Tuesday, October 18, 2022

ಅ.೧೯ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

    ಭದ್ರಾವತಿ, ಅ. ೧೮ : ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಸಂಗೊಳ್ಳಿ ರಾಯಣ್ಣ ಯುವ ಪಡೆ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ‍್ಸ್ ಸೆಂಟ್ರಲ್ ಯೂನಿಯನ್, ಬಾಪೂಜಿ ವಿದ್ಯಾಸಂಸ್ಥೆ ಹಾಗು ಗ್ಲೋಬಲ್ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ವತಿಯಿಂದ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಸ್ಮರಣಾರ್ಥ ಅ.೧೯ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
    ಹೊಸಮನೆ ಅಶ್ವಥ್ ನಗರ, ಗ್ಲೋಬಲ್ ಪಬ್ಲಿಕ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಆಯೋಜಿಸಲಾಗಿರುವ ಶಿಬಿರದಲ್ಲಿ ಎದೆನೋವು, ರಕ್ತದ ಒತ್ತಡ, ಆಯಾಸ, ಅತಿಯಾದ ಬೆವರುವಿಕೆ, ಎದೆಯಲ್ಲಿ ಉರಿ, ಉಸಿರಾಟದಲ್ಲಿ ತೊಂದರೆ, ನರಗಳ ಸವೆತ, ನರಗಳ ದೌರ್ಬಲ್ಯ, ಬೆನ್ನು ಮತ್ತು ಕತ್ತಿನ ನರಗಳ ಸಮಸ್ಯೆ, ನರರೋಗ ತಜ್ಞರೊಂದಿಗೆ ಸಮಾಲೋಚನೆ, ಭುಜದ ಮೂಳೆ, ಕೀಲು ಮತ್ತು ಮೂಳೆ, ಬೆನ್ನು ನೋವು, ಸೊಂಟ ನೋವು ಮತ್ತು ಮಂಡಿ ಸವೆತದ ತಪಾಸಣೆ ಜರುಗಲಿವೆ. ಹೆಚ್ಚಿನ ಮಾಹಿತಿಗೆ ಮೊ: ೯೯೮೬೭೫೯೪೮೬/೮೬೬೦೮೮೨೦೧೧/೯೮೪೪೭೭೧೨೧೨ ಕರೆ ಮಾಡಬಹುದಾಗಿದೆ. 

