Tuesday, August 2, 2022

ಜೈನ ಗುರುಗಳ ಪಾದಯಾತ್ರೆಯಲ್ಲಿ ಸ್ವಯಂ ಪ್ರೇರಣೆಯಿಂದ ಸೇವೆ

ಉದ್ಯಮಿ ಪ್ರಮಿತ್ ಧಾರ್ಮಿಕ ಸೇವೆಗೆ ಸಿಆರ್‌ಟಿಸಿ ಅಭಿನಂದನೆ

ಭದ್ರಾವತಿ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಕಮಲ್ ರೋಡ್ ಲೈನ್ಸ್ ಮತ್ತು ಶ್ರೀ ಪ್ರಮಿತ್ ರೋಡ್ ಲೈನ್ಸ್ ಉದ್ಯಮಿ, ಸಮಾಜ ಸೇವಕ ಪ್ರಮಿತ್ ಅವರು ಜೈನ ಗುರುಗಳ ಸುಮಾರು ೮ ತಿಂಗಳ ಪಾದಯಾತ್ರೆಯ ಸೇವಾ ಕಾರ್ಯಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡು ಗುರು ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಅವರನ್ನು ರೈಫಲ್ಸ್ ಅಸೋಸಿಯೇಷನ್ಸ್ (ಸಿಆರ್‌ಟಿಸಿ) ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.
    ಭದ್ರಾವತಿ, ಆ. ೨: ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿರುವ ಶ್ರೀ ಕಮಲ್ ರೋಡ್ ಲೈನ್ಸ್ ಮತ್ತು ಶ್ರೀ ಪ್ರಮಿತ್ ರೋಡ್ ಲೈನ್ಸ್ ಉದ್ಯಮಿ, ಸಮಾಜ ಸೇವಕ ಪ್ರಮಿತ್ ಅವರು ಜೈನ ಗುರುಗಳ ಸುಮಾರು ೮ ತಿಂಗಳ ಪಾದಯಾತ್ರೆಯ ಸೇವಾ ಕಾರ್ಯಗಳಲ್ಲಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡು ಗುರು ಸೇವೆಯನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಅವರನ್ನು ರೈಫಲ್ಸ್ ಅಸೋಸಿಯೇಷನ್ಸ್ (ಸಿಆರ್‌ಟಿಸಿ) ವತಿಯಿಂದ ಮಂಗಳವಾರ ಅಭಿನಂದಿಸಲಾಯಿತು.
    ಜೈನ ಸಮಾಜದ ಆಚಾರ್ಯ ಶ್ರೀ ೧೦೮ ವರ್ಧಮಾನ ಸಾಗರ್ ಮುನಿ ಮಹಾರಾಜ್ ಸೇರಿದಂತೆ ೩೦ ಗುರುಗಳು ಹಾಗು ೧೦೦ ಅನುಯಾಯಿಗಳನ್ನೊಳಗೊಂಡ ತಂಡ ಕಳೆದ ವರ್ಷ ನ.