ಭಾನುವಾರ, ಮೇ 22, 2022

ಉಕ್ಕು ಪ್ರಾಧಿಕಾರ ವಿಐಎಸ್‌ಎಲ್‌ಗೆ ಬಂಡವಾಳ ತೊಡಗಿಸುವಂತೆ ಮಾಡಲು ಸಹಕಾರ ನೀಡಿ :

ಕಾರ್ಮಿಕ ಸಂಘದಿಂದ ಸಂಸದರಿಗೆ ಮನವಿ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪ್ರಸ್ತುತ ಲಾಭದತ್ತ ಸಾಗುತ್ತಿದ್ದು, ಇದೀಗ ಬಂಡವಾಳ ತೊಡಗಿಸುವ ಅಗತ್ಯತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಸಹಕರಿಸುವಂತೆ ಕಾರ್ಖಾನೆಯ ಕಾರ್ಮಿಕ ಸಂಘ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಮಾಡಿದೆ.
    ಭದ್ರಾವತಿ, ಮೇ. ೨೨: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪ್ರಸ್ತುತ ಲಾಭದತ್ತ ಸಾಗುತ್ತಿದ್ದು, ಇದೀಗ ಬಂಡವಾಳ ತೊಡಗಿಸುವ ಅಗತ್ಯತೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಸಹಕರಿಸುವಂತೆ ಕಾರ್ಖಾನೆಯ ಕಾರ್ಮಿಕ ಸಂಘ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಮಾಡಿದೆ.
      ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಪದಾಧಿಕಾರಿಗಳು ಶಿವಮೊಗ್ಗದಲ್ಲಿರುವ ಸಂಸದರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದ್ದು, ಮೈಸೂರು ಸಂಸ್ಥಾನ ೧೯೧೮ರಲ್ಲಿ ಆರಂಭಿಸಿದ ಮೈಸೂರು ವುಡ್ ಡಿಸ್ಟಿಲರಿ ವರ್ಕರ್‍ಸ್ ಲಿಮಿಟೆಡ್ ಕಾರ್ಖಾನೆಯನ್ನು ನಂತರದ ದಿನಗಳಲ್ಲಿ ಕರ್ನಾಟಕ ಸರ್ಕಾರ ತನ್ನ ಅಧೀನಕ್ಕೆ ಸೇರ್ಪಡೆ ಮಾಡಿಕೊಂಡು ಮೈಸೂರು ಐರನ್ ಸ್ಟೀಲ್ ಲಿಮಿಟೆಡ್(ಎಂಐಎಸ್‌ಎಲ್) ಎಂಬ ಹೆಸರನ್ನು ನಾಮಕರಣಗೊಳಿಸಿತು. ನಂತರ ೧೯೮೯ರಲ್ಲಿ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಉಕ್ಕು ಪ್ರಾಧಿಕಾರದ ಅಂಗಸಂಸ್ಥೆಯಾಗಿ ಸೇರ್ಪಡೆಗೊಳಿಸಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಎಂಬ ಹೆಸರನ್ನು ನಾಮಕರಣಗೊಳಿಸಲಾಯಿತು.  ೧೯೯೮ರಲ್ಲಿ ಪ್ರಾಧಿಕಾರ ಕಾರ್ಖಾನೆಯನ್ನು ಸಂಪೂರ್ಣವಾಗಿ ತನ್ನ ಅಧೀನಕ್ಕೆ ವಹಿಸಿಕೊಂಡು ಘಟಕವನ್ನಾಗಿಸಿಕೊಂಡಿದೆ. ೨೦೧೬ರಲ್ಲಿ ಎನ್‌ಐಟಿಐ ಆಯೋಗ ಕಾರ್ಖಾನೆಯನ್ನು ಬಂಡವಾಳ ಹಿಂಪಡೆಯುವ ಪ್ರಕ್ರಿಯೆಗೆ ಒಳಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರಂತೆ ಸರ್ಕಾರ ಬಂಡವಾಳ ಹಿಂಪಡೆಯವ ಪ್ರಕ್ರಿಯೆ ಆರಂಭಿಸಿತು. ಆದರೆ ಕಾರ್ಖಾನೆಯನ್ನು ಕೊಂಡುಕೊಳ್ಳಲು ಯಾರು ಸಹ ಮುಂದೆ ಬರಲಿಲ್ಲ. ಸರ್ಕಾರ ಕೈಗೊಂಡ ಕ್ರಮ ವಿಫಲವಾಗಿದೆ ಎಂದು ಸಂಸದರಿಗೆ ಮನವಿಯಲ್ಲಿ ತಿಳಿಸಲಾಗಿದೆ.
