Tuesday, June 28, 2022

ಅಪೇಕ್ಷ ಮಂಜುನಾಥ್‌ಗೆ ಕಲಾಭೂಷಣ ರಾಜ್ಯಮಟ್ಟದ ಪ್ರಶಸ್ತಿ

ದಾವಣಗೆರೆ ಗಾನಸುಧೆ ಕಲಾ ಬಳಗ ವತಿಯಿಂದ ಭದ್ರಾವತಿ ಜ್ಯೂನಿಯರ್ ವಿಷ್ಣುವರ್ಧನ್, ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್ ಅವರಿಗೆ ಕಲಾಭೂಷಣ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಭದ್ರಾವತಿ, ಜೂ. ೨೮: ದಾವಣಗೆರೆ ಗಾನಸುಧೆ ಕಲಾ ಬಳಗ ವತಿಯಿಂದ ನಗರದ ಜ್ಯೂನಿಯರ್ ವಿಷ್ಣುವರ್ಧನ್, ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್ ಅವರಿಗೆ ಕಲಾಭೂಷಣ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    ಅಪೇಕ್ಷ ಮಂಜುನಾಥ್ ಅವರು ಕಲಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಬಳಗದ ವತಿಯಿಂದ ಡಾ. ಪುನೀತ್ ರಾಜ್‌ಕುಮಾರ್‌ರವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಗೀತಾ ನುಡಿನಮನ ಮತ್ತು ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    ಅಪೇಕ್ಷ ಮಂಜುನಾಥ್ ಅವರು ಹಲವಾರು ವರ್ಷಗಳಿಂದ ದೈಹಿಕ ಶಿಕ್ಷಕ ವೃತ್ತಿಯೊಂದಿಗೆ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಹಲವಾರು ಬಿರುದು, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರನ್ನು ಕಲಾಭಿಮಾನಿಗಳು ಅಭಿನಂದಿಸಿದ್ದಾರೆ.

ಭದ್ರಾ ಎಡೆದಂತೆ ಕಾಲುವೆಯಲ್ಲಿ ಕಳಪೆ ಕಾಮಗಾರಿ : ಗುಣಮಟ್ಟದ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

