Monday, June 13, 2022

ಆಶ್ರಯ ಬಡಾವಣೆ ಸರ್ಕಾರಿ ಶಾಲೆ ಪುಂಡ-ಪೋಕರಿಗಳ ಆಶ್ರಯ ತಾಣ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ.
    ಭದ್ರಾವತಿ, ಜೂ. ೧೩ : ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಹಳೇಯ ವಿದ್ಯಾರ್ಥಿಗಳು, ದಾನಿಗಳು ಹಾಗು ಪೋಷಕರು ಮುಂದೆ ಬರುತ್ತಿದ್ದಾರೆ. ಆದರೆ ಇಲ್ಲೊಂದು ಸರ್ಕಾರಿ ಶಾಲೆ ಪುಂಡ-ಪೋಕರಿಗಳಿಗೆ ಆಶ್ರಯ ತಾಣವಾಗಿ ಮಾರ್ಪಾಡಾಗಿದೆ. ಈ ಶಾಲೆಯ ಸ್ಥಿತಿ ಕೇಳುವವರು ಯಾರು ಇಲ್ಲವಾಗಿದೆ.


ಭದ್ರಾವತಿ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುಂಡ-ಪೋಕರಿಗಳ ಆಶ್ರಯ ತಾಣವಾಗಿರುವುದು.
    ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಸಮೀಪದಲ್ಲಿರುವ ಆಶ್ರಯ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸ್ಥಿತಿ ಕೇಳುವವರು ಯಾರು ಇಲ್ಲವಾಗಿದ್ದು, ಪುಂಡ-ಪೋಕರಿಗಳ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ರೂಪುಗೊಂಡಿದೆ. ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಸಹ ಶಾಲೆ ಸುತ್ತ ಕಾಂಪೌಂಡ್ ಇಲ್ಲವಾಗಿದೆ. ಇದರಿಂದಾಗಿ ಪುಂಡ-ಪೋಕರಿಗಳು ಶಾಲೆಯನ್ನು ಪ್ರವೇಶಿಸಿ ಶಾಲೆ ಕೊಠಡಿಗಳ ಮುಂಭಾಗದಲ್ಲಿಯೇ ಮದ್ಯಪಾನ, ಧೂಮಪಾನ ಸೇವನೆ ನಡೆಸುತ್ತಿದ್ದಾರೆ. ಜೊತೆಗೆ ಎಲೆ ಅಡಕೆ, ಗುಟ್ಕಾ, ಪಾನ್‌ಮಸಾಲ ಜಗಿದು ಅಲ್ಲಿಯೇ ಉಗಿಯುತ್ತಿದ್ದಾರೆ. ಇದರಿಂದಾಗಿ ಶಾಲಾ ಪರಿಸರ ಹಾಳಾಗುತ್ತಿದೆ.


ಭದ್ರಾವತಿ ನಗರಸಭೆ ವ್ಯಾಪ್ತಿಯ ಜಟ್‌ಪಟ್ ನಗರದ ಆಶ್ರಯ ಬಡಾವಣೆಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶೌಚಾಲಯಕ್ಕೆ ಅನಧಿಕೃತವಾಗಿ ಪ್ರವೇಶಿಸಿ ಪರಿಕರಗಳನ್ನು ನಾಶಪಡಿಸಿರುವುದು.
    ಅಲ್ಲದೆ ಅನಧಿಕೃತವಾಗಿ ಶೌಚಾಲಯಗಳಿಗೆ ಪ್ರವೇಶಿಸಿ ಪರಿಕರಗಳನ್ನು ನಾಶಪಡಿಸುತ್ತಿದ್ದಾರೆ. ಶೌಚಾಲಯದಲ್ಲೂ ಸ್ವಚ್ಚತೆ ಇಲ್ಲದಂತೆ ಮಾಡುತ್ತಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ, ಸಿಬ್ಬಂದಿಗಳಿಗೆ ಕಿರಿಕಿರಿಯಾಗುತ್ತಿದೆ. ಈ ಶಾಲೆ ಆವರಣದಲ್ಲಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಸಾಧ್ಯತೆ ಹೆಚ್ಚಾಗಿದ್ದು, ಈ ಶಾಲೆಗೆ ಚಿಕ್ಕಮಕ್ಕಳು ಹೆಚ್ಚಾಗಿ ಬರುವ ಹಿನ್ನಲೆಯಲ್ಲಿ ಈ ರೀತಿಯ ಅನೈತಿಕ ಚಟುವಟಿಕೆಗಳು ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರು ಸಾಧ್ಯತೆ ಕಂಡು ಬರುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
.

 ಯಾರೋ ಕೆಲವರು ರಾತ್ರಿ ವೇಳೆ ಬಂದು ಮದ್ಯಪಾನ, ಧೂಮಪಾನ ಸೇವನೆಯಲ್ಲಿ ತೊಡಗುತ್ತಾರೆಂಬ ಬಗ್ಗೆ ಮಾಹಿತಿ ಇದೆ. ಆದರೆ ಈ ಕುರಿತು ಅಧಿಕೃತವಾಗಿ ಯಾರು ದೂರು ನೀಡಿಲ್ಲ. ಆದರೂ ಸಹ ಪೊಲೀಸ್ ಇಲಾಖೆ ವತಿಯಿಂದ ಕೈಗೊಳ್ಳಬೇಕಾಗಿರುವ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
                                                                             - ರಾಘವೇಂದ್ರ ಕಾಂಡಿಕೆ, ನಗರ ಪೊಲೀಸ್ ವೃತ್ತ ನಿರೀಕ್ಷಕ




Sunday, June 12, 2022

ವಿಜೃಂಭಣೆಯಿಂದ ಜರುಗಿದ ವೈಕಾಶಿ ವಿಶಾಕಂ ಉತ್ಸವ

ಭದ್ರಾವತಿ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಭಾನುವಾರ ವೈಕಾಶಿ ವಿಶಾಕಂ ಉತ್ಸವ ವಿಜೃಂಭಣೆಯಿಂದ ಜರುಗಿತು. ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಭದ್ರಾವತಿ, ಜೂ. ೧೨ : ಇಲ್ಲಿಗೆ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯಸ್ವಾಮಿ ದೇವಾಲಯದಲ್ಲಿ ಭಾನುವಾರ ವೈಕಾಶಿ ವಿಶಾಕಂ ಉತ್ಸವ ವಿಜೃಂಭಣೆಯಿಂದ ಜರುಗಿತು.
    ಉತ್ಸವ ಅಂಗವಾಗಿ ಬೆಳಿಗ್ಗೆ ಮೂಲ ವಿಗ್ರಹಗಳಿಗೆ ಕ್ಷೀರಾಭಿಷೇಕ ನಂತರ ಪಂಚಾಮೃತ ಅಭಿಷೇಕ ಹಾಗು ರುದ್ರಾಭಿಷೇಕ, ಬಿಲ್ವಾರ್ಚನೆ, ಅನ್ನ ಅಭಿಷೇಕ ಮಧ್ಯಾಹ್ನ ೧೨.೩೦ಕ್ಕೆ ನೈವೇದ್ಯ ಸಮರ್ಪಣೆ, ನಂತರ ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಶ್ರೀ ಮಹಂತ್‌ಶ್ರೀ ಅಣ್ಣಾಮಲೈ ಸ್ವಾಮಿ (ಶ್ರೀ ಮೌನಿ ಬಾಬಾಜಿ ಮಹಾರಾಜ್, ಶ್ರೀ ರಾಮಮಂದಿರ್ ಪುಲಿವಾಲ, ಅಕ್ನೂರ್, ಜಮ್ಮು ಮತ್ತು ಕಾಶ್ಮೀರ್) ಹಾಗು ಸಂಗಡಿಗರಿಂದ ಜರುಗಿದವು. ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ದರ್ಶನ ಕೃಪೆಗೆ ಪಾತ್ರರಾದರು. ದೇವಸ್ಥಾನ ಸೇವಾ ಸಮಿತಿ ಪ್ರಮುಖರು, ಸೇವಾಕರ್ತರು ಉಪಸ್ಥಿತರಿದ್ದರು.

ಐಟಿಐ ವಿವಿಧ ವೃತ್ತಿ ತರಬೇತಿಗಳಿಗೆ ಅರ್ಜಿ ಆಹ್ವಾನ

(ಸಂಗ್ರಹ ಅಂತರ್ಜಾಲ ಚಿತ್ರ)
ಭದ್ರಾವತಿ: ನಗರದ ಚನ್ನಗಿರಿ ರಸ್ತೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿರುವ ಟಿಎಂಎಇಎಸ್ ಸರ್ಕಾರಿ ಅನುದಾನಿತ ಕೈಗಾರಿಕಾ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ವಿವಿಧ ವೃತ್ತಿಪರ ತರಬೇತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎರಡು ವರ್ಷದ ತರಬೇತಿಗಳಾದ ಫಿಟ್ಟರ್, ಎಲೆಕ್ಟ್ರಾನಿಕ್-ಮೆಕಾನಿಕ್, ಡ್ರಾಫ್ಟ್ ಮೆನ್ ಮೆಕಾನಿಕ್(ಡಿಎಂಎಂ), ಒಂದು ವರ್ಷದ ತರಬೇತಿಗಳಾದ ಕೋಪ(ಸಿಓಪಿಎ), ವೆಲ್ಡರ್ ವೃತ್ತಿಗೆ ಎಸ್.ಎಸ್.ಎಲ್.ಸಿ ಉತ್ತಿರ್ಣಗೊಂಡವರು ಅರ್ಜಿ ಸಲ್ಲಿಸಬಹುದಾಗಿದ್ದು, ವೆಲ್ಡರ್ ವೃತ್ತಿಗೆ ಎಸ್.ಎಸ್.ಎಲ್.ಸಿ ಅನುತ್ತೀರ್ಣಗೊಂಡವರು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: 9480897237/9900601615 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಮರು ಮೌಲ್ಯಮಾಪನದಲ್ಲಿ 2 ಅಂಕ ಸೇರ್ಪಡೆ

625ಕ್ಕೆ 624 ಅಂಕ ಪಡೆದ  ಕೆ.ಎಂ ಪೂರ್ವಿಕ

ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ 625ಕ್ಕೆ 624 ಅಂಕ ಪಡೆದುಕೊಂಡಿರುವ ಹೊಳೆಹೊನ್ನೂರು ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಕೆ.ಎಂ ಪೂರ್ವಿಕ.
    ಭದ್ರಾವತಿ, ಜೂ. 12 : ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ ವಿದ್ಯಾರ್ಥಿನಿಯೊಬ್ಬರು 625ಕ್ಕೆ 624 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.
    ಹೊಳೆಹೊನ್ನೂರು ಸೇಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಕೆ.ಎಂ ಪೂರ್ವಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 622 ಅಂಕ ಪಡೆದುಕೊಂಡಿದ್ದರು. ಮರು ಮೌಲ್ಯಮಾಪನದ ನಂತರ ದ್ವಿತೀಯ ಭಾಷೆಯಲ್ಲಿ  100ಕ್ಕೆ 99 ಅಂಕ ಪಡೆದುಕೊಂಡಿದ್ದಾರೆ.
     ತಾಲೂಕಿನಲ್ಲಿ ಈ ಬಾರಿ ಇಬ್ಬರು ವಿದ್ಯಾರ್ಥಿಯರು 625ಕ್ಕೆ 625ಕ್ಕೆ ಅಂಕ ಪಡೆದುಕೊಂಡಿದ್ದು, 36ಕ್ಕೂ ಅಧಿಕ  ವಿದ್ಯಾರ್ಥಿಗಳು 620ಕ್ಕೂ ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಪರಮೇಶ್ವರಪ್ಪ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಇ.ಓ ರಾಮಪ್ಪ, ಡಯಟ್ ಉಪನ್ಯಾಸಕಿ ರೇಣುಕಾ, ಸಂಪನ್ಮೂಲ ಸಮನ್ವಯಾಧಿಕಾರಿ ಪಂಚಾಕ್ಷರಿ, ಇಸಿಓ ರವಿಕುಮಾರ್, ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್ ಪರ್ವೀಜ್ ಸೇರಿದಂತೆ ಇನ್ನಿತರರನ್ನು ಅಭಿನಂದಿಸಿದ್ದಾರೆ.

