ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ವಿಷಾದ
![](https://blogger.googleusercontent.com/img/a/AVvXsEjNQZVdLOHi95pmaa33U5FvMxRg14HuBPONPNuu0ONKUt9lv8bMauAHRbUVDdIlJU_4Y74u067rvAnq9C3p_cRlgP5ssA4IJn299EDT40r29yG7H3FU5q3XJ58DycRiiQIWWblmRo2O0FQ5K7xMgJdRMMTUj86HaPMZrhG2ijnQfpfLBakIP8S4Wt3oFg=w400-h193-rw)
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗು ಕಾಗದನಗರದ ಗುರು ಬ್ರದರ್‍ಸ್ ಆರ್ಟ್ಸ್ ವತಿಯಿಂದ ಶ್ರೀಮತಿ ಸರೋಜಮ್ಮನವರ ಮೊದಲ ವರ್ಷದ ಭಾವಸ್ಮರಣೆ ಅಂಗವಾಗಿ ಭದ್ರಾವತಿ ಉಜ್ಜನಿಪುರದ ಡಿ.ಜಿ ಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಣ್ಣದ ಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨ನೇ ಸಾಹಿತ್ಯ ಹುಣ್ಣಿಮೆ ತಿಂಗಳ ಮನೆ-ಮನ-ಸಾಹಿತ್ಯ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸೀತವ್ವ ಜೋಡಟ್ಟಿ ಉದ್ಘಾಟಿಸಿದರು.
ಭದ್ರಾವತಿ, ಜು. ೯: ಪ್ರಸ್ತುತ ಸಮಾಜದಲ್ಲಿ ವಿಕೃತ ಮನಸ್ಸಿನ ಜನರು ಹೆಚ್ಚಾಗುತ್ತಿದ್ದು, ಜನರು ನಮ್ಮನಾಳುವ ಸರ್ಕಾರ ಹಾಗು ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ವಿಷಾದ ವ್ಯಕ್ತ ಪಡಿಸಿದರು.
ಅವರು ಶನಿವಾರ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗು ಕಾಗದನಗರದ ಗುರು ಬ್ರದರ್‍ಸ್ ಆರ್ಟ್ಸ್ ವತಿಯಿಂದ ಶ್ರೀಮತಿ ಸರೋಜಮ್ಮನವರ ಮೊದಲ ವರ್ಷದ ಭಾವಸ್ಮರಣೆ ಅಂಗವಾಗಿ ಉಜ್ಜನಿಪುರದ ಡಿ.ಜಿ ಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಣ್ಣದ ಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨ನೇ ಸಾಹಿತ್ಯ ಹುಣ್ಣಿಮೆ ತಿಂಗಳ ಮನೆ-ಮನ-ಸಾಹಿತ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಬೆಲೆ ಇಲ್ಲದಂತಾಗಿದೆ. ವಿಕೃತ ಮನಸ್ಸಿನವರು ಹೆಚ್ಚಾಗಿದ್ದು, ಇಂತಹ ವ್ಯವಸ್ಥೆಗೆ ನಾವುಗಳೇ ಕಾರಣರಾಗಿದ್ದೇವೆ. ಸಮಾಜದಲ್ಲಿ ಉತ್ತಮ ವ್ಯವಸ್ಥೆ ರೂಪುಗೊಳ್ಳಬೇಕಾದರೆ ಒಳ್ಳೆಯ ಸರ್ಕಾರ ಆಡಳಿತಕ್ಕೆ ತರಬೇಕೆಂದರು.
ಇತ್ತೀಚೆಗೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಆಯೋಜಿಸಲಾಗಿದ್ದ ಜೊತೆಗಿರುವನು ಚಂದಿರ ನಾಟಕ ಪ್ರದರ್ಶನಕ್ಕೆ ಕಿಡಿಗೇಡಿಗಳು ಅಡ್ಡಿಪಡಿಸಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ನಾಡಿನಲ್ಲಿ ಕನ್ನಡ ತೇರು ಎಳೆಯುವವರು ಕಡಿಮೆಯಾಗುತ್ತಿದ್ದು, ಕತ್ತರಿ ಹಾಕುವವರು ಹೆಚ್ಚಾಗುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಮನಷ್ಯನ ಅವಿಭಾಗ್ಯ ಅಂಗಗಳಾಗಿವೆ. ಮನಸ್ಸಿಗೆ ನೆಮ್ಮದಿ ಜೊತೆಗೆ ಸಮಾಜದಲ್ಲಿ ಉತ್ತಮ ವ್ಯವಸ್ಥೆ ರೂಪಿಸಿಕೊಳ್ಳಲು ಸಹಕಾರಿಯಾಗಿವೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಹುಣ್ಣಿಮೆ ತಿಂಗಳ ಮನೆ-ಮನ-ಸಾಹಿತ್ಯ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಲಾವಿದ ಗುರು ಅವರು ಹೊಂದಿರುವ ಕ್ರಿಯಾಶೀಲತೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ಸಂಘಟನೆಯ ನೇತೃತ್ವ ವಹಿಸಿರುವವರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಮುನ್ನಡೆಯಬೇಕೆಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸೀತವ್ವ ಜೋಡಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್, ಜಾತ್ಯಾತೀತ ಜನತಾದಳ ಮುಖಂಡರಾದ ಶಾರದ ಅಪ್ಪಾಜಿ, ಉಪಾಧ್ಯಕ್ಷ ಚನ್ನಪ್ಪ, ಅಂತರರಾಷ್ಟ್ರೀಯ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಬಿ.ಕೆ ಗುರುರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಕೋಗಲೂರು ತಿಪ್ಪೇಸ್ವಾಮಿ, ಕೋಡ್ಲು ಯಜ್ಞಯ್ಯ, ಎಂ.ಎಸ್ ಸುಧಾಮಣಿ, ಎಂ.ಎಸ್ ಶಿವಪ್ರಕಾಶ್, ಜಿ. ಬೊಮ್ಮಯ್ಯ, ಬಿ.ಎನ್ ಸುರೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಾಡು-ಹಾಸ್ಯ-ಕವನ-ಹನಿಗವನ-ಕಥೆ-ವಿಚಾರ ಸಾಂಸ್ಕೃತಿಕ ಕಾರ್ಯಕ್ರಮ, ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ, ಕರೋನಾ ಯೋಧರಿಗೆ ಅಭಿನಂದನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು. ಕಲಾದೇಗುಲ ಶ್ರೀನಿವಾಸ್ ನಿರೂಪಿಸಿದರು. ಕಲಾವಿದ ಬಿ. ಗುರು ಸ್ವಾಗತಿಸಿದರು.