Sunday, October 2, 2022

ಮೆಚ್ಚುಗೆಗೆ ಪಾತ್ರವಾದ ಮೂಕ, ಕಿವುಡ ಮಕ್ಕಳ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಾಟಕ

ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಭಾನುವಾರ ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶಾರದ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನ್ಯೂಟೌನ್ ತರಂಗ ಮೂಕ ಮತ್ತು ಕಿವುಡ ಮಕ್ಕಳ ಶಾಲೆ ವಿದ್ಯಾರ್ಥಿಗಳು ತಮ್ಮ ಅಭಿನಯದ ಮೂಲಕ ಅಚ್ಚರಿಗೊಳಿಸಿದರು.
    ಭದ್ರಾವತಿ, ಅ. ೨ : ಮೂಕ ಮತ್ತು ಕಿವುಡ ಮಕ್ಕಳಿಂದ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ನಾಟಕ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
    ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಭಾನುವಾರ ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶಾರದ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನ್ಯೂಟೌನ್ ತರಂಗ ಮೂಕ ಮತ್ತು ಕಿವುಡ ಮಕ್ಕಳ ಶಾಲೆ ವಿದ್ಯಾರ್ಥಿಗಳು ತಮ್ಮ ಅಭಿನಯದ ಮೂಲಕ ಅಚ್ಚರಿಗೊಳಿಸಿದರು.
    ಕೆಲವರು ಉದ್ಯಾನವನದಲ್ಲಿ ಎಲ್ಲಿಬೇಕೆಂದರಲ್ಲಿ ಕಸ ಎಸೆಯುವುದು. ಮತ್ತೊಬ್ಬರು ರಾಷ್ಟ್ರಪಿತ ಮಹಾತ್ಮಗಾಂಧಿ ಪ್ರತಿಮೆಯಲ್ಲಿನ ಒಂದೊಂದು ವಸ್ತುಗಳನ್ನು ಕದಿಯುವುದು. ಇನ್ನೊಬ್ಬರು ಉದ್ಯಾನವನದಲ್ಲಿ ರಕ್ಷಣೆಯಲ್ಲಿ ತೊಡಗಿರುವವರು. ಮತ್ತಿಬ್ಬರು ವ್ಯಾಪಾರ ವಹಿವಾಟು ನಡೆಸುವವರು. ಈ ನಡುವೆ ಉದ್ಯಾನವನದ ಮಹತ್ವ ಹಾಗು ಸ್ವಚ್ಛತೆ ಕುರಿತು ಅರಿವು ಮೂಡಿಸುವ ಪರಿ ವೀಕ್ಷಕರ ಮನಸೂರೆಗೊಂಡಿತು.


    ಇದಕ್ಕೂ ಮೊದಲು ಕಾರ್ಯಕ್ರಮಕ್ಕೆ ಕಾರ್ಖಾನೆಯ ಮುಖ್ಯ ಪ್ರಬಂಧಕ ಕೆ.ಎಸ್. ಸುರೇಶ್ ಚಾಲನೆ ನೀಡಿದರು. ಡಾ. ಕವಿತಾ ಸದಾಶಿವ ಭಗವದ್ಗೀತೆ, ನೋರಾ ಮಂಜಿಸ್ ಬೈಬಲ್ ಹಾಗೂ ಹಫಿಜ್ ಉರ್ ರಹಮಾನ್ ಕುರಾನ್ ಪಠಿಸಿದರು.
    ಅಧಿಕಾರಿಗಳ ಸಂಘದ ಅಧ್ಯಕ್ಷ ಸುಗಾದಿ ಲೋಕನಾಥ್, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ಹಾಗು ಪದಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.


Saturday, October 1, 2022

ನಗರದ ವಿವಿಧೆಡೆ ಮಹಾತ್ಮಗಾಂಧಿ ಜಯಂತಿ

    ಭದ್ರಾವತಿ, ಅ. ೧ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೇರಿದಂತೆ ವಿವಿಧೆಡೆ ಅ.೨ರಂದು ಮಹಾತ್ಮಗಾಂಧಿ ಜಯಂತಿ ಹಮ್ಮಿಕೊಳ್ಳಲಾಗಿದೆ.
    ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ನ್ಯೂಟೌನ್ ಶಾರದ ಮಂದಿರದಲ್ಲಿ ಬೆಳಿಗ್ಗೆ ೯ ಗಂಟೆಗೆ ಮಹಾತ್ಮಗಾಂಧಿ ಜಯಂತಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಗಾಂಧಿ ನಮನ ಹಾಗು ಸರ್ವ ಧರ್ಮ ಗ್ರಂಥಗಳ ಸಂದೇಶ ಪಠಣ ಹಾಗು ದೇಶ ಭಕ್ತಿ ಗೀತೆ ಗಾಯನ ನಡೆಯಲಿದೆ.
    ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಹಾಗು ಕಾರ್ಮಿಕ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಖಾನೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ತರಂಗ ಕಿವುಡು ಮಕ್ಕಳ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಎಲ್. ಪ್ರವೀಣ್‌ಕುಮಾರ್ ಕೋರಿದ್ದಾರೆ.
    ಜೆಡಿಎಸ್ ಪಕ್ಷದಿಂದ ಗಾಂಧಿ ಜಯಂತಿ:
    ಜಾತ್ಯತೀತ ಜನತಾದಳ ವತಿಯಿಂದ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ನೇತೃತ್ವದಲ್ಲಿ ಅ.೨ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಗಾಂಧಿ ಜಯಂತಿ ಹಮ್ಮಿಕೊಳ್ಳಲಾಗಿದೆ.
    ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಗಾಂಧಿ ಜಯಂತಿ ಆಚರಣೆ ನಡೆಯಲಿದ್ದು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಕೋರಲಾಗಿದೆ.

ಲಂಬಾಣಿ ಜನಾಂಗಕ್ಕೆ ರುದ್ರಭೂಮಿಗಾಗಿ ಖಾತೆ ಪಹಣಿ ಮಾಡಿಕೊಡಲು ಆಗ್ರಹಿಸಿ ಪ್ರತಿಭಟನೆ

ಜಿಲ್ಲಾಡಳಿತ, ತಾಲೂಕು ಆಡಳಿತಕ್ಕೆ ಮನವಿ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಹೋಬಳಿ, ನಾಗತಿಬೆಳಗಲು ತಾಂಡದ ಲಂಬಾಣಿ ಜನಾಂಗಕ್ಕೆ ರುದ್ರಭೂಮಿಗಾಗಿ ಖಾತೆ ಪಹಣಿ ಮಾಡಿಕೊಡಬೇಕೆಂದು ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತ ಹಾಗು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಅ. ೧: ತಾಲೂಕಿನ ಕೂಡ್ಲಿಗೆರೆ ಹೋಬಳಿ, ನಾಗತಿಬೆಳಗಲು ತಾಂಡದ ಲಂಬಾಣಿ ಜನಾಂಗಕ್ಕೆ ರುದ್ರಭೂಮಿಗಾಗಿ ಖಾತೆ ಪಹಣಿ ಮಾಡಿಕೊಡಬೇಕೆಂದು ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳಿತ ಹಾಗು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ರುದ್ರಭೂಮಿಗೆ ಮೀಸಲಿಟ್ಟಿರುವ ಹೊಸಹಳ್ಳಿ ಗ್ರಾಮದ ಸರ್ವೆ ನಂ.೧೬ರಲ್ಲಿ ೩ ಎಕರೆ ೨೦ ಗುಂಟೆ ಜಮೀನು ಪೈಕಿ ೧ ಎಕರೆ ಜಮೀನು ಇದ್ದು, ಈಗಾಗಲೇ ಈ ಜಮೀನಿನಲ್ಲಿ ಕಳೆದ ಸುಮಾರು ೩೦ ವರ್ಷಗಳಿಂದ ಅಂತ್ಯಸಂಸ್ಕಾರ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಈ ಜಮೀನು ಪಹಣಿಯಲ್ಲಿ ಮುಫತ್ತು ಎಂದು ದಾಖಲಾಗಿದೆ. ಉಳಿದ ೨ ಎಕರೆ ೨೦ ಗುಂಟೆ ಜಮೀನಿನ ಸಂಬಂಧ ಹೊಸಹಳ್ಳಿ ಗ್ರಾಮದವರು ಕೈ ಪಹಣಿಯನ್ನು ಮಾಡಿಸಿಕೊಂಡು ಜಾಗವನ್ನು ಕಬಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ೨ ಎಕರೆ ೨೦ ಗುಂಟೆ ಜಮೀನನ್ನು ಶ್ರೀ ಸೇವಾಲಾಲ್ ರುದ್ರಭೂಮಿ ಸೇವಾ ಸಮಿತಿಗೆ ತಕ್ಷಣ ಖಾತೆ ಪಹಣಿ ಮಾಡಿಕೊಡಬೇಕೆಂದು ಆಗ್ರಹಿಸಲಾಯಿತು.  
    ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ನೇತೃತ್ವದಲ್ಲಿ ತಹಸೀಲ್ದಾರ್ ಗ್ರೇಡ್-೨ ಮಂಜಾನಾಯ್ಕ ಅವರಿಗೆ ಮನವಿ ಸಲ್ಲಿಸಲಾಯಿತು. ಶ್ರೀ ಸೇವಾಲಾಲ್ ರುದ್ರಭೂಮಿ ಸೇವಾ ಸಮಿತಿ ಅಧ್ಯಕ್ಷ ರೂಪ್ಲಾನಾಯ್ಕ, ಕಾರ್ಯದರ್ಶಿ ಕುಮಾರನಾಯ್ಕ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಜಾತ್ಯತೀತ(ಸಂಯುಕ್ತ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ಜಾತ್ಯತೀತ ಜನತಾದಳ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭೆ ಮಾಜಿ ಸದಸ್ಯ ಎಂ.ಎ ಅಜಿತ್ ಹಾಗು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ತಾಂಡ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಯೊಬ್ಬರಿಗೂ ತಮ್ಮ ವೃತ್ತಿ ಬಗ್ಗೆ ಅಭಿಮಾನವಿರಲಿ : ಬಿ.ಕೆ ಶ್ರೀನಾಥ್

ನವರಾತ್ರಿ ಪ್ರಯುಕ್ತ ದಾಂಡಿಯಾ ಸ್ನೇಹ-ಮಿಲನ ಕಾರ್ಯಕ್ರಮ

ಭದ್ರಾವತಿಯಲ್ಲಿ ಸ್ತ್ರೀ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಬ್ಯೂಟಿಷಿಯನ್ ಮತ್ತು ಟೈಲರಿಂಗ್‌ರವರಿಂದ ನವರಾತ್ರಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ದಾಂಡಿಯಾ ಸ್ನೇಹ-ಮಿಲನ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಅ. ೧: ಸ್ತ್ರೀ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಬ್ಯೂಟಿಷಿಯನ್ ಮತ್ತು ಟೈಲರಿಂಗ್‌ರವರಿಂದ ನವರಾತ್ರಿ ಪ್ರಯುಕ್ತ ದಾಂಡಿಯಾ ಸ್ನೇಹ-ಮಿಲನ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
    ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಸಲಹೆಗಾರ ಬಿ.ಕೆ ಶ್ರೀನಾಥ್ ಮಾತನಾಡಿ, ದಾಂಡಿಯಾ ಕಾರ್ಯಕ್ರಮ ತನ್ನದೇ ಆದ ಪರಂಪರೆ, ವಿಶೇಷತೆಯನ್ನು ಹೊಂದಿದೆ. ದಾಂಡಿಯಾ ಪ್ರಮುಖ ಉದ್ದೇಶ ಎಲ್ಲರನ್ನು ಒಗ್ಗೂಡಿಸುವುದಾಗಿದೆ. ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಶುಭ ಕಾರ್ಯ ಕೈಗೊಳ್ಳುವ ಮೊದಲು ದಾಂಡಿಯಾ ನಡೆಸುವುದು ಆಚರಣೆಯಾಗಿ ಬಂದಿದೆ. ದಾಂಡಿಯಾ ಸ್ನೇಹ-ಮಿಲನ ಕಾರ್ಯಕ್ರಮದ ಮೂಲಕ ಎಲ್ಲಾ ಧರ್ಮದ, ಎಲ್ಲಾ ಜಾತಿ-ಜನಾಂಗದವರು ಒಗ್ಗೂಡಿ ನವರಾತ್ರಿ ಆಚರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
    ಬ್ಯೂಟಿಷಿಯನ್ ಮತ್ತು ಟೈಲರಿಂಗ್ ಒಂದು ವಿಶಿಷ್ಟವಾದ ವೃತ್ತಿಯಾಗಿದ್ದು, ಈ ವೃತ್ತಿ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಮಾತನಾಡಿ, ಅಸಂಘಟಿತ ಮಹಿಳಾ ಕಾರ್ಮಿಕರನ್ನು ಒಗ್ಗೂಡಿಸಿ ಅವರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ಸಂಸದ ಬಿ.ವೈ ರಾಘವೇಂದ್ರ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್‌ರವರ ಮಾರ್ಗದರ್ಶನದಲ್ಲಿ ಒಕ್ಕೂಟವನ್ನು ಅಸ್ತಿತ್ವಕ್ಕೆ ತರಲಾಗಿದೆ. ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸುವ ಜೊತೆಗೆ ಮಹಿಳೆಯರನ್ನು ಸಹ ಆರ್ಥಿಕವಾಗಿ ಸದೃಢಗೊಳಿಸುವ ಅಗತ್ಯವಿದೆ ಎಂದರು.  
    ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಮಾಜಿ ಸದಸ್ಯ ಗಂಗಾಧರ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಪದ್ಮಾವತಿ, ಗಾಯತ್ರಿ, ಕಲಾ, ಸರಿತ, ನೇತ್ರಾ, ರೂಪಾ, ತೃಪ್ತಿ, ಶಶಿ, ಶಿಲ್ಪ, ಮಾಲಾ ಹಾಗು ಶಿಕಾರಿಪುರ, ಹೊನ್ನಾಳ್ಳಿ, ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಸಾಗರ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ರೇಣುಕಾ ಪ್ರಾರ್ಥಿಸಿದರು. ಸುಮಿತ್ರಾ ಸ್ವಾಗತಿಸಿ, ಕವಿತಾ ನವೀನ್ ಮತ್ತು ವಿಜಯ್ ಸಿದ್ದಾರ್ಥ ನಿರೂಪಿಸಿದರು. ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ವೇಷಭೂಷಣ ಸ್ಪರ್ಧೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


ಭದ್ರಾವತಿಯಲ್ಲಿ ಸ್ತ್ರೀ ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಬ್ಯೂಟಿಷಿಯನ್ ಮತ್ತು ಟೈಲರಿಂಗ್‌ರವರಿಂದ ನವರಾತ್ರಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ದಾಂಡಿಯಾ ಸ್ನೇಹ-ಮಿಲನ ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಮಹಿಳೆಯರಿಂದ ನೃತ್ಯ ವೇಷಭೂಷಣ ಸ್ಪರ್ಧೆ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ

ಭದ್ರಾವತಿಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೭೨ನೇ ವರ್ಷದ ಜನ್ಮದಿನದ ಅಂಗವಾಗಿ ಪೋಷಣ್ ಮಿತ್ರ ಕಾರ್ಯಕ್ರಮದಡಿಯಲ್ಲಿ ಶನಿವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆ ನಡೆಯಿತು.
    ಭದ್ರಾವತಿ, ಅ. ೧; ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ೭೨ನೇ ವರ್ಷದ ಜನ್ಮದಿನದ ಅಂಗವಾಗಿ ಪೋಷಣ್ ಮಿತ್ರ ಕಾರ್ಯಕ್ರಮದಡಿಯಲ್ಲಿ ಶನಿವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆ ನಡೆಯಿತು.
    ವಿಧಾನ ಪರಿಷತ್ ಸದಸ್ಯ ಡಿ.ಎಸ್ ಅರುಣ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಎಸ್.ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜಣ್ಣ, ಜಯರಾಂ ನಾಯ್ಕ, ಪ್ರಭಾರ ಕಾರ್ಯದರ್ಶಿ ದೇವರಾಜನಾಯ್ಕ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಘು, ಕವಿತಾರಾವ್, ಆಶಾ ಪುಟ್ಟಸ್ವಾಮಿ, ಕವಿತಾ ಸುರೇಶ್, ಡಾ. ಪುಷ್ಪಲತಾ ಮತ್ತು ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಎಸ್.ಸಿ ಮೋರ್ಚಾ ತಾಲೂಕು ಅಧ್ಯಕ್ಷ ಪಿ. ಗಣೇಶ್‌ರಾವ್ ಸ್ವಾಗತಿಸಿದರು. ಆಶಾ ಮೆಂಟರ್ ವಸಂತ ನಿರೂಪಿಸಿದರು.  

