Tuesday, May 10, 2022

ವಿವಿಧ ಮಾಲಿನ್ಯ ತಡೆಗಟ್ಟುವ ಜೊತೆಗೆ ಸ್ವಚ್ಛತೆಯೊಂದಿಗೆ ಸುಂದರ ಪರಿಸರ ನಿರ್ಮಿಸಿ : ನಗರಸಭೆ ಪೌರಾಯುಕ್ತರಿಗೆ ಮನವಿ

ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಮಾಲಿನ್ಯ ತಡೆಗಟ್ಟುವ ಜೊತೆಗೆ ಸ್ವಚ್ಛತೆಯೊಂದಿಗೆ ಸುಂದರ ಪರಿಸರ ನಿರ್ಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ನಗರಸಭೆ ಪೌರಾಯುಕ್ತ ಕೆ. ಪರಮೇಶ್‌ರವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮೇ. ೧೦: ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಮಾಲಿನ್ಯ ತಡೆಗಟ್ಟುವ ಜೊತೆಗೆ ಸ್ವಚ್ಛತೆಯೊಂದಿಗೆ ಸುಂದರ ಪರಿಸರ ನಿರ್ಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ನಗರಸಭೆ ಪೌರಾಯುಕ್ತ ಕೆ. ಪರಮೇಶ್‌ರವರಿಗೆ ಮನವಿ ಸಲ್ಲಿಸಲಾಯಿತು.
    ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಲ್ಲಿಬೇಕೆಂದರಲ್ಲಿ ಎಸೆಯುವುದು, ರಸ್ತೆ ಬದಿಯಲ್ಲಿ ತಂದು ಸುರಿಯುವುದನ್ನು ತಡೆಯುವುದು. ರಸ್ತೆ ಬದಿಗಳಲ್ಲಿ ಒಂದೆಡೆ ತ್ಯಾಜ್ಯ ಹಾಕಲು ಸೂಕ್ತ ವ್ಯವಸ್ಥೆ ಕಲ್ಪಿಸುವುದು. ಅಂಗಡಿಮುಂಗಟ್ಟುಗಳ ಬಳಿ ಕಡ್ಡಾಯವಾಗಿ ತ್ಯಾಜ್ಯ ಒಂದೆಡೆ ಸಂಗ್ರಹಿಸಿಟ್ಟು ಕೊಂಡು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವುದು.
    ನಗರದ ಪ್ರಮುಖ ರಸ್ತೆಗಳಲ್ಲಿ ಧೂಳು ಉಂಟಾಗದಂತೆ ಎಚ್ಚರ ವಹಿಸುವುದು. ಆಗಾಗ ಸಿಮೆಂಟ್ ಹಾಗು ಡಾಂಬರ್ ರಸ್ತೆಗಳನ್ನು ಸ್ವಚ್ಛಗೊಳಿಸಿ ರಸ್ತೆಗಳ ಬದಿಗಳಲ್ಲಿ ಮಣ್ಣು ಸಂಗ್ರಹಗೊಳ್ಳದಂತೆ ನೋಡಿಕೊಳ್ಳುವುದು. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿಬೇಕೆಂದರಲ್ಲಿ ಉಗುಳುವುದನ್ನು ತಡೆಯುವುದು. ಈ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಫಲಕಗಳನ್ನು ಅಳವಡಿಸುವುದು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಮಾಡುವುದನ್ನು ನಿಯಂತ್ರಿಸುವುದು. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವುದು. ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಹಸಿರು ಕಣ್ಮರೆಯಾಗಿದ್ದು, ಈ ಹಿನ್ನಲೆಯಲ್ಲಿ ಮಳೆಗಾಲ ಆರಂಭದಲ್ಲಿ ರಸ್ತೆಯ ಎರಡು ಬದಿಗಳಲ್ಲಿ ಸಸಿಗಳನ್ನು ನೆಡುವ ಕಾರ್ಯ ಕೈಗೊಳ್ಳುವುದು. ಪ್ರತಿಯೊಬ್ಬರು ಸಸಿಗಳನ್ನು ಬೆಳೆಸಲು ಪ್ರೋತ್ಸಾಹಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗಿದೆ.
    ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಗಣೇಶ್‌ರಾವ್, ರಾಮನಾಥ್ ಬರ್ಗೆ, ವೈದ್ಯರಾದ ಡಾ. ಶಿವಪ್ರಕಾಶ್, ವಿನೀತ್ ಆನಂದ್, ಕಸಾಪ ಮಾಜಿ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಮಾಜಿ ಉಪಾಧ್ಯಕ್ಷ ಡಾ. ಬಿ.ಎಂ ನಾಸಿರ್‌ಖಾನ್, ಅಧ್ಯಾಪಕ ಅರಳೇಹಳ್ಳಿ ಅಣ್ಣಪ್ಪ, ದೈಹಿಕ ಶಿಕ್ಷಕಿ ಬನಶಂಕರಮ್ಮ, ಮಾರುತಿ ರಾಜ್, ಗಾಯಕ ಚರಣ್, ಕಲಾವಿದ ಆರ್. ವಿಶ್ವನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment