ಚಿರತೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಸಿಬ್ಬಂದಿಗಳು
![](https://blogger.googleusercontent.com/img/a/AVvXsEidp8_4qfHS54gleS5VlwfzCcVmiWjCzj8ksn-DSOHRC1XkKOa1ws0STDP6fJlDO2xL0dNqw9bmTsyRASsiLLK4ZWLTiFAQroGnH4I7Nv7w7ZUiO-h3BW-ESfVm06X3mVthCe0Uro-2cU0i9UwZSCFDyuoeXDLb2dFeCKNWU7kWY1LVtgVZJt3G5cCcMQ=w400-h339-rw)
ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆ. ಭದ್ರಾವತಿ, ಜೂ. ೨೨: ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದ ಚಿರತೆಯೊಂದನ್ನು ಸುಮಾರು ೪ ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ನೋಡಲು ಜಮಾಯಿಸಿರುವ ಜನರು. ಬೆಳಿಗ್ಗೆ ಪಾಳು ಬಿದ್ದಿದ್ದ ಮನೆಯಿಂದ ಏಕಾಏಕಿ ಹೊರಬಂದು ಕಾಣಿಸಿಕೊಂಡಿದ್ದ ಚಿರತೆ ಮಹಿಳೆಯೊಬ್ಬರ ಮೈ ಪರಚಿ ಮತ್ತೊಂದು ಮನೆಯ ಹಿಂಬದಿಯಲ್ಲಿ ಅವಿತುಕೊಂಡಿದ್ದು, ತಕ್ಷಣ ಮಾಹಿತಿ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡರು. ಚಿರತೆ ಬೇರೆ ಕಡೆಗೆ ತಪ್ಪಿಸಿಕೊಳ್ಳದಂತೆ ಎಚ್ಚರ ವಹಿಸಿದ ಅರಣ್ಯ ಸಿಬ್ಬಂದಿಗಳು ಸುತ್ತುವರೆದು ಕಾರ್ಯಾಚರಣೆ ನಡೆಸಿದರು. ವನ್ಯಜೀವಿ ವಿಭಾಗದ ಶಿವಮೊಗ್ಗ ವೃತ್ತದ ಹಿರಿಯ ಪಶು ವೈದ್ಯಾಧಿಕಾರಿ ಡಾ. ವಿನಯ್‌ರವರ ತಂಡ ಚುಚ್ಚು ಮದ್ದು ನೀಡಿದ ನಂತ ಅರಣ್ಯ ಸಿಬ್ಬಂದಿಗಳು ಚಿರತೆಯನ್ನು ಬಲೆ ಬೀಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆ ಮಹಿಳೆಯೊಬ್ಬರ ಮೈ ಪರಚಿರುವುದು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಟ್ನಳ್ಳಿ, ವಲಯ ಅರಣ್ಯಾಧಿಕಾರಿ ರಾಜೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಬಿ.ಆರ್ ದಿನೇಶ್‌ಕುಮಾರ್, ನವೀನ್, ಅರಣ್ಯ ರಕ್ಷಕರಾದ ಬಾಲರಾಜ್, ಶ್ರೀಧರ್, ಅರಣ್ಯ ವೀಕ್ಷಕರಾದ ಶಶಿಲ್‌ಕುಮಾರ್, ನಾಗೇಂದ್ರಪ್ಪ ಹಾಗು ವ್ಯನ್ಯಜೀವಿ ವಿಭಾಗದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಚುಚ್ಚುಮದ್ದು ನೀಡಿದ ನಂತರ ಬಲೆ ಬೀಸಿ ಸೆರೆ ಹಿಡಿದಿರುವುದು.
ಸ್ಥಳಕ್ಕೆ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್ ಹಾಗು ಸಿಬ್ಬಂದಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟು ಕಾರ್ಯಾಚರಣೆಗೆ ಸಹಕರಿಸಿದರು.
ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದು ಬೋನಿಗೆ ಬಿಡಲಾಯಿತು.
ಇದಕ್ಕೂ ಮೊದಲು ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಯಿತು. ಚಿರತೆ ಪತ್ತೆಯಾದ ಸ್ಥಳದ ಸಮೀಪದಲ್ಲಿಯೇ ಶ್ರೀ ಸತ್ಯಸಾಯಿಬಾಬಾ ಶಾಲೆ, ವಿಐಎಸ್‌ಎಲ್ ಆಸ್ಪತ್ರೆ(ದೊಡ್ಡಾಸ್ಪತ್ರೆ) ಹಾಗು ಅಂಗಡಿ ಮುಂಗಟ್ಟುಗಳಿವೆ. ಸದ್ಯ ಚಿರತೆ ಶಾಲೆ ಆವರಣ ಪ್ರವೇಶಿಸಿಲ್ಲ. ಅಲ್ಲದೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಅರಣ್ಯ ಸಿಬ್ಬಂದಿಗಳ ಕಾರ್ಯಾಚರಣೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಚಿರತೆ ಬಗ್ಗೆ ಮಾಹಿತಿ ತಿಳಿದು ನಗರದ ವಿವಿಧೆಡೆಗಳಿಂದ ಜನರು ಸ್ಥಳಕ್ಕೆ ಆಗಮಿಸಿ ಜಮಾಯಿಸಿದ್ದರು. ಇದರಿಂದಾಗಿ ಜನರನ್ನು ಪೊಲೀಸರು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಜನರ ಸದ್ದು ಗದ್ದಲದಿಂದಾಗಿ ಸೆರೆ ಹಿಡಿಯುವುದು ಸ್ವಲ್ಪ ವಿಳಂಬವಾಯಿತು ಎನ್ನಲಾಗಿದೆ.