Wednesday, June 29, 2022

ಏಕಾಏಕಿ ಸರ್ಕಾರಿ ಜಮೀನಿನಲ್ಲಿ ಅಕ್ರಮ ನಿವೇಶನ, ಮನೆ

ತಹಸೀಲ್ದಾರ್ ನೇತೃತ್ವದ ತಂಡದಿಂದ ತೆರವು ಕಾರ್ಯಾಚರಣೆ

ಭದ್ರಾವತಿ ತಾಲೂಕಿನ ತಾವರೆಘಟ್ಟ ಗ್ರಾಮದ ಸರ್ವೆ ನಂ.೧೪ರ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಳ್ಳಲಾಗಿದ್ದ ನಿವೇಶನ ಹಾಗು ಮನೆ ತೆರವುಗೊಳಿಸುವಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಬುಧವಾರ ಯಶಸ್ವಿಯಾಗಿದೆ.
    ಭದ್ರಾವತಿ, ಜೂ. ೨೯: ತಾಲೂಕಿನ ತಾವರೆಘಟ್ಟ ಗ್ರಾಮದ ಸರ್ವೆ ನಂ.೧೪ರ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಳ್ಳಲಾಗಿದ್ದ ನಿವೇಶನ ಹಾಗು ಮನೆ ತೆರವುಗೊಳಿಸುವಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಬುಧವಾರ ಯಶಸ್ವಿಯಾಗಿದೆ.
    ಕಳೆದ ಕೆಲವು ದಿನಗಳ ಹಿಂದೆ ಸರ್ಕಾರಿ ಜಮೀನಿನಲ್ಲಿ ಏಕಾಕಿ ನಿವೇಶನ ಹಾಗು ಮನೆ ನಿರ್ಮಿಸಿಕೊಂಡಿದ್ದು, ಈ ಮಾಹಿತಿ ತಿಳಿದ ತಕ್ಷಣ ಸೂಕ್ತ ದಾಖಲೆ ಪತ್ರಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಕೈಗೊಂಡು ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು.


    ಕಾರ್ಯಾಚರಣೆಯಲ್ಲಿ ತಾವರಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು, ಕಂದಾಯ ನಿರೀಕ್ಷಕ ಸತೀಶ್, ರಘು ಹಾಗು ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಬುಧವಾರ ಭದ್ರಾವತಿ ಮಾಧವಚಾರ್ ವೃತ್ತದಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜೂ. ೨೯ : ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಬುಧವಾರ ನಗರದ ಮಾಧವಚಾರ್ ವೃತ್ತದಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
    ಪಕ್ಷದ ಪ್ರಮುಖರು ಮಾತನಾಡಿ, ರಾಜಸ್ತಾನದ ಉದಯಪುರದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿ ಪೋಸ್ಟ್ ಮಾಡಿದ ಕಾರಣಕ್ಕೆ ಕನ್ನಯ್ಯಾ ಲಾಲ್ ಅವರನ್ನು ಹತ್ಯೆ ಮಾಡಿರುವುದು ಖಂಡನೀಯ, ದೇಶದಲ್ಲಿ ಹಿಂದುಗಳು ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ತಕ್ಷಣ ಕೊಲೆ ಆರೋಪಿಗಳನ್ನು ಬಂಧಿಸಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಪ್ರಮುಖರಾದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಪ್ರಧಾನ ಕಾರ್ಯದರ್ಶಿ ಚನ್ನೇಶ್, ಯುವ ಘಟಕದ ಅಧ್ಯಕ್ಷ ವಿಜಯ್ ಸಿದ್ದಾಥ್, ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್, ವಿ. ಕದಿರೇಶ್, ಎಸ್. ಕುಮಾರ್, ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ನಕುಲ್, ಗೋಕುಲ್ ಕೃಷ್ಣ, ಧನುಷ್ ಬೋಸ್ಲೆ, ಮಹಿಳಾ ಪ್ರಮುಖರಾದ ಶೋಭಾ ಪಾಟೀಲ್, ಗೌರಮ್ಮ, ಮಂಜುಳಾ, ಶಕುಂತಲಾ, ಅನುಷಾ, ಕವಿತಾ ಸುರೇಶ್, ರೇಖಾ ಪದ್ಮಾವತಿ, ಅನ್ನಪೂರ್ಣ, ಹೇಮಾವತಿ ವಿಶ್ವನಾಥ್, ಕವಿತಾರಾವ್, ಲೋಲಾಕ್ಷಿ, ಭಾಗಿರತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿರಿಯೂರು ಗ್ರಾಮ ಪಂಚಾಯಿತಿ ಪಿಡಿಓ ವಿರುದ್ಧ ಪ್ರತಿಭಟನೆ

ಕರ್ತವ್ಯ ಲೋಪ, ಅಕ್ರಮವಾಗಿ ಎನ್‌ಓಸಿ ನೀಡಿದ ಆರೋಪ

ಭದ್ರಾವತಿ ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ, ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಬುಧವಾರ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜೂ. ೨೯ : ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ, ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಬುಧವಾರ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಳೆದ ಸುಮಾರು ೧೦ ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಪರಮೇಶ್ವರಪ್ಪ, ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಜೊತೆಗೆ  ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಪಂಚಾಯಿತಿ ಕೆಲಸ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಅಲ್ಲದೆ ಹಳೇ ಹಿರಿಯೂರು ಭಾಗದ ಗ್ರಾಮ ಠಾಣಾ ಜಾಗದ ಒಂದೇ ನಿವೇಶನಕ್ಕೆ ಅಕ್ರಮವಾಗಿ ಪುನಃ ವಿದ್ಯುತ್ ಸಂಪರ್ಕ ಪಡೆಯಲು ಆಕ್ಷೇಪಣ ರಹಿತ ಪತ್ರ (ಎನ್‌ಓಸಿ) ನೀಡುವ ಮೂಲಕ ಅಕ್ರಮವೆಸಗಿದ್ದಾರೆಂದು ಆರೋಪಿಸಲಾಯಿತು.
    ತಕ್ಷಣ ಅಭಿವೃದ್ಧಿ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರು ಈ ಸಂಬಂಧ ಸೂಕ್ತ ತನಿಖೆ ಕೈಗೊಂಡು ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
    ಪ್ರಮುಖರಾದ ಕೆ.ಟಿ ಪ್ರಸನ್ನ, ರವಿ, ಸತ್ಯನಾರಾಯಣರಾವ್, ಎಚ್.ವೈ ಕುಮಾರ್, ಸಂತೋಷ್ ಹಾಗು ಅಂಬೇಡ್ಕರ್ ಕಾಲೋನಿ ನಿವಾಸಿಗಳು ಪಾಲ್ಗೊಂಡಿದ್ದರು.

ಯುವ ಮೋರ್ಚಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎನ್ ಪ್ರಜ್ವಲ್ ನೇಮಕ


ಬಿ.ಎನ್ ಪ್ರಜ್ವಲ್
    ಭದ್ರಾವತಿ, ಜೂ. ೨೯ : ಬಿಜೆಪಿ ಯುವ ಮೋರ್ಚಾ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎನ್ ಪ್ರಜ್ವಲ್ ನೇಮಕಗೊಂಡಿದ್ದಾರೆ.
    ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಪ್ರಜ್ವಲ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಯುವ ಮುಖಂಡ ನಕುಲ್ ಅವರಿಂದ ತೆರವಾದ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಯುವ ಮೋರ್ಚಾ ಅಧ್ಯಕ್ಷ ವಿಜಯ್ ಸಿದ್ದಾರ್ಥ್ ಹಾಗು ಇನ್ನಿತರ ಮುಖಂಡರು ಪ್ರಜ್ವಲ್ ಅವರನ್ನು ಅಭಿನಂದಿಸಿದ್ದಾರೆ.

Tuesday, June 28, 2022

ಜು.೧ರಿಂದ ಉದ್ಯೋಗ ಕಾಯಂಗೊಳಿಸಲು ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ

    ಭದ್ರಾವತಿ, ಜೂ. ೨೯: ಉದ್ಯೋಗ ಕಾಯಂಗೊಳಿಸುವಂತೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ನೇರಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಜು.೧ರಂದು ನಗರಸಭೆ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.
    ಈ ಹಿಂದೆ ಹಲವು ಬಾರಿ ಸರ್ಕಾರಕ್ಕೆ ಉದ್ಯೋಗ ಕಾಯಂಗೊಳಿಸುವಂತೆ ಮನವಿ ಮಾಡಿದ್ದು, ಆದರೆ ಇದಕ್ಕೆ ಸರ್ಕಾರ ಇದುವರೆಗೂ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಪ್ರಸ್ತುತ ನೀಡಲಾಗುತ್ತಿರುವ ವೇತನದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಉದ್ಯೋಗದ ಭದ್ರತೆ ಜೊತೆಗೆ ಜೀವನದ ಭದ್ರತೆ ಸಹ ಇಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ಕಾಯಂಗೊಳಿಸುವುದು ಅನಿರ್ವಾಯವಾಗಿದ್ದು, ನ್ಯಾಯ ಸಿಗುವ ವರೆಗೂ ಮುಷ್ಕರ ನಡೆಸಲಾಗುವುದು.
    ನಗರಸಭೆ ನೇರಪಾವತಿ ಪೌರ ಕಾರ್ಮಿಕರು, ಲೋಡರ್‍ಸ್, ಕಸದ ವಾಹನ ಚಾಲಕರು ಹಾಗು ಹೆಲ್ಪರ್‍ಸ್, ಶೌಚಾಲಯ ನೌಕರರು ಹಾಗು ನೇರಪಾವತಿ ಹೊರಗುತ್ತಿಗೆಯಲ್ಲಿರುವ ಎಲ್ಲಾ ವಿಭಾಗದ ನೌಕರರು ಸಹ ಮುಷ್ಕರದಲ್ಲಿ ಪಾಲ್ಗೊಳ್ಳುವ ಯಶಸ್ವಿಗೊಳಿಸುವಂತೆ ಸಂಘದ ಖಜಾಂಮಚಿ ನರಸಿಂಹಮೂರ್ತಿ ಮನವಿ ಮಾಡಿದ್ದಾರೆ.  

