ಭದ್ರಾವತಿ ಬಿಳಿಕಿ ಹಿರೇಮಠದಲ್ಲಿ ಭಾನುವಾರ ಶ್ರೀ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ ಹಾಗು ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮೀಜಿಯವರ ೫೫ನೇ ವರ್ಷದ ಪುಣ್ಯ ಸ್ಮರಣೆ ಹಾಗು ಧರ್ಮ ಸಮಾರಂಭ ನಡೆಯಿತು.
ಭದ್ರಾವತಿ, ಅ. ೨೩ : ಮನುಷ್ಯನಿಗೆ ಗುರುಗಳ ಮಾರ್ಗದರ್ಶನ ಹಾಗು ದೈವ ಸಂಪ್ರದಾಯದ ಪರಂಪರೆ ಮನಸ್ಥಿತಿ ಆತನಿಗೆ ಶಾಂತಿ, ನೆಮ್ಮದಿ ನೀಡುತ್ತದೆ ಎಂದು ರಟ್ಟೆಹಳ್ಳಿ ಕಬ್ಬಿಣ ಕಂತಿ ಮಠದ ಶ್ರೀ ಷ.ಬ್ರ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಬಿಳಿಕಿ ಹಿರೇಮಠದಲ್ಲಿ ಶ್ರೀ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ ಹಾಗು ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮೀಜಿಯವರ ೫೫ನೇ ವರ್ಷದ ಪುಣ್ಯ ಸ್ಮರಣೆ ಹಾಗು ಧರ್ಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಆಧುನಿಕ ದಿನಗಳಲ್ಲಿ ವೈಚಾರಿಕತೆಯ ಸೋಗಲಿನಲ್ಲಿ ಏನೇ ಆಲೋಚನೆಗಳನ್ನು ಮಾಡಿದರೂ ಸಹ ದೇವರ ಅಸ್ತಿತ್ವ ಅಲ್ಲಗಳೆಯಲಾಗುವುದಿಲ್ಲ. ಗುರುಗಳು ಭಗವಂತನ ಸಾಕ್ಷಾತ್ಕಾರ ಮಾಡಿಕೊಡುತ್ತಾರೆ. ಆ ಕಾರಣ ಅವರು ಅಂತಹ ಶಕ್ತಿಯನ್ನು ಹೊಂದಿರುತ್ತಾರೆ ಎಂದರು.
ಜಗತ್ತು ಶ್ರೀಮಂತರನ್ನು ಎಂದಿಗೂ ಸ್ಮರಿಸುವುದಿಲ್ಲ. ಆದರೆ ಸರ್ವವನ್ನೂ ತ್ಯಾಗ ಮಾಡಿರುವ ಸರ್ವರ ಒಳಿತನ್ನು ಬಯಸುವ ಸಾಧು ಸಂತರು ತಮ್ಮ ಬದುಕಿನ ತ್ಯಾಗದ ಕಾರಣ ಅವರ ಶಕ್ತಿಯನ್ನು ಅರಿತು ಸದಾ ಅವರ ಸ್ಮರಣೆಯನ್ನು ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರು ಜೀವನದಲ್ಲಿ ತಾಯಿ ತಂದೆ ಋಣ, ಗುರುವಿನ ಋಣ ತೀರಿಸಬೇಕೆಂದರು.
ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಮಾತನಾಡಿ, ಮನೆಗೆ ಹಿರಿಯರು, ಸಮಾಜಕ್ಕೆ ಗುರುಗಳು ಮುಖ್ಯರಾಗುತ್ತಾರೆ. ಆ ಮೂಲಕ ಮನೆಯನ್ನು ಹಿರಿಯರು ಉದ್ದಾರ ಮಾಡಿದರೆ, ಸಮಾಜವನ್ನು ಗುರು ಮುನ್ನಡೆಸುತ್ತಾರೆ. ಆಗ ಶಾಂತಿಯುತ ಸ್ವಾಸ್ಥ ಸಮಾಜದ ನಿರ್ಮಾಣ ಆಗುತ್ತದೆ. ಕುಟುಂಬದಲ್ಲಿ ಹಿರಿಯರ ಪೂಜೆಯನ್ನು ಮಾಡಿದರೆ. ಮಠ ಮಂದಿರಗಳಲ್ಲಿ ಹಿಂದಿನ ಗುರುಗಳ ಸ್ಮರಣೆಯನ್ನು ಮಾಡುವ ಪದ್ದತಿ ಅನಾದಿ ಕಾಲದಿಂದಲೂ ನಡೆಯುತ್ತಾ ಬಂದಿದೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ಸುರೇಶಯ್ಯ, ಮಾಜಿ ಅಧ್ಯಕ್ಷ ಸಿದ್ದಲಿಂಗಯ್ಯ, ಯುವ ಘಟಕದ ಅಧ್ಯಕ್ಷ ಎಚ್. ಮಂಜುನಾಥ, ವಾಗೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.