Sunday, October 30, 2022

ದೀಪೋತ್ಸವ, ತಿರುಪತಿ ಮಾದರಿ ಹುಂಡಿ ಪ್ರತಿಷ್ಠಾಪನೆ

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಾಲಯದಲ್ಲಿ ಕಾರ್ತಿಕ ಮಾಸದ ಹಿನ್ನಲೆಯಲ್ಲಿ ಮೊದಲ ದೀಪೋತ್ಸವ ಹಾಗು ಹುಂಡಿ ಪ್ರತಿಷ್ಠಾಪನೆ ನಡೆಯಿತು.
    ಭದ್ರಾವತಿ, ಅ. ೩೦ : ತಾಲೂಕಿನ ಬಾರಂದೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಾಲಯದಲ್ಲಿ ಕಾರ್ತಿಕ ಮಾಸದ ಹಿನ್ನಲೆಯಲ್ಲಿ ಮೊದಲ ದೀಪೋತ್ಸವ ಹಾಗು ಹುಂಡಿ ಪ್ರತಿಷ್ಠಾಪನೆ ನಡೆಯಿತು.
      ದೇವಾಲಯದಲ್ಲಿ ವಂದೇ ಮಾತರಂ ಟ್ರಸ್ಟ್ ವತಿಯಿಂದ ಹಲವಾರು ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಅಲ್ಲದೆ ದಾನಿಗಳು ಹಾಗು ಭಕ್ತರ ಸಹಕಾರದೊಂದಿಗೆ ದೇವಾಲಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಸಹ ನಡೆಯುತ್ತಿವೆ. ಈ ಬಾರಿ ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ತಿರುಪತಿ ಮಾದರಿ ಹುಂಡಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಟ್ರಸ್ಟ್ ಅಧ್ಯಕ್ಷ ಬಿ.ಎ ಪ್ರಸನ್ನಕುಮಾರ್ ಹಾಗು ದೇವಾಲಯದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಉಪವಿಭಾಗದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಮಾಹಿತಿ

ಜಿಲ್ಲಾ ಪೊಲೀಸ್ ವತಿಯಿಂದ ಭಾನುವಾರ ಭದ್ರಾವತಿ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ  ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಬ್ರೀಫಿಂಗ್ ಮಾಡಿ, ನಿರ್ವಹಿಸಬೇಕಾದ ಕರ್ತವ್ಯ ಮತ್ತು ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ಮಾಹಿತಿ ನೀಡಲಾಯಿತು.
    ಭದ್ರಾವತಿ, ಅ. ೩೦: ಜಿಲ್ಲಾ ಪೊಲೀಸ್ ವತಿಯಿಂದ ಭಾನುವಾರ ಉಪವಿಭಾಗದ ಪೊಲೀಸ್ ಠಾಣೆಗಳಲ್ಲಿ  ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಬ್ರೀಫಿಂಗ್ ಮಾಡಿ, ನಿರ್ವಹಿಸಬೇಕಾದ ಕರ್ತವ್ಯ ಮತ್ತು ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ ಮಾಹಿತಿ ನೀಡಲಾಯಿತು.
      ಇಲ್ಲಿನ ಪೊಲೀಸ್ ಉಪವಿಭಾಗದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸೂಕ್ಷ್ಮ ಪ್ರದೇಶಗಳಿದ್ದು, ಹೆಚ್ಚಿನ ಮುನ್ನಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ. ಅದರಲ್ಲೂ ನಗರ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಹೆಚ್ಚಿನ ಗಂಭೀರವಾದ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನಲೆಯಲ್ಲಿ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ಮಾಹಿತಿ ನೀಡಲಾಯಿತು. ಅಲ್ಲದೆ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಲಾಯಿತು.
      ಜಿ.ಕೆ ಮಿಥುನ್‌ಕುಮಾರ್ ಜಿಲ್ಲಾ ರಕ್ಷಣಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಇಲಾಖೆಯಲ್ಲಿ ಹಲವಾರು ಸುಧಾರಣೆಗಳನ್ನು ಕೈಗೊಳ್ಳುವ ಮೂಲಕ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

