Wednesday, September 14, 2022

ಹಿಂದಿ ದಿವಸ್ ಆಚರಣೆ ಮೂಲಕ ಹಿಂದಿ ಭಾಷೆ ಕಡ್ಡಾಯಗೊಳಿಸುವ ಹುನ್ನಾರ

ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಆರೋಪ

ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಬಲವಂತದ ಹಿಂದಿ ಹೇರಿಕೆ ವಿರೋಧಿಸಿ ಜೆಡಿಎಸ್ ಪಕ್ಷದ ವತಿಯಿಂದ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಸೆ. ೧೪: ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆ ಮೂಲಕ ದೇಶಾದ್ಯಂತ ಹಿಂದಿ ಭಾಷೆ ಕಡ್ಡಾಯಗೊಳಿಸುವ ಹುನ್ನಾರ ನಡೆಸುತ್ತಿದ್ದು, ಇದನ್ನು ಎಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕೆಂದು ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಹೇಳಿದರು.
    ಅವರು ಬುಧವಾರ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಬಲವಂತದ ಹಿಂದಿ ಹೇರಿಕೆ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಅನಗತ್ಯವಾಗಿ ಹಿಂದಿ ದಿವಸ್ ಆಚರಣೆ ನಡೆಸುವ ಮೂಲಕ ಶ್ರೀಸಾಮಾನ್ಯರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ತೊಡಗಿವೆ. ಹಲವಾರು ಸಮಸ್ಯೆಗಳಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. 
    ಪಕ್ಷದ ವರಷ್ಠರ ಸೂಚನೆ ಮೇರೆಗೆ ಎಲ್ಲಾ ಜಿಲ್ಲಾ ಹಾಗು ತಾಲೂಕು ಕೇಂದ್ರಗಳಲ್ಲಿ ಇಂದು ಹೋರಾಟ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಇದೆ ರೀತಿ ಧೋರಣೆ ಮುಂದುವರೆಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭಾ ಸದಸ್ಯರಾದ ಬಸವರಾಜ ಬಿ. ಆನೇಕೊಪ್ಪ, ಪಲ್ಲವಿ ದಿಲೀಪ್, ಮಾಜಿ ಸದಸ್ಯರಾದ ಮುರ್ತುಜಾಖಾನ್, ಮೈಲಾರಪ್ಪ, ಆನಂದ್, ಎಚ್.ಬಿ ರವಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಮುಖಂಡರಾದ ನಂಜುಂಡೇಗೌಡ ಸೇರಿದಂತೆ ಇನ್ನಿತರರು ಮಾತನಾಡಿ, ಕೇಂದ್ರ ಹಾಗು ರಾಜ್ಯ ಸರ್ಕಾರ ಹಿಂದಿ ದಿವಸ್ ಆಚರಣೆ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿದೆ. ಆಯಾ ರಾಜ್ಯಗಳಲ್ಲಿ ಆಯಾ ಭಾಷೆಗಳು ಅಧಿಕೃತವಾಗಿವೆ. ಬಲವಂತವಾಗಿ ಹಿಂದಿ ಹೇರಿಕೆ ಮೂಲಕ ದಬ್ಬಾಳಿಕೆ ನಡೆಸುತ್ತಿರುವುದು ಸರಿಯಲ್ಲ. ದೇಶಾದ್ಯಂತ ಹಿಂದಿ ದಿವಸ್ ಆಚರಣೆ ಜಾರಿಗೊಳಿಸುವುದನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
    ನಗರಸಭಾ ಸದಸ್ಯರಾದ ವಿಜಯ, ರೂಪಾವತಿ ಗುಣಶೇಖರ್, ರೇಖಾ ಪ್ರಕಾಶ್, ನಾಗರತ್ನ ಅನಿಲ್‌ಕುಮಾರ್, ಮಾಜಿ ಸದಸ್ಯರಾದ ವಿಶಾಲಾಕ್ಷಿ, ಎಂ. ರಾಜು, ಸಾವಿತ್ರಮ್ಮ ಪುಟ್ಟೇಗೌಡ, ಮುಖಂಡರಾದ ಎನ್. ರಾಮಕೃಷ್ಣ, ಉಮೇಶ್, ಸುಬ್ಬಣ್ಣ, ಭಾಗ್ಯಮ್ಮ, ಉಮೇಶ್ ಸುರಗಿತೋಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, September 13, 2022

