Friday, May 27, 2022

ಶಿಕ್ಷಣ ಎಂದರೆ ಪರಿಪೂರ್ಣವಾಗಿ ಬದುಕಲು ಪೂರಕವಾದ ಜ್ಞಾನದ ಎಲ್ಲಾ ಬಗೆಯ ಕಲಿಕೆ : ಎ.ಕೆ ನಾಗೇಂದ್ರಪ್ಪ

ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದುಕೊಂಡು ತಾಲೂಕಿಗೆ ಕೀರ್ತಿ ತಂದಿರುವ ನಗರದ ಬಿ.ಎಚ್ ರಸ್ತೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ ಹಾಗು ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೇರಣಾ .ಬಿ ಸೇರಿದಂತೆ ೩ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮೇ. ೨೭: ಶಿಕ್ಷಣ ಎಂದರೆ ಸಮಾಜದಲ್ಲಿ ಪರಿಪೂರ್ಣವಾಗಿ ಬದುಕಲು ಪೂರಕವಾದ ಜ್ಞಾನದ ಎಲ್ಲಾ ಬಗೆಯ ಕಲಿಕೆಯಾಗಿದ್ದು, ಇದು ಹುಟ್ಟಿನಿಂದ ಸಾವಿನವರೆಗೂ ಮುಂದುವರೆಯುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶುಕ್ರವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾವಂತ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಗುವಿನ ಮೊದಲ ಕಲಿಕೆ ಮನೆಯಿಂದ ಆರಂಭಗೊಳ್ಳುತ್ತದೆ. ತಂದೆ-ತಾಯಿ ಮೊದಲ ಗುರುಗಳಾಗಿದ್ದು, ಈ ಹಿನ್ನಲೆಯಲ್ಲಿ ಮಗುವಿನ ಬೆಳವಣಿಗೆಗೆ ಪೂರಕವಾದ ವಾತಾವರಣ ರೂಪಿಸಿಕೊಡುವುದು ಪೋಷಕರ ಜವಾಬ್ದಾರಿಯಾಗಿದೆ.  ಶಿಕ್ಷಣ ಎಂದರೆ ಕೇವಲ ಪಠ್ಯಪುಸ್ತಕದ ಜ್ಞಾನ ವಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಕಲಿಕೆಯ ಪ್ರಕ್ರಿಯೆಯಲ್ಲಿ ತೊಡಗುವುದಾಗಿದೆ. ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ಮುನ್ನಡೆಯಬೇಕೆಂದರು.
    ವೇದಿಕೆ ಗೌರವಾಧ್ಯಕ್ಷೆ ಡಾ. ಆರ್. ಅನುರಾಧ ಪಟೇಲ್ ಮಾತನಾಡಿ, ಪ್ರತಿಯೊಂದಕ್ಕೂ ಜ್ಞಾನ ಬಹಳ ಮುಖ್ಯ.  ಮಹಾತ್ಮಗಾಂಧಿಜೀ ಸೇರಿದಂತೆ ಅನೇಕ ಮಹಾನ್ ಆದರ್ಶ ವ್ಯಕ್ತಿಗಳು ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದ್ದಾರೆ. ಶಿಕ್ಷಣ ಎಂಬುದು ಕೇವಲ ಹೆಚ್ಚಿನ ಅಂಕಗಳನ್ನು ಪಡೆಯುವುದಲ್ಲ ಪರಿಶ್ರಮದ ಮೂಲಕ ಸಮಾಜಕ್ಕೆ ಪೂರಕವಾದ, ಮೌಲ್ಯಯುತ ಜ್ಞಾನವನ್ನು ಪಡೆಯುವುದಾಗಿದೆ. ಯಾವುದೇ ಕ್ಷೇತ್ರದಲ್ಲೂ ಪರಿಶ್ರಮವಿಲ್ಲದೆ ಏನನ್ನು ಸಹ ಸಾಧಿಸಲು ಸಾಧ್ಯವಿಲ್ಲ. ನಮ್ಮ ಸಾಧನೆಯ ಜೊತೆ ಜೊತೆಗೆ ಸೇವೆಯನ್ನು ಸಹ ಒಂದು ಭಾಗವನ್ನಾಗಿಸಿಕೊಳ್ಳಬೇಕೆಂದರು.
