![](https://blogger.googleusercontent.com/img/a/AVvXsEhqbMkTLv8UvvUy2GzW4w0tgVNZvq-iPeypLe72zcr6KqZIseRaBVc94vBVdUBND5Ug2Z6EFhvPpYn2uckde5M2PVHDyiaeao4ny9cRbuo6hAMlgddvkHmNpArCU-Qeq3GWld4fRx2UonzDH-MEwHTAQbHya5Lj4LmHHw9D0UihULqVcb09xSGAOUMHmg=w400-h236-rw)
ಭದ್ರಾವತಿ ತಾಲೂಕಿನ ಗೊಂದಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ದೇವರುಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣವನ್ನು ಬಂಜಾರರ ಸಂಪ್ರದಾಯದಂತೆ ನೆರವೇರಿಸಲಾಯಿತು.
ಭದ್ರಾವತಿ, ಸೆ. ೧೧: ಬುಡಕಟ್ಟು ಸಮುದಾಯವಾಗಿರುವ ಬಂಜಾರರ ಶ್ರೀಮಂತ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಗೋರ್ ಸಿಕ್ವಾಡಿ ದೇಶಾದ್ಯಂತ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಗೋರ್ ಸಿಕ್ವಾಡಿಯ ರಾಜ್ಯ ಸಂಯೋಜಕ ಭೋಜರಾಜ್ ನಾಯ್ಕ್ ತಿಳಿಸಿದರು.
ತಾಲೂಕಿನ ಗೊಂದಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ದೇವರುಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣವನ್ನು ಬಂಜಾರರ ಸಂಪ್ರದಾಯದಂತೆ ನೆರವೇರಿಸಿ, ನಂತರ ನಡೆದ ಸಂಸ್ಕೃತಿ ಜಾಗೃತ ಸಮಾವೇಶದಲ್ಲಿ ಮಾತನಾಡಿದರು.
ಬಂಜಾರರ ಭಾಷೆ, ಆಚಾರ-ವಿಚಾರ, ಸಂಸ್ಕೃತಿ, ಸಂಸ್ಕಾರಗಳು ಇತರೆ ಸಮುದಾಯದವರಿಗಿಂತ ಭಿನ್ನವಾಗಿವೆ. ಇವರಲ್ಲಿರುವ ಶ್ರೀಮಂತ ಸಂಸ್ಕೃತಿ ವೈಜ್ಞಾನಿಕ ಮನೋಭಾವದಿಂದ ಕೂಡಿರುವುದರಿಂದ ಈ ಸಂಸ್ಕೃತಿ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಜಾಗೃತ ಅಭಿಯಾನಕ್ಕೆ ಎಲ್ಲರು ಕೈಜೋಡಿಸಬೇಕೆಂದು ಕರೆ ನೀಡಿದರು.
ಗೋರ್ ಸಿಕ್ವಾಡಿಯ ಗಾಯಕ ದೀಲ್ಯ ನಾಯ್ಕ್ ಮಾತನಾಡಿ, ಬಂಜಾರರ ಸಂಪ್ರದಾಯದ ವಿಧಿ ವಿಧಾನಗಳಂತೆ ಗೊಂದಿ ಗ್ರಾಮದಲ್ಲಿ ನಡೆಸಲಾಗುತ್ತಿರುವ ಇದು ಎರಡನೇ ಕಾರ್ಯಕ್ರಮವಾಗಿದೆ. ಕಸ್ನನಾಯ್ಕ್ ರವರ ಕುಟುಂಬದವರ ಗೃಹಪ್ರವೇಶ ಹಾಗೂ ಇವರದೇ ಕೆಳುತ್ ಮನೆತನದ ದೇವರುಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಬಂಜಾರ ಸಂಪ್ರದಾಯದಂತೆ ನೆರವೇರಿಸಲಾಗಿದೆ ಎಂದು ತಿಳಿಸಿದರು.
ದೇವರುಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣವನ್ನು ಶಿಕಾರಿಪುರ ತಾಲೂಕು ಸಾಲೂರಿನ ಶ್ರೀ ಸೈನಾ ಭಗತ್ ರವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಗೋರ್ ಸಿಕ್ವಾಡಿಯ ಪ್ರಮುಖರಾದ ರವಿ ರಾಥೋಡ್ , ಡಾ. ನಾಗೇಂದ್ರನಾಯ್ಕ್ , ಗಣೇಶ್‌ನಾಯ್ಕ್ , ಪ್ರೇಮ್ ಕುಮಾರ್ , ಕೋಕಿಲಾ ಬಾಯಿ , ಶಾರದ ಬಾಯಿ ಹಾಗೂ ಕೆಳುತ್ ವಂಶಸ್ಥರು ಉಪಸ್ಥಿತರಿದ್ದರು .
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕಿ ಕೋಕಿಲಾ ಬಾಯಿ ಅವರನ್ನು ಸನ್ಮಾನಿಸಲಾಯಿತು.