    ಉಕ್ಕು ಪ್ರಾಧಿಕಾರದ ಆಡಳಿತ ಮಂಡಳಿ ಸಹಕಾರದೊಂದಿಗೆ ನಂತರದ ದಿನಗಳಲ್ಲಿ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨೮೦ ಕಾಯಂ ಹಾಗು ೧೩೪೦ ಗುತ್ತಿಗೆ ಕಾರ್ಮಿಕರು ಹೆಚ್ಚಿನ ಶ್ರಮ ವಹಿಸಿ ಕಡಿಮೆ ಬಂಡವಾಳದಲ್ಲಿ, ಕಡಿಮೆ ಉತ್ಪಾದನೆಯಲ್ಲಿ ಲಾಭಾಂಶ ಕಂಡುಕೊಳ್ಳುತ್ತಿದ್ದು, ವಹಿವಾಟು ಸುಮಾರು ೪೦೦ ಕೋ. ರು.ಗಳಿಗೆ ಹೆಚ್ಚಿಸಲಾಗಿದೆ. ಇದೀಗ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ರೈಲ್ವೆ ಆಕ್ಸ್‌ಲೆಸ್‌ಗಳಿಗೆ ಪ್ರಾಧಿಕಾರದ ಕೇಂದ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿದ್ದು, ಈ ಹಿನ್ನಲೆಯಲ್ಲಿ ಉತ್ಪಾದನೆ ಹೆಚ್ಚಿಸಲು ಪ್ರಸ್ತುತ ಕನಿಷ್ಠ ೩೦೦ ಕೋ. ರು. ಅಗತ್ಯವಿದೆ. ಉಕ್ಕು ಪ್ರಾಧಿಕಾರ ೨೦೨೦-೨೧ನೇ ಮೊದಲ ತ್ರೈವಾರ್ಷಿಕ ಹಣಕಾಸು ವರ್ಷದಲ್ಲಿ ೯,೫೯೭ ಕೋ.ರು.ಗಳಿಗೂ ಹೆಚ್ಚಿನ ಲಾಭಾಂಶ ಸಾಧಿಸಿದೆ. ಈ ನಡುವೆ ತನ್ನ ಅಧೀನದಲ್ಲಿರುವ ಪ್ರಮುಖ ಕಾರ್ಖಾನೆಗಳಿಗೆ ಒಟ್ಟು ೧.೫ ಲಕ್ಷ ಕೋ. ರು. ಬಂಡವಾಳ ತೊಡಗಿಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಕಾರ್ಖಾನೆಯನ್ನು ಪ್ರಾಧಿಕಾರದ ಅಧೀನದಲ್ಲಿಯೇ ಮುಂದುವರೆಸಿ ಅಗತ್ಯವಿರುವ ಬಂಡವಾಳ ಪಡೆಯಲು ಹೆಚ್ಚಿನ ಸಹಕಾರ ನೀಡುವಂತೆ ಮನವರಿಕೆ ಮಾಡಲಾಗಿದೆ.
    ಅಲ್ಲದೆ ಕಾರ್ಖಾನೆಗೆ ಸೇರಿದ ಸಾಕಷ್ಟು ಖಾಲಿ ಜಾಗವಿದ್ದು, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಳ್ಳುವಂತೆ ರಾಜ್ಯ ಹಾಗು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಲಾಗಿದೆ.
ಮನವಿಗೆ ಸ್ಪಂದಿಸಿರುವ ಸಂಸದರು, ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸುವಂತೆ ಪ್ರಾಧಿಕಾರಕ್ಕೆ ಒತ್ತಾಯಿಸುವುದಾಗಿ ಹಾಗು ಖಾಲಿ ಜಾಗ ಸದ್ಬಳಕೆ ಮಾಡಿಕೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡುವುದಾಗಿ  ಭರವಸೆ ನೀಡಿದ್ದಾರೆ.