ಅಡಕೆ ಕೊಯ್ಯುವಾಗ ವಿದ್ಯುತ್ ತಗುಲಿ ವ್ಯಕ್ತಿ ಮೃತ

    ಭದ್ರಾವತಿ, ಸೆ. ೧೩: ತೋಟದಲ್ಲಿ ಅಡಕೆ ಕೊಯ್ಯುವಾಗ ವಿದ್ಯುತ್ ತಗುಲಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
    ಗ್ರಾಮದ ನಿವಾಸಿ ಮಂಜುನಾಥ ಬರ್ಗೆ(೩೮) ಮೃತಪಟ್ಟಿದ್ದು, ಅಡಕೆ ಕೊಯ್ಯುವಾಗ ಅಕಸ್ಮಿಕವಾಗಿ ವಿದ್ಯುತ್ ಕಂಬದಲ್ಲಿನ ತಂತಿಗೆ ತಗುಲಿದೆ. ಇದರಿಂದಾಗಿ ವಿದ್ಯುತ್ ಪ್ರವಹಿಸಿ ತೀವ್ರ ಅಸ್ವಸ್ಥಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಂಜುನಾಥ ಬರ್ಗೆ ಗ್ರಾಮದ ಶ್ರೀನಿವಾಸ್ ಬರ್ಗೆ ಅವರ ಪುತ್ರರಾಗಿದ್ದು, ಪತ್ನಿ, ಇಬ್ಬರು ಮಕ್ಕಳಿದ್ದಾರೆ.

ಭದ್ರಾವತಿ ತಾಲೂಕು ಶಕ್ತಿ ಕೇಂದ್ರ ಮಿನಿವಿಧಾನಸೌಧಕ್ಕೆ ೧೦ರ ಸಂಭ್ರಮ

ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡರೂ ಎದುರಾದ ಹಲವು ಸಮಸ್ಯೆಗಳು

ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧ

    * ಅನಂತಕುಮಾರ್
    ಭದ್ರಾವತಿ, ಸೆ. ೧೩: ಅನೇಕ ವರ್ಷಗಳ ಹೋರಾಟದ ಫಲವಾಗಿ ನಿರ್ಮಾಣಗೊಂಡಿರುವ ತಾಲೂಕಿನ ಶಕ್ತಿ ಕೇಂದ್ರ, ಮಿನಿವಿಧಾನಸೌಧ ಇದೀಗ ಉದ್ಘಾಟನೆಗೊಂಡು  ೧೦ ವರ್ಷ ಪೂರೈಸಿದೆ. ಈ ಕಟ್ಟಡ ಒಂದೆಡೆ ನಗರದ ಸೌಂದರ್ಯ ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. ಬೆಳವಣಿಗೆ ಹೊಂದುತ್ತಿರುವ ನಗರಕ್ಕೆ ತಕ್ಕಂತೆ ಕಟ್ಟಡ ನಿರ್ಮಾಣಗೊಂಡರೂ ಸಹ ನಿರೀಕ್ಷೆಯಂತೆ ಎಲ್ಲಾ ಸರ್ಕಾರಿ ಕಛೇರಿಗಳು ಒಂದೆಡೆ ಕಾರ್ಯನಿರ್ವಹಿಸುವ ಕಾಲ ಇನ್ನೂ ಕೂಡಿ ಬಂದಿಲ್ಲ.
    ಸರ್ಕಾರಿ ಆಸ್ಪತ್ರೆ, ನಗರದ ವಿವಿಧ ಪೊಲೀಸ್ ಠಾಣೆಗಳು, ಕೇಂದ್ರ ಸರ್ಕಾರದ ಪ್ರಧಾನ ದೂರವಾಣಿ ಕಛೇರಿ ಸೇರಿದಂತೆ ಹಲವಾರು ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿರುವ ಗುತ್ತಿಗೆದಾರ ಬಿ. ದಿವಾಕರ ಶೆಟ್ಟಿ ಅವರು ಈ ಮಿನಿವಿಧಾನಸೌಧವನ್ನು ಸುಮಾರು ೨.೫ ಕೋ.ರು ವೆಚ್ಚದಲ್ಲಿ ಅಂದು ನಿರ್ಮಾಣ ಮಾಡಿದ್ದಾರೆ.
    ಅಂದು ಉಪಮುಖ್ಯಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಎಸ್ ಈಶ್ವರಪ್ಪ ಹಾಗು ಲೋಕೋಪಯೋಗಿ ಸಚಿವರಾಗಿದ್ದ ದಿವಂಗತ ಸಿ.ಎಂ ಉದಾಸಿ ಅವರು ಈ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಆ ನಂತರ ಸುಮಾರು ೯ ವರ್ಷಗಳವರೆಗೆ ಈ ಕಟ್ಟಡದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕಳೆದ ೧ ವರ್ಷದ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಎಂ ಇಬ್ರಾಹಿಂ ಅವರ ಅನುದಾನದಲ್ಲಿ ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ಲಿಫ್ಟ್ ಅಳವಡಿಸಲಾಗಿದೆ. ಉಳಿದಂತೆ ಸುಮಾರು ೧ ವರ್ಷದಿಂದ ತಾಲೂಕು ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಆರ್. ಪ್ರದೀಪ್ ಹಾಗು ಸಿಬ್ಬಂದಿಗಳ ಪರಿಶ್ರಮದಿಂದಾಗಿ ತಹಸೀಲ್ದಾರ್ ಕಛೇರಿ ಮತ್ತು ಸಭಾಂಗಣ ನವೀಕರಣ, ಧ್ವಜ ಸ್ತಂಭ ನಿರ್ಮಾಣ, ನಾಮಫಲಕ ಅಳವಡಿಕೆ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಗಳು ನಡೆದಿವೆ.


    ಕೊಠಡಿಗಳ ಕೊರತೆ :
    ೩ ಅಂತಸ್ತಿನ ಕಟ್ಟಡದಲ್ಲಿ ಶೌಚಾಲಯ ಸೇರಿದಂತೆ ಒಂದೊಂದು ಅಂತಸ್ತಿನಲ್ಲಿ ತಲಾ ೮ ಕೊಠಡಿಗಳಿವೆ. ಕಂದಾಯ, ಖಜಾನೆ, ಭೂಮಿ ಕೇಂದ್ರ, ಚುನಾವಣೆ ಶಾಖೆ ಹಾಗು ಸರ್ವೇ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಕಛೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ನಡುವೆ ನೋಂದಾಣಿಧಿಕಾರಿಗಳ ಕಛೇರಿ, ಕಾರ್ಮಿಕ ಇಲಾಖೆ, ತೂಕ ಮತ್ತು ಅಳತೆ, ಅಬಕಾರಿ, ತೆರಿಗೆ ಇಲಾಖೆ ಹಾಗು ತೋಟಗಾರಿಕೆ ಕಛೇರಿಗಳು ಇಂದಿಗೂ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಕಛೇರಿಗಳು ಒಂದೆಡೆ ಕಾರ್ಯ ನಿರ್ವಹಿಸುವ ಕಾಲ ಇನ್ನೂ ಕೂಡಿ ಬಂದಿಲ್ಲ. ಮಿನಿವಿಧಾನಸೌಧದಲ್ಲಿ ಕೊಠಡಿಗಳ ಕೊರತೆ ಎದುರಾಗಿದೆ.
    ಮಿನಿವಿಧಾನಸೌಧ ನಿರ್ಮಾಣಗೊಂಡ ನಂತರ ಈ ವ್ಯಾಪ್ತಿಯಲ್ಲಿ ಜಾಗದ ಕೊರತೆ ಎದುರಾಗಿದ್ದು, ಪ್ರತಿದಿನ ಸಾವಿರಾರು ಮಂದಿ ಬಂದು ಹೋಗುವ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿಲ್ಲದಂತಾಗಿದೆ. ಹೋರಾಟ, ಪ್ರತಿಭಟನೆ ಸಂದರ್ಭದಲ್ಲಿ ನೂಕುನುಗ್ಗಲು ಎದುರಾಗುತ್ತಿದೆ. ದೂರದ ಊರುಗಳಿಂದ ಬರುವವರಿಗೆ ಹೊರ ಭಾಗದಲ್ಲಿ ವಿಶ್ರಾಂತಿ ಪಡೆಯಲು ಸಹ ಯಾವುದೇ ವ್ಯವಸ್ಥೆ ಇಲ್ಲವಾಗಿದೆ.
    ಪಾರಂಪರಿಕ ಕಟ್ಟಡವಾಗಿ ಉಳಿದ ಹಳೇ ಕಟ್ಟಡ :
    ೧೯೬೦ರ ಅವಧಿಯಲ್ಲಿ ನಿರ್ಮಾಣಗೊಂಡಿರುವ ತಾಲೂಕು ತಾಲೂಕು ಕಛೇರಿ ಕಟ್ಟಡ ಇದೀಗ ಪಾರಂಪರಿಕ ಕಟ್ಟಡವಾಗಿ ಉಳಿದುಕೊಂಡಿದೆ. ಈ ಕಟ್ಟಡವನ್ನು ನೆಲಸಮಗೊಳಿಸಿ ಇದೆ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂಬ ಹೋರಾಟಗಳು ಸಹ ನಡೆದಿದ್ದವು. ಆದರೆ ಅಂತಿಮವಾಗಿ ಈ ಕಟ್ಟಡವನ್ನು ಉಳಿಸಿಕೊಂಡು ಹೊಸ ಕಟ್ಟಡ ನಿರ್ಮಿಸಲಾಗಿದೆ. ಹಳೇ ಕಟ್ಟಡವನ್ನು ಪಾಳು ಬಿಡದೆ ಈಗಲೂ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ.


