ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿ.ಎಂ ಖಾದರ್ ಪತ್ರಿಕಾಗೋಷ್ಠಿಯಲ್ಲಿ ಆರೋಪ
ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿ.ಎಂ ಖಾದರ್ ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಜು. ೫: ನಗರದ ರಂಗಪ್ಪ ವೃತ್ತದಲ್ಲಿ ಕಳೆದ ಎರಡು ದಿನಗಳ ಹಿಂದೆ ಬಜರಂಗದಳ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಉಂಟಾಗಿರುವ ಗಲಾಟೆಗೆ ಬಜರಂಗದಳ ಕಾರ್ಯಕರ್ತರು ಕಾರಣಕರ್ತರಾಗಿದ್ದಾರೆ. ಸ್ಥಳೀಯ ಪೊಲೀಸರು ನೈಜತೆ ಮರೆಮಾಡಿ ಪಕ್ಷವೊಂದರ ಏಜೆಂಟರಂತೆ ವರ್ತಿಸುತ್ತಿದ್ದಾರೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿ.ಎಂ ಖಾದರ್ ಆರೋಪಿಸಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದವರು ಎಲ್ಲರೊಂದಿಗೂ ಸರ್ವಸಮನ್ವಯತೆಯನ್ನು ಕಾಯ್ದುಕೊಂಡು ಬದುಕುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರ ಮೇಲೆ ವಿನಾಕಾರಣ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಕಳೆದ ಎರಡು ದಿನಗಳ ಹಿಂದೆ ಅಂದರೆ ಜು.೩ರಂದು ರಂಗಪ್ಪವೃತ್ತದಲ್ಲಿ ಬಜರಂಗದಳ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ವಿನಾಕಾರಣ ಬಟ್ಟೆ ಅಂಗಡಿಯೊಂದಕ್ಕೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೋರ್ವನ ಮೇಲೆ ಹಲ್ಲೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷಿಗಳು ಸಿ.ಸಿ ಕ್ಯಾಮೇರಾದಲ್ಲಿ ದಾಖಲಾಗಿದೆ. ಅದರಂತೆ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ ೩ ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆ ರೀತಿ ಮಾಡದೆ ಬಂಧಿತರನ್ನು ಬಿಟ್ಟು ಕಳುಹಿಸಿದ್ದಾರೆ. ಪೊಲೀಸರು ರಾಜಕೀಯ ಪಕ್ಷವೊಂದರ ಏಜೆಂಟರಂತೆ ನಡೆದುಕೊಂಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿರುವ ಬಟ್ಟೆ ಅಂಗಡಿ ಸಿಬ್ಬಂದಿ ೬ ಜನ ಬಜರಂಗದಳ ಕಾರ್ಯಕರ್ತರ ವಿರುದ್ದ ದೂರು ದಾಖಲಿಸಿದ್ದು, ಮುಸ್ಲಿಂ ಸಮುದಾಯದವರು ಯಾವುದೇ ತಪ್ಪು ಮಾಡಿಲ್ಲ. ಪ್ರತಿಭಟನೆ ವೇಳೆ ಯಾರನ್ನು ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ. ಆದರೂ ಸಹ ವಿನಾಕಾರಣ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಆರೋಪಿಸಿದರು.
ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಕಳಂಕ ತರಬೇಕೆಂಬ ದುರುದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ನಿರ್ಮಾಣ ಮಾಡಲು ಯತ್ನಿಸಲಾಗುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದವರು ಈ ದೇಶದ ಸಂವಿಧಾನ ಹಾಗು ನ್ಯಾಯಾಂಗದ ಮೇಲೆ ವಿಶ್ವಾಸ ಹೊಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಉನ್ನತ ಮಟ್ಟದ ತನಿಖೆ ನಡೆಸಿ ನೈಜ ತಪ್ಪಿತಸ್ಥರು ಯಾರೇ ಆಗಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಫೀರ್‌ಷರೀಫ್, ಮುರ್ತುಜಾಖಾನ್, ತಬ್ರೇಜ್‌ಖಾನ್, ಅಫ್ತಾಬ್ ಅಹಮದ್, ಐಸಾಕ್, ಅಮೋಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.