Friday, May 13, 2022

ಖಬರ್‌ಸ್ಥಾನದಲ್ಲಿ ರು. ೬ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಪ್ಲಾಟ್ ಫಾರಂ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಭದ್ರಾವತಿ ನಗರಸಭೆ ವಾರ್ಡ್ ೨೩ರ ತಿಮ್ಲಾಪುರ ರಸ್ತೆಯಲ್ಲಿರುವ ಖಬರ್‌ಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಸುಮಾರು ರು. ೬ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಪ್ಲಾಟ್ ಫಾರಂ ನಿರ್ಮಾಣಕ್ಕೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
    ಭದ್ರಾವತಿ, ಮೇ. ೧೩: ನಗರಸಭೆ ವಾರ್ಡ್ ೨೩ರ ತಿಮ್ಲಾಪುರ ರಸ್ತೆಯಲ್ಲಿರುವ ಖಬರ್‌ಸ್ಥಾನದಲ್ಲಿ ಪ್ರಾರ್ಥನೆ ಮಾಡಲು ಸುಮಾರು ರು. ೬ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಪ್ಲಾಟ್ ಫಾರಂ ನಿರ್ಮಾಣಕ್ಕೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
    ಕಾಗದನಗರ, ಜೆಪಿಎಸ್ ಕಾಲೋನಿ, ಉಜ್ಜನಿಪುರ, ಬುಳ್ಳಾಪುರ ಹಾಗು ತಿಮ್ಲಾಪುರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಮುಸ್ಲಿಂ ಸಮುದಾಯವರಿಗೆ ಈ ಖಬರ್‌ಸ್ಥಾನ ಹೆಚ್ಚು ಅವಶ್ಯಕವಾಗಿದೆ. ಖಬರ್‌ಸ್ಥಾನವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿಕೊಂಡು ಬರಲಾಗುತ್ತಿದೆ.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಬಿ.ಕೆ ಮೋಹನ್, ಪ್ರೇಮಾ ಬದರಿನಾರಾಯಣ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಉಪಾಧ್ಯಕ್ಷ ಎಚ್. ನಾಗರಾಜ್, ಮುಸ್ಲಿಂ ಸಮುದಾಯದ ಪ್ರಮುಖರಾದ ಜಹೀರ್ ಜಾನ್, ಅಮೀರ್ ಜಾನ್, ಜೆಬಿಟಿ ಬಾಬು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಸಂತ ಜೋಸೆಫರ ದೇವಾಲಯಕ್ಕೆ ಶಾಂತಕುಮಾರ್ ಕೆನಡಿ ಭೇಟಿ

ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ : ಸನ್ಮಾನ

ಭದ್ರಾವತಿ ಕಾಗದನಗರದ ಸಂತ ಜೋಸೆಫರ ದೇವಾಲಯಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ ಶಾಂತಕುಮಾರ್ ಕೆನಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮೇ. ೧೩: ಕಾಗದನಗರದ ಸಂತ ಜೋಸೆಫರ ದೇವಾಲಯಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ಮಂಡಳಿ ರಾಜ್ಯಾಧ್ಯಕ್ಷ ಶಾಂತಕುಮಾರ್ ಕೆನಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಈ ಸಂದರ್ಭದಲ್ಲಿ ಮಾತನಾಡಿದ ಶಾಂತಕುಮಾರ್, ಕ್ರೈಸ್ತರಿಗೆ ಮಂಡಳಿ ವತಿಯಿಂದ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇವುಗಳ ಕುರಿತು ತಿಳಿದುಕೊಳ್ಳುವ ಜೊತೆಗೆ ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಕ್ರೈಸ್ತರ ಅಭಿವೃದ್ಧಿಗೆ ಬದ್ಧವಾಗಿದ್ದು, ಯಾವುದೇ ರೀತಿ ಗೊಂದಲಕ್ಕೆ ಒಳಗಾಗದಿರುವಂತೆ ಮನವಿ ಮಾಡಿದರು.
    ಮಂಡಳಿ ಮಾಜಿ ಸದಸ್ಯ ವಿನ್ಸೆಂಟ್ ರೋಡಿಗ್ರಸ್, ದೇವಾಲಯದ ಧರ್ಮಗುರು ಫಾದರ್ ಡಾಮಿನಿಕ್ ಕ್ರಿಸ್ತುರಾಜ್, ಉಜ್ಜನಿಪುರ ಡಾನ್ ಬೋಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ಆರೋಗ್ಯ ರಾಜ್ ಮತ್ತು ದೇವಾಲಯ ಕಾರ್ಯದರ್ಶಿ ಸೆಲ್ವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಮೇ.೧೬ರಂದು ಸಾಮೂಹಿಕ ವಿವಾಹ