೧೫ರಿಂದ ಬೆಳಗಾವಿಯಿಂದ ರಾಜಸ್ಥಾನದ ಭಗವಾನ್ ಶ್ರೀ ಮಹಾವೀರ್ ಕ್ಷೇತ್ರದ ವರೆಗೂ ಸುಮಾರು ೮ ತಿಂಗಳ ಪಾದಯಾತ್ರೆ ನಡೆಸಿದ್ದು, ಪ್ರತಿದಿನ ಸುಮಾರು ೧೫ ರಿಂದ ೨೦ ಕಿ.ಮೀ ಒಟ್ಟು ೧೮೦೦ ಕಿ.ಮೀ ಯಾತ್ರೆ ಇದಾಗಿದೆ. ಈ ಸಂದರ್ಭದಲ್ಲಿ ಪ್ರಮಿತ್ ಅವರು ಪ್ರತಿ ದಿನ ದಾರಿಯುದ್ದಕ್ಕೂ ಗುರುಗಳ ತಂಡ ಉಳಿದುಕೊಳ್ಳಲು ಶಾಲೆ/ಛತ್ರದ ವ್ಯವಸ್ಥೆ, ಆಹಾರ ತಯಾರಿಕೆಗೆ ಇದ್ದಿಲು ಪೂರೈಕೆ, ಕುಡಿಯಲು ಬಾವಿ ನೀರಿನ ವ್ಯವಸ್ಥೆ ಇತ್ಯಾದಿ ಸೇವೆಗಳನ್ನು ಯಾವುದೇ ಫಲಾಫೇಕ್ಷೆ ಇಲ್ಲದೆ ಕೈಗೊಂಡಿದ್ದಾರೆ. ಅಲ್ಲದೆ ಸುಮಾರು ೫ ವರ್ಷಗಳ ಕಾಲ ಜೈನ ಧರ್ಮದ ಪುಣ್ಯ ಕ್ಷೇತ್ರಗಳಾದ ಶ್ರವಣಬೆಳಗೊಳ, ಧರ್ಮಸ್ಥಳ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿದ್ದಾರೆ.  ಇವರ ಧಾರ್ಮಿಕ ಸೇವಾ ಮನೋಭಾವ ಇತರರಿಗೂ ಸ್ಪೂರ್ತಿದಾಯಕವಾಗಲಿ ಎಂಬ ಉದ್ದೇಶದೊಂದಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
    ಪ್ರಮಿತ್ ಅವರು ಕೇವಲ ಧಾರ್ಮಿಕ ಸೇವಾ ಕಾರ್ಯ ಮಾತ್ರವಲ್ಲದೆ ರೈಫಲ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಹಳಷ್ಟು ಸೇವಾ ಕಾರ್ಯಗಳಲ್ಲೂ ಪಾಲ್ಗೊಂಡು ಸೇವೆ ಸಲ್ಲಿಸಿದ್ದಾರೆ.
    ರೈಫಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಮೂರ್ತಿ, ಕಾರ್ಯದರ್ಶಿ ಎಂ.ಎಸ್ ರವಿ, ಖಜಾಂಚಿ ಅಮಿತ್ ಕುಮಾರ್ ಜೈನ್, ಪ್ರಮುಖರಾದ ಡಿ.ಎನ್ ಅಶೋಕ್, ಸಿ.ಎನ್ ಗಿರೀಶ್, ಜಿ.ಎನ್ ಸತ್ಯಮೂರ್ತಿ, ಕೆ.ಜಿ ರಾಜ್‌ಕುಮಾರ್, ಪಿ.ಸಿ ಜೈನ್, ಮಿಥುನ್, ವೈ. ನಟರಾಜ್,  ಮಂಜುನಾಥ್, ಬಾಲಾಜಿ, ರಾಜು, ಅನ್ನಪೂರ್ಣ ಸತೀಶ್, ಲತಾ ಮೋರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, August 1, 2022