ಭದ್ರಾ ಜಲಾಶಯದ ೨೨೬ ಹೊರಗುತ್ತಿಗೆ ನೌಕರರಿಗೆ ೫ ತಿಂಗಳಿನಿಂದ ವೇತನವಿಲ್ಲ

ನಂ.೪ ಬಿಆರ್‌ಎಲ್‌ಬಿಸಿ ಕಛೇರಿ ಮುಂಭಾಗ ಪ್ರತಿಭಟನೆ

ಕಳೆದ ಸುಮಾರು ೪ ತಿಂಗಳಿನಿಂದ ಪಿ.ಎಫ್, ಇಎಸ್‌ಐ ಹಾಗು ವೇತನದಿಂದ ವಂಚಿತರಾಗಿರುವ ಭದ್ರಾ ಜಲಾಶಯ ಅಧೀನಕ್ಕೆ ಒಳಪಡುವ ನಂ.೪ ವಿಭಾಗದ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ನಂ.೧ ಉಪವಿಭಾಗ, ಬಿಆರ್‌ಪಿ ಮತ್ತು ನಂ.೨ ಉಪವಿಭಾಗ, ಡಿ.ಬಿ ಹಳ್ಳಿ ಹಾಗು ನಂ.೩ ಉಪವಿಭಾಗ, ಭದ್ರಾವತಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨೨೬ ಹೊರಗುತ್ತಿಗೆ ನೌಕರರು ಕಳೆದ ೨ ದಿನಗಳಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ.
    ಭದ್ರಾವತಿ, ಅ. ೧೮: ಕಳೆದ ಸುಮಾರು ೪ ತಿಂಗಳಿನಿಂದ ಪಿ.ಎಫ್, ಇಎಸ್‌ಐ ಹಾಗು ವೇತನದಿಂದ ವಂಚಿತರಾಗಿರುವ ಭದ್ರಾ ಜಲಾಶಯ ಅಧೀನಕ್ಕೆ ಒಳಪಡುವ ನಂ.೪ ವಿಭಾಗದ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ನಂ.೧ ಉಪವಿಭಾಗ, ಬಿಆರ್‌ಪಿ ಮತ್ತು ನಂ.೨ ಉಪವಿಭಾಗ, ಡಿ.ಬಿ ಹಳ್ಳಿ ಹಾಗು ನಂ.೩ ಉಪವಿಭಾಗ, ಭದ್ರಾವತಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨೨೬ ಹೊರಗುತ್ತಿಗೆ ನೌಕರರು ಕಳೆದ ೨ ದಿನಗಳಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ.
    ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಕರ್ನಾಟಕ ನೀರಾವತಿ ನಿಗಮ ನಿಯಮಿತದ ನಂ.೪ ಬಿಆರ್‌ಎಲ್‌ಬಿಸಿ ವಿಭಾಗದ ಕಾರ್ಯಪಾಲಕ ಅಭಿಯಂತರವರ ಕಛೇರಿ ಮುಂಭಾಗ ನೌಕರರು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ(ಕ್ರಾಂತಿಕಾರಿ ಕಾರ್ಮಿಕ ಸಂಘಗಳ ಒಕ್ಕೂಟ) ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಕ್ಷಣ ಪಿ.ಎಫ್, ಇಎಸ್‌ಐ ಹಾಗು ವೇತನ ಪಾವತಿಸುವಂತೆ ಆಗ್ರಹಿಸಿದ್ದಾರೆ.
ಕಳೆದ ಸುಮಾರು ೩೦-೪೦ ವರ್ಷಗಳಿಂದ ನಿರಂತರವಾಗಿ ಕರ್ತವ್ಯ ನಿರ್ವಹಿಸಿಕೊಂಡು ಬರಲಾಗುತ್ತಿದ್ದು, ಆದರೆ ಇದುವರೆಗೂ ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಲಭಿಸಿಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ನೌಕರರ ಕುರಿತು ಅಗತ್ಯ ಮಾಹಿತಿ ಒದಗಿಸದೆ ನಿರ್ಲಕ್ಷ್ಯತನ ವಹಿಸುತ್ತಿದ್ದಾರೆ. ಇದರಿಂದಾಗಿ ಹಲವಾರು ಬಾರಿ ಹೋರಾಟ ನಡೆಸಿ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಪೌರ ಕಾರ್ಮಿಕರಿಗೆ ವೇತನ ಪಾವತಿಸುವಂತೆ ನಮಗೂ ವೇತನ ಪಾವತಿಸುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
    ಸಂಘದ ಅಧ್ಯಕ್ಷ ಜಿ.ಡಿ ಸುಬ್ಬರಾಯಡು, ಪ್ರಧಾನ ಕಾರ್ಯದರ್ಶಿ ಜಿ.ಕೆ ಶಿವಮೂರ್ತಿ, ಸಹಕಾರ್ಯದರ್ಶಿ ಎ.ವಿ ಮಂಜುನಾಥ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Monday, October 17, 2022

ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಮವಾರ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
    ಭದ್ರಾವತಿ, ಅ. ೧೭ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಮವಾರ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಸಹೋದರ ಬಿ.ಕೆ ಶಿವಕುಮಾರ್ ಅವರ ಪುತ್ರಿಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರನಿಗೆ ನೀಡಿ ವಿವಾಹ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಂಗಮೇಶ್ವರ್ ಅವರಿಗೆ ಸಂಬಂಧಿಸಿಯಾಗಿದ್ದಾರೆ.
    ಹೆಬ್ಬಾಳ್ಕರ್ ಅವರು ಸ್ಥಳೀಯ ಮುಖಂಡರು ಹಾಗು ಸಂಬಂಧಿಕರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಧಾನ ಅರ್ಚಕ ವೇದಬ್ರಹ್ಮ ರಂಗನಾಥಶರ್ಮ ಅವರಿಂದ ದೇವಸ್ಥಾನದ ಕುರಿತು ಸಂಪೂರ್ಣ ಮಾಹಿತಿ ಪಡೆದು ದೇವಸ್ಥಾನದ ಅಭಿವೃದ್ಧಿಗೆ ಮುಂದಾಗುವುದಾಗಿ ಭರವಸೆ ನೀಡಿದರು.
    ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿವಾಸ್, ಬಿ.ಕೆ ಶಿವಕುಮಾರ್, ಬಸವಂತಪ್ಪ, ದಶರಥಗಿರಿ, ಎಂ.ಎಸ್ ರವಿ, ನರಸಿಂಹಚಾರ್, ಬಿ.ಎಂ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಮ್ಮಡಿಹಳ್ಳಿ ಗ್ರಾಮದ ಮಂಡಲ ಪ್ರಧಾನ ಡಿ.ಕೆ ಗೋಪಾಲಪ್ಪ ನಿಧನ