ಭದ್ರಾವತಿ ತಾಲೂಕಿನ ಬಿಳಿಕಿ ಕೆರೆಗೆ ಹೊಂದಿಕೊಂಡಿರುವ ನವಿಲೆ ಬಸಾಪುರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಭದ್ರಾ ಎಡದಂತೆ ಕಾಲುವೆಯ ಸೇತುವೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಮಂಗಳವಾರ ಗ್ರಾಮಸ್ಥರು ತಕ್ಷಣ ಕಳಪೆ ಕಾಮಗಾರಿ ತೆರವುಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಆಗ್ರಹಿಸಿದರು.
    ಭದ್ರಾವತಿ, ಜೂ. ೨೮: ತಾಲೂಕಿನ ಬಿಳಿಕಿ ಕೆರೆಗೆ ಹೊಂದಿಕೊಂಡಿರುವ ನವಿಲೆ ಬಸಾಪುರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಭದ್ರಾ ಎಡದಂತೆ ಕಾಲುವೆಯ ಸೇತುವೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಗ್ರಾಮಸ್ಥರು ತಕ್ಷಣ ಕಳಪೆ ಕಾಮಗಾರಿ ತೆರವುಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಆಗ್ರಹಿಸಿದ್ದಾರೆ.
    ಕಾಲುವೆಗೆ ಅಡ್ಡಲಾಗಿ ಬಿಳಿಕಿ ಗ್ರಾಮಕ್ಕೆ ಸಂಪರ್ಕಗೊಂಡಿರುವ ಸೇತುವೆ ಶಿಥಿಲಗೊಂಡಿದ್ದು, ಈ ಹಿನ್ನಲೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸಿದ ಹಿನ್ನಲೆಯಲ್ಲಿ ಶಾಸಕರು ನೀರಾವರಿ ನಿಗಮಕ್ಕೆ ಸೇತುವೆ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದು, ಕರ್ನಾಟಕ ನೀರಾವರಿ ನಿಗಮ ಭದ್ರಾ ಪ್ರಾಜೆಕ್ಟ್ ವತಿಯಿಂದ ಸುಮಾರು ೩೪.೫೦ ಲಕ್ಷ ರು. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು ಒಂದು ವಾರದ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಕಳಪೆಯಿಂದ ನಿರ್ವಹಿಸುತ್ತಿದ್ದು, ಸೇತುವೆ ತಳಪಾಯಕ್ಕೆ ಕಡಿಮೆ ಸಾಮರ್ಥ್ಯದ ಕಬ್ಬಿಣದ ರಾಡ್ ಬಳಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೂ ಸಹ ಕಾಮಗಾರಿ ಸ್ಥಗಿತಗೊಳಿಸದೆ ಮುಂದುವರೆಸಲಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
    ಮಂಗಳವಾರ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಪತ್ರಿಕೆಯೊಂದಿಗೆ ಮಾತನಾಡಿ, ಸೇತುವೆ ಕಾಮಗಾರಿ ಕಳಪೆಯಿಂದ ಕೂಡಿದೆ. ಹಲವಾರು ಬಾರಿ ಗುತ್ತಿಗೆದಾರನಿಗೆ ಗುಣಮಟ್ಟದ ಕಾಮಗಾರಿ ನಡೆಸುವಂತೆ ಮನವಿ ಮಾಡಿದರೂ ಸಹ ನಿರ್ಲಕ್ಷ್ಯತನ ವಹಿಸಲಾಗುತ್ತಿದೆ ಎಂದು ಆರೋಪಿಸಿದರು.
    ಕಾಮಗಾರಿ ಆರಂಭಿಸುವ ಕುರಿತು ಯಾವುದೇ ಮುನ್ಸೂಚನೆ ಸಹ ನೀಡಿಲ್ಲ. ಅಲ್ಲದೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಸಹ ಕೈಗೊಂಡಿಲ್ಲ. ಸೇತುವೆ ಎರಡು ಬದಿಯಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಕಾಮಗಾರಿ ಕುರಿತು ಸಂಪೂರ್ಣ ವಿವರ ಪ್ರಕಟಿಸಬೇಕು. ಆದರೆ ಯಾವುದನ್ನು ಸಹ ಮಾಡಿಲ್ಲ. ಈಗಾಗಲೇ ಈ ಸ್ಥಳದಲ್ಲಿ ಅಪಘಾತ ಸಂಭವಿಸಿದ್ದು, ಆದರೂ ಸಹ ಎಚ್ಚೆತ್ತುಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಕಾಮಗಾರಿ ನಿರ್ವಹಿಸುತ್ತಿದ್ದ ಪ್ರಕಾಶ್ ವಠಾರೆ ಎಂಬುವರು ಮಾತನಾಡಿ, ಟೆಂಡರ್‌ನಲ್ಲಿ ನಮೂದಿಸಿರುವಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದರು. ಆದರೆ ಕಳಪೆ ಕಾಮಗಾರಿ ಕುರಿತು ಯಾವುದೇ ಸ್ಪಷ್ಟನೆ ನೀಡಲಿಲ್ಲ. ಈ ನಡುವೆ ಗ್ರಾಮಸ್ಥರು ಆಕ್ರೋಶಗೊಂಡ ಹಿನ್ನಲೆಯಲ್ಲಿ ಸ್ಥಳದಿಂದ ಕಾಲ್ಕಿತ್ತರು.

