂಬ ಬಯಕೆ ಹೊಂದಿದ್ದೇನೆ. ಇಂತಹ ಮುಖ್ಯಮಂತ್ರಿಯಿಂದ ಮಾತ್ರ ಅಭಿವೃದ್ಧಿ ಕಾರ್ಯ ನಿರೀಕ್ಷಿಸಲು ಸಾಧ್ಯ ಎಂದರು.
    ಈ ಹಿಂದೆ ನಾನು ಬಹಳಷ್ಟು ಹೋರಾಟ ನಡೆಸಿದ ಪರಿಣಾಮ ಕಾಡಾ ಅಧ್ಯಕ್ಷರಾಗಲು ಸಾಧ್ಯವಾಯಿತು. ಪ್ರಸ್ತುತ ರೈತರಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ನೀರು ತಲುಪಿಸುವಲ್ಲಿ ಯಶಸ್ವಿಯಾಗಿದ್ದೇನೆ. ಲಭ್ಯವಿರುವ ಅನುದಾನದಲ್ಲಿಯೇ ರೈತರ ಜಮೀನುಗಳಿಗೆ ರಸ್ತೆ, ಸೇತುವೆಗಳ ನಿರ್ಮಾಣ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಮಂಡಳಿಗೆ ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ ಎಂದರು.
    ರೈತರು ಇನ್ನೂ ಹೆಚ್ಚಿನ ರೀತಿಯಲ್ಲಿ ಜಾಗೃತರಾಗುವ ಅಗತ್ಯವಿದೆ. ಬೇಡಿಕೆಗಳ ಈಡೇರಿಕೆಗೆ ನಿರಂತರವಾಗಿ ಹೋರಾಟ ನಡೆಸಬೇಕಾಗಿದೆ. ಇಲ್ಲವಾದಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದರು.
    ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸಿ. ಮಂಜುಳ, ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ನಿರ್ದೇಶಕ ಕೂಡ್ಲಿಗೆರೆ ಹಾಲೇಶ್, ಪಕ್ಷದ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ರೈತ ಮೋರ್ಚಾ ಅಧ್ಯಕ್ಷ ನಾಗರಾಜ ಅಂಬೋರೆ, ಕಾರ್ಯದರ್ಶಿಗಳಾದ ವಿನ್ಸೆಂಟ್, ಹಾಲೇಶಪ್ಪ, ರವೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಮಂಡಿನಕೊಪ್ಪ ಗಂಗಾಧರ್, ಚಂದ್ರಪ್ಪ, ನರಸಿಂಹಚಾರ್, ಮಂಜುನಾಥ್, ನಗರಸಭಾ ಸದಸ್ಯೆ ಶಶಿಕಲಾ ನಾರಾಯಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment