Thursday, May 26, 2022

೧೦೦ ಲೀಟರ್ ಮಂಡಕ್ಕೆ ಬೆಲೆ ೪೫೦ ರು. ನಿಗದಿ

ಭದ್ರಾವತಿ ಸೀಗೆಬಾಗಿಯಲ್ಲಿ ಗುರವಾರ ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಹಾಗು ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆ ನಡೆಯಿತು.
    ಭದ್ರಾವತಿ, ಮೇ. ೨೬: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನಲೆಯಲ್ಲಿ ೧೦೦ ಲೀಟರ್ ಮಂಡಕ್ಕಿ ಬೆಲೆ ೪೫೦ ರು. ನಿಗದಿಪಡಿಸಲಾಗಿದ್ದು, ಎಲ್ಲರೂ ಸಹಕರಿಸುವಂತೆ ಮಂಡಕ್ಕಿ ಉತ್ಪಾದನಾ ಮಾಲೀಕರು ಮನವಿ ಮಾಡಿದರು.
    ಗುರುವಾರ ನಗರಸಭೆ ವ್ಯಾಪ್ತಿಯ ಸೀಗೆಬಾಗಿಯಲ್ಲಿ ನಡೆದ ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಹಾಗು  ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಸಭೆಯಲ್ಲಿ ಮಾತನಾಡಿದ ಮಂಡಕ್ಕಿ ಉತ್ಪಾದನಾ ಮಾಲೀಕರು,  ಭತ್ತದ ಬೆಲೆ ಏರಿಕೆ, ವಿದ್ಯುತ್ ದರ ಏರಿಕೆ, ಕಾರ್ಮಿಕರ ಕೂಲಿ ಹೆಚ್ಚಳ ಹಾಗು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಮಂಡಕ್ಕಿ ಉತ್ಪಾದಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲೂ ಮಂಡಕ್ಕಿ ಉದ್ಯಮ ನಂಬಿಕೊಂಡು ಜೀವನ ಸಾಗಿಸುತ್ತಿರುವ ಕೂಲಿ ಕಾರ್ಮಿಕರು ದಿನದ ಬದುಕು ಸಾಗಿಸುವುದು ಕಷ್ಟಕರವಾಗಿದೆ. ಪ್ರಸ್ತುತ ಮಂಡಕ್ಕಿ ದರ ಅತ್ಯಂತ ಕಡಿಮೆ ಇದ್ದು, ಈ ದರದಲ್ಲಿ ಮಂಡಕ್ಕಿ ಉದ್ಯಮ ನಡೆಸುವುದು ಅಸಾಧ್ಯವಾಗಿದೆ. ಮಂಡಕ್ಕಿ ಹೆಚ್ಚಾಗಿ ಬಡವರ್ಗದವರು ಬಳಸುವ ಆಹಾರ ಪದಾರ್ಥವಾಗಿದ್ದು,  ಇಂತಹ ಆಹಾರ ಪದಾರ್ಥದ ಬೆಲೆ ಏರಿಕೆ ಮಾಡುವುದು ಇಂದು ಅನಿವಾರ್ಯವಾಗಿದೆ. ಈಗಾಗಲೇ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಹಕಾರ ಸಂಘದವರು ಸಭೆ ನಡೆಸಿ ಮಂಡಕ್ಕಿ ಬೆಲೆ ಏರಿಕೆ ಮಾಡಲು ತೀರ್ಮಾಣ ಕೈಗೊಂಡಿದ್ದಾರೆ.  ೧೦೦ ಲೀಟರ್ ಮಂಡಕ್ಕಿ ದರವನ್ನು ೪೫೦ ರು.ಗಳಿಗೆ ನಿಗದಿ ಪಡಿಸಲಾಗುತ್ತಿದೆ. ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
    ಸಹ್ಯಾದ್ರಿ ಮಂಡಕ್ಕಿ ಉತ್ಪಾದನಾ ಹಾಗು  ಮಾರಾಟ ಮತ್ತು ವಿವಿಧ ಕೈಗಾರಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಖಾದರ್ ಖಾನ್ ಸಭೆ ಅಧ್ಯಕ್ಷತೆ ವಹಿಸಿದ್ದರು.
    ಪ್ರಮುಖರಾದ ಚಿಕ್ಕಮಗಳೂರಿನ ಪಾಪಣ್ಣ, ತರೀಕೆರೆಯ ಚಾಂದ್ ಪಾಷ, ಬೇಲೂರಿನ ತಜಮ್ಮುಲ್ ಪಾಷ, ಶಿವಮೊಗ್ಗದ ಚಂದ್ರಣ್ಣ, ಹಾಸನದ ಕೃಷ್ಣೇಗೌಡ ಸೇರಿದಂತೆ  
    ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ಮಂಡಕ್ಕಿ ಉತ್ಪಾದಕರು ಹಾಗೂ ಮಾರಾಟಗಾರರು ಪಾಲ್ಗೊಂಡಿದ್ದರು.

No comments:

Post a Comment