ಕೆರೆ ಸಂರಕ್ಷಣೆ ಎಲ್ಲರ ಕರ್ತವ್ಯ : ಬಿ.ಕೆ ಸಂಗಮೇಶ್ವರ್


ಭದ್ರಾವತಿ ತಾಲೂಕಿನ ಅಂತರಗಂಗೆ ವಲಯದ ಕಾರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪೇಗೌಡ ನಗರದ ಕಾರೇಹಳ್ಳಿ ಕೆರೆಗೆ ಬಾಗಿನ ಅರ್ಪಣೆ, ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡಿದ್ದರು.

    ಭದ್ರಾವತಿ, ಜೂ. ೨೮: ಕೆರೆಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.
    ಅವರು ತಾಲೂಕಿನ ಅಂತರಗಂಗೆ ವಲಯದ ಕಾರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪೇಗೌಡ ನಗರದ ಕಾರೇಹಳ್ಳಿ ಕೆರೆಗೆ ಬಾಗಿನ ಅರ್ಪಣೆ, ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯೋಜನೆ ವತಿಯಿಂದ ೭.೫೦ ಲಕ್ಷ ರು. ವೆಚ್ಚದಲ್ಲಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾರ್ಯ ಮಾದರಿಯಾಗಿದ್ದು, ಎಲ್ಲರೂ ಸೇರಿ ಕೆರೆಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.  
    ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಮಾತನಾಡಿ,  ಜಿಲ್ಲೆಯಲ್ಲಿ ೨ ಕೋ. ರು. ವೆಚ್ಚದಲ್ಲಿ ೨೪ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕಾರೇಹಳ್ಳಿ ಕೆರೆ ಅಭಿವೃದ್ಧಿಪಡಿಸಲು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕೆರೆ ಸಮಿತಿ ಸದಸ್ಯರು ಹೆಚ್ಚಿನ ಸಹಕಾರ ನೀಡಿದ್ದು, ಇದರಿಂದಾಗಿ ಕೆರೆಯನ್ನು ಸುಂದರವಾಗಿ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಹಾಯಕ ನಿರ್ದೇಶಕರಾದ ಉಪೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ಅಂಬಿಕಾ, ಕೆರೆ ಸಮಿತಿ ಅಧ್ಯಕ್ಷ ಯೋಗೀಶ್, ಕೆರೆ ಇಂಜಿನೀಯರ್ ಗಣಪತಿ, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ವೈ. ಪ್ರಕಾಶ್, ಕಾರೇಹಳ್ಳಿ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು, ಕೃಷಿ ಮೇಲ್ವಿಚಾರಕ ಗೋವಿಂದಪ್ಪ, ವಲಯದ ಮೇಲ್ವಿಚಾರಕ ಕುಮಾರ್, ಸ್ಥಳೀಯ ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಊರಿನ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಅಪೇಕ್ಷ ಮಂಜುನಾಥ್‌ಗೆ ಕಲಾಭೂಷಣ ರಾಜ್ಯಮಟ್ಟದ ಪ್ರಶಸ್ತಿ

ದಾವಣಗೆರೆ ಗಾನಸುಧೆ ಕಲಾ ಬಳಗ ವತಿಯಿಂದ ಭದ್ರಾವತಿ ಜ್ಯೂನಿಯರ್ ವಿಷ್ಣುವರ್ಧನ್, ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್ ಅವರಿಗೆ ಕಲಾಭೂಷಣ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಭದ್ರಾವತಿ, ಜೂ. ೨೮: ದಾವಣಗೆರೆ ಗಾನಸುಧೆ ಕಲಾ ಬಳಗ ವತಿಯಿಂದ ನಗರದ ಜ್ಯೂನಿಯರ್ ವಿಷ್ಣುವರ್ಧನ್, ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್ ಅವರಿಗೆ ಕಲಾಭೂಷಣ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    ಅಪೇಕ್ಷ ಮಂಜುನಾಥ್ ಅವರು ಕಲಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಬಳಗದ ವತಿಯಿಂದ ಡಾ. ಪುನೀತ್ ರಾಜ್‌ಕುಮಾರ್‌ರವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಗೀತಾ ನುಡಿನಮನ ಮತ್ತು ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    ಅಪೇಕ್ಷ ಮಂಜುನಾಥ್ ಅವರು ಹಲವಾರು ವರ್ಷಗಳಿಂದ ದೈಹಿಕ ಶಿಕ್ಷಕ ವೃತ್ತಿಯೊಂದಿಗೆ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಹಲವಾರು ಬಿರುದು, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರನ್ನು ಕಲಾಭಿಮಾನಿಗಳು ಅಭಿನಂದಿಸಿದ್ದಾರೆ.