    ಉಪಾಧ್ಯಕ್ಷ ಕುಮಾರ್ ಎಎಲ್‌ಡಬ್ಲ್ಯೂ, ಪ್ರಧಾನ ಕಾರ್ಯದರ್ಶಿ ಯು.ಎ ಬಸಂತ್‌ಕುಮಾರ್, ಕಾರ್ಯದರ್ಶಿ ಕೆ.ಆರ್ ಮನು ಮತ್ತು ಎಸ್ ಮೋಹನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೇ.೨೪ರಂದು ತ್ರಿವಿಧ ದಾಸೋಹಿ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ೧೧೫ನೇ ಜನ್ಮದಿನೋತ್ಸವ

ಭದ್ರಾವತಿಯಲ್ಲಿ ಮೇ.೨೪ರಂದು ಹಮ್ಮಿಕೊಳ್ಳಲಾಗಿರುವ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ೧೧೫ನೇ ಜನ್ಮದಿನೋತ್ಸವ ಕುರಿತು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಮಾಹಿತಿ ನೀಡಿದರು.
    ಭದ್ರಾವತಿ, ಮೇ. ೨೨: ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಶ್ರೀ ಡಾ. ಶಿವಕುಮಾರ ಸ್ವಾಮೀಜಿಯವರ ೧೧೫ನೇ ಜನ್ಮದಿನೋತ್ಸವ ಮೇ.೨೪ರಂದು ಬೆಳಿಗ್ಗೆ ೧೧ ಗಂಟೆಗೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಹೇಳಿದರು.
    ತಾಲೂಕು ವೀರಶೈವ ಲಿಂಗಾಯತ ಸಮಾಜ ಹೆಸರಿನಲ್ಲಿ ಲಿಂಗಾಯತ ಸಮಾಜದ ಎಲ್ಲಾ ಸಂಘಟನೆಗಳು ಒಗ್ಗೂಡಿ ಶ್ರೀಗಳ ೧೧೫ನೇ ಜಯಂತ್ಯೋತ್ಸವ ಆಚರಿಸಲಾಗುತ್ತಿದೆ. ಶ್ರೀ ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.
    ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜಯಂತ್ಯೋತ್ಸವ ಉದ್ಘಾಟಿಸಲಿದ್ದು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರರಾದ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್ ನಾಗೇಶ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಹಾಗು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರಾದ ಆರ್. ಮಹೇಶ್ ಕುಮಾರ್, ಎಸ್. ಅಡವೀಶಯ್ಯ, ಬಿ.ಎಸ್ ಮಹೇಶ್‌ಕುಮಾರ್, ಎಸ್. ವಾಗೀಶ್, ನಂದಿ ಮಲ್ಲಿಕಾರ್ಜುನ, ಆರ್.ಎಸ್ ಶೋಭ, ಪರಮೇಶ್ವರಪ್ಪ ಮತ್ತು ಮಂಗೋಟೆ ರುದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶನಿವಾರ, ಮೇ 21, 2022

ಸರ್ಕಾರಿ ನೌಕರರ ಬೇಡಿಕೆ ಈಡೇರಿಸಿಕೊಡುವಲ್ಲಿ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿಯವರ ಶ್ರಮ ಹೆಚ್ಚು : ಬಿ. ಸಿದ್ದಬಸಪ್ಪ

ಭದ್ರಾವತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಸರ್ವ ಸದಸ್ಯರ ಸಭೆ ಹಾಗು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಮೇ. ೨೧: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಸರ್ವ ಸದಸ್ಯರ ಸಭೆ ಹಾಗು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಹಳೇನಗರದ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ, ಸರ್ಕಾರಿ ನೌಕರರ ಬಹುತೇಕ ಬೇಡಿಕೆಗಳನ್ನು ಈಡೇರಿಸಿಕೊಡುವಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿಯವರ ಶ್ರಮ ಹೆಚ್ಚಿನದ್ದಾಗಿದ್ದು, ಅದರಲ್ಲೂ ರಾಜ್ಯಾಧ್ಯಕ್ಷರು ಶಿವಮೊಗ್ಗ ಜಿಲ್ಲೆಯವರೇ ಆಗಿರುವ ಕಾರಣ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ನೌಕರರು ನೆಮ್ಮದಿ ಕಾಣುವಂತಾಗಿದೆ. ಮುಂದಿನ ದಿನಗಳಲ್ಲಿ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಡುವ ವಿಶ್ವಾಸ ಹೊಂದಿದ್ದಾರೆ. ತಾಲೂಕಿನಲ್ಲಿ ನೌಕರರು ಇನ್ನೂ ಹೆಚ್ಚಿನ ರೀತಿಯಲ್ಲಿ ಕ್ರಿಯಾಶೀಲರಾಗುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಮನವಿ ಮಾಡಿದರು.
    ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಸನ್ಮಾನ ಹಾಗು ಬಹುಮಾನ ವಿತರಣೆ ನೆರವೇರಿಸಿದರು. ರಾಜ್ಯ ಉಪಾಧ್ಯಕ್ಷ ಆರ್. ಮೋಹನ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಡಿ.ಟಿ ಕೃಷ್ಣಮೂರ್ತಿ,  ಪ್ರಸೂತಿ ತಜ್ಞೆ ಡಾ. ವೀಣಾ ಭಟ್, ತಹಸೀಲ್ದಾರ್ ಆರ್. ಪ್ರದೀಪ್, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ,  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುರೇಶ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಾಂತರಾಜ್, ಗ್ರಂಥಾಲಯ ಇಲಾಖೆಯ ರಾಜ್‌ಕುಮಾರ್, ಹಿರಿಯ ವೈದ್ಯ ಡಾ. ಶಿವಪ್ರಕಾಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕಾರ್ಯದರ್ಶಿ ಡಿ.ಎಸ್ ರಾಜಪ್ಪ ಸ್ವಾಗತಿಸಿದರು. ರಾಜ್ಯ ಪರಿಷತ್ ಸದಸ್ಯ ಎಸ್. ಪ್ರಕಾಶ್ ನಿರೂಪಿಸಿದರು. ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ವಿಜೃಂಭಣೆಯಿಂದ ಜರುಗಿದ ಶ್ರೀ ಆಂಜನೇಯ ಸ್ವಾಮಿ ಮಹಾರಥೋತ್ಸವ


ಭದ್ರಾವತಿ ತಾಲೂಕು ಕಚೇರಿ ರಸ್ತೆಯಲ್ಲಿರುವ ಕಂಚಿನ ಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮಹಾರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.
    ಭದ್ರಾವತಿ, ಮೇ. ೨೧: ನಗರದ ತಾಲೂಕು ಕಚೇರಿ ರಸ್ತೆಯಲ್ಲಿರುವ ಕಂಚಿನ ಬಾಗಿಲು ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮಹಾರಥೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.
    ಪ್ರತಿ ವರ್ಷದಂತೆ ಈ ಬಾರಿ ಸಹ  ಮಹಾ ರಥೋತ್ಸವ ನಡೆಯಿತು. ರಥೋತ್ಸವ ದೇವಸ್ಥಾನದಿಂದ ಆರಂಭಗೊಂಡು ರಂಗಪ್ಪ ವೃತ್ತ ಹಾಗು ಅಂಬೇಡ್ಕರ್ ವೃತ್ತದವರೆಗೆ ಸಾಗಿತು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಸ್ವಾಮಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ಭಜನಾ ತಂಡಗಳಿಂದ ಭಜನೆ, ಕೀರ್ತನೆಗಳು ಜರುಗಿದವು. ಭಕ್ತರಿಂದ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಹಾಗು ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.
     ರಥೋತ್ಸವಕ್ಕೂ ಮೊದಲು ಬೆಳಿಗ್ಗೆ ನವಗ್ರಹ ಹೋಮ, ಅಧಿವಾಸ ಹೋಮ, ರಥ ಶುದ್ಧಿಹೋಮ, ರಥಾಧಿವಾಸ ಹೋಮ, ಶ್ರೀ ಸ್ವಾಮಿಯ ರಥಾರೋಹಣ, ಸಂಜೆ ಅಷ್ಟಾವಧಾನ ಸೇವೆ, ಶಯನೋತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ದೇವಸ್ಥಾನದ ಪ್ರಧಾನ ಅರ್ಚಕ ಪವನ್‌ಕುಮಾರ್ ಉಡುಪ ಧಾರ್ಮಿಕ ಆಚರಣೆಗಳ ನೇತೃತ್ವ ವಹಿಸಿದ್ದರು.