ಕಾರ್ಮಿಕರು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲಿ : ಸಚಿವ ಶಿವರಾಂ ಹೆಬ್ಬಾರ್

ಭದ್ರಾವತಿ ಬೈಪಾಸ್ ರಸ್ತೆ ಉಜ್ಜನಿಪುರ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮೀಪದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೂತನ ಕಾರ್ಮಿಕರ ಭವನ ನಿರ್ಮಾಣಕ್ಕೆ ಮಂಗಳವಾರ ಸಚಿವರಾದ ಶಿವರಾಂ ಹೆಬ್ಬಾರ್, ಡಾ. ಕೆ.ಸಿ ನಾರಾಯಣಗೌಡ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಇನ್ನಿತರರು ಭೂಮಿ ಪೂಜೆ ನೆರವೇರಿಸಿದರು.
    ಭದ್ರಾವತಿ, ಜೂ. ೨೮: ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಮಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಕ್ಷೇತ್ರ ಭದ್ರಾವತಿಯಾಗಿದ್ದು, ವಿಶೇಷವಾಗಿ ಕಾರ್ಮಿಕರು ಸಹ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂಬ ಆಶಯ ನನ್ನದಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದರು.
    ಅವರು ಮಂಗಳವಾರ ನಗರದ ಬೈಪಾಸ್ ರಸ್ತೆ ಉಜ್ಜನಿಪುರ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮೀಪದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೂತನ ಕಾರ್ಮಿಕರ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
    ಕಾರ್ಮಿಕ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಹುಮುಖ್ಯವಾಗಿ ಕಾರ್ಮಿಕರ ಮಕ್ಕಳು ಸಹ ಶಿಕ್ಷಣವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಸಂಪೂರ್ಣವಾಗಿ ಇಲಾಖೆ ವತಿಯಿಂದ ಭರಿಸಲಾಗುತ್ತಿದೆ ಎಂದರು.
    ಕಾರ್ಮಿಕರ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅಲ್ಲದೆ ಎಲ್ಲಾ ರೀತಿಯ ಅಸಂಘಟಿತ ಕಾರ್ಮಿಕರ ನೆರವಿಗೆ ಮುಂದಾಗುವ ಉದ್ದೇಶದಿಂದ ಇ-ಶ್ರಮ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅಸಂಘಟಿತ ಕಾರ್ಮಿಕರು ಉಚಿತವಾಗಿ ನೋಂದಾಣಿ ಮಾಡಿಕೊಂಡು ಕಾರ್ಡ್ ಪಡೆಯುವ ಮೂಲಕ ಸರ್ಕಾರದ ಸೌಲರ್ಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ ಮಾತನಾಡಿ, ಒಬ್ಬ ಕಾರ್ಮಿಕನಾಗಿ ಕಾರ್ಮಿಕರ ನೋವು-ನಲಿವುಗಳನ್ನು ಅರಿತುಕೊಂಡಿರುವ ಸಚಿವ ಶಿವರಾಂ ಹೆಬ್ಬಾರ್‌ರವರು ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಗೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
    ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಕಾರ್ಮಿಕ ಸಚಿವರು ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಜಿಲ್ಲೆಯಲ್ಲಿರುವ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ಧರಾಗಿದ್ದಾರೆ. ಅವರು ಕಾರ್ಮಿಕರ ಬಗ್ಗೆ ಹೊಂದಿರುವ ಕಾಳಜಿಗೆ ಶಿವಮೊಗ್ಗ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕ ಭವನ ನಿರ್ಮಾಣಕ್ಕೆ ಸಚಿವರು ಇನ್ನೂ ಹೆಚ್ಚಿನ ೧೫ ಕೋ. ರು. ಅನುದಾನ ನೀಡಬೇಕು. ಕ್ಷೇತ್ರದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ತೆರೆಯುವ ಮೂಲಕ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
     ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಮ ಪಾಷ, ಕಾರ್ಯನಿರ್ವಹಣಾಧಿಕಾರಿ ಎಂ.ಪಿ ಗುರುಪ್ರಸಾದ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಎಸ್. ದತ್ತಾತ್ರಿ, ಬಿ.ಕೆ ಶ್ರೀನಾಥ್, ಎಂ. ಪ್ರಭಾಕರ್, ಎಸ್. ಕುಮಾರ್, ಕೆ. ಮಂಜುನಾಥ್, ಮಂಗೋಟೆರುದ್ರೇಶ್, ಜಿ. ಆನಂದಕುಮಾರ್, ಮಣಿ ಎಎನ್‌ಎಸ್, ಲತಾ ಚಂದ್ರಶೇಖರ್, ಅನುಪಮ ಚನ್ನೇಶ್, ಅನ್ನಪೂರ್ಣ, ರವಿಕುಮಾರ್, ಮಂಜುನಾಥ್, ಕರೀಗೌಡ, ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಚಂದ್ರಶೇಖರ್, ವಿ.ವಿನೋದ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Monday, June 27, 2022

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಮೊದಲ ದಿನ ೧೨ ವಿದ್ಯಾರ್ಥಿಗಳು ಗೈರು

    ಭದ್ರಾವತಿ, ಜೂ. ೨೭: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಮೊದಲ ದಿನ ೧೨೪ ವಿದ್ಯಾರ್ಥಿಗಳ ಪೈಕಿ ೧೧೨ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದಾರೆ.
    ಈ ಕುರಿತು ಮಾಹಿತಿ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮೊದಲ ದಿನ ವಿಜ್ಞಾನ ವಿಷಯ ಪರೀಕ್ಷೆ ನಡೆದಿದ್ದು, ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ೫೬ ವಿದ್ಯಾರ್ಥಿಗಳ ಪೈಕಿ ೫೨ ಹಾಗು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ೬೮ ವಿದ್ಯಾರ್ಥಿಗಳ ಪೈಕಿ ೬೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು ೧೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. 

ಸ್ನೇಹ ಜೀವಿ ಬಳಗದಿಂದ ಕೆಂಪೇಗೌಡ ಜಯಂತಿ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

 ಭದ್ರಾವತಿ ಸ್ನೇಹ ಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜೂ. ೨೭ : ಸ್ನೇಹ ಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು.
    ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಹಿ ಹಂಚಿಕೆ ಹಾಗು ಅನ್ನಸಂತರ್ಪಣೆ ನಡೆಸಲಾಯಿತು. ಅಲ್ಲದೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸಲಾಯಿತು.
    ಪೊಲೀಸ್ ಉಮೇಶ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಅವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
    ಕೆಂಪೇಗೌಡರ ಜಯಂತಿಯಂದು ಮಹಿಳೆಯರನ್ನು ವಿಶೇಷವಾಗಿ ಗೌರವಿಸುವ ಮೂಲಕ ಉಚಿತವಾಗಿ ಸೀರೆ ವಿತರಿಸಲಾಗುತ್ತಿದೆ. ಪ್ರತಿಯೊಂದು ಕಾರ್ಯದ ಹಿಂದೆ ಮಹಿಳೆಯರು ಇದ್ದಾರೆ. ಅವರನ್ನು ಸಮಾಜದಲ್ಲಿ ಪ್ರತಿಯೊಬ್ಬರು ಗೌರವಿಸುವ ಜೊತೆಗೆ ಅವರನ್ನು ಸಮಾನವಾಗಿ ಕಾಣಬೇಕೆಂಬ ಆಶಯ ಇದಾಗಿದೆ ಎಂದರು.
    ತಾಲೂಕು ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷ್ಮಣ ಮಾತನಾಡಿ, ಸ್ನೇಹ ಜೀವಿ ಬಳಗದ ವತಿಯಿಂದ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ತಾಲೂಕು ಒಕ್ಕಲಿಗರ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಕಸಾಪ ಮಾಜಿ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಸಂದೇಶ್‌ಗೌಡ, ಸುಹಾಸ್‌ಗೌಡ ಸೇರಿದಂತೆ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