ಸ್ಮಶಾನ ಜಾಗಕ್ಕೆ ಆಗ್ರಹಿಸಿ ತಮ್ಮಡಿಹಳ್ಳಿ ಗ್ರಾಮದಲ್ಲಿ ಪ್ರತಿಭಟನಾ ಧರಣಿ ಸತ್ಯಾಗ್ರಹ

ಭದ್ರಾವತಿ ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗದ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಭದ್ರಾವತಿ, ಆ. ೧:  ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗದ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ೧೯೯೮-೯೯ರಲ್ಲಿ ತಹಸೀಲ್ದಾರ್‌ರವರು ಅಧಿಕೃತವಾಗಿ ಪಹಣಿಯಲ್ಲಿ ಗ್ರಾಮದ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗ ಎಂದು ನಮೂದಿಸಿದ್ದಾರೆ. ಆದರೂ ಸಹ ಕೆಲವರು ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಸಹ ಈ ಜಾಗ ನಮ್ಮದು ಎಂದು ಕಬಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅಧಿಕಾರಿಗಳು ಹಾಗು ರಾಜಕಾರಣಿಗಳು ವರ್ತಿಸುತ್ತಿದ್ದಾರೆಂದು ಆರೋಪಿಸಲಾಯಿತು.
    ೨೦೧೭ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಲೋಕೇಶ್‌ರವರು ಮನವಿಗೆ ಸ್ಪಂದಿಸಿ ಖುದ್ದಾಗಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವ ಜೊತೆಗೆ ಸ್ಮಶಾನ ಜಾಗದ ಹದ್ದುಬಸ್ತು ಮಾಡಿ ಗಡಿ ಗುರುತಿಸಿ ಅಳತೆ ಮಾಡುವಂತೆ ಹಾಗು ಒತ್ತುದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಅವರಿಗೆ ಆದೇಶಿಸಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
     ಗ್ರಾಮಗಳಿಗೆ ಅಗತ್ಯವಿರುವ ಸ್ಮಶಾನ ಜಾಗ ಕಡ್ಡಾಯವಾಗಿ ಕಲ್ಪಿಸಿಕೊಡುವಂತೆ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಬಿ.ಆರ್.ಪಿ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ ಗ್ರಾಮಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಕ್ಷಣ ಸ್ಮಶಾನ ಜಾಗ ಕಲ್ಪಿಸಿಕೊಡುವಂತೆ ಆಗ್ರಹಿಸಲಾಯಿತು.
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರತಿಭಟನಾ ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿದ್ದರು. ಪ್ರಮುಖರಾದ ಶಶಿಕುಮಾರ್ ಗೌಡ, ಈ. ಕೃಷ್ಣ, ಅಭಿಮನ್ಯು, ಕೃಷ್ಣಮೂರ್ತಿ, ಜಿ. ಸಂತೋಷ್, ಎಲ್.ಬಿ ನಂದಕುಮಾರ್, ಎಂ.ಬಿ ವಿಶ್ವನಾಥ್, ಶ್ರೀನಿವಾಸ್, ನೇತ್ರಾ, ಜಲಜಾಕ್ಷಿ, ಮೀನಾ, ಸಿದ್ದಮ್ಮ, ಚಲುವಿ, ಭಾಗ್ಯ, ಲಕ್ಷ್ಮಮ್ಮ, ಲಲಿತಾ, ಗಂಗಮ್ಮ, ಯಲ್ಲಮ್ಮ, ಎಂ.ಕೆ ಪುಷ್ಪ, ವಾಣಿ, ವರಲಕ್ಷ್ಮಿ, ಮುನಿಯಮ್ಮ, ಸುಲೋಚನ, ಶಕೀಲ, ಮಹೇಶ್ವರಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಆ.೨ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಆ. ೧: ಮೆಸ್ಕಾಂ ಘಟಕ-೨ರ ವ್ಯಾಪ್ತಿಯ ತರೀಕೆರೆ ರಸ್ತೆ ಮಹಾತ್ಮಗಾಂಧಿ ವೃತ್ತದ ಸಮೀಪದಲ್ಲಿರುವ  ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಪರಿವರ್ತಕ ಮತ್ತು ಎಲ್.ಟಿ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ  ಆ. ೨ ರಂದು ಬೆಳಗ್ಗೆ ೯.೩೦ ರಿಂದ ಸಂಜೆ ೬.೩೦ ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ನಗರಸಭೆ ಕಛೇರಿ ಸುತ್ತಮುತ್ತಲಿನ ಪ್ರದೇಶ, ಭೂತನಗುಡಿ, ಮಾಧವಚಾರ್ ವೃತ್ತ, ಗಾಂಧಿನಗರ, ಮಾಧವನಗರ, ಎನ್.ಎಂ.ಸಿ ರಸ್ತೆ, ಹಳೇ ಸಂತೆಮೈದಾನ, ಕೋಡಿಹಳ್ಳಿ, ಗೌರಾಪುರ, ಲಕ್ಷ್ಮೀಪುರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಶಿಶುವಿಹಾರ ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