ಇದುವರೆಗೂ ಮಿನಿವಿಧಾನಸೌಧ ನಿರ್ಮಾಣ ಕುರಿತು ಯಾವುದೇ ಲೋಪಗಳು ಕಂಡು ಬಂದಿಲ್ಲ. ಸುಮಾರು ೨.೫ ಕೋ. ರು. ವೆಚ್ಚದಲ್ಲಿ ಅಂದು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಈ ಕಟ್ಟಡ ನಿರ್ಮಿಸುವುದಾದರೇ ಸುಮಾರು ೧೩ ರಿಂದ ೧೫ ಕೋ. ರು. ವ್ಯಯವಾಗುತ್ತದೆ.  ಬಹುತೇಕ ಸರ್ಕಾರಿ ಕಟ್ಟಡ ನಿರ್ಮಿಸಿರುವ ಅನುಭವ ಹೊಂದಿದ್ದು, ಇದೀಗ ೧೦ ವರ್ಷ ಪೂರೈಸಿರುವುದು ಸಂತಸದ ವಿಚಾರವಾಗಿದೆ.
 - ಬಿ. ದಿವಾಕರ ಶೆಟ್ಟಿ, ಗುತ್ತಿಗೆದಾರ, ಭದ್ರಾವತಿ.
_______________________________________________________________

ಪಾರಂಪರಿಕ ಕಟ್ಟಡ ಉಳಿಸಿಕೊಳ್ಳುವ ಜೊತೆಗೆ ನಗರದ ಹೃದಯ ಭಾಗದಲ್ಲಿಯೇ ಮಿನಿವಿಧಾನಸೌಧ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಇದೆ ಸ್ಥಳದಲ್ಲಿಯೇ ಕಟ್ಟಡ ನಿರ್ಮಾಣ ಮಾಡಿರಬಹುದು. ಸುಸಜ್ಜಿತವಾಗಿ ಕಟ್ಟಡ ನಿರ್ಮಿಸಲಾಗಿದ್ದು, ಆದರೆ ಕೊಠಡಿಗಳ ಕೊರತೆ ಎದುರಾಗಿದೆ. ಇದರಿಂದಾಗಿ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಛೇರಿಗಳು ಒಂದೆಡೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಳೇ ತಾಲೂಕು ಕಛೇರಿ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವುದು ಸೂಕ್ತ. ಹಳೇ ಕಟ್ಟಡ ಉಳಿಸಿಕೊಂಡು ಹೊಸ ಕಟ್ಟಡ ನಿರ್ಮಾಣ ಮಾಡುವುದು ಅಸಾಧ್ಯ.
                                                                                       - ಆರ್. ಪ್ರದೀಪ್, ತಹಸೀಲ್ದಾರ್, ಭದ್ರಾವತಿ.
_________________________________________________________

ಹೊಸ ಕಟ್ಟಡ ಮಿನಿವಿಧಾನಸೌಧದಿಂದ ಜನರಿಗೆ ಹೆಚ್ಚಿನ ಅನುಕೂಲವೇನು ಆಗಿಲ್ಲ. ಹಳೇಕಟ್ಟಡವನ್ನೇ ನೆಲಸಮಗೊಳಿಸಿ ಈ ಕಟ್ಟಡ ನಿರ್ಮಿಸಬಹುದಿತ್ತು. ಈ ಕಟ್ಟಡ ನಿರ್ಮಾಣದಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಪ್ರಸ್ತುತ ಎಲ್ಲಾ ಕಛೇರಿಗಳು ಕಾರ್ಯ ನಿರ್ವಹಿಸಲು ಹಳೇ ತಾಲೂಕು ಕಛೇರಿ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವುದು ಸೂಕ್ತ.
- ಬಿ.ಎನ್ ರಾಜು, ಅಧ್ಯಕ್ಷರು, ಮಾನವ ಹಕ್ಕುಗಳ ಹೋರಾಟ ಸಮಿತಿ.