    ಪೌರಾಯುಕ್ತ ಮನುಕುಮಾರ್ ಮಾತನಾಡಿ, ಶಿಕ್ಷಣ ಎಂಬುದು ನಮ್ಮ ಜೀವನದ ಒಂದು ಹಂತವಾಗಿದೆ. ನಾವು ಭವಿಷ್ಯದಲ್ಲಿ ಆಯ್ಕೆ ಮಾಡಿಕೊಳ್ಳುವ ಕ್ಷೇತ್ರ ಬಹಳ ಮುಖ್ಯವಾಗಿದೆ. ನಮ್ಮ ಗುರಿ ನಿರಂತರವಾಗಿರಬೇಕು. ಸಂಘಟನೆಗಳಲ್ಲಿ ವಿಶಿಷ್ಟ ಶಕ್ತಿ ಇದ್ದು, ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡಾಗ ಮಾತ್ರ ಸಂಘಟನೆ ಮತ್ತಷ್ಟು ಬಲಿಷ್ಠಗೊಳ್ಳುತ್ತದೆ ಎಂದರು.
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆಯಲ್ಲಿ ಮಹಿಳೆಯರು ನಿರಂತರವಾಗಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಕಾರ್ಯಕ್ರಮ ಸಹ ಹೊಸ ಉತ್ಸಾಹ ತಂದು ಕೊಡುತ್ತಿವೆ. ವೇದಿಕೆ ಕಾರ್ಯಕ್ರಮಗಳಿಗೆ ಗೌರವಾಧ್ಯಕ್ಷರಾದ ಡಾ. ಅನುರಾಧಪಟೇಲ್‌ರವರು ಹೆಚ್ಚಿನ ಸಹಕಾರ, ಪೋತ್ಸಾಹ ನೀಡುತ್ತಿದ್ದಾರೆ. ಇದೀಗ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇದಿಕೆ ವತಿಯಿಂದ ಸನ್ಮಾನಿಸಿ ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕ ಪಡೆದುಕೊಂಡು ತಾಲೂಕಿಗೆ ಕೀರ್ತಿ ತಂದಿರುವ ನಗರದ ಬಿ.ಎಚ್ ರಸ್ತೆ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ಪ್ರತೀಕ್ಷಾ ದಯಾನಂದ ಹಾಗು ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರೇರಣಾ .ಬಿ ಅವರಿಗೆ ೫ ಸಾವಿರ ರು. ಪ್ರೋತ್ಸಾಹ ಧನದೊಂದಿಗೆ  ಮತ್ತು  ಸೇಂಟ್ ಚಾರ್ಲ್ಸ್ ವಿದ್ಯಾಸಂಸ್ಥೆಯ ವಿಧಿತಾ ಅವರಿಗೆ ೨ ಸಾವಿರ ರು. ಪ್ರೋತ್ಸಾಹ ಧನದೊಂದಿಗೆ ೩ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
    ವೇದಿಕೆ ಪ್ರಧಾನ ಕಾರ್ಯದರ್ಶಿ ಲತಾ ಪ್ರಭಾಕರ್ ನಿರೂಪಿಸಿದರು. ಉಪಾಧ್ಯಕ್ಷೆ ಪುಷ್ಪ ಕೇಶವಮೂರ್ತಿ, ಕಾರ್ಯದರ್ಶಿ ಶೀಲಾರವಿ ಮತ್ತು ಖಜಾಂಚಿ ಭಾರತಿಕುಮಾರ್ ಸೇರಿದಂತೆ ವೇದಿಕೆ ಸದಸ್ಯರು, ಪ್ರತಿಭಾವಂತ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

Thursday, May 26, 2022

ಶ್ರೀ ಮಾರಿಯಮ್ಮ ದೇವಸ್ಥಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ


ಭದ್ರಾವತಿ, ಮೇ. 26: ನಗರಸಭೆ ವಾರ್ಡ್ ನಂ.3ರ ಚಾಮೇಗೌಡ ಏರಿಯಾದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದ ಗೋಪುರ ನಿರ್ಮಾಣಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಗುರುವಾರ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವಸ್ಥಾನವನ್ನು ಎಲ್ಲರ ಸಹಕಾರದೊಂದಿಗೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಸಿದ್ಧವಿದ್ದು ಅಗತ್ಯವಿರುವ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಮಾರಿಯಮ್ಮ ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ವಾರ್ಡ್ ನಗರಸಭಾ ಸದಸ್ಯ ಜಾರ್ಜ್, ಶಿಲ್ಪಿ ಜಯರಾಂ, ಕೃಷ್ಣಮೂರ್ತಿ , ಪುಟ್ಟಸ್ವಾಮಿ,  ಗೋವಿಂದಪ್ಪ , ಶ್ರೀನಿವಾಸ ನಾಯ್ಡು, ಮಹಾದೇವಯ್ಯ, ಮಾಣಿಕ್ಯಂ, ಮಹಾದೇವ, ಉಮೇಶ, ಕೃಷ್ಣ, ತಿಮ್ಮಯ್ಯ, ವೆಂಕಟೇಶ್ ಮತ್ತು ಅರ್ಚಕರಾದ ಷಣ್ಮುಗಂ, ರಾಘು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು .  ದೇವಸ್ಥಾನ ಗೋಪುರವನ್ನು ಸುಮಾರು 5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.


ವಿಐಎಸ್‌ಎಲ್ ಕಾರ್ಮಿಕ ಸಂಘದ ಮೊದಲ ಮಹಿಳಾ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜೆ.ಸಿ ರಾಜಮ್ಮ ನಿಧನ

ಜೆ.ಸಿ ರಾಜಮ್ಮ
    ಭದ್ರಾವತಿ, ಮೇ. ೨೬: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಮಿಕ ಸಂಘದ ಮೊದಲ ಮಹಿಳಾ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜನ್ನಾಪುರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್) ನಿವಾಸಿ ಜೆ.ಸಿ ರಾಜಮ್ಮ(೮೭) ಗುರುವಾರ ನಿಧನ ಹೊಂದಿದರು.
    ೫ ಜನ ಸಹೋದರಿಯರು ಮತ್ತು ೬ ಜನ ಸಹೋದರರು ಇದ್ದರು. ರಾಜಮ್ಮ ನಗರದ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿಯಾಗಿದ್ದು, ಕಾರ್ಮಿಕ ಸಂಘಕ್ಕೆ ಆಯ್ಕೆಯಾಗಿ ಪದಾಧಿಕಾರಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ತಮ್ಮ ಅವಧಿಯಲ್ಲಿ ಕಾರ್ಮಿಕರಿಗೆ ಬರಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರು. ಇವರ ಅಂತ್ಯಕ್ರಿಯೆ ಸಂಜೆ ನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಇವರ ನಿಧನಕ್ಕೆ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷರಾದ ಎಸ್.ಎನ್ ಬಾಲಕೃಷ್ಣ, ಜೆ.ಎನ್ ಚಂದ್ರಹಾಸ, ಎಸ್. ನರಸಿಂಹಚಾರ್, ಪ್ರಸ್ತುತ ಕಾರ್ಮಿಕ ಸಂಘದ ಅಧ್ಯಕ್ಷರಾಗಿರುವ ಜೆ. ಜಗದೀಶ್ ಹಾಗು ಪದಾಧಿಕಾರಿಗಳು, ನಿವೃತ್ತ ಕಾರ್ಮಿಕರ ಸಂಘದ ಅಧ್ಯಕ್ಷ ರಾಮಲಿಂಗಯ್ಯ, ಪದಾಧಿಕಾರಿಗಳಾದ ಹನುಮಂತರಾವ್, ಶಂಕರ್, ಮಹೇಶಪ್ಪ, ಬಸವರಾಜ್, ಜಯರಾಜ್, ಕೆಂಪಯ್ಯ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ರಮಕಾಂತ್ ಸೇರಿದಂತೆ ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.

೧೦೦ ಲೀಟರ್ ಮಂಡಕ್ಕೆ ಬೆಲೆ ೪೫೦ ರು. ನಿಗದಿ

ಭದ್ರಾವತಿ ಸೀಗೆಬಾಗಿಯಲ್ಲಿ ಗುರವಾರ ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಹಾಗು ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆ ನಡೆಯಿತು.
    ಭದ್ರಾವತಿ, ಮೇ. ೨೬: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆಯಲ್ಲಿ ೧೦೦ ಲೀಟರ್ ಮಂಡಕ್ಕಿ ಬೆಲೆ ೪೫೦ ರು. ನಿಗದಿಪಡಿಸಲಾಗಿದ್ದು, ಎಲ್ಲರೂ ಸಹಕರಿಸುವಂತೆ ಮಂಡಕ್ಕಿ ಉತ್ಪಾದನಾ ಮಾಲೀಕರು ಮನವಿ ಮಾಡಿದರು.
    ಗುರುವಾರ ನಗರಸಭೆ ವ್ಯಾಪ್ತಿಯ ಸೀಗೆಬಾಗಿಯಲ್ಲಿ ನಡೆದ ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಹಾಗು  ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆಯಲ್ಲಿ ಮಾತನಾಡಿದ ಮಂಡಕ್ಕಿ ಉತ್ಪಾದನಾ ಮಾಲೀಕರು,  ಭತ್ತದ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ, ಕಾರ್ಮಿಕರ ಕೂಲಿ ಹೆಚ್ಚಳ ಹಾಗು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮಂಡಕ್ಕಿ ಉತ್ಪಾದಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಮಂಡಕ್ಕಿ ಉದ್ಯಮ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕೂಲಿ ಕಾರ್ಮಿಕರು ದಿನದ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಪ್ರಸ್ತುತ ಮಂಡಕ್ಕಿ ದರ ಅತ್ಯಂತ ಕಡಿಮೆ ಇದ್ದು, ಈ ದರದಲ್ಲಿ ಮಂಡಕ್ಕಿ ಉದ್ಯಮ ನಡೆಸುವುದು ಅಸಾಧ್ಯವಾಗಿದೆ. ಮಂಡಕ್ಕಿ ಹೆಚ್ಚಾಗಿ ಬಡವರ್ಗದವರು ಬಳಸುವ ಆಹಾರ ಪದಾರ್ಥವಾಗಿದ್ದು,  ಇಂತಹ ಆಹಾರ ಪದಾರ್ಥದ ಬೆಲೆ ಏರಿಕೆ ಮಾಡುವುದು ಇಂದು ಅನಿವಾರ್ಯವಾಗಿದೆ. ಈಗಾಗಲೇ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಹಕಾರ ಸಂಘದವರು ಸಭೆ ನಡೆಸಿ ಮಂಡಕ್ಕಿ ಬೆಲೆ ಏರಿಕೆ ಮಾಡಲು ತೀರ್ಮಾಣ ಕೈಗೊಂಡಿದ್ದಾರೆ.  ೧೦೦ ಲೀಟರ್ ಮಂಡಕ್ಕಿ ದರವನ್ನು ೪೫೦ ರು.ಗಳಿಗೆ ನಿಗದಿ ಪಡಿಸಲಾಗುತ್ತಿದೆ. ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
    ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಹಾಗು  ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಖಾದರ್ ಖಾನ್ ಸಭೆ ಅಧ್ಯಕ್ಷತೆ ವಹಿಸಿದ್ದರು.
    ಪ್ರಮುಖರಾದ ಚಿಕ್ಕಮಗಳೂರಿನ ಪಾಪಣ್ಣ, ತರೀಕೆರೆಯ ಚಾಂದ್ ಪಾಷ, ಬೇಲೂರಿನ ತಜಮ್ಮುಲ್ ಪಾಷ, ಶಿವಮೊಗ್ಗದ ಚಂದ್ರಣ್ಣ, ಹಾಸನದ ಕೃಷ್ಣೇಗೌಡ ಸೇರಿದಂತೆ  
    ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಮಂಡಕ್ಕಿ ಉತ್ಪಾದಕರು ಹಾಗೂ ಮಾರಾಟಗಾರರು ಪಾಲ್ಗೊಂಡಿದ್ದರು.