ಭದ್ರಾವತಿ ನಗರಸಭೆ ವಾರ್ಡ್ ನಂ.೩ರ ಗೌಳಿಗರ ಬೀದಿ ೧೩ನೇ ರಸ್ತೆಯಲ್ಲಿರುವ ಶಿಶುವಿಹಾರ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ತಾತ್ಕಾಲಿಕವಾಗಿ ಈ ಕಟ್ಟಡವನ್ನು ದುರಸ್ತಿಗೊಳಿಸಿ ಮಕ್ಕಳ ಕಲಿಕೆಗೆ ನೆರವಾಗುವ ಮೂಲಕ ಹೊಸದಾಗಿ ಶಿಶುವಿಹಾರ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಆಡಳಿತಕ್ಕೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೧ : ನಗರಸಭೆ ವಾರ್ಡ್ ನಂ.೩ರ ಗೌಳಿಗರ ಬೀದಿ ೧೩ನೇ ರಸ್ತೆಯಲ್ಲಿರುವ ಶಿಶುವಿಹಾರ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ತಾತ್ಕಾಲಿಕವಾಗಿ ಈ ಕಟ್ಟಡವನ್ನು ದುರಸ್ತಿಗೊಳಿಸಿ ಮಕ್ಕಳ ಕಲಿಕೆಗೆ ನೆರವಾಗುವ ಮೂಲಕ ಹೊಸದಾಗಿ ಶಿಶುವಿಹಾರ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಆಡಳಿತಕ್ಕೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
        ಶಿಶುವಿಹಾರ ಕಟ್ಟಡ ಸುಮಾರು ೪೫ ವರ್ಷಗಳಿಗೂ ಹಳೇಯದಾಗಿದ್ದು, ತುಂಬಾ ಶಿಥಿಲಗೊಂಡಿದೆ. ಮಕ್ಕಳು ಶಿಶುವಿಹಾರಕ್ಕೆ ಹೋಗದೆ ಕಲಿಕೆಯಿಂದ ವಂಚಿತರಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಥಿಲಗೊಂಡಿರುವ ಕಟ್ಟಡ ತಕ್ಷಣ ದುರಸ್ತಿಗೊಳಿಸದಿದ್ದಲ್ಲಿ ಅನಾಹುತ ಖಚಿತ. ಮಕ್ಕಳ ಭವಿಷ್ಯದ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಹಾಗು ಹೊಸದಾಗಿ ಶಿಶುವಿಹಾರ ನಿರ್ಮಾಣ ಮಾಡುವ ಮೂಲಕ ಮಕ್ಕಳ ಕಲಿಕೆಗೆ ಎಲ್ಲಾ ರೀತಿ ಸೌಲರ್ಭ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಲಾಗಿದೆ.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಮನುಕುಮಾರ್ ಅವರಿಗೆ ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಫ್ರಾನ್ಸಿಸ್, ಮಂಜುಳಮ್ಮ, ಪ್ರವೀಣ, ಶಿವು, ಭೂಪಾಲ್, ಮದನ್, ಪುರುಷೋತ್ತಮ್, ಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, July 31, 2022

