ಭದ್ರಾವತಿ ನಗರಸಭೆ ವ್ಯಾಪ್ತಿಯ ನೆಹರು ನಗರದಲ್ಲಿ ಮಂಗಳವಾರ ಬೆಳಿಗ್ಗೆ ಸುನಿಲ್ ಎಂಬಾತನ ಮೇಲೆ ಹಲ್ಲೆ ನಡೆದಿದ್ದು, ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು.
ಭದ್ರಾವತಿ, ಆ. ೧೬: ನಗರಸಭೆ ವ್ಯಾಪ್ತಿಯ ನೆಹರು ನಗರದಲ್ಲಿ ಮಂಗಳವಾರ ಬೆಳಿಗ್ಗೆ ಯುವಕನೋರ್ವನ ಮೇಲೆ ಹಲ್ಲೆ ನಡೆದಿದ್ದು, ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಚ್ಚಿ ಎಂಬಾತ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾಗಿರುವ ಸುನಿಲ್ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಹಲ್ಲೆಗೆ ಯಾವುದೇ ನಿಖರವಾದ ಕಾರಣ ದೂರಿನಲ್ಲಿ ದಾಖಲಿಸಿಲ್ಲ.
ನಗರಸಭೆ ವಾರ್ಡ್ ನಂ.೧೭ರ ನೆಹರು ನಗರದಲ್ಲಿರುವ ರಾಜೇಶ್ವರಿ ದೇವಸ್ಥಾನ ಸಮೀಪದ ನಿವಾಸಿಯಾಗಿರುವ ಸುನಿಲ್ ಅವರ ಮನೆಯ ಮುಂದಿನ ರಸ್ತೆಯಲ್ಲಿ ಬೆಳಿಗ್ಗೆ ೮.೩೦ರ ಸಮಯದಲ್ಲಿ ಕೆಲಸಕ್ಕೆ ಹೋಗುತ್ತಿದ್ದಾಗ ಡಿಚ್ಚಿ ಏಕಾಏಕಿ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಚಟಾಕು ಎಂಬುವವನು ಬಂದು ಹಲ್ಲೆ ತಪ್ಪಿಸಿದ್ದಾನೆ. ನಂತರ ಹಲ್ಲೆಗೊಳಗಾದ ಸುನಿಲ್‌ನನ್ನು ಈತನ ಸಹೋದರ ಸುಮನ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ವ್ಯಾಪಕ ಅಪಪ್ರಚಾರ :
ಸುನಿಲ್ ಯಾವುದೇ ಪಕ್ಷದ ಅಥವಾ ಸಂಘಟನೆ ಕಾರ್ಯಕರ್ತನಲ್ಲ ಎನ್ನಲಾಗಿದೆ. ಆದರೂ ಈ ನಡುವೆ ಬಜರಂಗದಳ ಪ್ರಮುಖರು ಆಸ್ಪತ್ರೆಗೆ ತೆರಳಿ ಸುನಿಲ್ ಬಜರಂಗದಳ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿದ್ದು, ಈ ನಡುವೆ ಡಿಚ್ಚಿ ಜೊತೆಗೆ ೩-೪ ಜನ ಹಲ್ಲೆ ನಡೆಸಿದ್ದಾರೆಂದು ಅಪಪ್ರಚಾರ ನಡೆಯುತ್ತಿದೆ. ಅಲ್ಲದೆ ಈ ಘಟನೆಯನ್ನು ಹಿಂದೂ ಮತ್ತು ಮುಸ್ಲಿಂ ನಡುವೆ ನಡೆದಿರುವ ಕೋಮು ಗಲಭೆಯಾಗಿ ಬಿಂಬಿಸಲು ಯತ್ನಿಸಲಾಗುತ್ತಿದೆ. ಇದರಿಂದಾಗಿ ಕ್ಷೇತ್ರದ ನಿವಾಸಿಗಳಲ್ಲಿ ಭಯದ ವಾತಾವರಣ ಉಂಟಾಗಿದೆ.
ಶಿವಮೊಗ್ಗ ನಗರದಲ್ಲಿ ಉಂಟಾಗಿರುವ ಅಹಿತಕರ ಘಟನೆ ಹಿನ್ನಲೆಯಲ್ಲಿ ಈಗಾಗಲೇ ತಾಲೂಕಿನ ನಗರಸಭೆ ವ್ಯಾಪ್ತಿ ಹಾಗು ಕೆಲವು ಗ್ರಾಮಾಂತರ ಭಾಗದಲ್ಲಿ ಸೋಮವಾರ ಕಲಂ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ನಡುವೆ ಈ ಬೆಳವಣಿಗೆಯಿಂದಾಗಿ ಪೊಲೀಸರು ಸಹ ಆತಂಕಕ್ಕೆ ಒಳಗಾಗಿದ್ದಾರೆ.
No comments:
Post a Comment