    ಬಿ.ಕೆ ಸಂಗಮೇಶ್ವರ್, ತಹಶೀಲ್ದಾರ್ ಆರ್. ಪ್ರದೀಪ್, ನಗರಸಭಾ ಸದಸ್ಯರಾದ ಬಿ.ಟಿ ನಾಗರಾಜ್, ಆರ್. ಶ್ರೇಯಸ್, ಬಿ.ಎಂ. ಮಂಜುನಾಥ್, ಮಣಿ ಎಎನ್‌ಎಸ್, ಅನುಪಮ ಚನ್ನೇಶ್, ಪೌರಾಯುಕ್ತ ಮನುಕುಮಾರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ರಮಾಕಾಂತ್, ನರಸಿಂಹಚಾರ್, ದೇವಸ್ಥಾನ ಸಮಿತಿ ಅಧ್ಯಕ್ಷ ಕೆ. ನರಸಿಂಹಮೂರ್ತಿ, ಗೌರವಾಧ್ಯಕ್ಷ ಎಸ್.ಕೆ ಶಿವಲಿಂಗೇಗೌಡ, ಉಪಾಧ್ಯಕ್ಷ ಬಿ. ಅಪ್ಪಾಜಿ ಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಎನ್ ರಾಜಶೇಖರ್, ಕಾರ್ಯದರ್ಶಿ ಎ.ಎಸ್ ಆಶಾ ಪುಟ್ಟಸ್ವಾಮಿ, ಖಜಾಂಚಿ ಎಸ್.ಬಿ ದುಗ್ಗೇಗೌಡ, ಶಿವೇಗೌಡ, ರತ್ನಮ್ಮ ಸುಭಾಷ್, ಎನ್. ಜವರೇಗೌಡ, ವೀಣಾ ಶ್ರೀನಿವಾಸ್, ಎಸ್.ಎಸ್ ಪ್ರಸನ್ನಕುಮಾರ್ ಮತ್ತು ಹೇಮಂತಕುಮಾರ್ ಸೇರಿದಂತೆ ಪದಾಧಿಕಾರಿಗಳು ಹಾಗು ಸಿದ್ದರೂಢನಗರ, ಹಳೇನಗರ, ಹನುಮಂತನಗರ, ಅಂಬೇಡ್ಕರ್ ನಗರ, ಭೂತನಗುಡಿ, ಕೇಶವಪುರ, ಹೊಸಮನೆ, ಹುತ್ತಾಕಾಲೋನಿ, ನ್ಯೂಕಾಲೋನಿ ವಿವಿಧೆಡೆಗಳಿಂದ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.



ಶುಕ್ರವಾರ, ಮೇ 20, 2022

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಅವಳಿ-ಜವಳಿ ಸಹೋದರಿಯರ ವಿಶಿಷ್ಟ ಸಾಧನೆ

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಭದ್ರಾವತಿ ಶಂಕರಘಟ್ಟದ ಅವಳಿ-ಜವಳಿ ಸಹೋದರಿಯರು ಫಲಿತಾಂಶದಲ್ಲೂ ವಿಶಿಷ್ಟತೆ ಕಾಯ್ದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಈ ಈ ಸಹೋದರಿಯರನ್ನು ಅಖಿಲ ಕರ್ನಾಟಕ ಎಂವಿಕೆ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಮೇ. ೨೦: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅವಳಿ-ಜವಳಿ ಸಹೋದರಿಯರು ಫಲಿತಾಂಶದಲ್ಲೂ ವಿಶಿಷ್ಟತೆ ಕಾಯ್ದುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
    ನಗರದ ಬಿ.ಎಚ್ ರಸ್ತೆ ಪೂಜ್ಞ ಪ್ರಜ್ಞ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ ಜಿ. ನಿತ್ಯ ಮತ್ತು ಜಿ. ನಿಧಿ ಇಬ್ಬರು ಸಹ ೬೨೫ಕ್ಕೆ ೬೧೪ ಅಂಕ ಪಡೆದುಕೊಂಡಿರುವುದು ವಿಶೇಷತೆಯಾಗಿದೆ. ಈ ಇಬ್ಬರು ವಿದ್ಯಾರ್ಥಿನಿಯರು ತಾಲೂಕಿನ ಶಂಕರಘಟ್ಟದ ದಿವಂಗತ ಎಸ್.ಈ ಗಿರೀಶ್‌ಕುಮಾರ್ ಮತ್ತು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಲತಾ ದಂಪತಿ ಪುತ್ರಿಯರಾಗಿದ್ದು, ಈ ಸಹೋದರಿಯರ ಸಾಧನೆ ಇಡೀ ಗ್ರಾಮದಲ್ಲಿ ಸಂಭ್ರವನ್ನುಂಟು ಮಾಡಿದೆ.