ಎಲ್ಲರೂ ಶಿಕ್ಷಣವಂತರಾಗುವ ಮೂಲಕ ಅಂಬೇಡ್ಕರ್ ಆಶಯ ಈಡೇರಿಸಲಿ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ಅನ್ವರ್ ಕಾಲೋನಿ ಕೆಜಿಎನ್ ನೌಜವಾನ್ ಕಮಿಟಿ ವತಿಯಿಂದ ಹೊಳೆಹೊನ್ನೂರು ರಸ್ತೆಯಲ್ಲಿರುವ ಕೆಜಿನ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉದ್ಘಾಟಿಸಿದರು.
    ಭದ್ರಾವತಿ, ಜೂ. ೧೨: ವಿಶ್ವ ಜ್ಞಾನಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ನಮಗೆ ಜಗತ್ತಿನಲ್ಲಿಯೇ ಶ್ರೇಷ್ಠವಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದು, ಸಂವಿಧಾನ ನಮ್ಮೆಲ್ಲರನ್ನೂ ಒಗ್ಗೂಡಿ ಬದುಕುವಂತೆ ಮಾಡಿದೆ. ಅಲ್ಲದೆ ಇದರಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುವಂತಾಗಿದೆ. ಅಂಬೇಡ್ಕರ್‌ರವರ ಆಶಯದಂತೆ ಭವಿಷ್ಯದಲ್ಲಿ ಎಲ್ಲರೂ ಶಿಕ್ಷಣವಂತರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಸಂಘ-ಸಂಸ್ಥೆಗಳ ಅವಶ್ಯಕತೆ ಹೆಚ್ಚಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ನಗರದ ಅನ್ವರ್ ಕಾಲೋನಿ ಕೆಜಿಎನ್ ನೌಜವಾನ್ ಕಮಿಟಿ ವತಿಯಿಂದ ಹೊಳೆಹೊನ್ನೂರು ರಸ್ತೆಯಲ್ಲಿರುವ ಕೆಜಿನ್ ವೃತ್ತದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸರ್ವ ಜನಾಂಗದ ಶಾಂತಿಯ ತೋಟ ಎಂಬ ರಾಷ್ಟ್ರಕವಿ ಕುವೆಂಪುರವರ ನುಡಿಗೆ ಸಾರ್ಥಕತೆ ತಂದುಕೊಡುವ ಕೆಲಸವನ್ನು ಕೆಜಿಎನ್ ನೌಜವಾನ್ ಕಮಿಟಿ ಕೈಗೊಳ್ಳುತ್ತಿರುವುದು  ಶ್ಲಾಘನೀಯ.  ಎಲ್ಲಾ ಧರ್ಮದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
     ಎಲ್ಲಾ ಧರ್ಮದ ಸುಮಾರು ೪೦ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಆಮ್ ಆದ್ಮಿ ಪಾರ್ಟಿ ಮುಖಂಡ, ಸಮಾಜ ಸೇವಕ ಮಡಿಕಲ್ ಆನಂದ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್, ಸಿಆರ್‌ಪಿ ಇಮ್ತಿಯಾಜ್, ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್ ಅಧ್ಯಕ್ಷ ಮುತುರ್ಜಾಖಾನ್, ಶಿಕ್ಷಕ ಮುನಿರ್ ಸಾಬ್, ಜಾವಿದ್ ಪಾಷ, ರೇಷ್ಮಾ ಬಾನು, ಉಪನ್ಯಾಸಕ ನಾಸಿರ್ ಖಾನ್, ಪತ್ರಕರ್ತ ಮುಜಾಸಿರ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೆಜಿಎನ್ ನೌಜವಾನ್ ಕಮಿಟಿ ಅಧ್ಯಕ್ಷ ಅಸಾದುಲ್ಲಾ ಅಧ್ಯಕ್ಷತೆ ವಹಿಸಿದ್ದರು.  ಸೋಫಿಯಾ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ನದೀಮ್ ಪಾಷ ಸ್ವಾಗತಿಸಿದರು. ಮುಸ್ವೀರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಶಿಕ್ಷಕಿ ಬೀ ಬೀ ಫಾತಿಮಾ ಕಾರ್ಯಕ್ರಮ ನಿರೂಪಿಸಿದರು. ಮುಸ್ತಫಾ, ಇಮ್ರಾನ್, ಶಾಹಿದ್, ರಂಗಣ್ಣ, ಶಿವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ಅನ್ವರ್ ಕಾಲೋನಿ ಕೆಜಿಎನ್ ನೌಜವಾನ್ ಕಮಿಟಿ ವತಿಯಿಂದ ಹೊಳೆಹೊನ್ನೂರು ರಸ್ತೆಯಲ್ಲಿರುವ ಕೆಜಿನ್ ವೃತ್ತದಲ್ಲಿ ಭಾನುವಾರ  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Saturday, June 11, 2022