ನಾಡಪ್ರಭು ಕೆಂಪೇಗೌಡರು ಜಾತ್ಯಾತೀತ ಮನೋಭಾವದ ವ್ಯಕ್ತಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ಸಿದ್ದರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಿದರು.
    ಭದ್ರಾವತಿ, ಜೂ. ೨೭ : ನಾಡಪ್ರಭು ಕೆಂಪೇಗೌಡರು ಜಾತ್ಯಾತೀತ ಮನೋಭಾವದವರಾಗಿದ್ದು, ಕೇವಲ ಒಂದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಕೆಂಪೇಗೌಡರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ಸಿದ್ದರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ಬೆಂಗಳೂರು ಮಹಾನಗರವನ್ನು ವಿಶ್ವವೇ ಎದುರು ನೋಡುವಂತಾಗಿದೆ. ಇಂತಹ ನಗರ ನಿರ್ಮಾಣಕ್ಕೆ ಕೆಂಪೇಗೌಡರ ಜಾತ್ಯಾತೀತ ಮನೋಭಾವ ಕಾರಣವಾಗಿದೆ. ಎಲ್ಲರನ್ನು ಒಗ್ಗೂಡಿಸಿ ಆಧುನಿಕ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ. ಇಂತಹ ಆದರ್ಶ ವ್ಯಕ್ತಿಯನ್ನು ನಾವೆಲ್ಲರೂ ಸ್ಮರಿಸುವ ಮೂಲಕ ಅವರ ದಾರಿಯಲ್ಲಿ ಸಾಗಬೇಕಾಗಿದೆ ಎಂದರು.
    ಕ್ಷೇತ್ರದಲ್ಲಿರುವ ಒಕ್ಕಲಿಗರ ಸಮುದಾಯದ ಏಳಿಗೆಗೆ ಬದ್ಧನಾಗಿದ್ದು, ಈ ಹಿಂದೆ ಸಮುದಾಯ ಭವನ ನಿರ್ಮಾಣಕ್ಕೆ ೧ ಕೋ. ರು. ಬಿಡುಗಡೆ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಸಮುದಾಯವರು ಯಾರು ಸಹ ಮುಂದೆ ಬಂದಿಲ್ಲ. ಈಗಲೂ ಸಹ ಅನುದಾನ ಬಿಡುಗಡೆ ಮಾಡಿಸಿಕೊಡಲು ಸಿದ್ದವಿದ್ದೇನೆ ಎಂದರು.
    ಉಪನ್ಯಾಸ ನೀಡಿದ ಕುವೆಂಪು ವಿಶ್ವ ವಿದ್ಯಾನಿಲಯದ ಪ್ರೊ. ಇ. ಚಂದ್ರಶೇಖರ್, ಕೆಂಪೇಗೌಡರು ಒಬ್ಬ ರಾಜನಾಗಿ, ಸಾಮಾಜಿಕ ಸುಧಾರಕನಾಗಿ ಸ್ವಾಮಿ ನಿಷ್ಠೆಯನ್ನು ಪ್ರಾಮಾಣಿಕವಾಗಿ ಪಾಲಿಸಿಕೊಂಡು ಬಂದವರು. ಇವರ ನಡೆ ವಿಭಿನ್ನ ರೀತಿಯಿಂದ ಕೂಡಿದ್ದು, ವೈಶಿಷ್ಟ್ಯ ಪೂರ್ಣವಾಗಿದೆ. ಇವರು ಹೊಂದಿದ್ದ ಜನರ ಬಗೆಗಿನ ಕಾಳಜಿ, ದೂರದೃಷ್ಟಿ, ಆಡಳಿತ ವೈಖರಿಗಳು ಎಲ್ಲರನ್ನು ಬೆರಗುಗೊಳಿಸುತ್ತವೆ ಎಂದರು.
    ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಮಾತನಾಡಿ, ಕೆಂಪೇಗೌಡ ಜಯಂತಿ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸರ್ಕಾರದ ನೀತಿ ನಿರೂಪಣೆಯಂತೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸರಿಯಷ್ಟೆ, ಇದರಿಂದಾಗಿ ಈ ಬಾರಿ ಕೆಲವು ಗೊಂದಲಗಳು ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನು ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಲತಾ ಚಂದ್ರಶೇಖರ್, ಶೃತಿ ವಸಂತ್, ಪಲ್ಲವಿ ದಿಲೀಪ್, ಅನುಪಮಾ ಚನ್ನೇಶ್, ಅನುಸುಧಾ, ಅನಿತಾ ಮಲ್ಲೇಶ್, ಬಿ.ಪಿ ಸ್ವರ್ಣಮಂಗಳ ಭೈರಪ್ಪ, ಕೋಟೇಶ್ವರ ರಾವ್, ಮಣಿ ಎಎನ್‌ಎಸ್, ಕಾಂತರಾಜ್, ಜಯಶೀಲ ಸುರೇಶ್, ಸವಿತಾ ಉಮೇಶ್, ಕೋಟೇಶ್ವರರಾವ್, ಉದಯಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮತಿ ಕಾರಂತ್ ತಂಡವರು ಪ್ರಾರ್ಥಿಸಿದರು. ಶಿರಸ್ತೇದಾರ್ ರಾಧಾಕೃಷ್ಣಭಟ್ ಸ್ವಾಗತಿಸಿದರು. ಉಪ ತಹಸೀಲ್ದಾರ್ ಮಂಜ್ಯಾನಾಯ್ಕ ನಿರೂಪಿಸಿದರು.