   ಡಿ.ಕೆ ಗೋಪಾಲಪ್ಪ
     ಭದ್ರಾವತಿ, ಅ. ೧೭ : ತಮ್ಮಡಿಹಳ್ಳಿ ಗ್ರಾಮದ ಮಂಡಲ ಪ್ರಧಾನರು ಹಾಗು ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಡಿ.ಕೆ ಗೋಪಾಲಪ್ಪ(೯೯) ಸೋಮವಾರ ನಿಧನ ಹೊಂದಿದರು.
    ಗ್ರಾಮದಲ್ಲಿಯೇ ಗೋಪಾಲಪ್ಪ ಹಿರಿಯ ವ್ಯಕ್ತಿಯಾಗಿದ್ದು, ೩ ಗಂಡು, ೬ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಸುಮಾರು ೨೦ ವರ್ಷ ಗ್ರಾಮದ ಮಂಡಲ ಪ್ರಧಾನರಾಗಿ ಹಾಗು ಸುಮಾರು ೪೦ ವರ್ಷ ಮಲೆಶಂಕರ ದೇವಸ್ಥಾನದ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ಗ್ರಾಮದಲ್ಲಿರುವ ಇವರ ಜಮೀನಿನಲ್ಲಿ ನಡೆಯಲಿದೆ. ಇವರ ನಿಧನಕ್ಕೆ ತಮ್ಮಡಿಹಳ್ಳಿ ಗ್ರಾಮಸ್ಥರು ಹಾಗು ಕೇಸರಿಪಡೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ತ್ವರಿತಗತಿಯಲ್ಲಿ ಕಾಮಗಾರಿ ಆರಂಭಿಸಲು ಮನವಿ

ಭದ್ರಾವತಿ ತಾಲೂಕಿನಲ್ಲಿ ಕುಡಿಯುವ ಯೋಜನೆಗಳಿಗೆ ತ್ವರಿತಗತಿಯಲ್ಲಿ ಮಂಜೂರಾತಿ ನೀಡಿ, ಕಾಮಗಾರಿ ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರಿಗೆ ನಗರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಗಿದೆ.
    ಭದ್ರಾವತಿ, ಅ. ೧೭: ತಾಲೂಕಿನಲ್ಲಿ ಕುಡಿಯುವ ಯೋಜನೆಗಳಿಗೆ ತ್ವರಿತಗತಿಯಲ್ಲಿ ಮಂಜೂರಾತಿ ನೀಡಿ, ಕಾಮಗಾರಿ ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕರಿಗೆ ನಗರದ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಗಿದೆ.
    ತಾಲೂಕಿನ ಉಂಬ್ಳೆಬೈಲು, ಕಲ್ಲಹಳ್ಳಿ ಸೇರಿದಂತೆ ೨೮ ಗ್ರಾಮಗಳ ಮತ್ತು ದೊಣಬಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಮತ್ತು ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಕಿ ಸೇರಿದಂತೆ ೩ ಗ್ರಾಮಗಳನ್ನೊಳಗೊಂಡ ಹಾಗು ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆ ಹಾಗು ಕಂಬದಾಳ್ ಹೊಸೂರು ಸೇರಿದಂತೆ ೨೧ ಗ್ರಾಮಗಳ ಮತ್ತು ಮಾರಶೆಟ್ಟಿಹಳ್ಳಿ ಸೇರಿದಂತೆ ೨೩ ಗ್ರಾಮಗಳ ಹಾಗು ಆನವೇರಿ ಸೇರಿದಂತೆ ೩೭ ಗ್ರಾಮಗಳ ಬಹುಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ ತ್ವರಿತಗತಿಯಲ್ಲಿ ಮಂಜೂರಾತಿ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಕಾಮಗಾರಿಗಳನ್ನು ಆರಂಭಿಸಲು ನಿರ್ದೇಶಿಸಬೇಕೆಂದು ಬೆಂಗಳೂರಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ದೇಶಕ ಜಿ.ಎಂ ಗಂಗಾಧರಸ್ವಾಮಿ ಅವರಿಗೆ ವೇದಿಕೆಯ ಮುಖಂಡ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮನವಿ ಮಾಡಿದ್ದಾರೆ.