     ಅಖಿಲ ಕರ್ನಾಟಕ ಎಂವಿಕೆ ಅಭಿಮಾನಿ ಬಳಗ ಅಭಿನಂದನೆ :
  ವಿಶಿಷ್ಟ ಸಾಧನೆ ಮೆರೆದಿರುವ ಈ ಸಹೋದರಿಯರನ್ನು ಅಖಿಲ ಕರ್ನಾಟಕ ಎಂವಿಕೆ ಅಭಿಮಾನಿ ಬಳಗದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಬಳಗದ ರಾಜ್ಯಾಧ್ಯಕ್ಷ ಸಿ. ಅನಿಲ್,  ರಾಜ್ಯ ಗೌರವ ಸಲಹೆಗಾರ ತ್ಯಾಗರಾಜ್, ಎಂ. ರಮೇಶ್ ಶಂಕರಘಟ್ಟ, ಶಂಕರ್ ರೈಸ್ ಮಿಲ್ ಮಾಲೀಕ ಎಸ್.ಈ.ನಂದೀಶ್ ಕುಮಾರ್, ಗ್ರಾಮದ ಮುಖಂಡರುಗಳಾದ ಟಿ.ಡಿ ಶಶಿಕುಮಾರ್, ಶ್ರೀಕಾಂತ್, ಮುರುಗನ್, ಮಂಜುನಾಥ್ ಮತ್ತು ಅಪ್ಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಎಸ್.ಕೆ ಸೃಜನಾ ೬೨೨ ಅಂಕ

ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಗೆ ಉತ್ತಮ ಫಲಿತಾಂಶ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯ ಸಮಗ್ರ ಶಿಕ್ಷಣ ಸಂಸ್ಥೆಯ ಈಶ್ವರಮ್ಮ ಪ್ರೌಢಶಾಲೆ ವಿದ್ಯಾರ್ಥಿನಿ ಎಸ್.ಕೆ ಸೃಜನಾ ೬೨೫ಕ್ಕೆ ೬೨೨ ಅಂಕದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಈ ವಿದ್ಯಾರ್ಥಿನಿಯನ್ನು ಸನ್ಮಾನಿಸಿ ಅಭಿನಂದಿಸಿದರು.
    ಭದ್ರಾವತಿ, ಮೇ. ೨೦: ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಈಶ್ವರಮ್ಮ ಪ್ರೌಢಶಾಲೆ ಉತ್ತಮ ಫಲಿತಾಂಶ ಪಡೆದುಕೊಂಡಿದ್ದು, ವಿದ್ಯಾರ್ಥಿನಿ ಎಸ್.ಕೆ ಸೃಜನಾ ೬೨೫ಕ್ಕೆ ೬೨೨ ಅಂಕದೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ.
    ಆಂಗ್ಲ ವಿಭಾಗ ಶೇ.೯೮ರಷ್ಟು ಹಾಗು ಕನ್ನಡ ವಿಭಾಗ ಶೇ.೯೦ರಷ್ಟು ಫಲಿತಾಂಶ ಪಡೆದುಕೊಂಡಿವೆ. ಆಂಗ್ಲ ವಿಭಾಗದಲ್ಲಿ ೯೨ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಈ ಪೈಕಿ ೯೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕನ್ನಡ ವಿಭಾಗದಲ್ಲಿ ೩೯ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಈ ಪೈಕಿ ೩೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
    ಆಂಗ್ಲ ವಿಭಾಗದಲ್ಲಿ ೨೯ ಮತ್ತು ಕನ್ನಡ ವಿಭಾಗದಲ್ಲಿ ೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದು, ಆಂಗ್ಲ ವಿಭಾಗದಲ್ಲಿ ೫೫ ಮತ್ತು ಕನ್ನಡ ವಿಭಾಗದಲ್ಲಿ ೨೫ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗು ಆಂಗ್ಲ ವಿಭಾಗದಲ್ಲಿ ೬ ಮತ್ತು ಕನ್ನಡ ವಿಭಾಗದಲ್ಲಿ ೫ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
    ಎಸ್.ಕೆ ಸೃಜನಾ ೬೨೨, ಜೆ. ದರ್ಶನ್ ೬೧೬, ಬಿ.ಇ ರಕ್ಷಿತ ೬೧೪, ಎನ್. ರಕ್ಷಿತ ೬೧೩, ಎನ್. ಕುಶಾಲ್ ೬೧೧, ಎಸ್. ನಾಗಶ್ರೀ ೬೦೮, ಬಿ.ಎಂ ಅಪೂರ್ವ ೬೦೮ ಮತ್ತು ಎಸ್. ಹರ್ಷಿತ ೬೦೫ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.  