______________________________________________________________________

ಮಿನಿವಿಧಾನಸೌಧ ನಿರ್ಮಿಸಿರುವುದರಲ್ಲಿ ಯಾವುದೇ ಲೋಪದೋಷಗಳಿಲ್ಲ. ಹಳೇ ತಾಲೂಕು ಕಛೇರಿ ಕಟ್ಟಡ ಹಾಗು ಗ್ರಾಮಾಂತರ ಪೊಲೀಸ್ ಠಾಣೆ ಕಟ್ಟಡಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡಲ್ಲಿ ಎಲ್ಲಾ ಸರ್ಕಾರಿ ಕಛೇರಿಗಳು ಸಹ ಒಂದೇ ಕಡೆ ಕಾರ್ಯನಿರ್ವಹಿಸಬಹುದು. ಈ ಬಗ್ಗೆ ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ರವರು ಗಮನ ಹರಿಸಬೇಕು.
                                        - ಶಶಿಕುಮಾರ್ ಗೌಡ, ರಾಜ್ಯ ಕಾರ್ಯದರ್ಶಿ, ಜೆಡಿಯು, ಭದ್ರಾವತಿ.


ಸರ್ಕಾರಿ ಶಾಲೆ ಗೋಡೆ ಕುಸಿತ : ಹೊಸ ಶಾಲೆ ಮಂಜೂರಾತಿಗೆ ಆಗ್ರಹಿಸಿ ಪ್ರತಿಭಟನೆ

ಕಳೆದ ೨ ದಿನಗಳ ಹಿಂದೆ ಮಳೆ ಸುರಿದ ಪರಿಣಾಮ ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಯೂರು ಗ್ರಾಮದ ಸರ್ಕಾರಿ ಶಾಲೆಯೊಂದರ ಗೋಡೆ ಕುಸಿದು ಬಿದ್ದಿದ್ದು, ಹೊಸ ಶಾಲೆ ಮಂಜೂರಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

    ಭದ್ರಾವತಿ, ಸೆ. ೧೩ : ಹೆಚ್ಚಿನ ಮಳೆ ಸುರಿದ ಪರಿಣಾಮ ಕಳೆದ ೨ ದಿನಗಳ ಹಿಂದೆ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಯೂರು ಗ್ರಾಮದ ಸರ್ಕಾರಿ ಶಾಲೆಯೊಂದರ ಗೋಡೆ ಕುಸಿದು ಬಿದ್ದಿದ್ದು, ತುರ್ತು ಕ್ರಮ ಕೈಗೊಳ್ಳುವ ಮೂಲಕ ಹೊಸ ಶಾಲೆಯನ್ನು ಮಂಜೂರು ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
    ಶಾಲೆ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ ಗ್ರಾಮದ ನಿವಾಸಿ, ತಾಲೂಕು ಬಂಜಾರ ಯುವಕರ ಸಂಘದ ಅಧ್ಯಕ್ಷ ಕೃಷ್ಣನಾಯ್ಕ ಹಾಗು ಪೋಷಕರು ಮಾತನಾಡಿ, ಸರ್ಕಾರ ಬಜೆಟ್ ಮಂಡನೆಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರು. ಅನುದಾನ ಮೀಸಲಿಡುತ್ತಿದೆ. ಅಲ್ಲದೆ ಸರ್ಕಾರ ಮುನ್ನಡೆಸುವವರು, ಜನಪ್ರತಿನಿಧಿಗಳು ಸರ್ಕಾರಿ ಶಾಲೆಗಳನ್ನು ಉಳಿಸಬೇಕು. ಅದರಲ್ಲೂ ಕನ್ನಡ ಶಾಲೆ ಉಳಿಸಬೇಕೆಂಬ ಮಾತುಗಳನ್ನಾಡುತ್ತಾರೆ. ಆದರೆ ರಾಜ್ಯದೆಲ್ಲೆಡೆ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