ಪಾಲಿಶ್ ಮಾಡುವ ನೆಪದಲ್ಲಿ ಚಿನ್ನದ ಮಾಂಗಲ್ಯ ಸರ ಅಪಹರಣ

    ಭದ್ರಾವತಿ, ಜು. ೩೧: ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಪಾಲಿಶ್ ಮಾಡುವ ನೆಪದಲ್ಲಿ ಚಿನ್ನದ ಮಾಂಗಲ್ಯ ಸರ ಪಡೆದು ಪರಾರಿಯಾಗಿರುವ ಘಟನೆ ತಾಲೂಕಿನ ತಾರೀಕಟ್ಟೆ ಗ್ರಾಮದಲ್ಲಿ ನಡೆದಿದೆ.
    ದ್ವಿಚಕ್ರ ವಾಹನದಲ್ಲಿ ಗ್ರಾಮದ ಕೆಂಪಮ್ಮ ಎಂಬುವರ ಮನೆ ಬಳಿ ಬಂದ ಇಬ್ಬರು ಅಪರಿಚತ ವ್ಯಕ್ತಿಗಳು ಮೊದಲು ಬೆಳ್ಳಿ ಸಾಮಾನು ಮತ್ತು ಹಿತ್ತಾಳೆ ವಸ್ತುಗಳನ್ನ ತೆಗೆದುಕೊಂಡು ಬನ್ನಿ ಪಾಲಿಶ್ ಹಾಕಿಕೊಡುತ್ತೇವೆ ಎಂದು ಕೇಳಿದ್ದಾರೆ. ಕೆಂಪಮ್ಮ ಬೆಳ್ಳಿ ಆಭರಣ ಕಾಲ್ಚೈನ್ ಮತ್ತು ದೇವರ ಮನೆಯ ಹಿತ್ತಾಳೆ ಸಾಮಾಗ್ರಿಗಳನ್ನ ತಂದು ಕೊಟ್ಟಿದ್ದಾರೆ. ಇವುಗಳನ್ನು ಪಾಲಿಶ್ ಮಾಡಿದ ನಂತರ ಕೆಂಪಮ್ಮ ಅವರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಪಡೆದು ಕೊಂಡಿದ್ದಾರೆ. ನಂತರ ಕೆಂಪಮ್ಮಳಿಗೆ ಒಂದು ಲೋಟ ನೀರು ತೆಗೆದುಕೊಂಡು ಬರಲು ಹೇಳಿದ್ದು, ನೀರು ತರುವಷ್ಟರಲ್ಲಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ
    ಕೆಂಪಮ್ಮ ೪೭ ಗ್ರಾಂ ತೂಕ ಮಾಂಗಲ್ಯ ಸರ ಕಳೆದುಕೊಂಡಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಮಾಜಕ್ಕೆ ನಮ್ಮೆಲ್ಲರ ಕೊಡುಗೆ ಅರ್ಥ ಮಾಡಿಕೊಂಡಾಗ ಮಾತ್ರ ಬದುಕು ಸಾರ್ಥಕ

ಭದ್ರಾವತಿ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ಉದ್ಘಾಟಿಸಿದರು.
    ಭದ್ರಾವತಿ, ಜು. ೩೧: ಸಮಾಜಕ್ಕೆ ನಮ್ಮೆಲ್ಲರ ಕೊಡುಗೆ ಏನೆಂಬುದನ್ನು ಅರಿತುಕೊಂಡಾಗ ಮಾತ್ರ ನಮ್ಮ ಬದುಕು ಸಾರ್ಥಕಗೊಳ್ಳುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಹೇಳಿದರು.
    ಅವರು ಭಾನುವಾರ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.
    ಸಮಾಜದಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವವರಿಗೆ ಪ್ರೋತ್ಸಾಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಹೆಚ್ಚು ಹೆಚ್ಚು ಸಮಾಜ ಮುಖಿ ಕಾರ್ಯಗಳು ನಡೆಯುವಂತಾಗಬೇಕು. ಯುವ ಸಮುದಾಯ ಸ್ವಯಂ ಪ್ರೇರಣೆಯಿಂದ ಟ್ರಸ್ಟ್ ರಚಿಸಿಕೊಂಡು ಸೇವಾ ಕಾರ್ಯಕ್ಕೆ ಮುಂದಾಗಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.
    ಟ್ರಸ್ಟ್ ಕಾರ್ಯದರ್ಶಿ ಚರಣ್ ಮಾತನಾಡಿ, ಯಾವುದೇ ಧರ್ಮ, ಜಾತಿ, ಭಾಷೆ, ಭೇದಭಾವವಿಲ್ಲದೆ ಎಲ್ಲರನ್ನು ಒಂದೆಡೆ ಸಂಘಟಿಸುವುದು ಆ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು. ಅಲ್ಲದೆ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಅನಾವರಣಗೊಳಿಸಿ ಅವುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಂತೆ ಜಾಗೃತಿ ಮೂಡಿಸುವುದು ಟ್ರಸ್ಟ್ ಧ್ಯೇಯೋದ್ದೇಶಗಳಾಗಿವೆ. ಈಗಾಗಲೇ ಟ್ರಸ್ಟ್ ಆರಂಭಿಕ ಹಂತದಲ್ಲಿಯೇ ಯಶಸ್ಸನ್ನು ಸಾಧಿಸಿದ್ದು, ಎಲ್ಲರಲ್ಲೂ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗಿದೆ ಎಂದರು.
    ಹಾಸ್ಯ ಕಲಾವಿದರಾದ ಇಂದುಮತಿ ಸಾಲಿಮಠ್, ಮಿಮಿಕ್ರಿ ಗೋಪಿ ಮತ್ತು ಉಮೇಶ್ ಗೌಡ ಅವರಿಂದ ಹಾಸ್ಯೋತ್ಸವ ನಡೆಯಿತು. ಅನನ್ಯ ಪ್ರಾರ್ಥಿಸಿ ರೇಣುಕಾಸ್ವಾಮಿ ಸ್ವಾಗತಿಸಿದರು. ಲತಾ ಪಿ. ಮೋರೆ ವಂದಿಸಿದರು. ಟ್ರಸ್ಟ್ ಪದಾಧಿಕಾರಿಗಳು, ಸೇವಾಕರ್ತರು, ವಿವಿಧ ಸಂಘ-ಸಂಸ್ಥೆಗಳ, ರಾಜಕೀಯ ಪಕ್ಷಗಳ ಪ್ರಮುಖರು, ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.

