ಭದ್ರಾವತಿ ನಗರಸಭೆ ನೂತನ ಅಧ್ಯಕ್ಷರಾಗಿ ವಾರ್ಡ್ ನಂ. ೧೩ರ ಸದಸ್ಯೆ ಅನುಸುಧಾ ಮೋಹನ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಯ್ಕೆಯಾದರು.
ಭದ್ರಾವತಿ, ಸೆ.೨೩: ನಗರಸಭೆ ನೂತನ ಅಧ್ಯಕ್ಷರಾಗಿ ವಾರ್ಡ್ ನಂ. ೧೩ರ ಸದಸ್ಯೆ ಅನುಸುಧಾ ಮೋಹನ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಯ್ಕೆಯಾದರು.
ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಅನುಸುಧಾ ಮೋಹನ್, ಜೆಡಿಎಸ್ ಪಕ್ಷದಿಂದ ವಾರ್ಡ್ ನಂ.೨೧ರ ವಿಜಯ ಹಾಗು ಬಿಜೆಪಿ ಪಕ್ಷದಿಂದ ವಾರ್ಡ್ ನಂ.೪ರ ಅನುಪಮ ಚನ್ನೇಶ್ ಸ್ಪರ್ಧಿಸಿದ್ದರು. ೩೫ ನಗರಸಭಾ ಸದಸ್ಯರು, ೧ ವಿಧಾನಸಭಾ ಸದಸ್ಯರು ಮತ್ತು ೧ ಲೋಕಸಭಾ ಸದಸ್ಯರು ಒಟ್ಟು ೩೭ ಮತಗಳಿದ್ದು, ಈ ಪೈಕಿ ಲೋಕಸಭಾ ಸದಸ್ಯರು ಮತ ಚಲಾಯಿಸಿಲ್ಲ. ಉಳಿದ ೩೬ ಮತಗಳ ಪೈಕಿ ಅನುಸುಧಾ ಮೋಹನ್ ಪಳನಿ ೨೦, ವಿಜಯ ೧೨ ಹಾಗು ಅನುಪಮ ಚನ್ನೇಶ್ ೪ ಮತಗಳನ್ನು ಪಡೆದುಕೊಂಡರು. ಒಟ್ಟು ೮ ಮತಗಳ ಅಂತರದಿಂದ ಅನುಸುಧಾ ಮೋಹನ್ ಪಳನಿ ಆಯ್ಕೆಯಾಗಿದ್ದಾರೆ.
ತಮಿಳು ವನ್ನಿಯರ್ ಗೌಂಡರ್ ಸಮುದಾಯಕ್ಕೆ ಸೇರಿದ ಅನುಸುಧಾ ಮೊದಲ ಬಾರಿಗೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದು, ಮೊದಲ ಅವಧಿಯಲ್ಲಿಯೇ ಅಧ್ಯಕ್ಷರಾಗಿದ್ದಾರೆ. ಇವರ ಮಾವ ಕೆ. ಪಳನಿ ಅವರು ಸುಮಾರು ೪ ಬಾರಿ ಪುರಸಭಾ ಸದಸ್ಯರಾಗಿದ್ದು, ಇವರ ರಾಜಕೀಯ ಅನುಭವ ಅನುಸುಧಾ ಅವರಿಗೆ ಮಾರ್ಗದರ್ಶನವಾಗಿದೆ.
ವನ್ನಿಯರ್‌ಗೆ ಪ್ರತಿಸ್ಪರ್ಧಿ ಮೊದಲಿಯಾರ್:
ತಮಿಳು ಜನಾಂಗದ ಒಳಪಂಗಡಗಳಾಗಿರುವ ವನ್ನಿಯರ್ ಗೌಂಡರ್ ಮತ್ತು ಆಗಮುಡಿ ಮೊದಲಿಯಾರ್ ಸಮಾಜದ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿರುವುದು ವಿಶೇಷವಾಗಿತ್ತು. ಅನುಸುಧಾ ವನ್ನಿಯರ್ ಗೌಂಡರ್ ಸಮುದಾಯಕ್ಕೆ ಸೇರಿದ್ದು, ಇವರ ಪ್ರತಿಸ್ಪರ್ಧಿ ವಿಜಯ ಆಗಮುಡಿ ಮೊದಲಿಯಾರ್ ಸಮುದಾಯಕ್ಕೆ ಸೇರಿದ್ದಾರೆ.
