Saturday, October 8, 2022

ಅ.೯ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ

    ಭದ್ರಾವತಿ, ಅ. ೮: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅ. ೯ರಂದು ಬೆಳಿಗ್ಗೆ ೧೦.೩೦ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಮ್ಮಿಕೊಳ್ಳಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ ಅಶೋಕನಾಯ್ಕ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್ ಹಾಗು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ದಯಾಮ, ಪೌರಾಯುಕ್ತ ಮನುಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎನ್. ಗೋಪಾಲಪ್ಪ  ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಉಪನ್ಯಾಸ ನೀಡಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಸಂಭ್ರಮದ ಆಚರಣೆಗೆ ಭರದ ಸಿದ್ದತೆ

ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಹಳೇನಗರದ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಖಾಜಿ ಮೊಹಲ್ಲಾ ವೃತ್ತದಲ್ಲಿ ಸಂಭ್ರಮದ ಸಿದ್ದತೆ ಕೈಗೊಂಡಿರುವುದು.
    ಭದ್ರಾವತಿ, ಅ. ೮: ಈ ಬಾರಿ ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಆಚರಣೆಗೆ ಸರ್ಕಾರ ಯಾವುದೇ ನಿರ್ಬಂಧ ವಿಧಿಸದ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯದವರು ವಿಜೃಂಭಣೆಯಿಂದ ಆಚರಿಸಲು ಭರದ ಸಿದ್ದತೆ ಕೈಗೊಂಡಿದ್ದಾರೆ.
    ಮಹಾಮಾರಿ ಕೊರೋನಾ ಹಿನ್ನಲೆಯಲ್ಲಿ ಕಳೆದ ವರ್ಷಗಳಿಂದ ಈದ್ ಮಿಲಾದ್ ಸಂಭ್ರಮದ ಆಚರಣೆಗೆ ಹಲವಾರು ನಿಬಂಧಗಳನ್ನು ವಿಧಿಸಲಾಗಿತ್ತು. ಆದರೆ ಈ ಬಾರಿ ಕೊರೋನಾ ಇಳಿಮುಖವಾಗಿರುವ ಹಿನ್ನಲೆಯಲ್ಲಿ ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ಹಿನ್ನಲೆಯಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಕಳೆದ ೩-೪ ದಿನಗಳಿಂದ ಹಬ್ಬದ ಸಂಭ್ರಮದ ಆಚರಣೆಗೆ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.
    ನಗರಸಭೆ ವ್ಯಾಪ್ತಿಯ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಬೊಮ್ಮನಕಟ್ಟೆ, ಕೂಲಿಬ್ಲಾಕ್ ಶೆಡ್, ಹಳೇನಗರದ ಖಾಜಿ ಮೊಹಲ್ಲಾ, ತರೀಕೆರೆ ರಸ್ತೆಯ ಯಕಿನ್ಸಾ ಕಾಲೋನಿ, ನೆಹರು ನಗರ, ಅನ್ವರ್ ಕಾಲೋನಿ, ಸಾದತ್ ಕಾಲೋನಿ, ಅಮೀರ್‌ಜಾನ್ ಕಾಲೋನಿ, ಸೀಗೇಬಾಗಿ ಹಾಗು ಗ್ರಾಮಾಂತರ ವ್ಯಾಪ್ತಿಯ ಬಾಬಳ್ಳಿ, ಕಾಗೇಕೋಡಮಗ್ಗೆ, ದೊಣಬಘಟ್ಟ, ತಡಸ ಸೇರಿದಂತೆ ಇನ್ನಿತರೆಡೆ ಹಬ್ಬದ ಸಂಭ್ರಮಕ್ಕೆ ಭರದ ಸಿದ್ದತೆ ಕೈಗೊಳ್ಳಲಾಗಿದೆ.
    ಪ್ರಮುಖ ರಸ್ತೆಗಳು, ವೃತ್ತಗಳು ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳಿಂದ ಕಂಗೊಳಿಸುತ್ತಿವೆ. ವಿಶೇಷ ಎಂದರೆ ಟಿಪ್ಪು ಸುಲ್ತಾನ್ ಭಾವಚಿತ್ರ ಎಲ್ಲೆಡೆ ರಾರಜಿಸುತ್ತಿವೆ. ಈ ನಡುವೆ ಪೊಲೀಸರು ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.
    ಬೃಹತ್ ಮೆರವಣಿಗೆ :
    ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಅ.೯ರ ಭಾನುವಾರ ಬೆಳಿಗ್ಗೆ ನಗರದ ಅನ್ವರ್ ಕಾಲೋನಿ ವೃತ್ತದಿಂದ ಬೃಹತ್ ಮೆರವಣಿಗೆ ನಡೆಸಲಿದ್ದು, ಮೆರವಣಿಗೆ ರಂಗಪ್ಪ ವೃತ್ತ, ಮಾಧವಚಾರ್ ವೃತ್ತ ಮೂಲಕ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದವರೆಗೂ ಸಾಗಿ ನಂತರ ಸೈಯದ್ ಸಾದತ್ ದರ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂತ್ಯಗೊಳ್ಳಲಿದೆ.


