ದಾನವಾಡಿ, ಅರಕೆರೆ ಗ್ರಾಮಸ್ಥರ ಸಂಚಾರಕ್ಕೆ ತೊಂದರೆ
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿ ದಾನವಾಡಿ ಗ್ರಾಮದ ಮೂಲಕ ಹಾದು ಹೋಗಿರುವ ಭದ್ರಾ ಬಲದಂಡೆ ನಾಲೆ ಸೇತುವೆ ಕಳೆದ ಸುಮಾರು ೧೫ ದಿನಗಳ ಹಿಂದೆ ಮಧ್ಯದಲ್ಲಿ ಕುಸಿದಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಭದ್ರಾವತಿ, ಅ. ೧೫: ತಾಲೂಕಿನ ಹೊಳೆಹೊನ್ನೂರು ಹೋಬಳಿ ದಾನವಾಡಿ ಗ್ರಾಮದ ಮೂಲಕ ಹಾದು ಹೋಗಿರುವ ಭದ್ರಾ ಬಲದಂಡೆ ನಾಲೆ ಸೇತುವೆ ಕಳೆದ ಸುಮಾರು ೧೫ ದಿನಗಳ ಹಿಂದೆ ಮಧ್ಯದಲ್ಲಿ ಕುಸಿದಿದ್ದು, ಸಂಬಂಧಪಟ್ಟ ಇಲಾಖೆಯವರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಲಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಚನ್ನಗಿರಿ ಮತ್ತು ಭದ್ರಾವತಿ ಮಾರ್ಗಕ್ಕೆ ಸಂಪರ್ಕಗೊಂಡಿರುವ ಈ ಸೇತುವೆ ದಾನವಾಡಿ ಮತ್ತು ಅರಕೆರೆ ಗ್ರಾಮಸ್ಥರಿಗೆ ಹೆಚ್ಚಿನ ನೆರವಾಗಿದ್ದು, ಸೇತುವೆ ಕುಸಿದಿರುವ ಹಿನ್ನಲೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಸೇತುವೆ ಕುಸಿದಿರುವ ಮಾಹಿತಿ ನೀರಾವರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯತನದಿಂದ ವರ್ತಿಸುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.
ಸೇತುವೆ ಸಂಪೂರ್ಣವಾಗಿ ಕುಸಿದು ಅವಘಡಗಳು ಸಂಭವಿಸುವ ಮೊದಲು ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಲ್ಲದೆ ದುರಸ್ತಿ ಕಾರ್ಯ ಕೈಗೊಳ್ಳುವವರೆಗೂ ಯಾವುದೇ ದುರ್ಘಟನೆಗಳು ನಡೆಯದಂತೆ ತಕ್ಷಣ ಮುಂಜಾಗ್ರತೆವಹಿಸುವಂತೆ ಮನವಿ ಮಾಡಿದ್ದಾರೆ.