ಪ್ರಸ್ತುತ ನಗರಸಭೆಯಲ್ಲಿ ಕಾಂಗ್ರೆಸ್-೧೮, ಜೆಡಿಎಸ್-೧೨, ಬಿಜೆಪಿ-೦೪ ಮತ್ತು ಪಕ್ಷೇತರ-೦೧ ಸ್ಥಾನ ಹೊಂದಿದೆ. ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಎಸ್.ಬಿ ದೊಡ್ಡೇಗೌಡರ್ ಕಾರ್ಯ ನಿರ್ವಹಿಸಿದರು. ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು.
ನಾಡಹಬ್ಬ ದಸರಾಗೆ ಹೊಸ ಅಧ್ಯಕ್ಷರು :
ನಗರಸಭೆ ವತಿಯಿಂದ ಸೆ.೨೬ರಿಂದ ನಾಡಹಬ್ಬ ದಸರಾ ಆಚರಣೆ ನಡೆಯಲಿದ್ದು, ಉಪಾಧ್ಯಕ್ಷರಾದ ಚನ್ನಪ್ಪ ಅವರು ಸುಮಾರು ೧ ತಿಂಗಳಿನಿಂದ ಪ್ರಭಾರ ಅಧ್ಯಕ್ಷರಾಗಿದ್ದರು. ಇದೀಗ ನಾಡಹಬ್ಬ ದಸರಾ ಆಚರಣೆ ನೂತನ ಅಧ್ಯಕ್ಷೆ ಅನುಸುಧಾ ಅವರ ನೇತೃತ್ವದಲ್ಲಿ ನಡೆಯಲಿದೆ. ಸುಮಾರು ೧೦ ದಿನಗಳ ದಸರಾ ಆಚರಣೆ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ದತೆಗಳು ನಡೆದಿವೆ.
ನೂತನ ಅಧ್ಯಕ್ಷರಿಗೆ ಶಾಸಕ ಬಿ.ಕೆ ಸಂಗಮೇಶ್ವರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಹಾಗು ಜಂಬೂ ಮಹರ್ಷಿ ವನ್ನಿಯರ್ ಗೌಂಡರ್ ಸಮಾಜದ ರಾಜ್ಯಾಧ್ಯಕ್ಷ ನಂದಕುಮಾರ್, ತಾಲೂಕು ಅಧ್ಯಕ್ಷ ಮಣಿ ಎಎನ್‌ಎಸ್, ತಮಿಳು ಸಮಾಜದ ತಾಲೂಕು ಅಧ್ಯಕ್ಷ ರವಿ, ಆಗಮುಡಿ ಮೊದಲಿಯಾರ್ ಸಮಾಜದ ಅಧ್ಯಕ್ಷ ಕಣ್ಣಪ್ಪ, ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಯುವ ಘಟಕದ ಅಧ್ಯಕ್ಷರಾದ ಅಫ್ತಾಬ್ ಅಹಮದ್, ವಿನೋದ್ ಸೇರಿದಂತೆ ಪಕ್ಷದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಇನ್ನಿತರರು ಅಭಿನಂದಿಸಿದರು.
ಅನುಸುಧಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ನಗರಸಭೆ ಮುಂಭಾಗ ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ನಂತರ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಿ ಮಹಾತ್ಮಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ನಂದಕುಮಾರ್, ರಾಜ್ಯಾಧ್ಯಕ್ಷರು, ಜಂಬೂ ಮಹರ್ಷಿ ವನ್ನಿಯರ್ ಗೌಂಡರ್ ಸಮಾಜ.
ಕ್ಷೇತ್ರದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ವನ್ನಿಯರ್ ಗೌಂಡರ್ ಸಮಾಜವನ್ನು ಗುರುತಿಸಿ ರಾಜಕೀಯದಲ್ಲಿ ಅವರಿಗೂ ಸೂಕ್ತ ಸ್ಥಾನಮಾನ ನೀಡಿರುವುದು ಸಂತಸ ಸಂಗತಿಯಾಗಿದೆ. ಗೌಂಡರ್ ಸಮಾಜ ಎಲ್ಲಾ ಸಮುದಾಯಗಳೊಂದಿಗೂ ಸೌಹಾರ್ದತೆ ಕಂಡುಕೊಂಡಿದ್ದು, ಇಂತಹ ಸಮುದಾಯಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕಾಂಗ್ರೆಸ್ ಪಕ್ಷದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.
- ನಂದಕುಮಾರ್, ರಾಜ್ಯಾಧ್ಯಕ್ಷರು, ಜಂಬೂ ಮಹರ್ಷಿ ವನ್ನಿಯರ್ ಗೌಂಡರ್ ಸಮಾಜ.