Wednesday, September 14, 2022

ಸಿರಿಯೂರು ಸರ್ಕಾರಿ ಶಾಲೆಗೆ ಒಂದು ಕೊಠಡಿ ಮಂಜೂರಾತಿ : ಶೀಘ್ರದಲ್ಲಿಯೇ ಕಾಮಗಾರಿ ಆರಂಭ


ಎ.ಕೆ ನಾಗೇಂದ್ರಪ್ಪ

    ಭದ್ರಾವತಿ, ಸೆ. ೧೪: ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಯೂರು ಗ್ರಾಮ ಸರ್ಕಾರಿ ಶಾಲೆಯೊಂದರ ಗೋಡೆ ಕುಸಿದ ಸ್ಥಳಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
    ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿ, ಶಾಲೆಯ ಗೋಡೆ ಕುಸಿದಿರುವುದು ಗಮನಕ್ಕೆ ಬಂದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಲಾಗಿದೆ. ಈಗಾಗಲೇ ಶಾಸಕರು ಸರ್ಕಾರಕ್ಕೆ ಒಂದು ಕೊಠಡಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದು ಮಂಜೂರಾತಿಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ನಡೆಯಲಿದೆ. ಉಳಿದಂತೆ ಇನ್ನೂ ಎರಡು ಕೊಠಡಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪೋಷಕರು, ವಿದ್ಯಾರ್ಥಿಗಳು ಈ ಸರ್ಕಾರಿ ಶಾಲೆ ಬಗ್ಗೆ ಆತಂಕಪಡದಿರುವಂತೆ ಮನವಿ ಮಾಡಿದ್ದಾರೆ.

ರಾಜೇಶ್ವರಿ ನಿಧನ

ರಾಜೇಶ್ವರಿ
    ಭದ್ರಾವತಿ, ಸೆ. ೧೪: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಅಧಿಕಾರಿ ಕಳಸೇಗೌಡ ಅವರ ಪತ್ನಿ ರಾಜೇಶ್ವರಿ(೫೯) ನಿಧನ ಹೊಂದಿದರು.
    ರಾಜೇಶ್ವರಿ ಕಾಗದನಗರ ಪ್ರೌಡಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ದಿವಂಗತ ಜಯಣ್ಣ ಅವರ ಪುತ್ರಿಯಾಗಿದ್ದು, ಶಿವಮೊಗ್ಗ ಎಂಆರ್‌ಎಸ್ ಸರ್ಕಲ್ ಬೈಪಾಸ್ ರಸ್ತೆ ಸಮೀಪ ವಾಸಿಸುತ್ತಿದ್ದರು. ಇವರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ನೆರವೇರಿತು. ಇವರ ನಿಧನಕ್ಕೆ ಕಾರ್ಮಿಕ ಸಂಘದ ಮಾಜಿ ಅಧ್ಯಕ್ಷ ಎಸ್. ಚಂದ್ರಶೇಖರ್ ಸಂತಾಪ ಸೂಚಿಸಿದ್ದಾರೆ.