೬೫ನೇ ವರ್ಷದ ವಿನಾಯಕಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹೋಮ-ಹವನ

ಭದ್ರಾವತಿ ನಗರದ ಬಿ.ಎಚ್ ರಸ್ತೆ, ಹಾಲಪ್ಪ ವೃತ್ತದಲ್ಲಿ ಶ್ರೀ ಮಹಾಶಕ್ತಿ ಗಣಪತಿ ದೇವಸ್ಥಾನದ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ವಿನಾಯಕ ಚತುರ್ಥಿ ಅಂಗವಾಗಿ ಈ ಬಾರಿ ಸಹ ಶ್ರೀವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಸತ್ಯನಾರಾಯಣ ಪೂಜೆ, ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಭದ್ರಾವತಿ, ಅ. ೧೭ : ನಗರದ ಬಿ.ಎಚ್ ರಸ್ತೆ, ಹಾಲಪ್ಪ ವೃತ್ತದಲ್ಲಿ ಶ್ರೀ ಮಹಾಶಕ್ತಿ ಗಣಪತಿ ದೇವಸ್ಥಾನದ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ವಿನಾಯಕ ಚತುರ್ಥಿ ಅಂಗವಾಗಿ ಈ ಬಾರಿ ಸಹ ಶ್ರೀವಿನಾಯಕ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಸತ್ಯನಾರಾಯಣ ಪೂಜೆ, ಹೋಮ-ಹವನ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಈ ವಿನಾಯಕ ಸೇವಾ ಸಮಿತಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದ್ದು, ನಗರದ ಪ್ರಮುಖ ಸಂಘಟನೆಗಳಲ್ಲಿ ಒಂದಾಗಿದೆ. ೬೫ನೇ ವರ್ಷದ ಪ್ರತಿಷ್ಠಾಪನಾ ಅಂಗವಾಗಿ ತಾಲೂಕು ಅರ್ಚಕರ ಮಹಾಸಭಾ ಅಧ್ಯಕ್ಷ ಎಸ್.ವಿ ರಾಮಾನುಜ ಅಯ್ಯಂಗಾರ್ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಧಾರ್ಮಿಕ ಕಾರ್ಯಕ್ರಮದಲ್ಲಿ ವ್ಯಾಪಾರಸ್ಥರು, ವರ್ತಕರು, ಸ್ಥಳೀಯ ನಿವಾಸಿಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಛಾಯಾಗ್ರಾಹಕರ ಕ್ರಿಕೆಟ್ ಪಂದ್ಯಾವಳಿ : ದ್ವಿತೀಯ ಬಹುಮಾನ

ಚಿಕ್ಕಮಗಳೂರು ಜಿಲ್ಲಾ ಛಾಯಾಗ್ರಾಹಕರ ಸಂಘದಿಂದ ಆಯೋಜಿಸಲಾಗಿದ್ದ ೨ ದಿನಗಳ ರಾಜ್ಯಮಟ್ಟದ ಛಾಯಾಗ್ರಾಹಕರ ಕ್ರಿಕೆಟ್ ಪಂದ್ಯವಳಿಯಲ್ಲಿ ಭದ್ರಾವತಿ ತಾಲೂಕು ಛಾಯಾಗ್ರಾಹಕರ ಸಂಘ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಅ. ೧೭: ಚಿಕ್ಕಮಗಳೂರು ಜಿಲ್ಲಾ ಛಾಯಾಗ್ರಾಹಕರ ಸಂಘದಿಂದ ಆಯೋಜಿಸಲಾಗಿದ್ದ ೨ ದಿನಗಳ ರಾಜ್ಯಮಟ್ಟದ ಛಾಯಾಗ್ರಾಹಕರ ಕ್ರಿಕೆಟ್ ಪಂದ್ಯವಳಿಯಲ್ಲಿ ತಾಲೂಕು ಛಾಯಾಗ್ರಾಹಕರ ಸಂಘ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ರಾಜ್ಯದ ವಿವಿಧೆಡೆಗಳಿಂದ ಛಾಯಾಗ್ರಾಹಕರ ಸಂಘದ ತಂಡಗಳು ಪಾಲ್ಗೊಂಡಿದ್ದವು. ಪಂದ್ಯಾವಳಿಯಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು  
ಶ್ರೀನಿವಾಸ್ ಪಡೆದುಕೊಂಡರು. ತಾಲೂಕು ಛಾಯಾಗ್ರಾಹಕರ ಸಂಘವನ್ನು ನಗರದ ಅನೇಕ ಗಣ್ಯರು, ಸಂಘ-ಸಂಸ್ಥೆಗಳು ಅಭಿನಂದಿಸಿವೆ.