ಮಂಡಕ್ಕಿ ಉತ್ಪಾದನೆದಾರರು, ಮಾರಾಟಗಾರರ ಸಭೆ

 ಭದ್ರಾವತಿ, ಮೇ. 26:  ಸೀಗೆಬಾಗಿ ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಹಾಗು  ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆ ಗುರುವಾರ ನಡೆಯಿತು. ಸಭೆಯಲ್ಲಿ  ಭತ್ತದ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ, ಕಾರ್ಮಿಕರ ಕೂಲಿ ಹೆಚ್ಚಳ ಹಾಗು ಕಚ್ಚಾ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲಾಯಿತು. ಶಿವಮೊಗ್ಗ ಚಿಕ್ಕಮಗಳೂರು ಮತ್ತು ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಮಂಡಕ್ಕಿ ಉತ್ಪಾದಕರು ಹಾಗೂ ಮಾರಾಟಗಾರರು ಪಾಲ್ಗೊಂಡಿದ್ದರು.


  

Wednesday, May 25, 2022

ಬಿಳಿಕಿ ವೃತ್ತಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು ಅಂತಿಮಗೊಳಿಸಿ

ಭದ್ರಾವತಿ ನಗರದ ಬಿ.ಎಚ್ ರಸ್ತೆ ಮತ್ತು ಬೈಪಾಸ್ ರಸ್ತೆ ಡಾಬಾ ಎದುರಿನ ಬಿಳಿಕಿ ವೃತ್ತಕ್ಕೆ ಈಗಾಗಲೇ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆಯನ್ನು ಹಿಂಪಡೆಯಬಾರದು.  ಯಾವುದೇ ಹೊಸ ಹೆಸರನ್ನು ಅನುಮೋದಿಸಬಾರದು ಎಂದು ಆಗ್ರಹಿಸಿ ಬುಧವಾರ ನಗರಸಭೆ ಪೌರಾಯುಕ್ತ ಮನುಕುಮಾರ್ ಅವರಿಗೆ ತಾಲೂಕು ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ.  
    ಭದ್ರಾವತಿ, ಮೇ. ೨೫ : ನಗರದ ಬಿ.ಎಚ್ ರಸ್ತೆ ಮತ್ತು ಬೈಪಾಸ್ ರಸ್ತೆ ಡಾಬಾ ಎದುರಿನ ಬಿಳಿಕಿ ವೃತ್ತಕ್ಕೆ ಈಗಾಗಲೇ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಈ ಪ್ರಕ್ರಿಯೆಯನ್ನು ಹಿಂಪಡೆಯಬಾರದು.  ಯಾವುದೇ ಹೊಸ ಹೆಸರನ್ನು ಅನುಮೋದಿಸಬಾರದು ಎಂದು ಆಗ್ರಹಿಸಿ ಬುಧವಾರ ನಗರಸಭೆ ಪೌರಾಯುಕ್ತ ಮನುಕುಮಾರ್ ಅವರಿಗೆ ತಾಲೂಕು ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ.  
    ಈ ಹಿಂದೆ ನಗರಸಭೆ ಆಡಳಿತಕ್ಕೆ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಗೊಳಿಸುವಂತೆ ಮನವಿ ಸಲ್ಲಿಸಲಾಗಿತ್ತು. ಜನವರಿ ೨೦೧೬ರಂದು ಸಾಮಾನ್ಯಸಭೆಯಲ್ಲಿ ಅನುಮೋದನೆ ಸಹ ಪಡೆಯಲಾಗಿದೆ. ೨೦೧೯ರಲ್ಲಿ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇಲ್ಲದಿರುವ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಂದ ಅನುಮತಿ ಸಹ ಪಡೆಯಲಾಗಿರುತ್ತದೆ. ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆ ಇದೀಗ ಸರ್ಕಾರದ ಮಟ್ಟದಲ್ಲಿದೆ. ಇದೀಗ ಈ ವೃತ್ತಕ್ಕೆ ಬೇರೆಂದು ಹೆಸರನ್ನು ನಾಮಕರಣ ಗೊಳಿಸುವಂತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣಗೊಳಿಸುವ ಪ್ರಕ್ರಿಯೆಯಿಂದ ಹಿಂದೆ  ಸರಿಯಬಾರದು ಎಂದು ಆಗ್ರಹಿಸಲಾಗಿದೆ.
    ಸಂಘದ ಅಧ್ಯಕ್ಷ ಎ ಟಿ ರವಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಪ್ರಕಾಶ್, ಖಜಾಂಚಿ ಎ.ಎನ್ ಕಾರ್ತಿಕ್, ನಂಜುಂಡೇಗೌಡ, ಕೃಷ್ಣೇಗೌಡ, ಉಮೇಶ್ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.


ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಹೋರಾಟಗಾರ ಬಿ.ವಿ ಗಿರೀಶ್ ಹೆಸರನ್ನು ನಾಮಕರಣಗೊಳಿಸಿ

ಮೂಲ ಸೌಕರ್ಯಗಳ ಸಮಸ್ಯೆ ಬಗೆಹರಿಸಿ : ಶಶಿಕುಮಾರ್ ಗೌಡ ಆಗ್ರಹ

ಭದ್ರಾವತಿ ನಗರದ ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಹೋರಾಟಗಾರ ದಿವಂಗತ ಬಿ.ವಿ ಗಿರೀಶ್ ಹೆಸರನ್ನು ನಾಮಕರಣಗೊಳಿಸುವಂತೆ ಹಾಗು ೩೨ನೇ ವಾರ್ಡ್ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಬುಧವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
    ಭದ್ರಾವತಿ, ಮೇ. ೨೫: ನಗರದ ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಹೋರಾಟಗಾರ ದಿವಂಗತ ಬಿ.ವಿ ಗಿರೀಶ್ ಹೆಸರನ್ನು ನಾಮಕರಣಗೊಳಿಸುವಂತೆ ಹಾಗು ೩೨ನೇ ವಾರ್ಡ್ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ ಬುಧವಾರ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
    ಕನ್ನಡಪರ ಹಾಗು ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಬಿ.ವಿ ಗಿರೀಶ್‌ರವರ ಮೊದಲ ವರ್ಷದ ಪುಣ್ಯಸ್ಮರಣೆಯಂದು ಬೈಪಾಸ್ ರಸ್ತೆಯಿಂದ ತಿಮ್ಲಾಪುರಕ್ಕೆ ಸಂಪರ್ಕಗೊಂಡಿರುವ ರಸ್ತೆಗೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ತಹಸೀಲ್ದಾರ್ ಹಾಗು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
    ಈ ಹಿಂದೆ ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡ ವರ್ಗದ ಬಿಪಿಎಲ್ ಪಡಿತರ ಚೀಟಿ ಕುಟುಂಬಗಳಿಗೆ ನಗರಸಭೆ ವತಿಯಿಂದ ಉಚಿತವಾಗಿ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಆದರೆ ವಾರ್ಡ್ ನಂ.೩೨ರ ಫಿಲ್ಟರ್ ಶೆಡ್‌ನಲ್ಲಿ ವಾಸಿಸುತ್ತಿರುವ ಸುಮಾರು ೨೦೦ ಬಿಪಿಎಲ್ ಪಡಿತರ ಚೀಟಿದಾರರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿರುವುದಿಲ್ಲ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದ್ದರೂ ಸಹ ಇದುವರೆಗೂ ಯಾವುದೇ ಕೈಗೊಂಡಿರುವುದಿಲ್ಲ. ಮುಂದಿನ ಒಂದು ವಾರದೊಳಗೆ ಬಡ ಜನರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವಂತೆ ಮನವಿ ಮಾಡಿದ್ದಾರೆ.
    ವಾರ್ಡ್ ನಂ.೩೨ರ ಫಿಲ್ಟರ್‌ಶೆಡ್‌ನಲ್ಲಿ ಚರಂಡಿ ನಿರ್ವಹಣೆ ಸರಿಯಾಗಿ ಕೈಗೊಳ್ಳದ ಕಾರಣ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಅಲ್ಲದೆ ಮನೆ ಮನೆಗೆ ಸಂಪರ್ಕ ಕಲ್ಪಿಸಿರುವ ಕುಡಿಯುವ ನೀರು ಕಳೆದ ಸುಮಾರು ೩ ತಿಂಗಳಿನಿಂದ ಮಣ್ಣು ಮಿಶ್ರಿತವಾಗಿ ಕೂಡಿದೆ. ಈ ಸಂಬಂಧ ಸಹ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.