ಎರಡು ಲಾರಿಗಳ ನಡುವೆ ಅಪಘಾತ : ಟ್ಯಾಂಕರ್ ಜಖಂ

ಭದ್ರಾವತಿ ಡೈರಿ ಸಮೀಪದ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ೨೦೬ರಲ್ಲಿ ಎರಡು ಲಾರಿಗಳ ನಡುವೆ ಬುಧವಾರ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
    ಭದ್ರಾವತಿ, ಸೆ. ೧೪: ಡೈರಿ ಸಮೀಪದ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ೨೦೬ರಲ್ಲಿ ಎರಡು ಲಾರಿಗಳ ನಡುವೆ ಬುಧವಾರ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
    ಮಾಚೇನಹಳ್ಳಿ ಐಟಿ ಪಾರ್ಕ್ ಬಳಿ ಘಟನೆ ನಡೆದಿದ್ದು, ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿ ಹಾಗೂ ಭದ್ರಾವತಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದೆ.
    ಕ್ಯಾಂಟರನ್ನು ಹಿಮ್ಮುಖವಾಗಿ ಹಿಂದಕ್ಕೆ ತೆಗೆದುಕೊಳ್ಳುವ ವೇಳೆ, ಅದೇ ದಾರಿಯಲ್ಲಿ ಬಂದ ಲಾರಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕ್ಯಾಂಟರ್ ಮುಂಭಾಗ ಬಹುತೇಕ ಜಖಂಗೊಂಡಿದೆ. ಆದರೂ ಅದೃಷ್ಟವಶಾತ್ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದಾಗಿ ಕೆಲ ಸಮಯ ಈ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಸರ್.ಎಂ ವಿಶ್ವೇಶ್ವರಾಯ ಜನ ಸಮುದಾಯಕ್ಕೆ ಸೇರಿದವರು : ಮನುಕುಮಾರ್

ಭದ್ರಾವತಿ ಜನ್ನಾಪುರ ಕೆರೆ ಸಮೀಪದ ಹೊಸ ಸಿದ್ದಾಪುರ ರಸ್ತೆಯಲ್ಲಿರುವ ನಾಗರಕಟ್ಟೆ ದೇವಸ್ಥಾನದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಹಾಗೂ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅಶ್ವತ್ ಕಟ್ಟೆ, ನಾಗರಕಟ್ಟೆ ಸೇವಾ ಸಮಿತಿ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಪಡೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಸೆ. ೧೪: ಭಾರತ ರತ್ನ ಸರ್.ಎಂ ವಿಶ್ವೇಶ್ವರಾಯ ಕೇವಲ ಒಂದು ಪ್ರದೇಶಕ್ಕೆ, ಒಂದು ದೇಶಕ್ಕೆ, ರಾಷ್ಟ್ರಕ್ಕೆ ಸೀಮಿತ ಅಲ್ಲ ಇಡೀ ಜನ ಸಮುದಾಯಕ್ಕೆ ಸೇರಿದ ಮಹಾನ್ ಆದರ್ಶ ವ್ಯಕ್ತಿ ಎಂದು ಪೌರಾಯುಕ್ತ ಮನುಕುಮಾರ್ ಹೇಳಿದರು.
    ಅವರು ಬುಧವಾರ ನಗರದ ಜನ್ನಾಪುರ ಕೆರೆ ಸಮೀಪದ ಹೊಸ ಸಿದ್ದಾಪುರ ರಸ್ತೆಯಲ್ಲಿರುವ ನಾಗರಕಟ್ಟೆ ದೇವಸ್ಥಾನದಲ್ಲಿ ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಹಾಗೂ ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅಶ್ವತ್ ಕಟ್ಟೆ, ನಾಗರಕಟ್ಟೆ ಸೇವಾ ಸಮಿತಿ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಪಡೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸರ್.ಎಂ ವಿಶ್ವೇಶ್ವರಾಯ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಇಲ್ಲಿನ ನಗರಸಭೆ ಪೌರಾಯುಕ್ತರಾಗಿ ಬಂದ ನಂತರ ಸರ್.ಎಂ ವಿಶ್ವೇಶ್ವರಾಯ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಸಾಧ್ಯವಾಗಿದೆ. ಇಲ್ಲಿನ ಜನರು ಅವರ ಮೇಲೆ ಹೊಂದಿರುವ ಗೌರವ, ಪ್ರೀತಿ, ವಿಶ್ವಾಸ ಹಾಗು ಅಭಿಮಾನ ಹೆಚ್ಚಿನದಾಗಿದೆ. ಇದನ್ನು ಗಮನಿಸಿದಾಗ ಅವರು ಕೇವಲ ಒಂದು ರಾಜ್ಯ, ದೇಶ, ರಾಷ್ಟ್ರಕ್ಕೆ ಸೀಮಿತವಲ್ಲ ಇಡೀ ಜನ ಸಮುದಾಯಕ್ಕೆ ಸೇರಿದವರು ಎಂಬ ಭಾವನೆ ಮೂಡುತ್ತಿದೆ. ವಿಐಎಸ್‌ಎಲ್ ಹಾಗೂ ಎಂಪಿಎಂ ಎರಡು ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಇಲ್ಲಿನ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ ಎಂದರು.
    ಕಾರ್ಖಾನೆಗಳು ಈ ದೇಶದ ಬೆನ್ನೆಲುಬು ಎಂಬ ಅವರ ನಿಲುವು ಹಾಗೂ ಆ ದಾರಿಯಲ್ಲಿ ಸಾಗಿಬಂದ ಅವರ ಬದುಕು. ಅವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಪ್ರಾಮಾಣಿಕತೆ, ಸಮಯ ಪಾಲನೆ, ಶಿಸ್ತು ಬದ್ಧತೆ ಇಂದಿಗೂ ಆದರ್ಶಪ್ರಾಯವಾಗಿದೆ ಎಂದರು.


    ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಕಾರ್ಯಾಧ್ಯಕ್ಷ ಸುಂದರ್ ಬಾಬು ಮಾತನಾಡಿ, ಸರ್ ಎಂ ವಿಶ್ವೇಶ್ವರಾಯ ಅವರು ನಾಡಿಗೆ, ರಾಷ್ಟ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಅದರಲ್ಲೂ ಈ ಕ್ಷೇತ್ರದ ಜನರು ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
    ಯೂನಿಯನ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಮನೋಹರ್, ಶಿವಣ್ಣ ಗೌಡ, ಅಭಿಲಾಶ್, ನಾಗಭೂಷಣ್, ನಗರಸಭಾ ಸದಸ್ಯರಾದ ರಿಯಾಜ್ ಅಹಮದ್, ಆರ್. ಶ್ರೇಯಸ್(ಚಿಟ್ಟೆ), ನಾಗರಕಟ್ಟೆ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ್,  ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ  ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದೇವರ ಸ್ಥಾನದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ

'ಮತ್ತೆ ಹುಟ್ಟಿ ಬನ್ನಿ' ಅದ್ಭುತ ಕಲ್ಪನೆಯೊಂದಿಗೆ ಪ್ರತಿಮೆ ಪ್ರತಿಷ್ಠಾಪನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ಆಂಜನೇಯ ಅಗ್ರಹಾರ(ಕೂಲಿ ಬ್ಲಾಕ್ ಶೆಡ್)ದ ೫ನೇ ಕ್ರಾಸ್ ಶ್ರೀ ವಿಷ್ಣು ಅಭಿಮಾನಿಗಳ ಸಂಘದ ವತಿಯಿಂದ ಈ ಅದ್ಭುತ ಕಲ್ಪನೆ ಮೂಡಿ ಬಂದಿದೆ.
    ಭದ್ರಾವತಿ, ಸೆ. ೧೪: ಕ್ಷೇತ್ರದಲ್ಲಿ ೩ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದುಕೊಂಡಿರುವ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರು ನಿಧನ ಹೊಂದಿ ೨ ವರ್ಷಗಳು ಕಳೆದಿವೆ. ಕಳೆದ ಕೆಲವು ದಿನಗಳ ಹಿಂದೆ ಅವರ ಪುಣ್ಯಸ್ಮರಣೆ ಸಹ ಆಚರಣೆ ಮಾಡಲಾಗಿದೆ. ಇದೀಗ ಅವರ ಅಭಿಮಾನಿಗಳು ದೇವರ ಸ್ಥಾನದಲ್ಲಿ ಅಪ್ಪಾಜಿ ಅವರನ್ನು ಪ್ರತಿಷ್ಠಾಪಿಸಿ ದೇವರೇ ಅವರನ್ನು ಪುನಃ ಹುಟ್ಟಿಬನ್ನಿ ಎಂದು ಹಾರೈಸುವ ಅದ್ಭುತ ಕಲ್ಪನೆಯನ್ನು ನಿರ್ಮಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
    ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ಆಂಜನೇಯ ಅಗ್ರಹಾರ(ಕೂಲಿ ಬ್ಲಾಕ್ ಶೆಡ್)ದ ೫ನೇ ಕ್ರಾಸ್ ಶ್ರೀ ವಿಷ್ಣು ಅಭಿಮಾನಿಗಳ ಸಂಘದ ವತಿಯಿಂದ ಈ ಅದ್ಭುತ ಕಲ್ಪನೆ ಮೂಡಿ ಬಂದಿದೆ. ಈ ಬಾರಿ ವಿನಾಯಕ ಚತುರ್ಥಿಯಂದು ಸಣ್ಣ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವ ಹಬ್ಬದ ಆಚರಣೆಗೆ ಚಾಲನೆ ನೀಡಿದ ಸಂಘ ಸೋಮವಾರ ರಾತ್ರಿ ಅಪ್ಪಾಜಿಯವರ ಪ್ರತಿಮೆ ಹಾಗು ಮತ್ತೆ ಹುಟ್ಟಿಬನ್ನಿ ಎಂದು ಬರೆಯುವ ರೀತಿ ಗಣೇಶ ಮೂರ್ತಿ ಮತ್ತು  ಜೈಕಾರ ಕೂಗುವ ಹಾಗೆ, ನಮಸ್ಕಾರಿಸುವ ಹಾಗೆ, ಪೂಜೆ ಮಾಡುವ ಹಾಗೆ ಮೊಶಿಕನನ್ನು ಪ್ರತಿಷ್ಠಾಪಿಸಲಾಗಿದೆ.
    ರಾಕೇಶ್(ಗೊಂಬೆ) ಮತ್ತು ಗೆಳೆಯರ ಸಹಕಾರದಿಂದ ಕಲಾವಿದ ವಿಷ್ಣು ಅವರ ಪ್ರತಿಭೆಯಲ್ಲಿ ಅಪ್ಪಾಜಿ ಅವರ ಪ್ರತಿಮೆ ಆಕರ್ಷಕವಾಗಿ ರೂಪುಗೊಂಡಿದೆ. ಪ್ರತಿಷ್ಠಾಪನೆಗಾಗಿಯೇ ವಿಶಿಷ್ಟವಾದ ವೇದಿಕೆಯನ್ನು ಸಿದ್ದಪಡಿಸಲಾಗಿದೆ. ಅಪ್ಪಾಜಿ ಭದ್ರಕೋಟೆ ಎಂಬ ಮಹಾದ್ವಾರದ ಜೊತೆಗೆ ಆಕರ್ಷಕವಾದ ಕೋಟೆ ಮಾದರಿ ವೇದಿಕೆ ರೂಪಿಸಲಾಗಿದೆ. ಒಟ್ಟಾರೆ ಈ ಅದ್ಭುತ ಕಲ್ಪನೆ ನೋಡುಗರ ಗಮನ ಸೆಳೆಯುತ್ತಿದೆ.
    ಪ್ರತಿಷ್ಠಾಪನೆಗೂ ಮೊದಲು  ಪಂಬೆ ವಾದ್ಯ, ಡೊಳ್ಳು ಕುಣಿತ ಸೇರಿದಂತೆ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಅಪ್ಪಾಜಿ ಪ್ರತಿಮೆ ಹಾಗು ಗಣೇಶ ಮೂರ್ತಿಯನ್ನು ವೇದಿಕೆಗೆ ತರಲಾಯಿತು. ಅಪ್ಪಾಜಿ ಅವರ ಪತ್ನಿ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್ ಹಾಗು ಜೆಡಿಎಸ್ ಪಕ್ಷದ ನಗರಸಭಾ ಸದಸ್ಯರು, ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು, ಸ್ಥಳೀಯರು ಪಾಲ್ಗೊಂಡಿದ್ದರು.
    ಮತ್ತೊಂದು ವಿಶೇಷತೆ ಎಂದರೆ ಈ ಪರಿಕಲ್ಪನೆ ೫೧ ದಿನಗಳವರೆಗೆ ಇರಲಿದೆ. ಅಪ್ಪಾಜಿಯವರು ಕ್ಷೇತ್ರದ ಜನರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ ಎಂಬುದಕ್ಕೆ ಇದೆ ಸಾಕ್ಷಿಯಾಗಿದೆ. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಅವರನ್ನು ಈ ಅದ್ಭುತ ಕಲ್ಪನೆ ಪುನಃ ಜೀವಂತಿಕೆಯನ್ನು ತಂದುಕೊಟ್ಟಂತೆ ಭಾಸವಾಗುತ್ತಿದೆ. ಇದನ್ನು ರೂಪಿಸಿರುವ ಅಪ್ಪಾಜಿ ಅಭಿಮಾನಿಗಳಿಗೆ, ಕಲಾವಿದರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಕ್ಷೇತ್ರದ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅದ್ಭುತ ಕಲ್ಪನೆಯನ್ನು ಕಣ್ತುಂಬಿಕೊಳ್ಳುವಂತೆ ಸ್ಥಳೀಯರು ಕೋರಿದ್ದಾರೆ.

ಹಿಂದಿ ದಿವಸ್ ಆಚರಣೆ ಮೂಲಕ ಹಿಂದಿ ಭಾಷೆ ಕಡ್ಡಾಯಗೊಳಿಸುವ ಹುನ್ನಾರ

ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಆರೋಪ

ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಬಲವಂತದ ಹಿಂದಿ ಹೇರಿಕೆ ವಿರೋಧಿಸಿ ಜೆಡಿಎಸ್ ಪಕ್ಷದ ವತಿಯಿಂದ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಸೆ. ೧೪: ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಣೆ ಮೂಲಕ ದೇಶಾದ್ಯಂತ ಹಿಂದಿ ಭಾಷೆ ಕಡ್ಡಾಯಗೊಳಿಸುವ ಹುನ್ನಾರ ನಡೆಸುತ್ತಿದ್ದು, ಇದನ್ನು ಎಲ್ಲರೂ ಒಗ್ಗಟ್ಟಾಗಿ ವಿರೋಧಿಸಬೇಕೆಂದು ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಹೇಳಿದರು.
    ಅವರು ಬುಧವಾರ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಬಲವಂತದ ಹಿಂದಿ ಹೇರಿಕೆ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಅನಗತ್ಯವಾಗಿ ಹಿಂದಿ ದಿವಸ್ ಆಚರಣೆ ನಡೆಸುವ ಮೂಲಕ ಶ್ರೀಸಾಮಾನ್ಯರ ದಿಕ್ಕು ತಪ್ಪಿಸುವ ಕಾರ್ಯದಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ತೊಡಗಿವೆ. ಹಲವಾರು ಸಮಸ್ಯೆಗಳಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ. 
    ಪಕ್ಷದ ವರಷ್ಠರ ಸೂಚನೆ ಮೇರೆಗೆ ಎಲ್ಲಾ ಜಿಲ್ಲಾ ಹಾಗು ತಾಲೂಕು ಕೇಂದ್ರಗಳಲ್ಲಿ ಇಂದು ಹೋರಾಟ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಇದೆ ರೀತಿ ಧೋರಣೆ ಮುಂದುವರೆಸಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭಾ ಸದಸ್ಯರಾದ ಬಸವರಾಜ ಬಿ. ಆನೇಕೊಪ್ಪ, ಪಲ್ಲವಿ ದಿಲೀಪ್, ಮಾಜಿ ಸದಸ್ಯರಾದ ಮುರ್ತುಜಾಖಾನ್, ಮೈಲಾರಪ್ಪ, ಆನಂದ್, ಎಚ್.ಬಿ ರವಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಮುಖಂಡರಾದ ನಂಜುಂಡೇಗೌಡ ಸೇರಿದಂತೆ ಇನ್ನಿತರರು ಮಾತನಾಡಿ, ಕೇಂದ್ರ ಹಾಗು ರಾಜ್ಯ ಸರ್ಕಾರ ಹಿಂದಿ ದಿವಸ್ ಆಚರಣೆ ಮೂಲಕ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯುಂಟು ಮಾಡುತ್ತಿದೆ. ಆಯಾ ರಾಜ್ಯಗಳಲ್ಲಿ ಆಯಾ ಭಾಷೆಗಳು ಅಧಿಕೃತವಾಗಿವೆ. ಬಲವಂತವಾಗಿ ಹಿಂದಿ ಹೇರಿಕೆ ಮೂಲಕ ದಬ್ಬಾಳಿಕೆ ನಡೆಸುತ್ತಿರುವುದು ಸರಿಯಲ್ಲ. ದೇಶಾದ್ಯಂತ ಹಿಂದಿ ದಿವಸ್ ಆಚರಣೆ ಜಾರಿಗೊಳಿಸುವುದನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
    ನಗರಸಭಾ ಸದಸ್ಯರಾದ ವಿಜಯ, ರೂಪಾವತಿ ಗುಣಶೇಖರ್, ರೇಖಾ ಪ್ರಕಾಶ್, ನಾಗರತ್ನ ಅನಿಲ್‌ಕುಮಾರ್, ಮಾಜಿ ಸದಸ್ಯರಾದ ವಿಶಾಲಾಕ್ಷಿ, ಎಂ. ರಾಜು, ಸಾವಿತ್ರಮ್ಮ ಪುಟ್ಟೇಗೌಡ, ಮುಖಂಡರಾದ ಎನ್. ರಾಮಕೃಷ್ಣ, ಉಮೇಶ್, ಸುಬ್ಬಣ್ಣ, ಭಾಗ್ಯಮ್ಮ, ಉಮೇಶ್ ಸುರಗಿತೋಪು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, September 13, 2022

ಅಡಕೆ ಕೊಯ್ಯುವಾಗ ವಿದ್ಯುತ್ ತಗುಲಿ ವ್ಯಕ್ತಿ ಮೃತ

    ಭದ್ರಾವತಿ, ಸೆ. ೧೩: ತೋಟದಲ್ಲಿ ಅಡಕೆ ಕೊಯ್ಯುವಾಗ ವಿದ್ಯುತ್ ತಗುಲಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿರುವ ಘಟನೆ ತಾಲೂಕಿನ ಕಾಚಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
    ಗ್ರಾಮದ ನಿವಾಸಿ ಮಂಜುನಾಥ ಬರ್ಗೆ(೩೮) ಮೃತಪಟ್ಟಿದ್ದು, ಅಡಕೆ ಕೊಯ್ಯುವಾಗ ಅಕಸ್ಮಿಕವಾಗಿ ವಿದ್ಯುತ್ ಕಂಬದಲ್ಲಿನ ತಂತಿಗೆ ತಗುಲಿದೆ. ಇದರಿಂದಾಗಿ ವಿದ್ಯುತ್ ಪ್ರವಹಿಸಿ ತೀವ್ರ ಅಸ್ವಸ್ಥಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಂಜುನಾಥ ಬರ್ಗೆ ಗ್ರಾಮದ ಶ್ರೀನಿವಾಸ್ ಬರ್ಗೆ ಅವರ ಪುತ್ರರಾಗಿದ್ದು, ಪತ್ನಿ, ಇಬ್ಬರು ಮಕ್ಕಳಿದ್ದಾರೆ.