Friday, September 30, 2022

ನಾಡಹಬ್ಬ ದಸರಾ : ಗಮನ ಸೆಳೆದ ಯೋಗ ನಡಿಗೆ

ಭದ್ರಾವತಿ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಯೋಗ ದಸರಾ ಯಶಸ್ವಿಯಾಗಿ ನಡೆಯಿತು.
    ಭದ್ರಾವತಿ, ಸೆ. ೩೦: ನಗರಸಭೆ ವತಿಯಿಂದ ನಾಡಹಬ್ಬ ದಸರಾ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಯೋಗ ದಸರಾ ಯಶಸ್ವಿಯಾಗಿ ನಡೆಯಿತು.
    ವಿವಿಧ ಯೋಗ ಸಮಿತಿಗಳ ಸಹಕಾರದೊಂದಿಗೆ ಬೆಳಿಗ್ಗೆ ಮಾಧವಚಾರ್ ವೃತ್ತದಿಂದ ಕನಕ ಮಂಟಪ ಮೈದಾನದವರೆಗೆ ಆಯೋಜಿಸಲಾಗಿದ್ದ ಯೋಗ ನಡಿಗೆ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ಚಾಲನೆ ನೀಡಿದರು.
    ಕನಕಮಂಟಪ ಮೈದಾನದಲ್ಲಿ ಯೋಗಾಸನ ಪ್ರದರ್ಶನದ ಮೂಲಕ ಯೋಗ ಕುರಿತು ಜಾಗೃತಿ ಮೂಡಿಸಲಾಯಿತು. ನಗರಸಭೆ ಅಧ್ಯಕ್ಷೆ ಅನುಸುಧಾ  ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್ ಹಾಗು ದಸರಾ ಆಚರಣೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ನಗರಸಭಾ ಸದಸ್ಯರು, ವಿವಿಧ ಯೋಗ ಸಮಿತಿಗಳ ಪ್ರಮುಖರು ಪಾಲ್ಗೊಂಡಿದ್ದರು.  

ಪ್ರತಿಭಾ ಕಾರಂಜಿ, ಕಲೋತ್ಸವ ಮಕ್ಕಳ ಪ್ರತಿಭೆಗೆ ಸಹಕಾರಿ : ಬಿ.ಕೆ ಸಂಗಮೇಶ್ವರ್

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ, ಸೆ. ೩೦: ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸಹಕಾರಿಯಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿಗಳ ಕಛೇರಿ ವತಿಯಿಂದ ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮಕ್ಕಳ ಪ್ರತಿಭೆಗಳನ್ನು ಅನಾವರಣಗೊಳಿಸಲು ವೇದಿಕೆ ಕಲ್ಪಿಸಿಕೊಟ್ಟಿರುವ ಶಿಕ್ಷಣ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಸಹ ನೀಡಬೇಕು. ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ದೇಶದ ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು.
    ವೇದಿಕೆಯಲ್ಲಿ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಡಿ. ಪ್ರಭಾಕರ ಬೀರಯ್ಯ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸದಸ್ಯೆ ಸರ್ವಮಂಗಳ ಭೈರಪ್ಪ, ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಟಿ. ಪೃಥ್ವಿರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಕೆ ಮೋಹನ್, ಸರ್ಕಾರಿ ನೌಕರರ ಸಂಘದ ಶ್ರೀಧರಗೌಡ, ಬಸವಂತರಾವ್ ದಾಳೆ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕೆ.ಬಿ ಬಸವರಾಜಪ್ಪ, ಸಿದ್ದಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜ ಹಾಗು ವಿವಿಧ ಕ್ಲಸ್ಟರ್‌ಗಳ ಸಿಆರ್‌ಪಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಪ್ರಭು, ನವೀದ್ ಪರ್ವೀಜ್ ಅಹಮದ್, ರವಿಕುಮಾರ್ ಸೇರಿದಂತೆ ಉಪಸ್ಥಿತರಿದ್ದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿಯರಾದ ವಿಜಯಲಕ್ಷ್ಮಿ ಪ್ರಾರ್ಥಿಸಿದರು. ತುಳಸಿ ಬಾಯಿ ನಿರೂಪಿಸಿದರು.