    ಹಿರಿಯೂರು ಗ್ರಾಮದ ನಿವಾಸಿ ಸತೀಶ್ ಕಡ್ಕರ್ ಮತ್ತು ಎಸ್. ಶೃತಿ ದಂಪತಿ ಪುತ್ರಿಯಾಗಿರುವ ಈ ಶಾಲೆಯ ವಿದ್ಯಾರ್ಥಿನಿ ಎಸ್.ಕೆ ಸೃಜನಾ ೬೨೫ಕ್ಕೆ ೬೨೨ ಅಂಕ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದು, ಉತ್ತಮ ಫಲಿತಾಂಶಕ್ಕೆ ಕಾರಣಕರ್ತರಾಗಿರುವ ಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗು ಪೋಷಕರಿಗೆ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ ಬೀರಯ್ಯ ಕೃತಜ್ಞತೆ ಸಲ್ಲಿಸಿದ್ದು, ಅಲ್ಲದೆ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಅಭಿನಂದನೆ :
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿನಿ ಎಸ್.ಕೆ ಸೃಜನಾ ಅವರನ್ನು ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಿ ಅಭಿನಂದಿಸಿದರು.
    ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಪರಮೇಶ್ವರಪ್ಪ, ಮೃತ್ಯುಂಜಯ ಕಾನಿಟ್ಕರ್, ಶಾಮರಾಯ ಆಚಾರ್, ಶಿಕ್ಷಣ ಇಲಾಖೆ ಸಂಯೋಜಕ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೇ.೨೧ರಂದು ಮಹಾ ರಥೋತ್ಸವ, ಸಮುದಾಯ ಭವನ ಉದ್ಘಾಟನೆ

    ಭದ್ರಾವತಿ, ಮೇ. ೨೦: ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮಹಾ ರಥೋತ್ಸವ ಹಾಗು ಮಿನಿ ಸಮುದಾಯ ಭವನದ ಉದ್ಘಾಟನೆ ಮೇ.೨೧ರಂದು ನಡೆಯಲಿದೆ.
    ಪ್ರತಿ ವರ್ಷದಂತೆ ಈ ಬಾರಿ ಸಹ ಮಧ್ಯಾಹ್ನ ೧೨ ಗಂಟೆಗೆ ಮಹಾ ರಥೋತ್ಸವ ನಡೆಯಲಿದ್ದು, ರಥೋತ್ಸವ ದೇವಸ್ಥಾನದಿಂದ ಆರಂಭಗೊಂಡು ರಂಗಪ್ಪ ವೃತ್ತ ಹಾಗು ಅಂಬೇಡ್ಕರ್ ವೃತ್ತದವರೆಗೆ ನಡೆಯಲಿದೆ.
    ರಥೋತ್ಸವಕ್ಕೂ ಮೊದಲು ಬೆಳಿಗ್ಗೆ ನವಗ್ರಹ ಹೋಮ, ಅಧಿವಾಸ ಹೋಮ, ರಥ ಶುದ್ಧಿಹೋಮ, ರಥಾಧಿವಾಸ ಹೋಮ, ಶ್ರೀ ಸ್ವಾಮಿಯ ರಥಾರೋಹಣ, ಸಂಜೆ ಅಷ್ಟಾವಧಾನ ಸೇವೆ, ಶಯನೋತ್ಸವ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಲಿವೆ.
    ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಆಂಜನೇಯ ಸ್ವಾಮಿಯ ಮಿನಿ ಸಮುದಾಯ ಭವನ ಬೆಳಿಗ್ಗೆ ೧೦.೩೦ಕ್ಕೆ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪೌರಾಯುಕ್ತ ಮನುಕುಮಾರ್, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಬಿ.ಟಿ ನಾಗರಾಜ್, ಬಿ.ಎಂ ಮಂಜುನಾಥ್, ಆರ್. ಶ್ರೇಯಸ್, ಮಣಿ ಎಎನ್‌ಎಸ್, ದೇವಸ್ಥಾನ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಕೆ. ನರಸಿಂಹಮೂರ್ತಿ, ವೈದ್ಯ ಡಾ. ಎಚ್.ಡಿ ಅಶ್ವತ್ಥ ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.