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಕ್ಕುಂದ ಗ್ರಾಮದ ಶ್ರೀ ಗುಡ್ಡದ ಕೆಂಚಮ್ಮ ಹಾಗು ಮಾತಂಗಮ್ಮ ಗವಿಸಿದ್ದೇಶ್ವರ ದೇವಸ್ಥಾನ.
    ಭದ್ರಾವತಿ, ಮೇ. ೧೩: ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಕ್ಕುಂದ ಗ್ರಾಮದ ಶ್ರೀ ಗುಡ್ಡದ ಕೆಂಚಮ್ಮ ಹಾಗು ಮಾತಂಗಮ್ಮ ಗವಿಸಿದ್ದೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಮೇ.೧೬ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಅಂದು ಬೆಳಿಗ್ಗೆ ೯.೫೦ ರಿಂದ ೧೦.೫೦ರವರೆಗೆ ಸಾಮೂಹಿಕ ವಿವಾಹ ನಡೆಯಲಿದ್ದು, ಅಲ್ಲದೆ ಶ್ರೀ ದೇವಿಯವರ ೧೦೧ ಎಡೆ ಹಾಗು ಚಂಡಿಕಾ ಹೋಮ ಕಾರ್ಯಕ್ರಮ ನಡೆಯಲಿದೆ.
    ಇದಕ್ಕೂ ಮೊದಲು ಬೆಳಿಗ್ಗೆ ೮ ಗಂಟೆಗೆ ಉಕ್ಕುಂದ ಗ್ರಾಮ ಒಳಗೊಂಡಂತೆ ಸುತ್ತಮುತ್ತಲಿನ ಗ್ರಾಮಗಳ ದೇವಾನು ದೇವತೆಗಳ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.


ದಿಂಡಿ ಉತ್ಸವ : ಅದ್ದೂರಿಯಾಗಿ ಜರುಗಿದ ರಾಜಬೀದಿ ಉತ್ಸವ

ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ಭದ್ರಾವತಿ ಭೂತನಗುಡಿಯಲ್ಲಿರುವ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ೩ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಿಂಡಿ ಉತ್ಸವ ಅಂಗವಾಗಿ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆ ರಾಜಬೀದಿ ಉತ್ಸವ ನಡೆಯಿತು.
    ಭದ್ರಾವತಿ, ಮೇ. ೧೩: ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ನಗರದ ಭೂತನಗುಡಿಯಲ್ಲಿರುವ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ೩ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಿಂಡಿ ಉತ್ಸವ ಅಂಗವಾಗಿ ಕೊನೆಯ ದಿನವಾದ ಶುಕ್ರವಾರ ಬೆಳಿಗ್ಗೆ ರಾಜಬೀದಿ ಉತ್ಸವ ನಡೆಯಿತು.
    ನಗರದ ಬಿ.ಎಚ್ ರಸ್ತೆ, ಸಿ.ಎನ್ ರಸ್ತೆ, ತರಕೆರೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಅಲಂಕೃತಗೊಂಡ ರಥದಲ್ಲಿ ಕೃಷ್ಣ ರುಕ್ಮಿಣಿ ಮೂರ್ತಿಗಳ ಉತ್ಸವ ಮೆರವಣಿಗೆ ನಡೆಯಿತು.
    ಉತ್ಸವದಲ್ಲಿ ಭಾವಸಾರ ಕ್ಷತ್ರೀಯ ಸಮಾಜದವರು ಭಜನೆ, ಕೀರ್ತನೆಗಳೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
.    ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು, ಜನಪ್ರತಿನಿಧಿಗಳು ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರರಾವ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.