ನಾವು ಪ್ರಕೃತಿ ಉಳಿಸುವ ನಮ್ಮ ಧರ್ಮ ಪಾಲಿಸುತ್ತಿಲ್ಲ : ಡಾ. ಅನುರಾಧ ಪಟೇಲ್

ಭದ್ರಾವತಿ ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಧನ್ವಂತರಿ ಉದ್ಯಾನವನದಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಶನಿವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.
    ಭದ್ರಾವತಿ, ಜೂ. ೧೧ : ಪ್ರಕೃತಿ ನಮ್ಮ ಬದುಕಿಗೆ ಅಗತ್ಯವಿರುವ ಎಲ್ಲವನ್ನು ನೀಡುವ ಮೂಲಕ ಅದರ ಧರ್ಮವನ್ನು ಪಾಲಿಸುತ್ತಿದೆ. ಆದರೆ ನಾವು ಪ್ರಕೃತಿ ಉಳಿಸುವ ನಮ್ಮ ಧರ್ಮವನ್ನು ಪಾಲಿಸುತ್ತಿಲ್ಲ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಆರ್. ಅನುರಾಧ ಪಟೇಲ್ ವಿಷಾದ ವ್ಯಕ್ತಪಡಿಸಿದರು.
    ಅವರು ವೇದಿಕೆ ವತಿಯಿಂದ ಶನಿವಾರ ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಧನ್ವಂತರಿ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರಕೃತಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ಇದನ್ನು ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಂಡು ಮುನ್ನಡೆಯಬೇಕೆಂದರು.  
    ಸಹಾಯಕ ಅರಣ್ಯಾಧಿಕಾರಿ ರಮೇಶ್ ಪುಟ್ನಳ್ಳಿ, ಉಪ ವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ನಗರಸಭೆ ಪರಿಸರ ಅಭಿಯಂತರ ಪ್ರಭಾಕರ್ ಸೇರಿದಂತೆ ಇನ್ನಿತರರು ಮಾತನಾಡಿ, ಪ್ರತಿಯೊಬ್ಬರು ಪರಿಸರ ಉಳಿಸುವ ಪ್ರಜ್ಞೆ ಬೆಳೆಸಿಕೊಳ್ಳಬೇಕಾಗಿದೆ.  ಉಪಸ್ಥಿತರಿದ್ದರು.
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಆಶಾಲತಾ, ಪೌರ ಕಾರ್ಮಿಕರಾದ ಅಂತೋಣಿ, ಶಾಂತ ಹಾಗು ಉದ್ಯಾನವನ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಸ್ಥಳೀಯ ಹಿರಿಯರಾದ ನಂಜುಂಡೇಗೌಡ, ತಮ್ಮಯ್ಯಗೌಡ, ರಾಜಣ್ಣ, ಶಿವರಾಮಣ್ಣ,  ರೆಡ್ಡಿ, ಭೈರಪ್ಪಗೌಡ ಹಾಗು ದಿನೇಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಕಾರ್ಯಕ್ರಮದಲ್ಲಿ ಸಸಿಗಳನ್ನು ವಿತರಸಿ ಸಿಹಿ ಹಂಚಲಾಯಿತು. ವೇದಿಕೆ ಕಾರ್ಯದರ್ಶಿ ಲತಾ ಪ್ರಭಾಕರ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಶೀಲಾ ರವಿ ವಂದಿಸಿದರು.

ಏಕಾಏಕಿ ಬೆಂಕಿ : ನಡುರಸ್ತೆಯಲ್ಲಿಯೇ ಸುಟ್ಟು ಕರಕಲಾದ ವಾಹನ

ಚಲಿಸುತ್ತಿದ್ದ ಓಮ್ನಿ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ನಡು ರಸ್ತೆಯಲ್ಲಿಯೇ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಶನಿವಾರ ಭದ್ರಾವತಿ ತಾಲೂಕಿನ ಬಿಆರ್‌ಪಿ ಗೋಣಿಬೀಡು ಸಮೀಪ ನಡೆದಿದೆ.
    ಭದ್ರಾವತಿ, ಜೂ. ೧೧: ಚಲಿಸುತ್ತಿದ್ದ ಓಮ್ನಿ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ನಡು ರಸ್ತೆಯಲ್ಲಿಯೇ ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಶನಿವಾರ ತಾಲೂಕಿನ ಬಿಆರ್‌ಪಿ ಗೋಣಿಬೀಡು ಸಮೀಪ ನಡೆದಿದೆ.
    ತರೀಕೆರೆ ಮಾರ್ಗವಾಗಿ ಶಿವಮೊಗ್ಗಕ್ಕೆ ಬರುತ್ತಿದ್ದ ಓಮ್ನಿ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ಮಹಮದ್ ಅರ್ಷದ್ ಓಮ್ನಿ ವಾಹನದಿಂದ ಕೆಳಗೆ ಇಳಿದು ಹೊರ ಬಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ವಾಹನವನ್ನು ಸಂಪೂರ್ಣವಾಗಿ ವ್ಯಾಪಿಸಿಕೊಂಡಿದ್ದು, ತಕ್ಷಣ ಸ್ಥಳೀಯರು ಅಗ್ನಿ ನಂದಿಸಲು ಮುಂದಾಗಿದ್ದಾರೆ. ಆದರೂ ಅಗ್ನಿ ಮತ್ತಷ್ಟು ವ್ಯಾಪಕಗೊಂಡ ಹಿನ್ನಲೆಯಲ್ಲಿ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
    ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್, ಸಿಬ್ಬಂದಿಗಳಾದ ಸುಬ್ರಮಣ್ಯ, ಶ್ರೀನಿವಾಸ್, ವಿನೂತನ್, ಕರಿಯಣ್ಣ ಮತ್ತು ಹರೀಶ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.