ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡರೂ ಎದುರಾದ ಹಲವು ಸಮಸ್ಯೆಗಳು
ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧ
* ಅನಂತಕುಮಾರ್
ಭದ್ರಾವತಿ, ಸೆ. ೧೩: ಅನೇಕ ವರ್ಷಗಳ ಹೋರಾಟದ ಫಲವಾಗಿ ನಿರ್ಮಾಣಗೊಂಡಿರುವ ತಾಲೂಕಿನ ಶಕ್ತಿ ಕೇಂದ್ರ, ಮಿನಿವಿಧಾನಸೌಧ ಇದೀಗ ಉದ್ಘಾಟನೆಗೊಂಡು ೧೦ ವರ್ಷ ಪೂರೈಸಿದೆ. ಈ ಕಟ್ಟಡ ಒಂದೆಡೆ ನಗರದ ಸೌಂದರ್ಯ ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. ಬೆಳವಣಿಗೆ ಹೊಂದುತ್ತಿರುವ ನಗರಕ್ಕೆ ತಕ್ಕಂತೆ ಕಟ್ಟಡ ನಿರ್ಮಾಣಗೊಂಡರೂ ಸಹ ನಿರೀಕ್ಷೆಯಂತೆ ಎಲ್ಲಾ ಸರ್ಕಾರಿ ಕಛೇರಿಗಳು ಒಂದೆಡೆ ಕಾರ್ಯನಿರ್ವಹಿಸುವ ಕಾಲ ಇನ್ನೂ ಕೂಡಿ ಬಂದಿಲ್ಲ.
ಸರ್ಕಾರಿ ಆಸ್ಪತ್ರೆ, ನಗರದ ವಿವಿಧ ಪೊಲೀಸ್ ಠಾಣೆಗಳು, ಕೇಂದ್ರ ಸರ್ಕಾರದ ಪ್ರಧಾನ ದೂರವಾಣಿ ಕಛೇರಿ ಸೇರಿದಂತೆ ಹಲವಾರು ಸರ್ಕಾರಿ ಕಟ್ಟಡಗಳನ್ನು ನಿರ್ಮಿಸಿರುವ ಗುತ್ತಿಗೆದಾರ ಬಿ. ದಿವಾಕರ ಶೆಟ್ಟಿ ಅವರು ಈ ಮಿನಿವಿಧಾನಸೌಧವನ್ನು ಸುಮಾರು ೨.೫ ಕೋ.ರು ವೆಚ್ಚದಲ್ಲಿ ಅಂದು ನಿರ್ಮಾಣ ಮಾಡಿದ್ದಾರೆ.
ಅಂದು ಉಪಮುಖ್ಯಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಎಸ್ ಈಶ್ವರಪ್ಪ ಹಾಗು ಲೋಕೋಪಯೋಗಿ ಸಚಿವರಾಗಿದ್ದ ದಿವಂಗತ ಸಿ.ಎಂ ಉದಾಸಿ ಅವರು ಈ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು. ಆ ನಂತರ ಸುಮಾರು ೯ ವರ್ಷಗಳವರೆಗೆ ಈ ಕಟ್ಟಡದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕಳೆದ ೧ ವರ್ಷದ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿ.ಎಂ ಇಬ್ರಾಹಿಂ ಅವರ ಅನುದಾನದಲ್ಲಿ ಸುಮಾರು ೫೦ ಲಕ್ಷ ರು. ವೆಚ್ಚದಲ್ಲಿ ಲಿಫ್ಟ್ ಅಳವಡಿಸಲಾಗಿದೆ. ಉಳಿದಂತೆ ಸುಮಾರು ೧ ವರ್ಷದಿಂದ ತಾಲೂಕು ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಆರ್. ಪ್ರದೀಪ್ ಹಾಗು ಸಿಬ್ಬಂದಿಗಳ ಪರಿಶ್ರಮದಿಂದಾಗಿ ತಹಸೀಲ್ದಾರ್ ಕಛೇರಿ ಮತ್ತು ಸಭಾಂಗಣ ನವೀಕರಣ, ಧ್ವಜ ಸ್ತಂಭ ನಿರ್ಮಾಣ, ನಾಮಫಲಕ ಅಳವಡಿಕೆ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಅಭಿವೃದ್ಧಿ ಕಾರ್ಯಗಳು ನಡೆದಿವೆ.
