Friday, October 14, 2022

ವಿಐಎಸ್‌ಎಲ್ ಖಾಸಗಿಕರಣ ಪ್ರಕ್ರಿಯೆ ಕೈಬಿಟ್ಟಿರುವುದು ತಾತ್ಕಾಲಿಕ : ಮುಂದಿನ ಹೋರಾಟ ಅಗತ್ಯ

ಪ್ರಧಾನಿ, ಕೇಂದ್ರ ಸಚಿವರು, ಸಂಸದರಿಗೆ ಕೃತಜ್ಞತೆ  : ಜಿ. ಧರ್ಮಪ್ರಸಾದ್

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿದರು.
    ಭದ್ರಾವತಿ, ಅ. ೧೪: ಬಿ.ವೈ ರಾಘವೇಂದ್ರ ಸೇರಿದಂತೆ ರಾಜ್ಯದ ಎಲ್ಲಾ ಸಂಸದರು ಹಾಗು ಸ್ಥಳೀಯ ಮುಖಂಡರ ಪ್ರಯತ್ನದ ಫಲವಾಗಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಖಾಸಗಿಕರಣಗೊಳಿಸುವ ಪ್ರಕ್ರಿಯೆಯನ್ನು ತಾತ್ಕಾಲಿಕ ಕೈಬಿಟ್ಟಿದ್ದು, ಇದೀಗ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡುವ ಸಮಯ ಎದುರಾಗಿದೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆಯನ್ನು ಮುನ್ನಡೆಸಿಕೊಂಡು ಹೋಗಲು ಬಂಡವಾಳಶಾಹಿಗಳು ಯಾರು ಸಹ ಮುಂದೆ ಬಾರದಿರುವ ಹಿನ್ನಲೆಯಲ್ಲಿ ಸರ್ಕಾರ ತಾತ್ಕಾಲಿಕವಾಗಿ ಖಾಸಗಿಕರಣಗೊಳಿಸುವ ಪ್ರಕ್ರಿಯೆಯನ್ನು ಕೈಬಿಟ್ಟಿದ್ದು, ಇದರಿಂದಾಗಿ ಮುಂದಿನಗಳಲ್ಲಿ ಉಕ್ಕು ಪ್ರಾಧಿಕಾರ ಬಂಡವಾಳ ಹೂಡುವ ನಿರೀಕ್ಷೆಯನ್ನು ಕ್ಷೇತ್ರದ ಜನರು ಎದುರು ನೋಡುವಂತಾಗಿದೆ ಎಂದರು.
    ಈ ಬೆಳವಣಿಗೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ರಾಜ್ಯದ ಎಲ್ಲಾ ಸಂಸದರ ಹಾಗು ಸ್ಥಳೀಯ ಮುಖಂಡರು ನಡೆಸಿದ ಪ್ರಯತ್ನ ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಕೇಂದ್ರ ಸರ್ಕಾರದ ಕ್ರಮ ಕೇವಲ ತಾತ್ಕಾಲಿಕವಾಗಿದ್ದು, ಈ ಅವಧಿಯಲ್ಲಿ ನಮ್ಮ ಮುಂದಿನ ಹೋರಾಟ ರೂಪಿಸಿಕೊಳ್ಳಬೇಕಾಗಿದೆ. ಕೇಂದ್ರ ಉಕ್ಕು ಪ್ರಾಧಿಕಾರ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡುವಂತೆ ಒತ್ತಾಯಿಸಬೇಕಾಗಿದೆ. ಇಲ್ಲವಾದಲ್ಲಿ ಪುನಃ ಖಾಸಗಿಕರಣ ಭೀತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಪ್ರಸ್ತುತ ಕಾರ್ಖಾನೆಯನ್ನು ಖಾಸಗಿಕರಣ ಪ್ರಕ್ರಿಯೆಯಿಂದ ಕೈಬಿಟ್ಟಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಹಾಗು ಉಕ್ಕು ಸಚಿವರಿಗೆ ಮತ್ತು ರಾಜ್ಯದ ಎಲ್ಲಾ ಸಂಸದರಿಗೆ ಕ್ಷೇತ್ರದ ನಾಗರೀಕರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಚನ್ನೇಶ್, ಜಿಲ್ಲಾ ಪ್ರಮುಖರಾದ ಎಂ. ಮಂಜುನಾಥ್, ಆರ್.ಎಸ್ ಶೋಭಾ, ದೇವರನರಸೀಪುರ ಚಂದ್ರು, ಕವಿತಾರಾವ್, ಬಿ.ಎಸ್ ಶ್ರೀನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment