ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ಮನವಿ
ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ, ನಾಗತಿಬೆಳಗಲು ತಾಂಡದ ಲಂಬಾಣಿ ಜನಾಂಗಕ್ಕೆ ರುದ್ರಭೂಮಿಗಾಗಿ ಖಾತೆ ಪಹಣಿ ಮಾಡಿಕೊಡಬೇಕೆಂದು ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತ ಹಾಗು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಅ. ೧: ತಾಲೂಕಿನ ಕೂಡ್ಲಿಗೆರೆ ಹೋಬಳಿ, ನಾಗತಿಬೆಳಗಲು ತಾಂಡದ ಲಂಬಾಣಿ ಜನಾಂಗಕ್ಕೆ ರುದ್ರಭೂಮಿಗಾಗಿ ಖಾತೆ ಪಹಣಿ ಮಾಡಿಕೊಡಬೇಕೆಂದು ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತ ಹಾಗು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ರುದ್ರಭೂಮಿಗೆ ಮೀಸಲಿಟ್ಟಿರುವ ಹೊಸಹಳ್ಳಿ ಗ್ರಾಮದ ಸರ್ವೆ ನಂ.೧೬ರಲ್ಲಿ ೩ ಎಕರೆ ೨೦ ಗುಂಟೆ ಜಮೀನು ಪೈಕಿ ೧ ಎಕರೆ ಜಮೀನು ಇದ್ದು, ಈಗಾಗಲೇ ಈ ಜಮೀನಿನಲ್ಲಿ ಕಳೆದ ಸುಮಾರು ೩೦ ವರ್ಷಗಳಿಂದ ಅಂತ್ಯಸಂಸ್ಕಾರ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಈ ಜಮೀನು ಪಹಣಿಯಲ್ಲಿ ಮುಫತ್ತು ಎಂದು ದಾಖಲಾಗಿದೆ. ಉಳಿದ ೨ ಎಕರೆ ೨೦ ಗುಂಟೆ ಜಮೀನಿನ ಸಂಬಂಧ ಹೊಸಹಳ್ಳಿ ಗ್ರಾಮದವರು ಕೈ ಪಹಣಿಯನ್ನು ಮಾಡಿಸಿಕೊಂಡು ಜಾಗವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ೨ ಎಕರೆ ೨೦ ಗುಂಟೆ ಜಮೀನನ್ನು ಶ್ರೀ ಸೇವಾಲಾಲ್ ರುದ್ರಭೂಮಿ ಸೇವಾ ಸಮಿತಿಗೆ ತಕ್ಷಣ ಖಾತೆ ಪಹಣಿ ಮಾಡಿಕೊಡಬೇಕೆಂದು ಆಗ್ರಹಿಸಲಾಯಿತು.
ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ನೇತೃತ್ವದಲ್ಲಿ ತಹಸೀಲ್ದಾರ್ ಗ್ರೇಡ್-೨ ಮಂಜಾನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು. ಶ್ರೀ ಸೇವಾಲಾಲ್ ರುದ್ರಭೂಮಿ ಸೇವಾ ಸಮಿತಿ ಅಧ್ಯಕ್ಷ ರೂಪ್ಲಾನಾಯ್ಕ, ಕಾರ್ಯದರ್ಶಿ ಕುಮಾರನಾಯ್ಕ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಜಾತ್ಯತೀತ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಜಾತ್ಯತೀತ ಜನತಾದಳ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ಹಾಗು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ತಾಂಡ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.