ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನೆಹರು ನಗರದ ನಿವಾಸಿ, ಯುವಕ ಸುನಿಲ್ ಆರೋಗ್ಯ ವಿಚಾರಿಸಿದರು.
ಭದ್ರಾವತಿ, ಆ. ೧೬: ರಾಜ್ಯದಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಒಗ್ಗಟ್ಟಾಗಿ ಬದುಕಬೇಕು. ಮುಸ್ಲಿಂ ಸಮುದಾಯದಲ್ಲಿನ ಕೆಲವು ಗೂಂಡಾಗಳಿಂದ ಸಮಾಜದಲ್ಲಿ ಆಶಾಂತಿ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಆರೋಪಿಸಿದರು.
ಅವರು ಮಂಗಳವಾರ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನೆಹರು ನಗರದ ನಿವಾಸಿ, ಯುವಕ ಸುನಿಲ್ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದರು.
ತಪ್ಪು ಮಾಡಿದ ಯಾರೇ ಆಗಲಿ ಅವರಿಗೆ ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿ ಪೊಲೀಸರು ಹೆಚ್ಚಿನ ಶ್ರಮವಹಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೂ ಮುಸ್ಲಿಂ ಸಮುದಾಯದಲ್ಲಿನ ಕೆಲವು ಗೂಂಡಾಗಳು ಆಶಾಂತಿ ವಾತಾವರಣ ಸೃಷ್ಟಿಸುತ್ತಿದ್ದಾರೆ. ಇಂತಹವರಿಗೆ ಮುಸ್ಲಿಂ ಸಮುದಾಯದಲ್ಲಿನ ಹಿರಿಯರು ಬುದ್ಧಿ ಹೇಳಬೇಕು. ಇಲ್ಲವಾದಲ್ಲಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಲ್ಲೆಗೊಳಗಾಗಿರುವ ಸುನಿಲ್‌ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಕಲ್ಪಿಸಿಕೊಡುವ ಭರವಸೆ ನೀಡಿ, ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕೆಂದರು.
ಬಿಜೆಪಿ ಪಕ್ಷದ ಪ್ರಮುಖರಾದ ಡಿ.ಟಿ ಮೇಘರಾಜ್, ಬಿ.ಕೆ ಶ್ರೀನಾಥ್, ಶಿವರಾಜ್, ಮಂಗೋಟೆ ರುದ್ರೇಶ್, ಜಿ. ಧರ್ಮಪ್ರಸಾದ್, ಎಂ. ಪ್ರಭಾಕರ್, ಕೆ.ಇ ಕಾಂತೇಶ್, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.