Thursday, May 12, 2022

ಉಡುಪಿ ಮದಗ ಅತ್ರಾಡಿ ಜೋಡಿ ಕೊಲೆ ಪ್ರಕರಣ : ಓರ್ವನ ಬಂಧನ

ಉಡುಪಿ ಮದಗ ಅತ್ರಾಡಿಯಲ್ಲಿ ಕೊಲೆಯಾಗಿರುವ ಚೆಲುವಿ ಹಾಗು ಈಕೆಯ ಮಗಳು ಪ್ರಿಯಾ.
    ಭದ್ರಾವತಿ, ಮೇ. ೧೨: ತಾಯಿ-ಮಗಳು ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಹಿರಿಯಡ್ಕ ಪೊಲೀಸರು ಇಲ್ಲಿನ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ವ್ಯಕ್ತಿಯೋರ್ವನನ್ನು ಬಂಧಿಸಿರುವುದು ತಿಳಿದು ಬಂದಿದೆ.
    ಉಡುಪಿ ತಾಲೂಕಿನ ಮದಗ ಅತ್ರಾಡಿ ಗ್ರಾಮದಲ್ಲಿ ಚೆಲುವಿ ಎಂಬ ಗೃಹಿಣಿ ಹಾಗು ಈಕೆಯ ೧೦ ವರ್ಷದ ಮಗಳು ಪ್ರಿಯಾಳನ್ನು ಕೊಲೆ ಮಾಡಿರುವ ಘಟನೆ ನಡೆದಿದ್ದು,  ಈ ಸಂಬಂಧ ದೇವಿ ಎಂಬುವರು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
    ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಪ್ರಕರಣ ಭೇದಿಸಿದ್ದು, ಕೊಲೆಯಾದ ಚೆಲುವಿಯ ಸಂಬಂಧಿ ಬೊಮ್ಮನಕಟ್ಟೆ ನಿವಾಸಿ ಹರೀಶ್ ಅಲಿಯಾಸ್ ಗಣೇಶ್ ಎಂಬಾತನನ್ನು ಬಂದಿಸಿ ಕರೆದೊಯ್ದಿದ್ದಾರೆ ಎನ್ನಲಾಗಿದೆ.
    ಘಟನೆ ವಿವರ:
    ಚೆಲುವಿ ಸುಮಾರು ೧೫ ವರ್ಷದ ಹಿಂದೆ ಸುಬ್ರಮಣ್ಯ ಎಂಬಾತನೊಂದಿಗೆ ಮದುವೆಯಾಗಿದ್ದು, ಈ ಸಂದರ್ಭದಲ್ಲಿ ಚೆಲುವಿ ಮಣಿಪಾಲದ ಎಣ್ಣೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಗ ರಶೀದ್ ಎಂ ವ್ಯಕ್ತಿ ಪರಿಚಯವಾಗಿದೆ. ನಂತರದ ದಿನಗಳಲ್ಲಿ ಚೆಲುವಿ ಗಂಡನನ್ನು ಬಿಟ್ಟು ರಶೀದ್‌ನೊಂದಿಗೆ ಮುಂಬೈಗೆ ತೆರಳಿದ್ದು, ಅಲ್ಲಿ ಸುಮಾರು ೨ ವರ್ಷವಿದ್ದು, ಪುನಃ ಹಿಂದಿರುಗಿ ಕಾರ್ಕಳದಲ್ಲಿ ರಶೀದ್‌ನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಈ ವೇಳೆ ಈಕೆಗೆ ಪ್ರೀತಿಮ್ ಮತ್ತು ಪ್ರಿಯಾ ಎಂಬ ಇಬ್ಬರು ಮಕ್ಕಳು ಜನಿಸಿದ್ದಾರೆ. ನಂತರದ ದಿನಗಳಲ್ಲಿ ಚೆಲುವಿ ರಶೀದ್‌ನನ್ನು ಸಹ ಬಿಟ್ಟು ತನ್ನ ತಾಯಿ ಮನೆ ಮದಗ ಅತ್ರಾಡಿ ಗ್ರಾಮಕ್ಕೆ ಬಂದು ನೆಲೆಸಿದ್ದು, ಈ ನಡುವೆ ಸಂಬಂಧಿ ಹರೀಶ್ ಈಕೆಯ ಮನೆಗೆ ಬಂದು ಹೋಗುತ್ತಿದ್ದು, ಮದುವೆಯಾಗುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ. ಈ ನಡುವೆ ಇಬ್ಬರ ನಡುವೆ ಜಗಳ ಉಂಟಾಗಿ ತಾಯಿ ಮತ್ತು ಮಗಳ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ.