ಪ್ರಸಿದ್ದ ವೈದ್ಯ ಡಾ. ಸೆಲ್ವರಾಜ್ ನಿಧನ

ಡಾ. ಸೆಲ್ವರಾಜ್
    ಭದ್ರಾವತಿ, ಜು. ೩೧: ನಗರದ ಜನ್ನಾಪುರದ ಪ್ರಸಿದ್ದ ವೈದ್ಯ ಡಾ. ಸೆಲ್ವರಾಜ್(೬೬) ಹೃದಯಾಘಾತದಿಂದ ಭಾನುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಸುಮಾರು ೪ ದಶಕಗಳ ಹಿಂದೆ ಜನ್ನಾಪುರ ಕುರುಬರ ಬೀದಿಯಲ್ಲಿ ಶಿವ ಕ್ಲಿನಿಕ್ ಆರಂಭಿಸುವ ಮೂಲಕ ಪ್ರಸಿದ್ದ ವೈದ್ಯರಾಗಿ ಗುರುತಿಸಿಕೊಂಡಿದ್ದರು. ಮೂಲತಃ ತಮಿಳುನಾಡಿನವರಾದ ಡಾ. ಸೆಲ್ವರಾಜ್ ಅವರು ತಮ್ಮ ವೃತ್ತಿ ಜೀವನವನ್ನು ಇಲ್ಲಿಯೇ ಆರಂಭಿಸುವ ಮೂಲಕ ಬಡ ವರ್ಗದವರಿಗೂ ಅತ್ಯಂತ ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದರು. ಅಲ್ಲದೆ ಬಹಳಷ್ಟು ಮಂದಿ ದುರ್ಬಲ ವರ್ಗದವರಿಗೆ ಉಚಿತವಾಗಿ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದರು.
    ನ್ಯೂಟೌನ್ ಕಿರಿಯ ತಾಂತ್ರಿಕ ಶಾಲೆ(ಜೆಟಿಎಸ್) ಸಮೀಪ ಶುಗರ್ ಟೌನ್ ಲಯನ್ಸ್ ಕ್ಲಬ್ ಆರಂಭಕ್ಕೆ ಕಾರಣಕರ್ತರಾಗಿದ್ದರು. ಹಲವಾರು ಉಚಿತ ಶಿಬಿರಗಳಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ಸೋಮವಾರ ಹುತ್ತಾ ಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.
    ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ, ಸ್ವಯಂ ಸೇವಾಸಂಸ್ಥೆಗಳ ಪ್ರಮುಖರು, ವೈದ್ಯರು, ಗಣ್ಯರು ಸಂತಾಪ ಸೂಚಿಸಿದ್ದಾರೆ.