Saturday, October 29, 2022

ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೊಳಗಿದ ಕೋಟ ಕಂಠ ಗಾಯನ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋಟಿ ಕಂಠ ಗಾಯನ ಯಶಸ್ವಿಯಾಗಿ ಜರುಗಿತು.
    ಭದ್ರಾವತಿ, ಅ. ೨೯ : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋಟಿ ಕಂಠ ಗಾಯನ ಯಶಸ್ವಿಯಾಗಿ ಜರುಗಿತು.
      ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಇತರೆ ಸರ್ಕಾರಿ ಇಲಾಖೆಗಳ ವತಿಯಿಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ವಿವಿಧ ಮಹಿಳಾ ಸಂಘಟನೆಗಳು, ಕಲಾವಿದರು, ಶಾಲಾ ಮಕ್ಕಳು ಹಾಗು ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಜರುಗಿದ ಕಾರ್ಯಕ್ರಮದಲ್ಲಿ ನಾಡಗೀತೆ, ಕನ್ನಡ ನಾಡು-ನುಡಿಗೆ ಸಂಬಂಧಿಸಿದ ಹಾಡುಗಳ ಗಾಯನ ನಡೆಯಿತು.
      ತಹಸೀಲ್ದಾರ್ ಆರ್. ಪ್ರದೀಪ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನುಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ಕಲಾವಿದರಾದ ಭದ್ರಾವತಿ ವಾಸು, ಅಪೇಕ್ಷ ಮಂಜುನಾಥ್, ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ರಂಗನಾಥಶರ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೬೭ನೇ ಕನ್ನಡ ರಾಜ್ಯೋತ್ಸವ

ಭದ್ರಾವತಿ, ಅ. ೨೯: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನ.೧ರಂದು ೬೭ನೇ ಕನ್ನಡ ರಾಜ್ಯೋತ್ಸವ ಬೆಳಿಗ್ಗೆ ೯ ಗಂಟೆಗೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
      ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ ಅಶೋಕ್‌ನಾಯ್ಕ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
      ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣ ಗೌಡ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ವಿಧಾನಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಆಯನೂರು ಮಂಜುನಾಥ್, ಎಸ್.ಎಲ್ ಭೋಜೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಪೊಲೀಸ್ ಉಪಾಧೀಕ್ಷಕ ಜಿತೇಂದ್ರಕುಮಾರ್ ದಯಾಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
      ಇದಕ್ಕೂ ಮೊದಲು ಬೆಳಿಗ್ಗೆ ೮ ಗಂಟೆಗೆ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಅಂಬೇಡ್ಕರ್ ವೃತ್ತದಿಂದ ತಾಯಿ ಭುವನೇಶ್ವರಿ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ನ.೧ರಂದು ಕಬಡ್ಡಿ ಕ್ರೀಡಾಕೂಟಕ್ಕೆ ಜಿಲ್ಲಾ ತಂಡದ ಆಯ್ಕೆ ಪ್ರಕ್ರಿಯೆ

ಭದ್ರಾವತಿ, ಅ. ೨೯: ಶಿವಮೊಗ್ಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ರಾಜ್ಯ ಕ್ರೀಡಾಕೂಟಕ್ಕೆ ಜಿಲ್ಲಾ ತಂಡದ ಆಯ್ಕೆ ಪ್ರಕ್ರಿಯೆ ನ.೧ರಂದು ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ.
      ಉತ್ತರಖಂಡ್ ರಾಜ್ಯದಲ್ಲಿ ನ.೧೭ ರಿಂದ ೨೦ರವರೆಗೆ ನಡೆಯಲಿರುವ ರಾಷ್ಟ್ರೀಯ ಜ್ಯೂನಿಯರ್ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ಭಾಗವಹಿಸಲು ರಾಜ್ಯ ತಂಡದ ಆಯ್ಕೆ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಬಡ್ಡಿ ಸಂಸ್ಥೆ ವತಿಯಿಂದ ನ.೧೧ ರಿಂದ ೧೩ರವರೆಗೆ ರಾಜ್ಯ ಚಾಂಪಿಯನ್‌ಶಿಪ್ ಕಬಡ್ಡಿ ಕ್ರೀಡಾಕೂಟ ಬೆಂಗಳೂರಿನ ಆನೆಕಲ್ ತಾಲೂಕಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಜಿಲ್ಲಾ ತಂಡ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ.
      ಆಸಕ್ತ ಕ್ರೀಡಾಪಟು ಅಂದು ಬೆಳಿಗ್ಗೆ ೧೦ ಗಂಟೆಗೆ ಹಾಜರಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಕ್ರೀಡಾಪಟುಗಳು ೨೦ ವರ್ಷದೊಳಗಿನ ವಯೋಮಾನ ಹೊಂದಿರತಕ್ಕದ್ದು, ೭೦ ಕೆ.ಜಿ ತೂಕ ಮೀರಿರಬಾರದು. ಹೆಚ್ಚಿನ ಮಾಹಿತಿಗೆ ವೇಣುಗೋಪಾಲ, ಮೊ: ೯೮೪೪೪೨೦೯೫೦, ರವೀಂದ್ರ, ಮೊ: ೯೯೮೬೪೭೪೫೨೫, ಗೋಪಾಲಕೃಷ್ಣ, ಮೊ: ೯೪೪೯೨೩೯೨೧೫ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ನಾಡಪ್ರಭು ಕೆಂಪೇಗೌಡರ ಹೆಸರು ಅಜರಾಮರಗೊಳ್ಳಲಿ : ಬಿ.ಕೆ ಸಂಗಮೇಶ್ವರ್

ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಪವಿತ್ರ ಮೃತ್ತಿಕೆ ಸಂಗ್ರಹಣೆಗಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ನಾಡಪ್ರಭು ಕೆಂಪೇಗೌಡ ರಥ ಅಭಿಯಾನ ಶನಿವಾರ ಭದ್ರಾವತಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ರಂಗಪ್ಪ ವೃತ್ತದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಹಸಿರು ನಿಶಾನೆ ತೋರಿಸಿದರು.
    ಭದ್ರಾವತಿ, ಅ. ೨೯ : ನಾಡಪ್ರಭು ಕೆಂಪೇಗೌಡ ಕೊಡುಗೆ ಅಪಾರವಾಗಿದ್ದು, ಭವಿಷ್ಯದಲ್ಲಿ ಅವರ ಹೆಸರನ್ನು ಅಜರಾಮರಗೊಳಿಸುವಂತಾಗಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
      ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ ಅಂಗವಾಗಿ ಪವಿತ್ರ ಮೃತ್ತಿಕೆ ಸಂಗ್ರಹಣೆಗಾಗಿ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ನಾಡಪ್ರಭು ಕೆಂಪೇಗೌಡ ರಥ ಅಭಿಯಾನ ಶನಿವಾರ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ರಂಗಪ್ಪ ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
      ನಾಡಪ್ರಭು ಕೆಂಪೇಗೌಡರ ಇತಿಹಾಸ ಎಲ್ಲರಿಗೂ ತಿಳಿದಿದ್ದು, ಅವರ ಕುರಿತು ಹೆಚ್ಚು ಮಾತನಾಡುವ ಅಗತ್ಯವಿಲ್ಲ. ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಯಾರು ಸಹ ಮರೆಯುವಂತಿಲ್ಲ. ಇಂತಹ ಮಹಾನ್ ವ್ಯಕ್ತಿಯ ಹೆಸರನ್ನು ಪ್ರತಿಯೊಬ್ಬರು ಅಜರಾಮರಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕೆಂದರು.
      ಇದಕ್ಕೂ ಮೊದಲು ಬೆಳಿಗ್ಗೆ ೯ ಗಂಟೆಗೆ ತಾಲೂಕಿನ ಗಡಿಭಾಗ ಕಾರೇಹಳ್ಳಿಗೆ ಆಗಮಿಸಿದ ರಥ ಅಭಿಯಾನವನ್ನು ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗು ನಗರಸಭೆ ಆಡಳಿತದಿಂದ ಕುಂಭ ಕಳಸ ಹಾಗು ಕಲಾ ತಂಡಗಳೊಂದಿಗೆ ಸ್ವಾಗತಿಸಲಾಯಿತು. ನಂತರ ರಥ ಅಭಿಯಾನ ಬಾರಂದೂರು, ಮಾವಿನಕೆರೆ, ಯರೇಹಳ್ಳಿ, ಅಂತರಗಂಗೆ, ವೀರಾಪುರ ಮಾರ್ಗವಾಗಿ ಮಧ್ಯಾಹ್ನ ೨.೩೦ರ ಸುಮಾರಿಗೆ ರಂಗಪ್ಪ ವೃತ್ತಕ್ಕೆ ಆಗಮಿಸಿತು.
      ನಂತರ ಹಳೇನಗರದ ಪುರಾಣಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಮೂಲಕ ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಪ್ಪರ್ ಹುತ್ತಾ, ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ತಲುಪಿ ಸಿದ್ದಾಪುರ, ಹಿರಿಯೂರು, ಹುಣಸೇಕಟ್ಟೆ ಜಂಕ್ಷನ್, ಸಂಜೆ ವೇಳೆಗೆ ಸಿಂಗನಮನೆ, ಗೋಣಿಬೀಡು, ಗೊಂಧಿ, ತಾರೀಕಟ್ಟೆ, ರಾತ್ರಿ ೮ರ ವೇಳೆಗೆ ರಬ್ಬರ್‌ಕಾಡು ತಲುಪಿ ಕೊನೆಯಲ್ಲಿ ನಗರಸಭೆ ಆವರಣದಲ್ಲಿ ಅಂತ್ಯಗೊಂಡಿತು.
      ತಹಸೀಲ್ದಾರ್ ಆರ್. ಪ್ರದೀಪ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಗ್ರಾಮ ಪಂಚಾಯಿತಿ, ನಗರಸಭೆ ಚುನಾಯಿತ ಪ್ರತಿನಿಧಿಗಳು, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪ್ರಮುಖರಾದ ಶಾರದ ಅಪ್ಪಾಜಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ, ಸಮುದಾಯಗಳ ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

      

ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ : ಸಿದ್ದರಾಮಯ್ಯ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ ಅವರ ೬೦ನೇ ಹುಟ್ಟುಹಬ್ಬದ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನಮ್ಮ ಅಭಿಮಾನ ಸಂಗಮೇಶೋತ್ಸವ ಕಾರ್ಯಕ್ರಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಅ. ೨೯: ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
    ಅವರು ಶುಕ್ರವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ ಅವರ ೬೦ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನಮ್ಮ ಅಭಿಮಾನ ಸಂಗಮೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕೇಂದ್ರ ಹಾಗು ರಾಜ್ಯದಲ್ಲಿರುವ ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರಗಳು ಜನವಿರೋಧಿ ಸರ್ಕಾರಗಳಾಗಿವೆ. ಈ ಸರ್ಕಾರಗಳಿಂದ ಜನರ ಕಲ್ಯಾಣ ಸಾಧ್ಯವಿಲ್ಲ ಎಂಬುದು ಇದೀಗ ಎಲ್ಲರಿಗೂ ಅರ್ಥವಾಗುತ್ತಿದೆ. ದೇಶ ಹಾಗು ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಬಡವರು, ರೈತರು, ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿರುದ್ಯೋಗ ಹೆಚ್ಚಾಗಿದ್ದು, ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಮಾರಕವಾಗಿವೆ. ಅಲ್ಲದೆ ಧರ್ಮ ಧರ್ಮಗಳ ನಡುವೆ ವಿಷಬೀಜ ಭಿತ್ತಿ ಜನರು ನೆಮ್ಮದಿಯಿಂದ ಬದುಕಲಾರದಂತಹ ವಾತಾವರಣ ನಿರ್ಮಾಣ ಮಾಡಲಾಗಿದೆ. ಈ ಎಲ್ಲಾ ಕಾರಣಗಳಿಂದ ಮುಂದಿನ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸವಿದೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಅವರು ಪಕ್ಷ ನಿಷ್ಠೆ ಜೊತೆಗೆ ಜಾತ್ಯಾತೀತ ಮನೋಭಾವ ಹೊಂದಿದ್ದು, ಈ ಹಿಂದೆ ನಡೆದ ಒಂದೇ ಒಂದು ತಪ್ಪಿನ ಪರಿಣಾಮ ಅವರು ಒಂದು ಬಾರಿ ಸ್ಥಾನದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲವಾದಲ್ಲಿ ಅವರು ೪ ಬಾರಿ ಶಾಸಕರಾಗಿರುತ್ತಿದ್ದರು. ದೇವರು ಅವರಿಗೆ ಇನ್ನೂ ಆಯುರಾರೋಗ್ಯ ಕರುಣಿಸಲಿ ಎಂದು ಶುಭಾ ಹಾರೈಸುತ್ತೇನೆ ಎಂದರು.
    ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಭದ್ರಾವತಿ ವಿಧಾನಸಭಾ ಕ್ಷೇತಕ್ಕೆ ತನ್ನದೇ ಇತಿಹಾಸವಿದೆ. ಇದೊಂದು ಪುಣ್ಯದ ಭೂಮಿ. ಇಂತಹ ಭೂಮಿಯಲ್ಲಿ ಸಂಗಮೇಶ್ವರ್ ಅವರು ಎಲ್ಲಾ ಧರ್ಮದ, ಎಲ್ಲಾ ಜಾತಿಯ ಜನರ ಪ್ರೀತಿ ಸಂಪಾದಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಬಂದಿಲ್ಲ. ಇಲ್ಲಿನ ಜನರೊಂದಿಗೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ ಎಂದು ಭರವಸೆ ನೀಡಲು ಬಂದಿದ್ದೇನೆ. ರಾಜ್ಯಾದ್ಯಂತ ಬಿಜೆಪಿ ಅಲೆ ಇದ್ದ ಸಂದರ್ಭದಲ್ಲೂ ಇಲ್ಲಿನ ಜನರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಸಂಗಮೇಶ್ವರ್ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ನೆಲಕ್ಕೆ ಪುನಃ ವೈಭವ ತಂದು ಕೊಡಬೇಕಾದರೆ ಮತದಾರರು ಪುನಃ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು. ಆ ಮೂಲಕ ಅಧಿಕಾರಕ್ಕೆ ಬರುವಂತಾಗಬೇಕು ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ನನ್ನ ೩೦ ವರ್ಷಗಳ ರಾಜಕಾರಣದಲ್ಲಿ ಕ್ಷೇತ್ರದ ಮತದಾರರು ನನಗೆ ನೀಡುತ್ತಿರುವ ಬೆಂಬಲ ಅಭೂತಪೂರ್ವವಾಗಿದೆ. ನನ್ನ ಸ್ವಂತ ಬುದ್ದಿವಂತಿಕೆ ಹಾಗು ಕಾಂಗ್ರೆಸ್ ಪಕ್ಷದ ನಾಯಕರ ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ. ಶೇ.೭೦ರಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ತೃಪ್ತಿ ಹೊಂದಿದ್ದೇನೆ. ಮುಂದಿನ ದಿನಗಳಲ್ಲೂ ನನ್ನನ್ನು ಮತದಾರರು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.
    ವೇದಿಕೆಯಲ್ಲಿ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಆರ್ ಸೀತಾರಾಮ್, ಶಾಸಕರಾದ ಭೈರತಿ ಸುರೇಶ್, ಲಕ್ಷ್ಮೀ ಹೆಬ್ಳಾಕರ್, ಚಿನ್ನರಾಜ್, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಕೆ.ಬಿ ಪ್ರಸನ್ನಕುಮಾರ್, ಜಿ.ಎಚ್ ಶ್ರೀನಿವಾಸ್, ಮಾಜಿ ಸಂಸದ ಧ್ರುವ ನಾರಾಯಣ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್, ನಗರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕೆಪಿಸಿಸಿ ವಕ್ತಾರ ನಿಕಿತ್ ರಾಜ್ ಮೌರ್ಯ ಪ್ರಾಸ್ತಾವವಿಕ ನುಡಿಗಳನ್ನಾಡಿದರು. ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಸ್ವಾಗತಿಸಿದರು.


ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಪ್ಪಿಸಿದ್ದು ನಾನೇ ಎಂಬುದು ಗೊತ್ತಿದ್ದರೂ ಸಹ ಅವರು ಎಂದಿಗೂ ನನ್ನ ಬಗ್ಗೆ ಸಿಟ್ಟು ಮಾಡಿಕೊಳ್ಳಲಿಲ್ಲ. ಅಲ್ಲದೆ ಪಕ್ಷವನ್ನು ತೊರೆಯದೆ ಇಂದಿಗೂ ಪಕ್ಷ ನಿಷ್ಠೆ ಕಾಯ್ದುಕೊಂಡು ಬಂದಿರುವುದು ಅವರ ದೊಡ್ಡತನವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಂಪಿಎಂ ಕಾರ್ಖಾನೆ ಪುನಃ ಆರಂಭಿಸಲಾಗುವುದು. ಇದರಿಂದ ಸುಮಾರು ೨ ಸಾವಿರ ಮಂದಿಗೆ ಉದ್ಯೋಗ ಲಭಿಸಲಿದೆ.
                                                                               - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ  


ರಾಜ್ಯ ರಾಜಕಾರಣದಲ್ಲಿ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಕಡಿದಾಳ್ ಮಂಜಪ್ಪ, ಎಸ್. ಬಂಗಾರಪ್ಪ, ಜೆ.ಎಚ್ ಪಟೇಲ್ ಸೇರಿದಂತೆ ಅನೇಕ ಮಹಾನ್ ನಾಯಕರು ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸಿದ್ದರು. ಯಡಿಯೂರಪ್ಪನವರು ಸಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ.  ಆದರೆ ಇಂದಿನ ಪರಿಸ್ಥಿತಿ ತೀರ ಹದಗೆಟ್ಟಿದೆ. ಜಿಲ್ಲೆಯಲ್ಲಿ ಕೋಮು ಗಲಭೆಗಳು ಹೆಚ್ಚಾಗುತ್ತಿವೆ. ಇಲ್ಲಿನ ಜನರು ಸದಾ ಭಯಭೀತಿಯಿಂದ ಬದುಕುವಂತಾಗಿದೆ. ಬಂಡವಾಳ ಶಾಹಿಗಳು ಜಿಲ್ಲೆಯಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ.
- ಡಿ.ಕೆ ಶಿವಕುಮಾರ್, ಅಧ್ಯಕ್ಷರು, ಕೆಪಿಸಿಸಿ