ಉದ್ಯಮಿ, ಸಮಾಜ ಸೇವಕ ಆನಂದ್ ಎಎಪಿ ಪಕ್ಷಕ್ಕೆ ಸೇರ್ಪಡೆ

ಭದ್ರಾವತಿ ನಗರದ ಉದ್ಯಮಿ, ಸಮಾಜ ಸೇವಕ ಮಾರುತಿ ಮೆಡಿಕಲ್ ಆನಂದ್‌ರವರು ಆಮ್ ಆದ್ಮಿ ಪಾರ್ಟಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
    ಭದ್ರಾವತಿ, ಮೇ. ೧೨: ನಗರದ ಉದ್ಯಮಿ, ಸಮಾಜ ಸೇವಕ ಮಾರುತಿ ಮೆಡಿಕಲ್ ಆನಂದ್‌ರವರು ಆಮ್ ಆದ್ಮಿ ಪಾರ್ಟಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
    ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ರಾಜ್ಯ ಕಾರ್ಯದರ್ಶಿ ದರ್ಶನ್ ಜೈನ್ ಹಾಗು ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಸಮ್ಮುಖದಲ್ಲಿ ಆನಂದ್ ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
    ಆನಂದ್‌ರವರು ಈ ಹಿಂದೆ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಸ್ಪರ್ಧೆಗೆ ಅವಕಾಶ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಿದ್ದಾರೆ.
    ಕಳೆದ ಸುಮಾರು ೨ ವರ್ಷಗಳ ಹಿಂದೆ ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲಿ ತಾಲೂಕಿನ ಸುಮಾರು ೧೦ ಸಾವಿರ ಕಡು ಬಡವರಿಗೆ ಉಚಿತವಾಗಿ ದಿನಸಿ ಸಾಮಾಗ್ರಿಗಳನ್ನು ವಿತರಿಸಿದ್ದರು.  
    ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ಪ್ರಮುಖರಾದ ಡಿ.ಎಂ ಚಂದ್ರಪ್ಪ, ಪರಮೇಶ್ವರಚಾರ್, ಎ. ಮಸ್ತಾನ್, ಜೋಸೆಫ್, ರಮೇಶ್, ರೇಷ್ಮಬಾನು, ಜಾವಿದ್, ಎನ್.ಪಿ ಜೋಸೆಫ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದಿಂಡಿ ಉತ್ಸವ : ಮೇ.೧೩ರಂದು ರಾಜಬೀದಿ ಉತ್ಸವ

    ಭದ್ರಾವತಿ, ಮೇ. ೧೨: ಭಾವಸಾರ ಕ್ಷತ್ರೀಯ ಸಮಾಜದ ವತಿಯಿಂದ ನಗರದ ಭೂತನಗುಡಿಯಲ್ಲಿರುವ ಕೃಷ್ಣ ರುಕ್ಮಿಣಿ ದೇವಸ್ಥಾನದಲ್ಲಿ ೩ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಿಂಡಿ ಉತ್ಸವ ಅಂಗವಾಗಿ ಮೇ.೧೩ರಂದು ರಾಜಬೀದಿ ಉತ್ಸವ ನಡೆಯಲಿದೆ.
    ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧೨.೩೦ರ ವರೆಗೆ ರಾಜಬೀದಿ ಉತ್ಸವ ನಡೆಯಲಿದ್ದು, ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.
    ಉತ್ಸವದ ಅಂಗವಾಗಿ ಮೊದಲ ದಿನ ಪೋತಿ ಸ್ಥಾಪನೆ ನೆರವೇರಿಸಲಾಗಿದ್ದು, ಗುರುವಾರ ಜಾಗರಣೆ ನಡೆಯಿತು. ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಗಣ್ಯರು, ಜನಪ್ರತಿನಿಧಿಗಳು ದಿಂಡಿ ಉತ್ಸವದಲ್ಲಿ ಪಾಲ್ಗೊಂಡು ಭಾವಸಾರ ಕ್ಷತ್ರೀಯ ಸಮಾಜದವರೊಂದಿಗೆ ಸಂಭ್ರಮ ಹಂಚಿಕೊಳ್ಳುತ್ತಿದ್ದು, ಶುಕ್ರವಾರ ನಡೆಯಲಿರುವ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರರಾವ್ ಕೋರಿದ್ದಾರೆ.