    ಈ ಶಾಲೆ ತುಂಬಾ ಹಳೇಯದಾದ ಹಿನ್ನಲೆಯಲ್ಲಿ ಶಿಥಿಲಗೊಂಡಿದೆ. ಗೋಡೆ ಕುಸಿದಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಮಕ್ಕಳ ಸುರಕ್ಷತೆ ಹಿನ್ನಲೆಯಲ್ಲಿ ತಕ್ಷಣ ಹೊಸ ಶಾಲೆಯನ್ನು ಮಂಜೂರಾತಿ ಮಾಡಬೇಕು. ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಕಛೇರಿ ಮುಂಭಾಗ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಹಳೇ ದ್ವೇಷದ ಹಿನ್ನಲೆಯಲ್ಲಿ ಚಾಕು ಇರಿತ : ಓರ್ವನ ಬಂಧನ

ಭದ್ರಾವತಿ, ಸೆ. ೧೩: ಗಣಪತಿ ವಿಸರ್ಜಣೆ ವೇಳೆ ಇಬ್ಬರು ಯುವಕರ ನಡುವೆ ಹಳೇ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕಳೆದ ೨ ದಿನಗಳ ಹಿಂದೆ ಜಗಳ ನಡೆದಿದ್ದು, ಈ ನಡುವೆ ಓರ್ವನಿಗೆ ಚಾಕುವಿನಿಂದ ಇರಿಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
    ನಗರದ ಹೊರವಲಯದ ಬೈಪಾಸ್ ರಸ್ತೆ ಸಮೀಪದಲ್ಲಿರುವ ಶಿವರಾಮ ನಗರದಲ್ಲಿ ಗಣಪತಿ ವಿಸರ್ಜನೆ ವೇಳೆ ರಾತ್ರಿ ಮಂಜುನಾಥ್ ಮತ್ತು ಮನು ಎಂಬ ಇಬ್ಬರು ಯುವಕರ ನಡುವೆ ಹಳೇ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಜಗಳ ನಡೆದಿದ್ದು, ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥ್‌ಗೆ ಮನು ಅಲಿಯಾಸ್ ಮನೋಜ್ ಚಾಕುವಿನಿಂದ ಇರಿದು ಪರಾರಿಯಾಗಿದ್ದನು ಎನ್ನಲಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೆ.೧೫ರಂದು ಸರ್.ಎಂ.ವಿ ೧೬೨ನೇ ಜನ್ಮದಿನ

    ಭದ್ರಾವತಿ, ಸೆ. ೧೩ : ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ವತಿಯಿಂದ ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ೧೬೨ನೇ ಜನ್ಮದಿನಾಚರಣೆ ಸೆ.೧೫ರಂದು ಬೆಳಿಗ್ಗೆ ೧೦೩೦ಕ್ಕೆ ಜನ್ನಾಪುರ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ.
    ಸಂಸದ ಬಿ.ವೈ  ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್, ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಾಂದ್ವಾನಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಸೆ.೧೬ರಂದು ಸಾಮಾನ್ಯ ಸಭೆ

    ಭದ್ರಾವತಿ, ಸೆ. ೧೩ : ನಗರಸಭೆ ಪ್ರಭಾರ ಅಧ್ಯಕ್ಷ ಚನ್ನಪ್ಪ ಅವರ ಅಧ್ಯಕ್ಷತೆಯಲ್ಲಿ ಸೆ.೧೬ರಂದು ಬೆಳಿಗ್ಗೆ ೧೧ ಗಂಟೆಗೆ ಸಾಮಾನ್ಯ ಸಭೆ ನಡೆಯಲಿದೆ.
    ಸದಸ್ಯರು ಸಭೆಗೆ ಆಗಮಿಸಿ ಯಶಸ್ವಿಗೊಳಿಸುವಂತೆ ಪೌರಾಯುಕ್ತ ಮನುಕುಮಾರ್ ಕೋರಿದ್ದಾರೆ. ಚನ್ನಪ್ಪ ಅವರು ಪ್ರಭಾರ ಅಧ್ಯಕ್ಷರಾಗಿ ನೇಮಕಗೊಂಡ ನಂತರ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ವಾರ್ಡ್ ನಂ.೨ರ ಕಾಂಗ್ರೆಸ್ ಸದಸ್ಯೆ ಗೀತಾರಾಜ್‌ಕುಮಾರ್ ಅವರು ಒಪ್ಪಂದದಂತೆ ಮೊದಲ ೧೦ ತಿಂಗಳ ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಉಪಾಧ್ಯಕ್ಷ ಚನ್ನಪ್ಪ ಅವರನ್ನು ಪ್ರಭಾರ ಅಧ್ಯಕ್ಷರನ್ನಾಗಿ ನೇಮಕಗೊಳಿಸಿದ್ದಾರೆ.