ಪ್ರವಾದಿ ಮಹಮದ್ ಪೈಗಂಬರ್‌ರವರ ಜನ್ಮದಿನ ಈದ್ ಮಿಲಾದ್ ಅಂಗವಾಗಿ ಭದ್ರಾವತಿ ಹಳೇನಗರದ ಮುಸ್ಲಿಂ ಸಮುದಾಯದವರು ಹೆಚ್ಚಾಗಿರುವ ಖಾಜಿ ಮೊಹಲ್ಲಾದ ರಸ್ತೆಯೊಂದು ಕಂಗೊಳಿಸುತ್ತಿರುವುದು.

Friday, October 7, 2022

ಡಾ. ವಿಜಯದೇವಿಯವರ ಅಲ್ಲಮ ಪ್ರಭುದೇವರು : ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು ಕೃತಿ ಖರೀದಿಗೆ ಸೂಚನೆ

ಡಾ. ವಿಜಯದೇವಿಯವರ ಅಲ್ಲಮ ಪ್ರಭುದೇವರು : ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು ಕೃತಿ 
    ಭದ್ರಾವತಿ, ಅ. ೭ : ಮೂಲತಃ ನಗರದ ನಿವಾಸಿ, ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊಫೆಸರ್  ಡಾ. ವಿಜಯದೇವಿ ಅವರ ಅಲ್ಲಮ ಪ್ರಭುದೇವರು : ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು ಕೃತಿ ಕಾಲೇಜಿಗೆ ಅಗತ್ಯವೆನಿಸಿದಲ್ಲಿ ಖರೀದಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.
    ಈ ಸಂಬಂಧ ಶಿಕ್ಷಣ ಇಲಾಖೆ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದೆ. ಸಾಹಿತ್ಯ ಸುಮಾ ಪ್ರಶಸ್ತಿ ಪಡೆದ ಮೊದಲ ಕೃತಿ ಇದಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನಾರ್ಜನೆಗೆ ಈ ಕೃತಿ ಸಹಕಾರಿಯಾಗಿದ್ದು, ಅಲ್ಲದೆ ಮೌಲ್ಯಾಧಾರಿತ ಕೃತಿ ಇದಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಖರೀದಿಸಲು ಅನುಮತಿ ನೀಡುವಂತೆ ಕೋರಿ ಲೇಖಕ ಡಾ. ಭದ್ರಾವತಿ ರಾಮಾಚಾರಿ ಇಲಾಖೆಗೆ ಮನವಿ ಮಾಡಿದ್ದರು.
    ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಪದವಿ ಕಾಲೇಜು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಉಪಯುಕ್ತವಾಗಿದ್ದಲ್ಲಿ ಕಾಲೇಜಿನ ಗ್ರಂಥಾಲಯ ಪುಸ್ತಕ ಸಮಿತಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ವಾಚನಾಲಯದ ಖಾತೆಯಲ್ಲಿರುವ ಅನುದಾನದ ಲಭ್ಯತೆ ಆಧಾರದಲ್ಲಿ ಖರೀದಿಸುವಂತೆ ಅನುಮತಿ ನೀಡಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
    ಅಲ್ಲಮ ಪ್ರಭುದೇವರು : ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು ಕೃತಿಯನ್ನು ಬೆಂಗಳೂರಿನ ಸುಮಾ ಪ್ರಕಾಶನ ಮುದ್ರಿಸಿ ಹೊರತಂದಿದೆ. ಕೆಲವು ತಿಂಗಳ ಹಿಂದೆ ಈ ಕೃತಿಯನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷರಾಗಿ ಸಿದ್ದಲಿಂಗಯ್ಯ ನೇಮಕ

ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷರಾಗಿ ಭದ್ರಾವತಿ ಸಿದ್ದರೂಢನಗರದ ನಿವಾಸಿ ಸಿದ್ದಲಿಂಗಯ್ಯ ನೇಮಕಗೊಂಡಿದ್ದಾರೆ. 
    ಭದ್ರಾವತಿ, ಅ. ೭ : ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷರಾಗಿ ಸಿದ್ದರೂಢನಗರದ ನಿವಾಸಿ ಸಿದ್ದಲಿಂಗಯ್ಯ ನೇಮಕಗೊಂಡಿದ್ದಾರೆ.
    ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಸಿದ್ದಲಿಂಗಯ್ಯ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಕೇಶವೇಗೌಡ ತಿಳಿಸಿದ್ದಾರೆ.
    ಸಿದ್ದಲಿಂಗಯ್ಯ ಪ್ರಸ್ತುತ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೂ ಮೊದಲು ಹಲವಾರು ವರ್ಷ ತಾಲೂಕು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
    ಮೂಲತಃ ಸಿದ್ದಲಿಂಗಯ್ಯ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದು, ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಜಿಲ್ಲಾ ಸಂಘದ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಹಾಗು ಪಡಿತರ ವಿತರಕರು ಅಭಿನಂದಿಸಿದ್ದಾರೆ.

ಚನ್ನಮ್ಮನ ಕಿತ್ತೂರು ಉತ್ಸವ ವೀರ ಜ್ಯೋತಿ ರಥಯಾತ್ರೆಗೆ ಸ್ವಾಗತ

ಈ ಬಾರಿ ನಡೆಯಲಿರುವ ಚನ್ನಮ್ಮನ ಕಿತ್ತೂರು ಉತ್ಸವ-೨೦೨೨ರ ಅಂಗವಾಗಿ ವೀರ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಶುಕ್ರವಾರ ಭದ್ರಾವತಿ ನಗರಕ್ಕೆ ಆಗಮಿಸಿತು.
    ಭದ್ರಾವತಿ, ಅ. ೭ : ಈ ಬಾರಿ ನಡೆಯಲಿರುವ ಚನ್ನಮ್ಮನ ಕಿತ್ತೂರು ಉತ್ಸವ-೨೦೨೨ರ ಅಂಗವಾಗಿ ವೀರ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಶುಕ್ರವಾರ ನಗರಕ್ಕೆ ಆಗಮಿಸಿತು.
    ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಆಗ್ನಿಶಾಮಕ ಠಾಣೆ ಆವರಣದಲ್ಲಿ ತಾಲೂಕಿನ ನಾಗರೀಕರ ಪರವಾಗಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆ ತಾಲೂಕು ಘಟಕದ ರೇವಪ್ಪ, ವಾಗೀಶ್, ಜಗದೀಶ್ ಪಾಟೀಲ್, ಸತೀಶ್, ಪ್ರಕಾಶ್ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಸ್ವಾಗತಿಸಿದರು. ಪೊಲೀಸ್ ಇಲಾಖೆ  ಹಾಗು ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಶೌಚಾಲಯ ಗುಂಡಿಗೆ ಎಮ್ಮೆಕರು ಸಿಕ್ಕಿಹಾಕಿಕೊಂಡ ಪ್ರಕರಣ : ದೂರಿಗೆ ತಕ್ಷಣ ಸ್ಪಂದಿಸಿದ ನಗರಸಭೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ವಾರ್ಡ್ ನಂ.೩೩ರ ನಗರಸಭೆ ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಎಮ್ಮೆ ಕರು ಸಿಕ್ಕಿ ಹಾಕಿಕೊಂಡು ಸಂಕಷ್ಟಕ್ಕೆ ಒಳಗಾದ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ನಗರಸಭೆ ಆಡಳಿತ ತಕ್ಷಣ ಜಾಗೃತಗೊಂಡು ತುರ್ತು ಕ್ರಮ ಕೈಗೊಂಡಿದೆ.
    ಭದ್ರಾವತಿ, ಅ. ೭: ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ವಾರ್ಡ್ ನಂ.೩೩ರ ನಗರಸಭೆ ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಎಮ್ಮೆ ಕರು ಸಿಕ್ಕಿ ಹಾಕಿಕೊಂಡು ಸಂಕಷ್ಟಕ್ಕೆ ಒಳಗಾದ ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ನಗರಸಭೆ ಆಡಳಿತ ತಕ್ಷಣ ಜಾಗೃತಗೊಂಡು ತುರ್ತು ಕ್ರಮ ಕೈಗೊಂಡಿದೆ.
    ಪೌರಾಯುಕ್ತ ಮನುಕುಮಾರ್‌ರವರು ತಕ್ಷಣ ಎಚ್ಚೆತ್ತುಕೊಂಡು ಇಂಜಿನಿಯರ್ ಕೆ.ಜಿ ಸಂತೋಷ್ ಪಾಟೀಲ್, ಸೂಪರ್ ವೈಸರ್ ಗೋವಿಂದ ನೇತೃತ್ವದ ತಂಡವನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದು, ಶೌಚಾಲಯ ಗುಂಡಿಯ ಮೇಲ್ಭಾಗವನ್ನು ಚಪ್ಪಡಿ ಕಲ್ಲಿನಿಂದ ಮುಚ್ಚಲಾಗಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಸಮಸ್ಯೆ ಬಗೆಹರಿದಿದೆ.
    ಈ ಹಿನ್ನಲೆಯಲ್ಲಿ ಬೀದಿಬದಿ ವ್ಯಾಪಾರಸ್ಥರು, ಆಟೋ ಚಾಲಕರು, ವಾರ್ಡಿನ ಸದಸ್ಯ ಆರ್. ಮೋಹನ್‌ಕುಮಾರ್ ಮತ್ತು ಮುಖಂಡ ಎಸ್.ಎಸ್ ಭೈರಪ್ಪ ಸೇರಿದಂತೆ ಇನ್ನಿತರರು ಕೃತಜ್ಞತೆ ಸಲ್ಲಿಸಿದ್ದಾರೆ.

ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಸಿಕ್ಕಿಹಾಕಿಕೊಂಡ ಎಮ್ಮೆಕರು

ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರಿಂದ ರಕ್ಷಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ವಾರ್ಡ್ ನಂ.೩೩ರ ನಗರಸಭೆ ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಎಮ್ಮೆ ಕರು ಸಿಕ್ಕಿ ಹಾಕಿಕೊಂಡು ಸಂಕಷ್ಟಕ್ಕೆ ಒಳಗಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
    ಭದ್ರಾವತಿ, ಅ. ೭: ನಗರಸಭೆ ವ್ಯಾಪ್ತಿಯ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ವಾರ್ಡ್ ನಂ.೩೩ರ ನಗರಸಭೆ ಹೈಟೆಕ್ ಶೌಚಾಲಯದ ಗುಂಡಿಯಲ್ಲಿ ಎಮ್ಮೆ ಕರು ಸಿಕ್ಕಿ ಹಾಕಿಕೊಂಡು ಸಂಕಷ್ಟಕ್ಕೆ ಒಳಗಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.


    ಕೆಲವು ದಿನಗಳಿಂದ ಶೌಚಾಲಯದ ಗುಂಡಿಯಿಂದ ಕಲ್ಮಶಗೊಂಡ ನೀರು ಹೊರಬರುತ್ತಿದ್ದು, ಈ ಭಾಗದಲ್ಲಿ ದುರ್ವಾಸನೆ ಬರುತ್ತಿದ್ದರೂ ಸಹ ಈ ಬಗ್ಗೆ ಯಾರು ಸಹ ಗಮನ ಹರಿಸಿರಲಿಲ್ಲ. ಎಮ್ಮೆ ಕರು ಈ ಗುಂಡಿಯಲ್ಲಿ ಆಕಸ್ಮಿಕವಾಗಿ ಸಿಕ್ಕಿ ಹಾಕಿಕೊಂಡಿದ್ದು, ಹೊರಬರಲು ಸಾಧ್ಯವಾಗದೆ ಸಂಕಷ್ಟಕ್ಕೆ ಒಳಗಾಗಿದೆ. ಇದನ್ನು ಬೀದಿಬದಿ ವ್ಯಾಪಾರಿ, ಆಟೋ ಚಾಲಕರು ತಕ್ಷಣ ಎಮ್ಮೆಕರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಮ್ಮೆಕರು ಪ್ರಾಣಾಪಾಯದಿಂದ ಪಾರಾಗಿದೆ.
    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಮುಖಂಡ ಎಸ್.ಎಸ್ ಭೈರಪ್ಪ ನಗರಸಭೆ ಮಾಹಿತಿ ನೀಡಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.