ಕೆಂಪೇಗೌಡ ಜಯಂತಿ ಬೃಹತ್ ಮೆರವಣಿಗೆಗೆ ಬಿ.ಕೆ ಸಂಗಮೇಶ್ವರ್ ಚಾಲನೆ



ಭದ್ರಾವತಿ, ಜೂ. ೨೭: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
ಬಿ.ಎಚ್ ರಸ್ತೆ ಅಪ್ಪರ್ ಹುತ್ತಾದಿಂದ ಸಭಾ ವೇದಿಕೆವರೆಗೂ ನಾಡಪ್ರಭು ಕೆಂಪೇಗೌಡ ಹಾಗೂ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರ ಹಾಗು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ಬಿ.ಎಚ್ ರಸ್ತೆ ಮೂಲಕ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ತಾಲೂಕು ಕಛೇರಿ ರಸ್ತೆಯಲ್ಲಿ ಸಾಗಿ ಕೆಎಸ್‌ಆರ್‌ಟಿಸಿ ಡಿಪೋ ವೃತ್ತ ಮೂಲಕ ಸಿದ್ದಾರೂಢನಗರದ ಬಸವೇಶ್ವರ ಸಭಾ ಭವನದ ವರೆಗೂ ಸಾಗಿತು.
ಪುರುಷ ಮತ್ತು ಮಹಿಳೆಯರ ಡೊಳ್ಳು ಕುಣಿತ, ಗೊಂಬೆ ನೃತ್ಯ ಸೇರಿದಂತೆ ಇನ್ನಿತರ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದವು. ಕೆಂಪೇಗೌಡ ವೇಷದಾರಿ ಎಲ್ಲರ ಗಮನ ಸೆಳೆದರು.
ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್, ಎಂಎಸ್ಎಂಇ ಘಟಕದ ರಾಜ್ಯಾಧ್ಯಕ್ಷ ಎಚ್.ಸಿ ರಮೇಶ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಬಾಲಕೃಷ್ಣ, ತಿಮ್ಮೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಹಾಗೂ ಪದಾಧಿಕಾರಿಗಳು, ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷ ಎಂ.ಎಸ್ ಸುಧಾಮಣಿ ಹಾಗೂ ಪದಾಧಿಕಾರಿಗಳು, ಕೆಂಪೇಗೌಡ ಯುವ ಪಡೆ ಅಧ್ಯಕ್ಷ ಆರ್. ಮೋಹನ್ ಕುಮಾರ್ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್, ನಗರಸಭೆ ಅಧ್ಯಕ್ಷೆ ಗೀತ ರಾಜಕುಮಾರ್,  ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನು ಕುಮಾರ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು, ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಒಕ್ಕಲಿಗ ಸಮಾಜದ ಮುಖಂಡರು ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.