ಕೊಠಡಿಗಳ ಕೊರತೆ :
೩ ಅಂತಸ್ತಿನ ಕಟ್ಟಡದಲ್ಲಿ ಶೌಚಾಲಯ ಸೇರಿದಂತೆ ಒಂದೊಂದು ಅಂತಸ್ತಿನಲ್ಲಿ ತಲಾ ೮ ಕೊಠಡಿಗಳಿವೆ. ಕಂದಾಯ, ಖಜಾನೆ, ಭೂಮಿ ಕೇಂದ್ರ, ಚುನಾವಣೆ ಶಾಖೆ ಹಾಗು ಸರ್ವೇ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಕಛೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ನಡುವೆ ನೋಂದಾಣಿಧಿಕಾರಿಗಳ ಕಛೇರಿ, ಕಾರ್ಮಿಕ ಇಲಾಖೆ, ತೂಕ ಮತ್ತು ಅಳತೆ, ಅಬಕಾರಿ, ತೆರಿಗೆ ಇಲಾಖೆ ಹಾಗು ತೋಟಗಾರಿಕೆ ಕಛೇರಿಗಳು ಇಂದಿಗೂ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲಾ ಕಛೇರಿಗಳು ಒಂದೆಡೆ ಕಾರ್ಯ ನಿರ್ವಹಿಸುವ ಕಾಲ ಇನ್ನೂ ಕೂಡಿ ಬಂದಿಲ್ಲ. ಮಿನಿವಿಧಾನಸೌಧದಲ್ಲಿ ಕೊಠಡಿಗಳ ಕೊರತೆ ಎದುರಾಗಿದೆ.
ಮಿನಿವಿಧಾನಸೌಧ ನಿರ್ಮಾಣಗೊಂಡ ನಂತರ ಈ ವ್ಯಾಪ್ತಿಯಲ್ಲಿ ಜಾಗದ ಕೊರತೆ ಎದುರಾಗಿದ್ದು, ಪ್ರತಿದಿನ ಸಾವಿರಾರು ಮಂದಿ ಬಂದು ಹೋಗುವ ಸ್ಥಳದಲ್ಲಿ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳಾವಕಾಶವಿಲ್ಲದಂತಾಗಿದೆ. ಹೋರಾಟ, ಪ್ರತಿಭಟನೆ ಸಂದರ್ಭದಲ್ಲಿ ನೂಕುನುಗ್ಗಲು ಎದುರಾಗುತ್ತಿದೆ. ದೂರದ ಊರುಗಳಿಂದ ಬರುವವರಿಗೆ ಹೊರ ಭಾಗದಲ್ಲಿ ವಿಶ್ರಾಂತಿ ಪಡೆಯಲು ಸಹ ಯಾವುದೇ ವ್ಯವಸ್ಥೆ ಇಲ್ಲವಾಗಿದೆ.
ಪಾರಂಪರಿಕ ಕಟ್ಟಡವಾಗಿ ಉಳಿದ ಹಳೇ ಕಟ್ಟಡ :
೧೯೬೦ರ ಅವಧಿಯಲ್ಲಿ ನಿರ್ಮಾಣಗೊಂಡಿರುವ ತಾಲೂಕು ತಾಲೂಕು ಕಛೇರಿ ಕಟ್ಟಡ ಇದೀಗ ಪಾರಂಪರಿಕ ಕಟ್ಟಡವಾಗಿ ಉಳಿದುಕೊಂಡಿದೆ. ಈ ಕಟ್ಟಡವನ್ನು ನೆಲಸಮಗೊಳಿಸಿ ಇದೆ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕೆಂಬ ಹೋರಾಟಗಳು ಸಹ ನಡೆದಿದ್ದವು. ಆದರೆ ಅಂತಿಮವಾಗಿ ಈ ಕಟ್ಟಡವನ್ನು ಉಳಿಸಿಕೊಂಡು ಹೊಸ ಕಟ್ಟಡ ನಿರ್ಮಿಸಲಾಗಿದೆ. ಹಳೇ ಕಟ್ಟಡವನ್ನು ಪಾಳು ಬಿಡದೆ ಈಗಲೂ ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಇದುವರೆಗೂ ಮಿನಿವಿಧಾನಸೌಧ ನಿರ್ಮಾಣ ಕುರಿತು ಯಾವುದೇ ಲೋಪಗಳು ಕಂಡು ಬಂದಿಲ್ಲ. ಸುಮಾರು ೨.೫ ಕೋ. ರು. ವೆಚ್ಚದಲ್ಲಿ ಅಂದು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಈ ಕಟ್ಟಡ ನಿರ್ಮಿಸುವುದಾದರೇ ಸುಮಾರು ೧೩ ರಿಂದ ೧೫ ಕೋ. ರು. ವ್ಯಯವಾಗುತ್ತದೆ. ಬಹುತೇಕ ಸರ್ಕಾರಿ ಕಟ್ಟಡ ನಿರ್ಮಿಸಿರುವ ಅನುಭವ ಹೊಂದಿದ್ದು, ಇದೀಗ ೧೦ ವರ್ಷ ಪೂರೈಸಿರುವುದು ಸಂತಸದ ವಿಚಾರವಾಗಿದೆ.
- ಬಿ. ದಿವಾಕರ ಶೆಟ್ಟಿ, ಗುತ್ತಿಗೆದಾರ, ಭದ್ರಾವತಿ.
_______________________________________________________________
ಪಾರಂಪರಿಕ ಕಟ್ಟಡ ಉಳಿಸಿಕೊಳ್ಳುವ ಜೊತೆಗೆ ನಗರದ ಹೃದಯ ಭಾಗದಲ್ಲಿಯೇ ಮಿನಿವಿಧಾನಸೌಧ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಇದೆ ಸ್ಥಳದಲ್ಲಿಯೇ ಕಟ್ಟಡ ನಿರ್ಮಾಣ ಮಾಡಿರಬಹುದು. ಸುಸಜ್ಜಿತವಾಗಿ ಕಟ್ಟಡ ನಿರ್ಮಿಸಲಾಗಿದ್ದು, ಆದರೆ ಕೊಠಡಿಗಳ ಕೊರತೆ ಎದುರಾಗಿದೆ. ಇದರಿಂದಾಗಿ ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಛೇರಿಗಳು ಒಂದೆಡೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಳೇ ತಾಲೂಕು ಕಛೇರಿ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವುದು ಸೂಕ್ತ. ಹಳೇ ಕಟ್ಟಡ ಉಳಿಸಿಕೊಂಡು ಹೊಸ ಕಟ್ಟಡ ನಿರ್ಮಾಣ ಮಾಡುವುದು ಅಸಾಧ್ಯ.
- ಆರ್. ಪ್ರದೀಪ್, ತಹಸೀಲ್ದಾರ್, ಭದ್ರಾವತಿ.
_________________________________________________________
ಹೊಸ ಕಟ್ಟಡ ಮಿನಿವಿಧಾನಸೌಧದಿಂದ ಜನರಿಗೆ ಹೆಚ್ಚಿನ ಅನುಕೂಲವೇನು ಆಗಿಲ್ಲ. ಹಳೇಕಟ್ಟಡವನ್ನೇ ನೆಲಸಮಗೊಳಿಸಿ ಈ ಕಟ್ಟಡ ನಿರ್ಮಿಸಬಹುದಿತ್ತು. ಈ ಕಟ್ಟಡ ನಿರ್ಮಾಣದಿಂದ ಸಾಕಷ್ಟು ಸಮಸ್ಯೆಗಳು ಎದುರಾಗಿವೆ. ಪ್ರಸ್ತುತ ಎಲ್ಲಾ ಕಛೇರಿಗಳು ಕಾರ್ಯ ನಿರ್ವಹಿಸಲು ಹಳೇ ತಾಲೂಕು ಕಛೇರಿ ಕಟ್ಟಡವನ್ನು ಸಂಪೂರ್ಣವಾಗಿ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸುವುದು ಸೂಕ್ತ.
- ಬಿ.ಎನ್ ರಾಜು, ಅಧ್ಯಕ್ಷರು, ಮಾನವ ಹಕ್ಕುಗಳ ಹೋರಾಟ ಸಮಿತಿ.
______________________________________________________________________
ಮಿನಿವಿಧಾನಸೌಧ ನಿರ್ಮಿಸಿರುವುದರಲ್ಲಿ ಯಾವುದೇ ಲೋಪದೋಷಗಳಿಲ್ಲ. ಹಳೇ ತಾಲೂಕು ಕಛೇರಿ ಕಟ್ಟಡ ಹಾಗು ಗ್ರಾಮಾಂತರ ಪೊಲೀಸ್ ಠಾಣೆ ಕಟ್ಟಡಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡಲ್ಲಿ ಎಲ್ಲಾ ಸರ್ಕಾರಿ ಕಛೇರಿಗಳು ಸಹ ಒಂದೇ ಕಡೆ ಕಾರ್ಯನಿರ್ವಹಿಸಬಹುದು. ಈ ಬಗ್ಗೆ ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ರವರು ಗಮನ ಹರಿಸಬೇಕು.
- ಶಶಿಕುಮಾರ್ ಗೌಡ, ರಾಜ್ಯ ಕಾರ್ಯದರ್ಶಿ, ಜೆಡಿಯು, ಭದ್ರಾವತಿ.
No comments:
Post a Comment